ಪ್ರೊ.ಪ್ರಭಾತ್ ಪಟ್ನಾಯಕ್
ನವ-ಉದಾರವಾದವು ಎಂತಹ ಬಿಕ್ಕಟ್ಟನ್ನು ಸೃಷ್ಟಿಸಿದೆಯೆಂದರೆ, ಅದನ್ನು ನವ-ಉದಾರವಾದ ಮಿತಿಯೊಳಗೆ ಜಯಿಸಲಾಗದಂತಹ ಸ್ಥಿತಿ ಏರ್ಪಟ್ಟಿದೆ- ಇದೇ ಅದರ ಕುರುಡುಗಲ್ಲಿಯ ಹೂರಣ. ಇದರಿಂದ ಪಾರಾಗಲು ಟ್ರಂಪ್ ಕಾರ್ಯತಂತ್ರವೆಂದರೆ, ನವ-ಉದಾರವಾದಿ ಆಳ್ವಿಕೆಯೊಳಗೆ ಸಿಲುಕಿಕೊಂಡಿರುವ ಭಾರತದಂತಹ ಜಾಗತಿಕ ದಕ್ಷಿಣದ ದೇಶಗಳು ಅಲ್ಲೇ ಮುಂದುವರೆಯುವಂತೆ ಮಾಡುವುದು, ಅಮೆರಿಕವನ್ನು ಮಾತ್ರ ಅದರಿಂದ ಬಿಡಿಸಿಕೊಳ್ಳುವುದು. ಇದು ಆತನ ಸುಂಕದ ಆಕ್ರಮಣ ಮತ್ತು ಭಾರತದಂತಹ ದೇಶಗಳ ಗಂಟಲಿನೊಳಗೆ ಆತ ತುರುಕುತ್ತಿರುವ ವ್ಯಾಪಾರ ಒಪ್ಪಂದಗಳಿಂದ ಸ್ಪಷ್ಟವಾಗುತ್ತದೆ. ಇದು ಕೇವಲ ಅಮೆರಿಕದ ಕಾರ್ಯತಂತ್ರವಷ್ಟೇ ಅಲ್ಲ, ಇಡೀ ಜಾಗತಿಕ ಉತ್ತರದ, ಒಟ್ಟಾರೆಯಾಗಿ ಸಾಮ್ರಾಜ್ಯಶಾಹಿಯ ಪ್ರಸಕ್ತ ಕಾರ್ಯತಂತ್ರ. ಇಲ್ಲಿ ತಕ್ಷಣವೇ ಉದ್ಭವಿಸುವ ಪ್ರಶ್ನೆ–ಭಾರತದಂತಹ ದೇಶಗಳ ಸರ್ಕಾರಗಳು ಈ ಅಸಮಾನ ವ್ಯಾಪಾರ ಒಪ್ಪಂದಗಳನ್ನು ಒಪ್ಪುತ್ತವೆ ಏಕೆ?
ಅನು:ಕೆ.ಎಂ.ನಾಗರಾಜ್
ನವ-ಉದಾರವಾದವು ವಿಶ್ವ ಬಂಡವಾಳಶಾಹಿಯನ್ನು ಮುಂದೆ ದಾರಿಗಾಣದಂತಹ ಸ್ಥಿತಿಗೆ ಎಳೆದು ತಂದಿದೆ. ಅದರ ಕಾರಣ ಹೀಗಿದೆ: ಉತ್ಪಾದನೆಯನ್ನು ಜಾಗತಿಕ ಉತ್ತರದಿಂದ ಜಾಗತಿಕ ದಕ್ಷಿಣಕ್ಕೆ ಸ್ಥಳಾಂತರ ಮಾಡಲು ಬಂಡವಾಳ ಸಿದ್ಧವಾಗಿರುವುದು ನವ-ಉದಾರವಾದದ ಒಂದು ಹೆಗ್ಗುರುತು. ಇದು ಕಡಿಮೆ ಕೂಲಿ ಪಡೆಯುವ ದಕ್ಷಿಣದ ಕಾರ್ಮಿಕರ ಎದುರು ಉತ್ತರದ ಕಾರ್ಮಿಕರು ಸ್ಪರ್ಧಿಸುವಂತೆ ಮಾಡುವ ಮೂಲಕ ಜಾಗತಿಕ ಉತ್ತರದ ಕಾರ್ಮಿಕರ ಕೂಲಿಯ ಮಟ್ಟದಲ್ಲಿ ಒಂದು ಇಳಿಕೆಯನ್ನು ಉಂಟುಮಾಡಿದೆ. ಅದೇ ಸಮಯದಲ್ಲಿ, ಈ ಸ್ಥಳಾಂತರವು ಜಾಗತಿಕ ದಕ್ಷಿಣದ ಬೃಹತ್ ಕಾರ್ಮಿಕ ಮೀಸಲುಗಳ ಪ್ರಮಾಣವನ್ನೇನೂ ಇಳಿಕೆ ಮಾಡುವುದಿಲ್ಲ, ಏಕೆಂದರೆ ನವ-ಉದಾರವಾದದ ಅಡಿಯಲ್ಲಿ ದಕ್ಷಿಣದ ಶ್ರಮ ಉತ್ಪಾದಕತೆಯ ಬೆಳವಣಿಗೆಯ ದರವು ಬಹಳ ಉನ್ನತವಾಗಿ ಏರಿದೆ. ಈ ಕಾರಣದಿಂದಾಗಿ ಜಾಗತಿಕ ದಕ್ಷಿಣದ ಕಾರ್ಮಿಕರ ಕೂಲಿಯು ತೀರಾ ಕೆಳ ಮಟ್ಟದಲ್ಲಿಯೇ ಉಳಿದಿದೆ. ಈ ರೀತಿಯಲ್ಲಿ ಕಾರ್ಮಿಕ ಉತ್ಪಾದಕತೆಯು ಎಲ್ಲೆಡೆ ಏರಿಕೆಯಾಗುತ್ತಿದ್ದರೂ ಮತ್ತು ಒಟ್ಟಾರೆಯಾಗಿ ವಿಶ್ವ ಅರ್ಥವ್ಯವಸ್ಥೆಯಲ್ಲಿ ಮತ್ತು ಪ್ರತಿಯೊಂದು ದೇಶದಲ್ಲೂ ಉತ್ಪಾದನೆಯಲ್ಲಿ ಆರ್ಥಿಕ ಮಿಗುತಾಯದ ಪಾಲು ಹೆಚ್ಚುತ್ತಿದ್ದರೂ, ವಿಶ್ವಾದ್ಯಂತವೂ ನಿಜ ಕೂಲಿಯ ಮಟ್ಟದಲ್ಲಿ ಏರಿಕೆ ಆಗಿಲ್ಲ.
ಮಿಗುತಾಯ ಯಾರ ಪಾಲಿಗೆ ಸಂಗ್ರಹಗೊಳ್ಳುತ್ತದೋ ಅಂತಹ ಕೆಲವರನ್ನು ಬಿಟ್ಟರೆ, ದುಡಿಯುವ ಜನರೆಲ್ಲರೂ ತಮ್ಮ ವರಮಾನದಲ್ಲಿ ಹೆಚ್ಚಿನ ಪಾಲನ್ನು ಬಳಕೆ ಮಾಡುವುದರಿಂದ, ಈ ಆರ್ಥಿಕ ಮಿಗುತಾಯ ಪಾಲಿನ ಏರಿಕೆಯ ಪರಿಣಾಮವೆಂದರೆ, ಉತ್ಪಾದನೆಗೆ ಹೋಲಿಸಿದರೆ, ಅದು ಬೇಡಿಕೆಯಲ್ಲಿ ಇಳಿಕೆ ತರುತ್ತದೆ. ಆದ್ದರಿಂದ, ಅರ್ಥವ್ಯವಸ್ಥೆಯಲ್ಲಿ ಒಟ್ಟು ಬೇಡಿಕೆಯ ಮಟ್ಟದಲ್ಲಿ ಇಳಿಕೆ ಇರುತ್ತದೆ. ಹಾಗಾಗಿ, ಆರ್ಥಿಕ ಮಿಗುತಾಯದ ಪಾಲಿನ ಏರಿಕೆಯು ಅತಿ-ಉತ್ಪಾದನೆಯ ಒಂದು ಪ್ರವೃತ್ತಿಯನ್ನು ಉಂಟುಮಾಡುತ್ತದೆ. ಈ ವಿದ್ಯಮಾನವು ಆರ್ಥಿಕ ಸ್ಥಗಿತತೆ ಮತ್ತು ಹೆಚ್ಚಿನ ಮಟ್ಟದ ನಿರುದ್ಯೋಗದ ಮೂಲಕ ಪ್ರಕಟಗೊಳ್ಳುತ್ತದೆ (ಆದರೆ ಅಂತಹ ನಿರುದ್ಯೋಗವನ್ನು ಕಾರ್ಮಿಕರ ಭಾಗವಹಿಸುವಿಕೆಯ ದರ ಕಡಿತದ ಮೂಲಕ ಮರೆಮಾಚಲಾಗುತ್ತದೆ). ಯುಎಸ್‌ನಲ್ಲಿ ವಸತಿ ಗುಳ್ಳೆಯ ಕುಸಿತದ ನಂತರ ವಿಶ್ವ ಅರ್ಥವ್ಯವಸ್ಥೆಯಲ್ಲಿ ನಡೆಯುತ್ತಿರುವುದು ನಿಖರವಾಗಿ ಈ ವಿದ್ಯಮಾನವೇ.
ಕಾರ್ಮಿಕ ಉತ್ಪಾದಕತೆಯು ಎಲ್ಲೆಡೆ ಏರಿಕೆಯಾಗುತ್ತಿದ್ದರೂ ಮತ್ತು ಒಟ್ಟಾರೆಯಾಗಿ ವಿಶ್ವ ಅರ್ಥವ್ಯವಸ್ಥೆಯಲ್ಲಿ ಮತ್ತು ಪ್ರತಿಯೊಂದು ದೇಶದಲ್ಲೂ ಉತ್ಪಾದನೆಯಲ್ಲಿ ಆರ್ಥಿಕ ಮಿಗುತಾಯದ ಪಾಲು ಹೆಚ್ಚುತ್ತಿದ್ದರೂ, ವಿಶ್ವಾದ್ಯಂತವೂ ನಿಜ ಕೂಲಿಯ ಮಟ್ಟದಲ್ಲಿ ಏರಿಕೆ ಆಗಿಲ್ಲ.
ಕುರುಡುಗಲ್ಲಿಯ ಹೂರಣ
ಆದರೆ ಆರ್ಥಿಕ ಸ್ಥಗಿತತೆ ಮತ್ತು ಹೆಚ್ಚಿನ ನಿರುದ್ಯೋಗವೇ ಮುಂದೆ ದಾರಿಗಾಣದ ಸ್ಥಿತಿಯ ಲಕ್ಷಣಗಳಲ್ಲ. ಈ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಭುತ್ವವು ಏನನ್ನೂ ಮಾಡಲಾಗದು ಎಂಬ ಅಂಶದಿಂದ ಕುರುಡು ದಾರಿಯ ಸಮಸ್ಯೆ ಉದ್ಭವಿಸುತ್ತದೆ. ಇಂಥಹ ಯಾವುದೇ ಸಂದರ್ಭದಲ್ಲೂ ಕೀನ್ಸ್‌ವಾದ ಕಾಯಿಲೆ ಗುಣಪಡಿಸಲು ಒದಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಅದು ನವ-ಉದಾರವಾದದ ಅಡಿಯಲ್ಲಿ ಏನೂ ಮಾಡಲಾಗದೆ ಸಂಪೂರ್ಣವಾಗಿ ಅಸಮರ್ಥವಾಗಿದೆ.
ಕೀನ್ಸ್‌ವಾದೀ ಪರಿಹಾರವು ಏಕೆ ಅಸಮರ್ಥವಾಗುತ್ತದೆ ಎಂದರೆ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸಲು ಪ್ರಭುತ್ವವು ಬೃಹತ್ ಪ್ರಮಾಣದ ವೆಚ್ಚಗಳನ್ನು ಕೈಗೊಳ್ಳಬೇಕಾಗುತ್ತದೆ ಮತ್ತು ಈ ವೆಚ್ಚಗಳಿಗೆ ಬೇಕಾಗುವ ಹಣವನ್ನು ವಿತ್ತೀಯ ಕೊರತೆಯ ಮೂಲಕವೊ ಅಥವಾ ಶ್ರೀಮಂತರ ಮೇಲೆ ತೆರಿಗೆಗಳನ್ನು ವಿಧಿಸುವ ಮೂಲಕವೊ ಒದಗಿಸಿಕೊಳ್ಳಬೇಕಾಗುತ್ತದೆ. ಬದಲಿಗೆ, ಪ್ರಭುತ್ವದ ವೆಚ್ಚಗಳಿಗೆ ಬೇಕಾಗುವಷ್ಟು ಹಣವನ್ನು ತಮ್ಮ ವರಮಾನದ ಬಹುಭಾಗವನ್ನು ಹೇಗೂ ಬಳಕೆಮಾಡುವ ದುಡಿಯುವ ಜನರ ಮೇಲೆ ಹೇರುವ ತೆರಿಗೆಗಳ ಮೂಲಕವೇ ಒಂದು ವೇಳೆ ಒದಗಿಸಿಕೊಂಡರೆ, ಆಗ ಒಟ್ಟಾರೆ ಬೇಡಿಕೆಯಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. ಅಷ್ಟು ಹಣವನ್ನು ಉದಾಹರಣೆಗೆ, $100 ಎಂದುಕೊಳ್ಳೋಣ, ದುಡಿಯುವ ಜನರ ಮೇಲೆ ಹೇರಿದ ಅಷ್ಟೇ ಪ್ರಮಾಣದ ತೆರಿಗೆಗಳ ಮೂಲಕ ಒದಗಿಸಿಕೊಂಡರೆ, ಆಗ ಅದು ಒಟ್ಟಾರೆ ಬೇಡಿಕೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ. ಏಕೆಂದರೆ, ದುಡಿಯುವ ಜನರು ಈ $100 ಅನ್ನು ಹೇಗೂ ಬಳಕೆಮಾಡುವವರೇ. ಆದ್ದರಿಂದ, ಈ ಸನ್ನಿವೇಶದಲ್ಲಿ ಆಗುವುದು ಬೇಡಿಕೆಯ ಸ್ವರೂಪದ ಬದಲಾವಣೆ ಮಾತ್ರ. ಅಂದರೆ, ಕಾರ್ಮಿಕರ ಸ್ವಂತ ಖರ್ಚುಗಳ ಬಳಕೆಯ ರೂಪದಿಂದ ಅದು ಪ್ರಭುತ್ವದ ತೆರಿಗೆ ಬೇಡಿಕೆಯ ಕಡೆಗೆ ಹೋಗುತ್ತದೆ ಮತ್ತು ಒಟ್ಟಾರೆ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. ಆದ್ದರಿಂದ, ಸ್ಥಗಿತತೆ ಮತ್ತು ನಿರುದ್ಯೋಗದ ಸಮಸ್ಯೆಗಳು ಪರಿಹಾರವಾಗುವುದಿಲ್ಲ.
ಆದರೆ, ಹಣಕಾಸು ಬಂಡವಾಳವು ವಿತ್ತೀಯ ಕೊರತೆಯನ್ನು ಮತ್ತು ಶ್ರೀಮಂತರ (ಪ್ರಮುಖವಾಗಿ ಹಣಕಾಸುದಾರರ) ಮೇಲೆ ಹೆಚ್ಚು ತೆರಿಗೆ ವಿಧಿಸುವ ಈ ಎರಡೂ ಕ್ರಮಗಳನ್ನೂ ವಿರೋಧಿಸುತ್ತದೆ. ಮತ್ತು, ಹಣಕಾಸು ಬಂಡವಾಳವು ನವ-ಉದಾರವಾದದ ಅಡಿಯಲ್ಲಿ ಜಾಗತೀಕರಣಗೊಂಡಿರುವಾಗ, ಆದರೆ ಪ್ರಭುತ್ವವು ಮಾತ್ರ ಒಂದು ರಾಷ್ಟ್ರ-ಪ್ರಭುತ್ವವಾಗಿಯೇ ಉಳಿದಿರುವುದರಿಂದ ಅದು ಹಣಕಾಸು ಬಂಡವಾಳದ ಆಜ್ಞೆಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಹಣಕಾಸು ಬಂಡವಾಳದ ಹೊರಕ್ಕೆ ಹರಿದು ಹೋಗುತ್ತದೆ. ಇದು ಒಂದು ಬಿಕ್ಕಟ್ಟನ್ನು ಉಂಟುಮಾಡುತ್ತದೆ. ಹೀಗಾಗಿ, ನವ-ಉದಾರವಾದವು ರಾಷ್ಟ್ರೀಯ ಅರ್ಥವ್ಯವಸ್ಥೆಗಳಿಗೆ ತಂದಿಟ್ಟಿರುವ ವಿಪತ್ತಿನಿಂದ ಹೊರಬರಲು ಪ್ರಭುತ್ವವು ಮಧ್ಯಪ್ರವೇಶಿಸಬಹುದಾದ ಏಕೈಕ ದಾರಿಯನ್ನು ನವ-ಉದಾರವಾದವೇ ಬಂದ್ ಮಾಡಿದೆ. ಏಕೆಂದರೆ, ನವ-ಉದಾರವಾದದಲ್ಲಿ ಬಂಡವಾಳದ ಗಡಿಯಾಚೆಗಿನ ಅನಿಯಂತ್ರಿತ ಹರಿವುಗಳೇ ಜೀವಾಳ. ಆದ್ದರಿಂದ, ನವ-ಉದಾರವಾದವು ಎಂತಹ ಬಿಕ್ಕಟ್ಟನ್ನು ಸೃಷ್ಟಿಸಿದೆಯೆಂದರೆ, ಅದನ್ನು ನವ-ಉದಾರವಾದ ಮಿತಿಯೊಳಗೇ ಜಯಿಸಲಾಗದಂತಹ ಸ್ಥಿತಿ ಏರ್ಪಟ್ಟಿದೆ- ಇದೇ ಅದರ ಕುರುಡು ಗಲ್ಲಿಯ ಹೂರಣ.
ಇದನ್ನೂ ಓದಿ : ನವ – ಫ್ಯಾಸಿಸಂ, ರಾಷ್ಟ್ರದ ಪರಿಕಲ್ಪನೆ ಮತ್ತು ಎಸ್ಐಆರ್
ನವ-ಫ್ಯಾಸಿಸಂನ ಆರ್ಥಿಕ ಅಜೆಂಡಾ
ಮುಂದೆ ಹೋಗಲಾಗದ ಕುರುಡು ದಾರಿಯಲ್ಲಿ ಸಾಗುವ ಸಮಸ್ಯೆಯನ್ನು ಇಲ್ಲಿಯವರೆಗೆ ಬಂಡವಾಳಶಾಹಿಯು ನಿಭಾಯಿಸಿದ ವಿಧಾನವೆಂದರೆ, ಒಂದು ಧಾರ್ಮಿಕ ಅಥವಾ ಜನಾಂಗೀಯ ಅಲ್ಪಸಂಖ್ಯಾತರನ್ನು “ಅನ್ಯ”ರೆಂದು ಗುರುತಿಸಿ, ಅವರ ವಿರುದ್ಧ ದ್ವೇಷವನ್ನು ಹುಟ್ಟಿಹಾಕುವ ಮತ್ತು ಅವರನ್ನು ವಿಚಲಿತಗೊಳಿಸುವ ಕಾರ್ಪೊರೇಟ್-ಫ್ಯಾಸಿಸ್ಟ್ ಮೈತ್ರಿಯನ್ನು ಮುನ್ನೆಲೆಗೆ ತರುವ ಮೂಲಕ ನವ-ಫ್ಯಾಸಿಸಂ ಅನ್ನು ಉತ್ತೇಜಿಸುವುದು. ಆರ್ಥಿಕ ಸ್ಥಗಿತತೆ ಮತ್ತು ಅಧಿಕ ನಿರುದ್ಯೋಗದಿಂದ ಬಳಲುತ್ತಿರುವ ದೇಶಗಳಲ್ಲಿ ದುಡಿಯುವ ಜನರನ್ನು ವಿಭಜಿಸುವ ಮೂಲಕ ಏಕಸ್ವಾಮ್ಯ ಬಂಡವಾಳದ ಪ್ರಾಬಲ್ಯಕ್ಕೆ ಎದುರಾಗುವ ಯಾವುದೇ ಸವಾಲನ್ನು ತಡೆಯಲು ನವ-ಫ್ಯಾಸಿಸಂ ಪ್ರಯತ್ನಿಸುತ್ತದೆ. ಈ ನವ-ಫ್ಯಾಸಿಸಂ ಕೂಡ ಆರ್ಥಿಕ ಸಮಸ್ಯೆಗಳನ್ನು ಶಾಶ್ವತವಾಗಿ ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಅದು ಒಂದು ಆರ್ಥಿಕ ಕಾರ್ಯಸೂಚಿಯನ್ನು ಹೊಂದಿದೆ ಎಂಬುದನ್ನು ಬೇಗನೆಯೋ ಅಥವಾ ತಡವಾಗಿಯೋ ತೋರಿಸಿಕೊಳ್ಳಲೇಬೇಕಾಗುತ್ತದೆ. ಅಂತಹ ಒಂದು ಕಾರ್ಯಸೂಚಿಯನ್ನು ಡೊನಾಲ್ಡ್ ಟ್ರಂಪ್ ಹೊಂದಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಆರ್ಥಿಕ ಸ್ಥಗಿತತೆ ಮತ್ತು ಅಧಿಕ ನಿರುದ್ಯೋಗದಿಂದ ಬಳಲುತ್ತಿರುವ ದೇಶಗಳಲ್ಲಿ ದುಡಿಯುವ ಜನರನ್ನು ವಿಭಜಿಸುವ ಮೂಲಕ ಏಕಸ್ವಾಮ್ಯ ಬಂಡವಾಳದ ಪ್ರಾಬಲ್ಯಕ್ಕೆ ಎದುರಾಗುವ ಯಾವುದೇ ಸವಾಲನ್ನು ತಡೆಯಲು ನವ-ಫ್ಯಾಸಿಸಂ ಪ್ರಯತ್ನಿಸುತ್ತದೆ. ಅಂತಹ ಒಂದು ಕಾರ್ಯಸೂಚಿಯನ್ನು ಡೊನಾಲ್ಡ್ ಟ್ರಂಪ್ ಹೊಂದಿರುವುದು ಸ್ಪಷ್ಟವಾಗಿ ಕಾಣುತ್ತದೆ
ಉದಾರವಾದಿ ಅಭಿಪ್ರಾಯವು ಹಲವು ಪ್ರತಿಪಾದನೆಗಳನ್ನು ಮಾಡುತ್ತದೆ. ಬಿಕ್ಕಟ್ಟು ಇದೆ ಎಂಬುದನ್ನೇ ನಿರಾಕರಿಸುತ್ತದೆ. ಬಿಕ್ಕಟ್ಟಿಗೂ ಮತ್ತು ವಿಶ್ವಾದ್ಯಂತ ಟ್ರಂಪ್ ರೀತಿಯ ನವ-ಫ್ಯಾಸಿಸ್ಟ್‌ಗಳು ಹೊರಹೊಮ್ಮಿರುವುದಕ್ಕೂ ಇರುವ ಸಂಬಂಧವನ್ನು ಅದು ಒಪ್ಪಿಕೊಳ್ಳುವುದಿಲ್ಲ. ಟ್ರಂಪ್ ಅನುಸರಿಸುತ್ತಿರುವ ಕ್ರಮಗಳನ್ನು ಅವು ಸಂಪೂರ್ಣವಾಗಿಯೂ ಒಬ್ಬ ಆಯ ತಪ್ಪಿದ ವ್ಯಕ್ತಿಯ ಕೃತ್ಯಗಳೆಂದು ತಳ್ಳಿಹಾಕುತ್ತದೆ. ಟ್ರಂಪ್ ಒಬ್ಬ ಆಯ ತಪ್ಪಿದ ವ್ಯಕ್ತಿಯೋ ಅಲ್ಲವೋ ಎಂಬುದು ವಿಷಯವಲ್ಲ. ನವ-ಉದಾರವಾದಿ ಬಂಡವಾಳಶಾಹಿಯು ಒಂದು ಕುರುಡು ಗಲ್ಲಿಯಲ್ಲಿ ಸಿಕ್ಕಿಹಾಕಿಕೊಂಡಿರುವಾಗ ಅವರು ಕೈಗೊಳ್ಳುತ್ತಿರುವ ಕ್ರಮಗಳನ್ನು ನಾವು ಹೇಗೆ ನೋಡುತ್ತೇವೆ ಎಂಬುದೇ ಮುಖ್ಯವಾದ ವಿಷಯ.
ಮರು–ವಸಾಹತೀಕರಣದ ಪ್ರಯತ್ನ
ಟ್ರಂಪ್ ಅವರ ಕಾರ್ಯತಂತ್ರವು ನವ-ಉದಾರವಾದಿ ಆಳ್ವಿಕೆಯೊಳಗೆ ಸಿಲುಕಿಕೊಂಡಿರುವ ಜಾಗತಿಕ ದಕ್ಷಿಣವನ್ನು ಅಲ್ಲೇ ಉಳಿಯುವಂತೆ ಒತ್ತಾಯಿಸುವ, ಅಮೆರಿಕವನ್ನು ಮಾತ್ರ ಅದರಿಂದ ಬಿಡಿಸಿಕೊಳ್ಳುವ ದಾರಿಯನ್ನು ಕಲ್ಪಿಸಿಕೊಳ್ಳುತ್ತದೆ. ಇದು ಅವರ ಸುಂಕದ ಆಕ್ರಮಣದಿಂದ ಮತ್ತು ಈ ಆಕ್ರಮಣದ ಮೂಲಕ ಭಾರತದಂತಹ ದೇಶಗಳ ಗಂಟಲಿನೊಳಗೆ ಅವರು ತುರುಕುತ್ತಿರುವ ವ್ಯಾಪಾರ ಒಪ್ಪಂದಗಳಿಂದ ಸ್ಪಷ್ಟವಾಗುತ್ತದೆ. ಉದಾಹರಣೆಗೆ ಭಾರತದೊಂದಿಗಿನ ಒಪ್ಪಂದದಲ್ಲಿ, ಭಾರತದ ರಫ್ತುಗಳ ಮೇಲೆ ಹಿಂದೆ ಇದ್ದುದಕ್ಕಿಂತಲೂ ಹೆಚ್ಚಿನ ಸುಂಕಗಳನ್ನು ಅಮೆರಿಕ ವಿಧಿಸುತ್ತದೆ; ಆದರೆ, ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಹಿಂದೆ ಇದ್ದುದಕ್ಕಿಂತಲೂ ಕಡಿಮೆ ಸುಂಕಗಳನ್ನು ಭಾರತ ವಿಧಿಸುತ್ತದೆ ಎಂಬುದು ಮಾತ್ರವಲ್ಲ, ನಿರ್ದಿಷ್ಟಪಡಿಸಿದ ಮತ್ತು ದೊಡ್ಡ ಪ್ರಮಾಣದ ಅಮೇರಿಕನ್ ಸರಕುಗಳನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ಖರೀದಿಸಲು ಭಾರತವು ಬದ್ಧವಾಗಿರುತ್ತದೆ ಎಂಬ ಷರತ್ತನ್ನೂ ವಿಧಿಸಲಾಗಿದೆ.
“ಮಾರುಕಟ್ಟೆ”ಯನ್ನು ದೈವೀಕರಿಸುವ ನವ-ಉದಾರವಾದವು ತಾತ್ವಿಕವಾಗಿ ಆಮದುಗಳ ಗುರಿಗಳ ಮೊತ್ತವನ್ನು ನಿಗದಿಪಡಿಸುವ ಕ್ರಮದ ವಿರುದ್ಧವಾಗಿರಬೇಕಾಗುತ್ತದೆ. ಅವುಗಳನ್ನು ನಿಗದಿಪಡಿಸುವ ಮೂಲಕ ಟ್ರಂಪ್ ಯುಎಸ್‌ಗೆ ಸಂಬಂಧಿಸಿದಂತೆ ನವ-ಉದಾರವಾದವನ್ನು ಮೀರಿ ಹೋಗುತ್ತಿದ್ದಾರೆ. ಆದರೆ, ಅಮೆರಿಕವು ಅದೇ ರೀತಿಯಲ್ಲಿ ಭಾರತದಿಂದ ಖರೀದಿಸುವ ಆಮದುಗಳ ನಿರ್ದಿಷ್ಟ ಪ್ರಮಾಣದ ಮತ್ತು ನಿರ್ದಿಷ್ಟ ಕಾಲಾವಧಿಯ ಗುರಿಯನ್ನು ನಿಗದಿಪಡಿಸಲಾಗಿಲ್ಲ; ಅದು “ಮಾರುಕಟ್ಟೆ”ಗೆ ಬಿಟ್ಟ ವಿಷಯವಾಗಿದೆ. ಭಾರತವು ನವ-ಉದಾರವಾದದ ಆದೇಶವನ್ನು ಪಾಲಿಸುತ್ತದೆ; ಆದರೆ, ಅಮೆರಿಕ ಮಾತ್ರ ನವ-ಉದಾರವಾದದ ಯಾವ ಆದೇಶವನ್ನೂ ಪಾಲಿಸುವುದಿಲ್ಲ ಎನ್ನುವ ರೀತಿಯ ವ್ಯವಹಾರವಾಗುತ್ತದೆ ಈ ವ್ಯಾಪಾರ ಒಪ್ಪಂದ ಮತ್ತು ಇದು ಈ ಒಪ್ಪಂದದೊಳಗೆ ಪ್ರಸ್ತಾಪಿಸಲಾದ ವಿಭಿನ್ನ ಸುಂಕ ದರಗಳಿಗೆ ಸಂಬಂಧಿಸಿದಂತೆಯೂ ನಿಖರವಾಗಿ ಅನ್ವಯಿಸುತ್ತದೆ. ಭಾರತವು ಅಮೇರಿಕನ್ ಸರಕುಗಳ ಆಮದುಗಳಿಗೆ ವಾಸ್ತವಿಕವಾಗಿ ಮುಕ್ತವಾಗಿರಬೇಕಾಗುತ್ತದೆ. ಆದರೆ, ಭಾರತದ ಸರಕುಗಳ ವಿರುದ್ಧ ಅಮೆರಿಕವು ಸುಂಕಗಳನ್ನು ಹೇರುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ.
ಟ್ರಂಪ್ ಅವರ ಕಾರ್ಯತಂತ್ರವು ನವ-ಉದಾರವಾದಿ ಆಳ್ವಿಕೆಯೊಳಗೆ ಸಿಲುಕಿಕೊಂಡಿರುವ ಜಾಗತಿಕ ದಕ್ಷಿಣವನ್ನು ಅಲ್ಲೇ ಉಳಿಯುವಂತೆ ಒತ್ತಾಯಿಸುವ, ಅಮೆರಿಕವನ್ನು ಮಾತ್ರ ಅದರಿಂದ ಬಿಡಿಸಿಕೊಳ್ಳುವ ದಾರಿಯನ್ನು ಕಲ್ಪಿಸಿಕೊಳ್ಳುತ್ತದೆ. ಇದು ಅವರ ಸುಂಕದ ಆಕ್ರಮಣದಿಂದ ಮತ್ತು ಈ ಆಕ್ರಮಣದ ಮೂಲಕ ಭಾರತದಂತಹ ದೇಶಗಳ ಗಂಟಲಿನೊಳಗೆ ಅವರು ತುರುಕುತ್ತಿರುವ ವ್ಯಾಪಾರ ಒಪ್ಪಂದಗಳಿಂದ ಸ್ಪಷ್ಟವಾಗುತ್ತದೆ.
ಭಾರತದಿಂದ ಮತ್ತು ಇದೇ ರೀತಿಯ ಒಪ್ಪಂದಗಳಿಗೆ ಒಳಪಡುವ ಜಾಗತಿಕ ದಕ್ಷಿಣದ ಇತರ ದೇಶಗಳಿಂದ ಕೆಲವು ಆರ್ಥಿಕ ಚಟುವಟಿಕೆಗಳನ್ನು ಯುಎಸ್‌ಗೆ ಸ್ಥಳಾಂತರಿಸುವುದೇ ಈ ವ್ಯಾಪಾರ ಕಾರ್ಯತಂತ್ರದ ಉದ್ದೇಶವಾಗಿದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಆರ್ಥಿಕ ಸ್ಥಗಿತತೆ ಮತ್ತು ನಿರುದ್ಯೋಗವನ್ನು ಜಾಗತಿಕ ದಕ್ಷಿಣದ ದೇಶಗಳಿಗೆ ರಫ್ತು ಮಾಡುವ ಮೂಲಕ ತನ್ನ ಆರ್ಥಿಕ ಸ್ಥಗಿತತೆಯನ್ನು ಮತ್ತು ದೊಡ್ಡ ಪ್ರಮಾಣದ ನಿರುದ್ಯೋಗವನ್ನು ನಿವಾರಿಸಿಕೊಳ್ಳುವ ಪ್ರಯತ್ನವನ್ನು ಅಮೆರಿಕ ಮಾಡುತ್ತಿದೆ. ಈ ರೀತಿಯಲ್ಲಿ ಅದು ಬಿಕ್ಕಟ್ಟಿನ ಹೊರೆಯನ್ನು ಜಾಗತಿಕ ದಕ್ಷಿಣದ ದೇಶಗಳ ಹೆಗಲಿಗೆ ವರ್ಗಾಯಿಸಲು ಪ್ರಯತ್ನಿಸುತ್ತದೆ.
ಅಂತಹ ಅಸಮಾನ ಒಪ್ಪಂದಗಳು ವಸಾಹತುಶಾಹಿ ಯುಗವನ್ನು ನೆನಪಿಸುತ್ತವೆ. ಆದ್ದರಿಂದ ಟ್ರಂಪ್‌ರ ಕಾರ್ಯತಂತ್ರವನ್ನು ಒಂದು ವಸಾಹತುಶಾಹಿ ಸನ್ನಿವೇಶವನ್ನು ಮರು-ಜಾರಿಗೊಳಿಸುವ ಅಥವಾ ಜಗತ್ತನ್ನು ಮರು-ವಸಾಹತೀಕರಣಗೊಳಿಸುವ ಪ್ರಯತ್ನವಾಗಿ ನೋಡಬಹುದು. ನಿಖರವಾಗಿ ಇದನ್ನೇ ಜಾಗತಿಕ ದಕ್ಷಿಣದ ಖನಿಜ ಸಂಪನ್ಮೂಲಗಳ ಮೇಲೆ, ವಿಶೇಷವಾಗಿ ತೈಲ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸುವ ಅಮೆರಿಕದ ಪ್ರಸ್ತುತ ಪ್ರಯತ್ನದ ಬಗ್ಗೆ ಹೇಳಬಹುದು. ಎರಡನೇ ಮಹಾಯುದ್ಧದ ನಂತರ ರಾಜಕೀಯ ಅಪ-ವಸಾಹತೀಕರಣ ಸಂಭವಿಸಿತು, ಅಂದರೆ ವಸಾಹತುಗಳು ರಾಜಕೀಯವಾಗಿ ಸ್ವತಂತ್ರಗೊಂಡವು. ಇದು ಜಾಗತಿಕ ದಕ್ಷಿಣದ ದೇಶಗಳ ಆರ್ಥಿಕ ಅಪ-ವಸಾಹತೀಕರಣ ಪ್ರಕ್ರಿಯೆಗೆ ದಾರಿಮಾಡಿಕೊಟ್ಟಿತು. ಈ ಮೂಲಕ ಜಾಗತಿಕ ದಕ್ಷಿಣದ ದೇಶಗಳು ತಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದವು. ಆರ್ಥಿಕ ಅಪ-ವಸಾಹತೀಕರಣ ಸಂಬಂಧಿಸಿದಂತೆ ಈ ದೇಶಗಳು ಸಾಧಿಸಿದ ಯಶಸ್ಸಿನಲ್ಲಿ ಸೋವಿಯತ್ ಒಕ್ಕೂಟವು ನೀಡಿದ ಬೆಂಬಲ ಕಡಿಮೆ ಪ್ರಮಾಣದ್ದೇನಲ್ಲ. ನವ-ಉದಾರವಾದವು ಇದನ್ನು ತಿರುಗುಮುರುಗುಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿತು. ಟ್ರಂಪ್ ಕಾರ್ಯತಂತ್ರವು ಇದನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತದೆ. ವೆನೆಜುವೆಲಾ (ಎರಡನೇ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿರುವ ದೇಶ) ಮೇಲೆ ಮತ್ತು ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯು ಈ ಆರ್ಥಿಕ ಅಪ-ವಸಾಹತೀಕರಣವನ್ನು ತಿರುಗುಮುರುಗು ಮಾಡುವ ಪ್ರಯತ್ನವನ್ನು ಸೂಚಿಸುತ್ತದೆ.
ಸಾಮ್ರಾಜ್ಯಶಾಹಿಯ ಕಾರ್ಯತಂತ್ರ
ಈ ಪ್ರಯತ್ನವು ನಿಯಮ-ಆಧರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಏಕೆ ಅಮೆರಿಕ ಹಾಳುಗೆಡವುತ್ತಿದೆ ಎಂಬುದನ್ನು ವಿವರಿಸುತ್ತದೆ. ನವ-ಉದಾರವಾದಿ ಆಳ್ವಿಕೆಯು ಸೂಚಿಸಿದ್ದಂತಹ ನಿಯಮ-ಆಧರಿತ ಅಂತರರಾಷ್ಟ್ರೀಯ ವ್ಯವಸ್ಥೆಯೊಳಗೆ ಸಹ ಮರುವಸಾಹತೀಕರಣದ ಪ್ರಯತ್ನ ಸಂಭವಿಸಬಹುದು. ಆದರೆ ಇತ್ತ ನವ-ಉದಾರವಾದೀ ವ್ಯವಸ್ಥೆಯು ಜಾಗತಿಕ ದಕ್ಷಿಣದಲ್ಲಿ ವೇಗವಾಗಿ ಜಾರಿಯಾಗುತ್ತಿರುವಾಗಲೇ, ಅದು ಉಂಟು ಮಾಡಿದ ಕುರುಡುಗಲ್ಲಿಯ ಸ್ಥಿತಿಯನ್ನು ಅಮೆರಿಕದಲ್ಲಿ (ಮತ್ತು ಜಾಗತಿಕ ಉತ್ತರದ ದೇಶಗಳಲ್ಲಿ) ನವ-ಉದಾರವಾದವನ್ನು ತೊರೆಯುವ ಮೂಲಕ ನಿವಾರಿಸಬಹುದೆಂದಾದರೆ, ನಿಯಮ-ಆಧರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಮೀರಿ ಹೋಗುವುದು ಸಾಮ್ರಾಜ್ಯಶಾಹಿಗೆ ಅತ್ಯಂತ ಅಗತ್ಯವಾಗುತ್ತದೆ.
ನವ-ಉದಾರವಾದದ ಕುರುಡು ದಾರಿಯಿಂದ ಹೊರಬರುವ ಸಾಮ್ರಾಜ್ಯಶಾಹಿಯ ಈ ಕಾರ್ಯತಂತ್ರವು, ಅದೇ ಸಮಯದಲ್ಲಿ, ನವ-ಉದಾರವಾದವು ಎಲ್ಲರಿಗೂ ಪ್ರಯೋಜನವಾಗುವ ಪರಿಹಾರದ ಭರವಸೆಯನ್ನು ನೀಡಬಲ್ಲ ಒಂದು ಪರಿಹಾರವನ್ನು ರೂಪಿಸಲು ಅಸಮರ್ಥವಾಗಿದೆ ಎಂಬುದನ್ನು ತೋರಿಸುತ್ತದೆ. ವಿಷಯವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎಲ್ಲರ ಜೀವನ ಪರಿಸ್ಥಿತಿಗಳ ಸುಧಾರಣೆಯ ಭರವಸೆ ನೀಡುವ ಸಾಮರ್ಥ್ಯವನ್ನು ಕೂಡ ವ್ಯವಸ್ಥೆಯು ಕಳೆದುಕೊಂಡಿದೆ ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ. ಅಂದರೆ ಈ ವ್ಯವಸ್ಥೆ ಇಡಿಯಾಗಿ ನವ-ಉದಾರವಾದವನ್ನು ಮೀರಿ ಹೋಗುವುದು ಸಾಧ್ಯವಿಲ್ಲ; ಕೆಲವು ದೇಶಗಳು ನವ-ಉದಾರವಾದವನ್ನು ಮೀರಿ ಹೋಗಬಹುದು, ಆದರೆ ಅದು ಇತರರನ್ನು ಅದರ ಅಡಿಯಲ್ಲಿ ಇನ್ನೂ ಹೆಚ್ಚಿನ ಗುಲಾಮಗಿರಿಗೆ ಒಳಪಡಿಸುವ ಮೂಲಕ ಮಾತ್ರವೇ.
ತಕ್ಷಣವೇ ಉದ್ಭವಿಸುವ ಪ್ರಶ್ನೆಯೆಂದರೆ: ಜಾಗತಿಕ ದಕ್ಷಿಣದ ಸರ್ಕಾರಗಳು ಈ ಅಸಮಾನ ವ್ಯಾಪಾರ ಒಪ್ಪಂದಗಳಿಗೆ ಮತ್ತು ಅವು ಪ್ರತಿನಿಧಿಸುವ ಮರು-ವಸಾಹತೀಕರಣವನ್ನು ಒಪ್ಪುತ್ತವೆ ಏಕೆ? ಇದಕ್ಕೆ ಉತ್ತರವೆಂದರೆ, ದುಡಿಯುವ ಜನರು, ಸಣ್ಣ ಉತ್ಪಾದಕರು ಮತ್ತು ಜಾಗತಿಕ ದಕ್ಷಿಣದಲ್ಲಿರುವ ಸಣ್ಣ ಬಂಡವಾಳಶಾಹಿಗಳು ಸಹ ಇಂತಹ ಮರು-ವಸಾಹತೀಕರಣದಿಂದ ಬಳಲುತ್ತವೆಯಾದರೂ (ಉದಾಹರಣೆಗೆ ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದವು ಭಾರತದ ರೈತರಿಗೆ ವಿಶೇಷವಾಗಿ ಹಾನಿಕಾರಕವಾಗಿರುತ್ತದೆ), ಮುಂದುವರೆದ ದೇಶಗಳ ಬಂಡವಾಳದೊಂದಿಗೆ ನಿಕಟವಾಗಿ ಸಂಯೋಜಿಸಲ್ಪಟ್ಟ ಏಕಸ್ವಾಮ್ಯ ಬೂರ್ಜ್ವಾ ವರ್ಗಕ್ಕೆ ಇದು ತಟ್ಟುವುದಿಲ್ಲ, ತದ್ವಿರುದ್ಧವಾಗಿ, ಅದು ಈ ಮರುವಸಾಹತೀಕರಣದ ಫಲಾನುಭವಿಯಾಗುವ ಸಾಧ್ಯತೆಯಿದೆ; ಮತ್ತು ಜಾಗತಿಕ ದಕ್ಷಿಣದ ಸರ್ಕಾರಗಳು, ನಿರ್ದಿಷ್ಟವಾಗಿ ನವ-ಫ್ಯಾಸಿಸ್ಟ್ ಸರ್ಕಾರಗಳು, ಏಕಸ್ವಾಮ್ಯ ಬೂರ್ಜ್ವಾ ವರ್ಗದ ಹಿತಾಸಕ್ತಿಗಳನ್ನು ಕಾಪಾಡುತ್ತವೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ವಸಾಹತುಶಾಹಿಯನ್ನು ನಿರ್ಮೂಲನೆಗೊಳಿಸಿದ ಹಿಂದಿನ ವಸಾಹತುಶಾಹಿ-ವಿರೋಧಿ ವರ್ಗಮೈತ್ರಿಯು ಮುರಿದುಹೋಗಿರುವುದರಿಂದಾಗಿ ಮರು-ವಸಾಹತೀಕರಣ ಯೋಜನೆ ಸಾಧ್ಯವಾಗುತ್ತದೆ.
ಇದನ್ನೂ ನೋಡಿ : ಯುದ್ಧದಲ್ಲಿ ಸೋತ ಯು.ಎಸ್ ನ್ನು ಮಾತುಕತೆಯಲ್ಲಿ ಗೆಲ್ಲಲು ಬಿಡದ ಇರಾನ್ Janashakthi Media
