ಉಡುಪಿ | ಉಪ್ಪು ಮಿಶ್ರಿತ ನೀರು ಪೂರೈಕೆ ಖಂಡಿಸಿ ಧರಣಿ ಎಚ್ಚರಿಕೆ

ಜಿಲ್ಲಾಧಿಕಾರಿಗಳ ಸಭೆ, ಜಿಲ್ಲಾ ಪಂಚಾಯತ್ ಸಿಇಒ ಪತ್ರವನ್ನೂ ನಿರ್ಲಕ್ಷಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ
ನಾಡ : ಉಡುಪಿ ಜಿಲ್ಲೆಯ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಡ ಹಡವು, ಬಡಾಕೆರೆ ಹಾಗೂ ಸೇನಾಪುರ ಗ್ರಾಮಗಳಿಗೆ ಉಪ್ಪು ಮಿಶ್ರಿತ ಕಲುಷಿತ ನೀರು ಪೂರೈಕೆ ಮಾಡುತ್ತಿರುವುದನ್ನು ಖಂಡಿಸಿ, ಗ್ರಾಮಸ್ಥರು ಹಾಗೂ ಸಂಘಟನೆಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ತಕ್ಷಣ ಶಾಶ್ವತ ಪರಿಹಾರ ಕೈಗೊಳ್ಳದಿದ್ದರೆ ರಜತಾದ್ರಿಯಲ್ಲಿರುವ ಇಲಾಖೆಯ ಕಚೇರಿ ಎದುರು ಧರಣಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಉಡುಪಿ

ಈ ಕುರಿತು ಇಲಾಖೆಗೆ ಸಲ್ಲಿಸಿರುವ ಎಚ್ಚರಿಕೆ ಪತ್ರದಲ್ಲಿ, ಹಲವು ವರ್ಷಗಳಿಂದ ಸಾವಿರಾರು ಜನರು ಉಪ್ಪು ಮಿಶ್ರಿತ ನೀರನ್ನು ಕುಡಿಯುವ ಅನಿವಾರ್ಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಮಸ್ಯೆ ಪ್ರಕೃತಿ ವಿಕೋಪದಿಂದ ಉಂಟಾಗಿಲ್ಲ; ಇಲಾಖೆಯ ಅವೈಜ್ಞಾನಿಕ ಯೋಜನೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗ್ರಾಮಸ್ಥರ ಅಭಿಪ್ರಾಯವನ್ನು ಕಡೆಗಣಿಸಿದ ಪರಿಣಾಮವೇ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸೌಪರ್ಣಿಕಾ ನದಿಯಲ್ಲಿ ಪ್ರತಿ ವರ್ಷ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉಪ್ಪು ನೀರು ಸೇರುತ್ತದೆ ಎಂಬುದು ಸ್ಥಳೀಯ ಜನರಿಗೆ ಹಾಗೂ ಅಧಿಕಾರಿಗಳಿಗೆ ಬಹಳ ಹಿಂದಿನಿಂದಲೇ ತಿಳಿದಿದ್ದ ವಿಚಾರವಾಗಿದ್ದರೂ, ಅದನ್ನು ಲೆಕ್ಕಿಸದೆ ನದಿಯಿಂದ ನೇರವಾಗಿ ನೀರು ಎತ್ತುವ ಯೋಜನೆ ಜಾರಿಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ಹಿಂದೆ ನಾಡ ಗ್ರಾಮ ಪಂಚಾಯತ್ 30-11-2012ರ ಸಾಮಾನ್ಯ ಸಭೆಯ ನಿರ್ಣಯ ಸಂಖ್ಯೆ 7ರಲ್ಲಿ, ನದಿಯಿಂದ ನೇರವಾಗಿ ನೀರು ಸಂಗ್ರಹಿಸಬಾರದು ಹಾಗೂ ಕೋಣ್ಕಿ–ಹೇರೂರು ಭಾಗದಲ್ಲಿ ವೆಂಟೆಡ್ ಡ್ಯಾಂ ನಿರ್ಮಿಸಿ ಶುದ್ಧ ನೀರು ಪೂರೈಕೆ ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಪಂಚಾಯತ್‌ನ ನಿರ್ಣಯ ಹಾಗೂ ಗ್ರಾಮಸ್ಥರ ಅಭಿಪ್ರಾಯವನ್ನು ಕಡೆಗಣಿಸಿ ಇಲಾಖೆ ಕಾರ್ಯನಿರ್ವಹಿಸಿದೆ ಎಂದು ದೂರಲಾಗಿದೆ.

ಇದನ್ನೂ ಓದಿ : ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಚರ್ಚ್ ನಾಯಕರ ಹತ್ಯೆ, 38 ಜನರನ್ನು ಬಂಧನ

ಇದೇ ವಿಚಾರವಾಗಿ ಸಾರ್ವಜನಿಕ ಹೋರಾಟದ ಹಿನ್ನೆಲೆಯಲ್ಲಿ 28-05-2025ರಂದು ಉಡುಪಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ವೆಂಟೆಡ್ ಡ್ಯಾಂ ಕುರಿತು ತಾಂತ್ರಿಕ ಪರಿಶೀಲನೆ, NITK ಸುರತ್ಕಲ್ ಮೂಲಕ ಅಧ್ಯಯನ, ಶುದ್ಧ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಹಾಗೂ ಶಾಶ್ವತ ಪರಿಹಾರ ರೂಪಿಸುವ ಕುರಿತು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿತ್ತು ಎಂದು ಪತ್ರದಲ್ಲಿ ನೆನಪಿಸಲಾಗಿದೆ.

ಅಲ್ಲದೆ, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು 29-04-2026ರಂದು ಸಹ ಉಪ್ಪು ನೀರಿನ ಸಮಸ್ಯೆಯನ್ನು ತುರ್ತಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಅಧಿಕೃತ ಪತ್ರ ಬರೆದಿದ್ದರು. ಆದರೂ ಜಿಲ್ಲಾಧಿಕಾರಿಗಳ ಸಭೆಯ ನಿರ್ಣಯವಾಗಲಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆಯಾಗಲಿ ಇಲಾಖೆಯಿಂದ ಗಂಭೀರವಾಗಿ ಪರಿಗಣಿಸಲ್ಪಟ್ಟಿಲ್ಲ ಎಂದು ಆರೋಪಿಸಲಾಗಿದೆ.

“ಒಂದು ವರ್ಷ ಕಳೆದರೂ ಜನರಿಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಜನರು ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಸಬೇಕಾದ ಪರಿಸ್ಥಿತಿಯಲ್ಲಿದ್ದರೂ ಇಲಾಖೆ ಮೌನ ವಹಿಸಿರುವುದು ಖಂಡನೀಯ,” ಎಂದು ಪತ್ರದಲ್ಲಿ ಹೇಳಲಾಗಿದೆ.

ಗ್ರಾಮಸ್ಥರು ಮತ್ತು ಸಂಘಟನೆಗಳು ಜಿಲ್ಲಾಧಿಕಾರಿಗಳ ಸಭೆಯ ನಿರ್ಣಯಗಳನ್ನು ತಕ್ಷಣ ಜಾರಿಗೆ ತರಬೇಕು, ಕೋಣ್ಕಿ–ಹೇರೂರು ಭಾಗದಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ ಕಾಲಬದ್ಧ ಕಾರ್ಯಯೋಜನೆ ಪ್ರಕಟಿಸಬೇಕು, NITK ಸುರತ್ಕಲ್ ಅಧ್ಯಯನ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು,  ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಉಪ್ಪು ಮಿಶ್ರಿತ ನೀರಿನ ಪೂರೈಕೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿವೆ.

ಪತ್ರ ಸ್ವೀಕರಿಸಿದ 15 ದಿನಗಳೊಳಗೆ ಸಮರ್ಪಕ ಕ್ರಮ ಕೈಗೊಳ್ಳದಿದ್ದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI), ಜನವಾದಿ ಮಹಿಳಾ ಸಂಘಟನೆ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ರಜತಾದ್ರಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿ ಎದುರು ಧರಣಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ನೋಡಿ : “ತಮಿಳುನಾಡು | ವಿಜಯ್‌ ಗೆದ್ದದ್ದು ಹೇಗೆ? : ಟಿವಿಕೆ ಉದಯದ ಒಳನೋಟ” | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *