ಕೇರಳ: ಮತ್ತೆ ಎಲ್.ಡಿ.ಎಫ್-ಯು.ಡಿ.ಎಫ್ ಅದಿಕಾರ ಅದಲಿ – ಬದಲಿ ಟ್ರೆಂಡ್?

ಕೇರಳದಲ್ಲಿ 1982 ರಿಂದ ಸುಮಾರು ನಾಲ್ಕುವರೆ ದಶಕಗಳ ಕಾಲ, ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ನಾಯಕತ್ವದ ಎಲ್.ಡಿ.ಎಫ್ ಮತ್ತು ಕಾಂಗ್ರೆಸ್ ನಾಯಕತ್ವದ ಯು.ಡಿ.ಎಫ್ ಗಳ ಆಡಳಿತ ಮತ್ತು ವಿರೋಧ ಪಕ್ಷದ ಸ್ಥಾನವನ್ನು ಅದಲಿ ಬದಲಿ ಆಗುತ್ತಿತ್ತು. ಇದು ಕೇರಳದ ಜನತೆಯ ರಾಜಕೀಯ ತೀರ್ಪಿನ ಒಂದು ಶಾಶ್ವತ ಟ್ರೆಂಡ್ ಆಗಿ ಬಿಟ್ಟಿತ್ತು. 2021ರ ಚುನಾವಣೆಯಲ್ಲಿ ಮಾತ್ರ ಎಲ್.ಡಿ.ಎಫ್ ಮತ್ತೆ ಅಧಿಕಾರಕ್ಕೆ ಬಂದು, ಈ ಟ್ರೆಂಡ್ ಬದಲಾಗುತ್ತದೇನೋ ಎಂಬ ಕುತೂಹಲ ಮೂಡಿಸಿತ್ತು. ಆದರೆ 2026 ಚುನಾವಣಾ ಫಲಿತಾಂಶ ನೋಡಿದರೆ, ಮತ್ತೆ ಹಳೆಯ ಅದಲಿ-ಬದಲಿ ಟ್ರೆಂಡ್ ಮರಳುತ್ತಿರುವಂತೆ ಕಾಣುತ್ತಿದೆ. ಕೇರಳದ 2026ರ ವಿಧಾನಸಭಾ ಚುನಾವಣೆಯ ವಿವರಗಳು ಮತ್ತು ಫಲಿತಾಂಶದ ವಿಶ್ಲೇಷಣೆ ಇಲ್ಲಿದೆ.

– ವಸಂತರಾಜ ಎನ್.ಕೆ

ಹತ್ತು ವರ್ಷಗಳ ಕಾಲ ವಿರೋಧ ಪಕ್ಷವಾಗಿ ಕೂತಿದ್ದ ಯು.ಡಿ.ಎಫ್ ಭಾರೀ ಜಯ ಗಳಿಸಿದೆ. ಈ ಬಾರಿ ಯು.ಡಿ.ಎಫ್ ನ 46.55% ಮತಗಳಿಕೆ 2001ರ ನಂತರದ ಅತ್ಯಂತ ಹೆಚ್ಚಿನ ಮತಗಳಿಕೆ ಮತ್ತು ಅತ್ಯಧಿಕ ಸೀಟು ಗಳಿಕೆ (102) ಸಾಧಿಸಿದೆ. ಅದೇ ರೀತಿ ಕಳೆದ ನಾಲ್ಕುವರೆ ದಶಕಗಳಲ್ಲಿ ಎಲ್.ಡಿ.ಎಫ್ ತನ್ನ ಅತ್ಯಂತ ಕಡಿಮೆ ಮತಗಳಿಕೆ (37.64%) ಮತ್ತು ಸೀಟುಗಳಿಕೆ (35) ಕಂಡಿದೆ. ಎಲ್.ಡಿ.ಎಫ್ ನ ಮತಗಳಿಕೆ ಯಾವತ್ತೂ 43.5% ಕ್ಕಿಂತ ಕಡಿಮೆಯಾಗಿರಲಿಲ್ಲ. ಹಿಂದಿನ ಅತ್ಯಂತ ಕಡಿಮೆ ಸೀಟು ಗಳಿಕೆ 40 ಆಗಿತ್ತು. ಪಕ್ಷ/ಕೂಟವಾರು ಪಡೆದ ಮತಪ್ರಮಾಣ (ಶೇಕಡಾಗಳಲ್ಲಿ), ಸ್ಪರ್ಧಿಸಿದ/ಗೆದ್ದ ಸೀಟುಗಳು ಮತ್ತು 2021ಕ್ಕೆ ಹೋಲಿಸಿದರೆ ವ್ಯತ್ಯಾಸಗಳ ವಿವರಗಳು ಕೋಷ್ಟಕ-1ರಲ್ಲಿವೆ.

ಯು.ಡಿ.ಎಫ್ ಕಳೆದ ಬಾರಿಗೆ ಹೋಲಿಸಿದರೆ 7.07% ಹೆಚ್ಚಿನ ಮತ ಗಳಿಸಿದೆ. 61 ಹೆಚ್ಚಿನ ಸೀಟು ಗಳಿಸಿದೆ. ಕಾಂಗ್ರೆಸ್ 41, ಮುಸ್ಲಿಂ ಲೀಗ್ 7, ಕೇರಳ ಕಾಂಗ್ರೆಸ್ 5 ಸೀಟು ಹೆಚ್ಚಿಸಿಕೊಂಡಿದೆ. ಮುಸ್ಲಿಂ ಲೀಗ್ ಸ್ಪರ್ಧಿಸಿದ ಸೀಟುಗಳಲ್ಲಿ ಸರಾಸರಿ ಮತಗಳಿಕೆ, ಮತಏರಿಕೆ ಎರಡೂ ಇತರ ಯು.ಡಿ.ಎಫ್ ಪಕ್ಷಗಳದ್ದಕ್ಕಿಂತ ಬಹಳ ಹೆಚ್ಚಿದೆ. ಗೆದ್ದ ಮತ್ತು ಸ್ಪರ್ಧಿಸಿದ ಸೀಟುಗಳ ಪ್ರಮಾಣ (8ರಲ್ಲಿ 7) ಕೇರಳ ಕಾಂಗ್ರೆಸ್ ದ್ದು ಅತ್ಯಂತ ಹೆಚ್ಚು ಇದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಭರವಸೆ ನೀಡಿ ವಂಚನೆ: 2–4 ಲಕ್ಷ ರೂ ವಸೂಲಿ

ಎಲ್.ಡಿ.ಎಫ್ ಕಳೆದ ಬಾರಿಗೆ ಹೋಲಿಸಿದರೆ 7.79% ಮತ ಕಳೆದುಕೊಂಡಿದೆ ಮತ್ತು ಅದರ ಫಲವಾಗಿ 64 ಸೀಟು ಕಳೆದುಕೊಂಡಿದೆ. ಸಿಪಿಐ(ಎಂ) ಸ್ಪರ್ಧಿಸಿದ ಸೀಟುಗಳಲ್ಲಿ ಸರಾಸರಿ ಮತಗಳಿಕೆ ಇತರ ಎಲ್.ಡಿ.ಎಫ್ ಪಕ್ಷಗಳದ್ದಕ್ಕಿಂತ ಹೆಚ್ಚಿದೆ. ಗೆದ್ದ ಮತ್ತು ಸ್ಪರ್ಧಿಸಿದ ಸೀಟುಗಳ ಪ್ರಮಾಣ (12ರಲ್ಲಿ 0) ಕೇರಳ ಕಾಂಗ್ರೆಸ್(ಎಂ) ದ್ದು ಅತ್ಯಂತ ಕಡಿಮೆ ಇದೆ. ಈ ಬಾರಿ ಎಲ್.ಡಿ.ಎಫ್ ಹಲವು (ಕೇರಳದಲ್ಲಿ) ಹೊಸ ಸಣ್ಣ ಪಕ್ಷಗಳಿಗೆ – ಆರ್.ಜೆ.ಡಿ, ಐ.ಎಸ್.ಜೆ.ಡಿ, ಕೇರಳ ಕಾಂಗ್ರೆಸ್ (ಬಿ), ಆರ್.ಸಿ.ಪಿ.ಎಲ್ – ಮತ್ತು ಸ್ವತಂತ್ರ (16) ಅಭ್ಯರ್ಥಿಗಳಿಗೆ ಸೀಟು ನೀಡಿದೆ. ಆದರೆ ಆರ್,ಜೆ.ಡಿ (3ರಲ್ಲಿ 1) ಬಿಟ್ಟರೆ ಯಾರೂ ಗೆಲುವು ಪಡೆದಿಲ್ಲ.

ಕೋಷ್ಟಕ-1 ಕೇರಳ ವಿಧಾನಸಭೆ ಚುನಾವಣೆ 2026 -ಪಕ್ಷ/ಕೂಟವಾರು ಮತಪ್ರಮಾಣ ಮತ್ತು ಸೀಟುಗಳಿಕೆ

ಪಕ್ಷ/ಕೂಟ ಮತ ಪ್ರಮಾಣ ಸೀಟು ಗಳಿಕೆ
% ವ್ಯತ್ಯಾಸ

+/

ಸ್ಪರ್ಧೆ ಗೆಲುವು ವ್ಯತ್ಯಾಸ+/-
ಸಿಪಿಐ(ಎಂ) 21.77% 3.61% 77 26 36
ಸಿಪಿಐ 6.64% 0.94% 24 8 9
ಕೇರಳ ಕಾಂಗ್ರೆಸ್ (ಎಂ) 2.60% 0.68% 12 0 5
ಎನ್.ಸಿ.ಪಿ-ಎಸ್.ಪಿ 0.68% 0.31% 3 0 2
ಆರ್.ಜೆ.ಡಿ 0.82% ಹೊಸಪಕ್ಷ 3 1 ಹೊಸಪಕ್ಷ
ಕಾಂಗ್ರೆಸ್ (ಎಸ್) 0.24% 0.05% 1 0 1
ಐ.ಎನ್.ಎಲ್ 0.19% 0.47% 1 0 1
ಐ.ಎಸ್.ಜೆ.ಡಿ 0.27% ಹೊಸಪಕ್ಷ 1 0 ಹೊಸಪಕ್ಷ
ಕೇರಳ ಕಾಂಗ್ರೆಸ್ (ಬಿ) 0.28% ಹೊಸಪಕ್ಷ 1 0 ಹೊಸಪಕ್ಷ
ಆರ್.ಎಸ್.ಪಿ.ಎಲ್ 0.26% ಹೊಸಪಕ್ಷ 1 0 ಹೊಸಪಕ್ಷ
ಸ್ವತಂತ್ರ 3.88% 16 0
ಎಲ್.ಡಿ.ಎಫ್ 37.64% 7.79 140 35 64
ಬಿಜೆಪಿ 11.42% 0.12% 98 3 3
ಬಿ.ಡಿ.ಜೆ.ಎಸ್ 1.34% 0.28% 22 0 0
ಟಿಟಿಪಿ 1.41% 0.70% 19 0 0
ಸ್ವತಂತ್ರ 0.03% 1 0
ಎನ್.ಡಿ.ಎ 14.20% 1.79% 140 3 3
ಕಾಂಗ್ರೆಸ್ 28.79% 3.59% 92 63 41
ಮುಸ್ಲಿಂ ಲೀಗ್ 11.01% 2.74% 26 22 7
ಕೇರಳ ಕಾಂಗ್ರೆಸ್ 2.43% 0.23% 8 7 5
ಕೇರಳ ಕಾಂಗ್ರೆಸ್ (ಜೆ) 0.42% 0.01% 1 1 0
ಆರ್.ಎಂ.ಪಿ.ಐ 0.33% 0.02% 1 1 0
ಆರ್.ಎಸ್.ಪಿ 1.21% 0.04% 4 3 3
ಸಿ.ಎಂ.ಪಿ 0.21% ಹೊಸಪಕ್ಷ 1 1 ಹೊಸಪಕ್ಷ
ಸ್ವತಂತ್ರ 2.15% 7 4
ಯು.ಡಿ.ಎಫ್ 46.54% 7.07% 140 102 61
ನೋಟಾ 0.57%  
ಒಟ್ಟು 100% 883 140

* ಪಕ್ಷಗಳು ಸ್ಪರ್ಧಿಸಿದ ಸೀಟುಗಳ ಸಂಖ್ಯೆ ಮತ್ತು ಇದ್ದ ಕೂಟಗಳಲ್ಲಿ 2021 ಮತ್ತು 2026ರ ಚುನಾವಣೆಗಳಲ್ಲಿ ಸ್ವಲ್ಪ ಭಿನ್ನವಾಗಿ ಇರುವುದರಿಂದ ಪಕ್ಷಗಳ ಮತಪ್ರಮಾಣ ಮತ್ತು ಸೀಟು ಗಳಿಕೆಯಲ್ಲಿ ವ್ಯತ್ಯಾಸಗಳನ್ನು ಆಯಾ ಪಕ್ಷದ ಸಾಧನೆ/ವೈಫಲ್ಯವೆಂದು ಸರಳೀಕರಿಸಲಾಗದು.

ಕೇರಳದಲ್ಲಿ ಈ ಬಾರಿ ಬಿಜೆಪಿ ಮತ್ತು ಅದರ ನಾಯಕತ್ವದ ಎನ್.ಡಿ.ಎ ಭಾರೀ ಮುನ್ನಡೆ ಸಾಧಿಸುತ್ತದೆ ಎಂದೆಲ್ಲಾ ಮಾಧ್ಯಮಗಳಲ್ಲಿ ಸದ್ದು ಮಾಡಲಾಗಿತ್ತು. ಚುನಾವಣಾ-ಪೂರ್ವ ಸಮೀಕ್ಷೆ ಮತ್ತು ಎಕ್ಸಿಟ್ ಪೋಲ್ ಗಳಲ್ಲಿ ಕೆಲವು ಸಂಸ್ಥೆಗಳು ಅದಕ್ಕೆ 8-14 ಸೀಟು ಕೊಟ್ಟಿದ್ದವು. ಆದರೆ ಕಳೆದ ಬಾರಿ ಶೂನ್ಯ ಸಂಪಾದನೆ ಮಾಡಿದ್ದ ಬಿಜೆಪಿ ಈ ಬಾರಿ 3 ಸೀಟು ಪಡೆದಿದೆ. ಮತಪ್ರಮಾಣದಲ್ಲಿ 1.79% ಹೆಚ್ಚಿಸಿಕೊಂಡು 14.2% ಮತಪ್ರಮಾಣ ಗಳಿಸಿದೆ. 6 ಸೀಟುಗಳಲ್ಲಿ ಬಿಜೆಪಿ ಎರಡನೇ ಸ್ಥಾನ ಗಳಿಸಿದೆ. ಎನ್.ಡಿ.ಎ ಕೂಟದಲ್ಲಿ ಸರಾಸರಿ ಮತಗಳಿಕೆಯಲ್ಲಿ ಉಳಿದ

ಎರಡು ಪಕ್ಷಗಳಿಗಿಂತ ಬಿಜೆಪಿ ಮುಂದಿದೆ. ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಅವರೇ ಸೋತಿದ್ದಾರೆ. ಪ್ರದೇಶ/ಜಿಲ್ಲಾವಾರು ಮೂರು ಕೂಟಗಳು ಪಡೆದ ಮತ ಪ್ರಮಾಣದಲ್ಲಿ, ಸೀಟುಗಳಿಕೆಯಲ್ಲಿ ವ್ಯತ್ಯಾಸಗಳಿವೆ. ಆದರೆ ಕೇರಳದ ಮೂರೂ ಪ್ರದೇಶಗಳಲ್ಲಿ (ಉತ್ತರದ ಮಲಬಾರ್, ಮಧ್ಯದ ಕೊಚ್ಚಿನ್, ದಕ್ಷಿಣದ ಟ್ರಾವಂಕೂರ್) ಯು.ಡಿ.ಎಫ್ ಮತ ಪ್ರಮಾಣ ಮತ್ತು ಸೀಟುಗಳಿಕೆ ಎರಡರಲ್ಲೂ ಮುಂದಿದೆ. ಮೂರು ಪ್ರದೇಶಗಳ ಮತಪ್ರಮಾಣ, ಸೀಟು ಗಳಿಕೆ ಕೂಟವಾರಾಗಿ ಕೋಷ್ಟಕ 2 ರಲ್ಲಿದೆ.

ಕೋಷ್ಟಕ-2 ಕೇರಳ ವಿದಾನಸಭೆ ಚುನಾವಣೆ 2026 – ಪ್ರದೇಶವಾರು ಕೂಟಗಳ ಸಾಧನೆ

ಯು.ಡಿ.ಎಫ್ ತನ್ನ ಅತ್ಯಧಿಕ ಮತಪ್ರಮಾಣವನ್ನು (50.3%) ಮತ್ತು ಸೀಟುಗಳಿಕೆಯನ್ನು (48ರಲ್ಲಿ 40) ಮಲಬಾರ್ ನಲ್ಲಿ ಸಾಧಿಸಿದೆ. ಎಲ್.ಡಿ.ಎಫ್ ತನ್ನ ಅತ್ಯಧಿಕ ಮತಪ್ರಮಾಣವನ್ನು (37.96%) ಮತ್ತು ಸೀಟುಗಳಿಕೆಯನ್ನು (44ರಲ್ಲಿ 16) ಕೊಚ್ಚಿನ್ ನಲ್ಲಿ ಸಾಧಿಸಿದೆ. ಎನ್.ಡಿ.ಎ ತನ್ನ ಅತ್ಯಧಿಕ ಮತಪ್ರಮಾಣವನ್ನು (17.78%) ಮತ್ತು ಎಲ್ಲ 3 ಸೀಟುಗಳಿಕೆಯನ್ನು ಟ್ರಾವಂಕೂರಿನಲ್ಲಿ ಸಾಧಿಸಿದೆ.

ಕಣ್ಣೂರ್, ಪಾಲಕ್ಕಾಡ್, ತ್ರಿಶೂರ್ ಜಿಲ್ಲೆಗಳಲ್ಲಿ ಮಾತ್ರ ಎಲ್.ಡಿ.ಎಫ್, ಯು.ಡಿ.ಎಫ್ ಗಿಂತ ಹೆಚ್ಚಿನ ಸೀಟು ಪಡೆದಿದೆ. ಉಳಿದೆಲ್ಲ 11 ಜಿಲ್ಲೆಗಳಲ್ಲಿ ಯು.ಡಿಎಫ್ ಎಲ್.ಡಿ.ಎಫ್ ಗಿಂತ ಹೆಚ್ಚಿನ ಸೀಟು ಪಡೆದಿದೆ. ಐದು ಜಿಲ್ಲೆಗಳಲ್ಲಿ (ಮಲಪ್ಪುರಂ, ವಾಯ್ನಾಡ್, ಎರ್ನಾಕುಲಂ, ಇಡುಕ್ಕಿ, ಕೊಟ್ಟಾಯಾಂ) ಯು.ಡಿ.ಎಫ್ ಎಲ್ಲಾ ಸೀಟುಗಳನ್ನು ಪಡೆದಿದೆ. ಎನ್.ಡಿ.ಎ ಸೀಟುಗಳಿಕೆ ತಿರುವನಂತರಪುರಂ (2) ಮತ್ತು ಕೊಲ್ಲಂ (1) ಎರಡು ಜಿಲ್ಲೆಗಳಲ್ಲಿ ಮಾತ್ರ ಸೀಮಿತವಾಗಿದೆ.

ಯು.ಡಿ.ಎಫ್ ನ ಭಾರೀ ಗೆಲುವಿಗೆ ಕಾರಣಗಳೇನು?

ಈ ಲೇಖನದ ಮೊದಲೇ ಹೇಳಿದ ಹಾಗೆ ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಎಲ್.ಡಿ.ಎಫ್ ಮತ್ತು ಯು.ಡಿ.ಎಫ್ ಗಳ ಆಡಳಿತ ಮತ್ತು ವಿರೋಧ ಪಕ್ಷದ ಸ್ಥಾನವನ್ನು ಅದಲಿ ಬದಲಿ ಮಾಡುವುದು, ಕೇರಳದ ರಾಜಕೀಯದ ಒಂದು ಶಾಶ್ವತ ಟ್ರೆಂಡ್ ಆಗಿ ಬಿಟ್ಟಿತ್ತು. ಆದರೆ 2016-2021ರ ಅವಧಿಯಲ್ಲಿ ಕೇರಳ ಹಿಂದೆಂದೂ ಕಾಣದ ಪ್ರಾಕೃತಿಕ ಪ್ರಕೋಪ (ಚಂಡಮಾರುತ, ಭಾರೀ ಮಳೆ-ನೆರೆ, ಭೂಕುಸಿತ) ಮತ್ತು ತೀವ್ರ ಆರೋಗ್ಯ ಬಿಕ್ಕಟ್ಟು (ಮರುಕಳಿಸುತ್ತಿದ್ದ ನಿಫಾ ಮತ್ತು ಕೊವಿದ್) ಕಾಡಿತ್ತು.

ಇದನ್ನು ಎಲ್.ಡಿ.ಎಫ್ ಸರಕಾರ ನಿರ್ವಹಿಸಿದ ರೀತಿ ಜನತೆಯ ಅಪಾರ ಮೆಚ್ಚುಗೆ ಗಳಿಸಿತ್ತು. ಇದು ದೇಶದಾದ್ಯಂತ ಮತ್ತು ಜಾಗತಿಕ ಮೆಚ್ಚುಗೆ ಸಹ ಗಳಿಸಿತ್ತು. ಇವಲ್ಲದೆ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಬಲಪಡಿಸುವ ಮೂಲಭೂತ ದೂರಗಾಮಿ ಯೋಜನೆಗಳು, ಜ್ಞಾನ ಆರ್ಥಿಕತೆ, ಉದ್ಯೋಗ ಸೃಷ್ಟಿಯತ್ತ ಸೃಜನಶೀಲ ಯೋಜನೆಗಳು, ಅಂಚಿನಲ್ಲಿರುವವರಿಗೆ ಕಲ್ಯಾಣ ಯೋಜನೆಗಳು – ಇವೆಲ್ಲವನ್ನು ಕೇರಳದ ಜನತೆ ಬಹಳ ಮೆಚ್ಚಿಕೊಂಡಿತು. ಇದು 2021ರಲ್ಲಿ ಎಲ್.ಡಿ.ಎಫ್ ಆ ವರೆಗಿದ್ದ ಟ್ರೆಂಡ್ ಮುರಿದು ಎಲ್.ಡಿ.ಎಫ್ ಮತ್ತೆ ಚುನಾಯಿತವಾಗಲು ಕಾರಣವಾಯಿತು..

ಎರಡನೇ ಅವಧಿಯಲ್ಲಿ ಸಹ ಎಲ್.ಡಿ.ಎಫ್ ಹಿಂದಿನ ಯೋಜನೆಗಳನ್ನು ಮುಂದುವರೆಸಿದ್ದಲ್ಲದೆ ಹಲವು ಹೊಸ ಅಭಿವೃದ್ಧಿ, ಕಲ್ಯಾಣ ಯೋಜನೆಗಳನ್ನು ಹಾಕಿಕೊಂಡಿತು. ಕಡು ಬಡತನದ ನಿರ್ಮೂಲನದ ಯೋಜನೆ ಹಾಕಿಕೊಂಡು ಅದನ್ನು ಸಾಧಿಸಿದ್ದು ದೇಶದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ಒಂದು ಮೈಲಿಗಲ್ಲಾಯಿತು. ಚೀನಾ ಬಿಟ್ಟರೆ ಯಾವುದೇ ಅಭಿವೃದ್ಧ ಅಥವಾ ಅಭಿವೃದ್ಧಿ ಹೊಂದುತ್ತಿರುವ ದೇಶ/ರಾಜ್ಯ/ ಪ್ರದೇಶ ಮಾಡಿರದ ಸಾಧನೆಯನ್ನು ಕೇರಳ ಎಲ್.ಡಿ.ಎಫ್ ಸರಕಾರ ಮಾಡಿ ತೋರಿಸಿತು. ಆದರೆ ವಿರೋಧಿ ಆಡಳಿತದ ಎಲ್ಲ ರಾಜ್ಯಗಳಿಗೆ ಅವುಗಳ ಹಕ್ಕಿನ ಯೋಜನಾ ವೆಚ್ಚ, ಅನುದಾನ, ಹಣಕಾಸು ಒದಗಿಸದೆ ಕೇಂದ್ರ ಸರಕಾರ ಕೇರಳವನ್ನು ಆರ್ಥಿಕವಾಗಿ ಕತ್ತು ಹಿಚುಕಲು ಪ್ರಯತ್ನಿಸಿತು.

ಇವು ಹಲವು ಯೋಜನೆಗಳ ಜಾರಿಗೆ ತೊಡಕಾದವು. ಈ ಹಣಕಾಸು ತೊಡಕು ಹೋಗಲಾಡಿಸಲು ವಿದೇಶಿ ಸಾಲದ ಹಾದಿಗೂ ಕೇಂದ್ರ ಸರಕಾರ ಅಡ್ಡಗಾಲು ಹಾಕಿತು. ಆದರೂ ಧೃತಿಗೆಡದೆ KINFRA ನಂತಹ ಸಂಸ್ಥೇಗಳ ಮೂಲಕ ಹೂಡಿಕೆಗೆ ಹಣಯೆತ್ತುವ ಸೃಜನಶೀಲ ಯೋಜನೆಗಳನ್ನು ಎಲ್.ಡಿ.ಎಫ್ ಹಾಕಿತು. ಆದರೂ ಒಟ್ಟಾರೆ ಹಣಕಾಸಿನ ಕೊರತೆಯಿಂದಾಗಿ ಕೆಲವು ಹಳೆಯ ಮತ್ತು ಹೊಸ ಯೋಜನೆಗಳ ಜಾರಿಯಲ್ಲಿ ವ್ಯತ್ಯಯಗಳು ಕಂಡು ಬಂದವು. ಯುವಜನರನ್ನು ಆಡಳಿತದಲ್ಲಿ ತರಬೇತಿ ಮಾಡಲು ಮತ್ತು ಸಂಘಟನೆ-ಆಡಳಿತದ ನಡುವೆ ನಾಯಕರ ಸತತ ವರ್ಗಾವಣೆ ಮಾಡಲು, ಎರಡನೆಯ ಅವಧಿಯ ಸಚಿವ ಸಂಫುಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಯುವ ಮುಖಗಳನ್ನು ತರಲಾಯಿತು. ಇದರಿಂದಾಗಿ ಒಟ್ಟಾರೆ ಸಚಿವ ತಂಡದಲ್ಲಿ ಅನುಭವ, ಪರಿಣತಿಯ ಕೊರತೆಯಿಂದಾಗಿ ಸಹ ಮೊದಲ ಅವಧಿಗೆ ಹೋಲಿಸಿದರೆ ಹಲವು ಕೊರತೆಗಳು ಕಂಡು ಬಂದವು.

ಬಹುಶಃ ಕೇರಳದ ಜನ ಹಿಂದಿನ ಸರಕಾರಕ್ಕಿಂತ ಹೆಚ್ಚಿನ ಸಾಧನೆಯ ಮಟ್ಟವನ್ನು ಮುಂದಿನ ಸರಕಾರದಿಂದ ಬಯಸುತ್ತಾರೆ. ಇದಕ್ಕಾಗಿ ಪ್ರತಿ ಬಾರಿ ಸರಕಾರ ಬದಲಾಯಿಸುವುದು ಒಳ್ಳೆಯ ವಿಧಾನವೆಂದು ಕಂಡುಕೊಂಡಿದ್ದಾರೆ. ಇದೇ ದಶಕಗಳ ಕಾಲದ ಈ ರಾಜಕೀಯ ಟ್ರೆಂಡ್ ನ ಮೂಲ. ಯು.ಡಿ.ಎಫ್ ಸರಕಾರದ ಸಾದನೆ ಹೆಚ್ಚಾಗಿ ಎಲ್.ಡಿ.ಎಫ್ ಸರಕಾರದ ಸಾಧನೆಗಿಂತ ಕಳಪೆಯಾಗಿದ್ದರಿಂದ ಎಲ್.ಡಿ.ಎಫ್ ಗೆ ಬದಲಾವಣೆ ಸಹಜವಾಗಿತ್ತು. ಆದರೆ 2016-21 ಎಲ್.ಡಿ.ಎಫ್ ಸರಕಾರದ ಅದ್ಭುತ ಸಾಧನೆಯನ್ನು ಎರಡನೇ 2021-26 ಎಲ್.ಡಿ.ಎಫ್ ಸರಕಾರ ಮೀರಿಸಲು ಸಾಧ್ಯವಾಗದ್ದು ಮತ್ತೆ ಅದಲಿ-ಬದಲಿ ವಿಧಾನಕ್ಕೆ ಮರಳುವುದು, ಯು.ಡಿ.ಎಫ್ ಸರಕಾರದ ಆಯ್ಕೆಗೆ ಕಾರಣವಾಗಿರಬೇಕು.

ಕೋಮುವಾದಿ ಕ್ರೋಡೀಕರಣ

ಎರಡನೆಯ ಅವಧಿಯಲ್ಲಿ ಕೇಂದ್ರ ಸರಕಾರದಿಂದ ತೊಡಕುಗಳಿದ್ದರೂ, ಎಲ್.ಡಿ.ಎಫ್ ಸರಕಾರ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದು, ಮತ್ತೊಮ್ಮೆ ಅದು ಚುನಾಯಿತವಾದರೆ, ‘ನಮಗೆ ಕಷ್ಟ’ ಎಂದು ಕೇರಳ ಮತ್ತು ದೇಶದ ಆಳುವ ವರ್ಗಗಳ ಪಟ್ಟಭದ್ರ ಹಿತಾಸಕ್ತಿಗಳೂ ಅವುಗಳನ್ನು ಪ್ರತಿನಿಧಿಸುವ ಶಕ್ತಿಗಳು, ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಕೋಮುವಾದಿ ಶಕ್ತಿಗಳೂ, ಅವುಗಳ ಮಡಿಲು ಮಾಧ್ಯಮಗಳು ಗಾಬರಿಗೊಂಡಿರಬೇಕು. ಹಾಗಾಗಿ ಸತತವಾಗಿ ಎಲ್.ಡಿ.ಎಫ್ ಮುಖ್ಯಮಂತ್ರಿ, ಸಚಿವರು, ಸರಕಾರದ ವಿರುದ್ಧ ಸತತವಾಗಿ ಅಪಪ್ರಚಾರಗಳು ನಡೆದಿದ್ದವು. ಹೆಚ್ಚಾಗಿ ಹುಸಿಯಾದ ಅಥವಾ ಆಧಾರ-ರಹಿತ ಭ್ರಷ್ಟಾಚಾರದ ದುರಾಡಳಿತದ ಆಪಾದನೆಗಳು, ಸರಕಾರದ ನೀತಿಗಳ ಬಗ್ಗೆ ಅಪಪ್ರಚಾರ ಸತತವಾಗಿ ನಡೆಯುತ್ತಲೇ ಇದ್ದವು. ಸರಕಾರದ ಉತ್ತಮ ಕೆಲಸಗಳಿಗೆ ಅಥವಾ ಕೇಂದ್ರ ಸರಕಾರ ಒಡ್ಡುತ್ತಿರುವ ತೊಡಕುಗಳಿಗೆ ಯಾವುದೇ ಪ್ರಚಾರ ಸಿಗುತ್ತಿರಲಿಲ್ಲ. ಆದರೆ ಮೊದಲನೆಯದಕ್ಕೆ ಹೋಲಿಸಿದಂತೆ ಎರಡನೇ ಎಲ್.ಡಿ.ಎಫ್ ಸರಕಾರದ ಸಾಧನೆಗಳಲ್ಲಿ ಕೊರತೆ, ವ್ಯತ್ಯಯಗಳು ಮಾತ್ರ ಎಲ್.ಡಿ.ಎಫ್ ಸೋಲಿನ ಭಾರೀ ಪ್ರಮಾಣವನ್ನು ಪೂರ್ತಿಯಾಗಿ ವಿವರಿಸುವುದಿಲ್ಲ.

ಈ ಅವಧಿಯಲ್ಲಿ, ಸತತವಾಗಿ ಕೋಮುವಾದಿ ಪ್ರಚಾರವೂ ಅವ್ಯಾಹತವಾಗಿ ನಡೆಯುತ್ತಿತ್ತು. ಸುಪ್ರೀಂ ಕೋರ್ಟಿನಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿವಾದ, ಕೇರಳ ಸ್ಟೋರಿ 1 ಮತ್ತು 2 ಮೂಲಕ ಮುಸ್ಲಿಂ-ದ್ವೇಷ ಪ್ರಚಾರ – ಇವೆಲ್ಲವನ್ನು ಬಹುಸಂಖ್ಯಾತ ಕೋಮುವಾದಿ ಶಕ್ತಿಗಳು ಹಿಂದೂಗಳನ್ನು ಅಣಿ ನೆರೆಸಲು, ದೈನಂದಿನ ಬದುಕಿನ, ಜೀವನೋಪಾಯದ, ಅಭಿವೃದ್ಧಿಯ ಪ್ರಶ್ನೆಗಳನ್ನು ಬದಿಗೊತ್ತಲು ಬಳಸಲು ಸತತ ಪ್ರಯತ್ನ ನಡೆಸಿದರು. ಶಬರಿಮಲೆ ವಿವಾದವನ್ನು ಹಿಂದೂ ಕ್ರೋಡೀಕರಣಕ್ಕೆ ಬಳಸಲು ಕಾಂಗ್ರೆಸ್ ಹಿಂಜರಿಯಲಿಲ್ಲ.

ಬಿಜೆಪಿಯಂತೂ ತನ್ನ ನೆಲೆ ಉಳಿಸಿಕೊಳ್ಳಲು ಇವೆರಡನ್ನು ಅಸ್ತ್ರವಾಗಿ ಸತತವಾಗಿ ಬಳಸುತ್ತಾ ಬಂದಿದೆ. ಕೇರಳದಲ್ಲಿ ಮತ್ತು ದೇಶದಲ್ಲಿ ಬಹುಸಂಖ್ಯಾತ ಕೋಮುವಾದಿ ಶಕ್ತಿಗಳ ಮತ್ತು ಕೇಂದ್ರ ಸರಕಾರದ ಮುಸ್ಲಿಂ-ವಿರೋಧಿ ನೀತಿ ಮತ್ತು ಮುಸ್ಲಿಂ-ದ್ವೇಷ ನೀತಿಗಳು ರಾಜ್ಯದ ಮುಸ್ಲಿಮರಲ್ಲಿ ಭೀತಿ ಮೂಡಿಸಿದೆ. ಮುಸ್ಲಿಮರು ಸಾರಾ ಸಗಟಾಗಿ ಮುಸ್ಲಿಂ ಲೀಗ್ ಮತ್ತು ಯು.ಡಿ.ಎಫ್ ಜತೆಗೇನೂ ಗುರುತಿಸಿಕೊಂಡಿರಲಿಲ್ಲ. ಎಲ್.ಡಿ.ಎಫ್ ಮುಸ್ಲಿಮರಲ್ಲಿ ಒಂದು ಮಟ್ಟದ ಬೆಂಬಲ ಹೊಂದಿತ್ತು. ಆದರೆ ಇತ್ತೀಚಿನ ವರ್ಷಗಳ ಪರಿಸ್ಥಿತಿ ಅವರಲ್ಲಿ ಉಂಟು ಮಾಡಿರುವ ಭೀತಿಯನ್ನು ಬಳಸಿ, ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಯು.ಡಿ.ಎಫ್ ಹಿಂದೆಂದಿಗಿಂತಲೂ ದೊಡ್ಡ ಪ್ರಮಾಣದ ಮುಸ್ಲಿಮರ ಮತ ಕ್ರೋಡೀಕರಣಕ್ಕೆ ಪ್ರಯತ್ನಿಸಿ ಸಫಲವಾದಂತೆ ಕಾಣುತ್ತದೆ. .

ಇದೇ ರೀತಿ ಕ್ರಿಶ್ಚಿಯನ್ನರು ಸಹ ಕೇರಳ ಕಾಂಗ್ರೆಸ್ ಮತ್ತು ಯು.ಡಿ.ಎಫ್ ಜತೆ ಸಾರಾ ಸಗಟಾಗಿಯೇನು ಗುರುತಿಸಿಕೊಂಡಿರಲಿಲ್ಲ. ಕೇರಳ ಕಾಂಗ್ರೆಸ್ ನ ಬಣಗಳು ಎಲ್.ಡಿ.ಎಫ್ ನಲ್ಲೂ ಇದ್ದವು. ಕೆಲವು ಚರ್ಚು ನಾಯಕರನ್ನು ಹಿಡಿದು ‘ಲವ್-ಜಿಹಾದ್’ ಗುಲ್ಲನ್ನು ಎಬ್ಬಿಸಿ ತಮ್ಮ ಪಕ್ಷದ ಬೆಂಬಲಿಗರಾಗಿಸಲು ಮೋದಿ-ಶಾ ಆದಿಯಾಗಿ ಬಿಜೆಪಿಯ ಎಲ್ಲ ಹಂತದ ನಾಯಕರು ಎಲ್ಲ ಕಸರತ್ತು ನಡೆಸಿದರು. ಹೆಚ್ಚು ಕಡಿಮೆ ಸಫಲರೂ ಆಗಿದ್ದರು. ಆದರೆ ಮಣಿಪುರದಲ್ಲಿ ಕ್ರೈಸ್ತರ, ಚರ್ಚುಗಳ ಮೇಲೆ ದಾಳಿಯಿಂದ ಆರಂಭಿಸಿ ವಿದೇಶೀ ಧನಸಹಾಯದ ಮೇಲೆ ನಿಯಂತ್ರಣದ ಕಾನೂನಿನ ಬದಲಾವಣೆ (ಇದು ಚರ್ಚಿನ ವಿದೇಶೀ ಅನುದಾನವನ್ನು ಕಡಿತ ಮಾಡಬಹುದೆಂಬ ಭೀತಿ) ವರೆಗಿನ ಬಿಜೆಪಿ ಸರಕಾರದ ಕ್ರಮಗಳು ರಾಜ್ಯದ ಕ್ರೈಸ್ತರಲ್ಲಿ ಸಹ ಬೀತಿ ಉಂಟು ಮಾಡಿದ್ದವು.

ಈ ಪರಿಸ್ಥಿತಿಯನ್ನು ಕಾಂಗ್ರೆಸ್, ಕೇರಳ ಕಾಂಗ್ರೆಸ್ ಬಳಸಿ, ಯು.ಡಿ.ಎಫ್ ಪರವಾಗಿ ಕ್ರಿಶ್ಚಿಯನ್ನರ ಮತಗಳನ್ನು ಸಹ ಹಿಂದೆಂದಿಗಿಂತಲೂ ದೊಡ್ಡ ಪ್ರಮಾಣದ ಕ್ರಿಶ್ಚಿಯನ್ನರ ಮತ ಕ್ರೋಡೀಕರಣಕ್ಕೆ ಪ್ರಯತ್ನಿಸಿ ಸಫಲವಾದಂತೆ ಕಾಣುತ್ತದೆ. . ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರು ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಮಲಬಾರ್ ನಲ್ಲಿ ಇವವೆರಡೂ ಸಮುದಾಯಗಳು ದೊಡ್ಡ ಸಂಖ್ಯೆಯಲ್ಲಿದ್ದು ಯು.ಡಿ.ಎಫ್ ಭಾರೀ ಪ್ರಮಾಣದಲ್ಲಿ ಗೆದ್ದಿದೆ. ಇತರ ಪ್ರದೇಶಗಳ ಕ್ಷೇತ್ರಗಳಲ್ಲೂ ಚುನಾವಣೆಯ ಈ ಕೋಮುವಾದೀಕರಣ ಯು.ಡಿ.ಎಫ್ ಭಾರೀ ಗೆಲುವಿಗೆ ಪ್ರಮುಖ ಕಾರಣವಾಗಿದೆ.

ಕೋಮುವಾದೀಕರಣ ಅಥವಾ ಇತರ ಭಾವನಾತ್ಮಕ ವಿಷಯಗಳು ಮುನ್ನೆಲೆಗೆ ಬಂದಾಗ, ಸರಕಾರದ ಸಾಧನೆ-ಕೊರತೆಗಳು, ಜನರನ್ನು ಬಾಧಿಸುವ ವಿಷಯಗಳು ಹಿಂದಕ್ಕೆ ಸರಿಯುವುದನ್ನು ನಾವು ಹಲವು ಚುನಾವಣೆಗಳಲ್ಲಿ ಕಾಣಬಹುದು. ಅಸ್ಸಾಂ ನ ಈ ಬಾರಿಯ ಚುನಾವಣೆಯಲ್ಲಿ ಸಹ ಇದನ್ನು ಕಾಣಬಹುದು. ಕೇರಳದ್ದೇ ಈ ಬಾರಿಯದ್ದೇ ಒಂದು ಉದಾಹರಣೆ ಸಹ ನೋಡಬಹುದು. ವಾಯ್ನಾಡಿನಲ್ಲಿ ತೀವ್ರ ಭೂಕುಸಿತವಾದಾಗ ಅದಕ್ಕೆ ಎಲ್.ಡಿ.ಎಫ್ ಸರಕಾರ ಕಾರಣ. ಅದು ಪರಿಹಾರವನ್ನೂ ಕೊಡುವುದಿಲ್ಲ. ಹಾಗಾಗಿ ನಾವು ಪಕ್ಷವಾಗಿ ಸಂತ್ರಸ್ತರಾಗಿ ಮನೆ ಕಟ್ಟಿಸಿಕೊಡುತ್ತೇವೆ ಎಂದು ಅಲ್ಲಿನ ಸಂಸತ್ ಸದಸ್ಯ ರಾಹುಲ್ ಗಾಂಧಿ, ಕರ್ನಾಟಕದ ಕಾಂಗ್ರೆಸ್ ಸರಕಾರ, ವೀರ ಹೇಳಿಕೆಗಳನ್ನು ನೀಡಿದರು. ಆದರೆ ಈ ವರೆಗೆ ಕಾಂಗ್ರೆಸ್ ನಿಂದ ಒಂದೇ ಮನೆ ಕಟ್ಟಿಕೊಟ್ಟಿಲ್ಲ. ಮಾತ್ರವಲ್ಲ ಜಿಲ್ಲಾ ಕಾಂಗ್ರೆಸ್ ನಾಯಕರು ಪರಿಹಾರಕ್ಕೆ ಸಾರ್ವಜನಿಕರಿಂದ ಕೋಟ್ಯಾಂತರ ಪರಿಹಾರ ನಿಧಿ ಸಂಗ್ರಹಿಸಿ ಗುಳಂ ಮಾಡಿದ ಹಗರಣ ಬೆಳಕಿಗೆ ಬಂದಿದೆ. ಕಾಂಗ್ರೆಸ್ ನಿರೀಕ್ಷೆಗೆ ವಿರುದ್ಧವಾಗಿ ಎಲ್.ಡಿ.ಎಫ್ ಸರಕಾರ ಸಂತ್ರಸ್ತರಿಗೆ ಒಂದು ಟೌನ್ ಶಿಪ್ ನ್ನೇ ಕಟ್ಟಿಸಿದೆ. ಆದರೆ ಫಲಿತಾಂಶ ಬಂದಾಗ ಎಲ್.ಡಿ.ಎಫ್ ಜಿಲ್ಲೆಯಲ್ಲಿ ಎಲ್ಲ ಸೀಟುಗಳಲ್ಲಿ ಸೋತಿದೆ!

ಇತರ ಅಂಶಗಳಿಲ್ಲವೆಂದಲ್ಲ. ಯು.ಡಿ.ಎಫ್ ತನ್ನ ಪ್ರಣಾಳಿಕೆಯಲ್ಲಿ ಮಂಡಿಸಿದ ಕರ್ನಾಟಕ ಮಾದರಿಯ ‘ಗ್ಯಾರಂಟಿ’ಗಳು ಕೆಲವು ಜನವಿಭಾಗಗಳಿಗೆ ಆಕರ್ಷಕವೆನಿಸಿರಬಹುದು. ಈ ಥರದ ‘’ಹಣ ಕೊಡುವ’ ಯೋಜನೆಗಳು, ಎಲ್.ಡಿ.ಎಫ್ ನ ದೂರಗಾಮಿ ವ್ಯವಸ್ಥೆಯ ಭಾಗವಾದ ಕಾನೂನುಬದ್ಧ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳ ಬದಲಾಗಿ ಅಥವಾ ಅದರ ಜತೆ ಆಕರ್ಷಕವೆನಿಸಿರಬಹುದು. ಸರಕಾರದ ನೀತಿ ನಿರ್ಧರಿಸುವಲ್ಲಿ, ನಿರ್ವಹಿಸುವಲ್ಲಿ ಎಲ್.ಡಿ.ಎಫ್ ಸರಕಾರ, ಎಲ್.ಡಿ.ಎಫ್ ಸಮನ್ವಯ ಸಮಿತಿ ಮತ್ತು ಸಿಪಿಐ(ಎಂ) ಪಕ್ಷದ ನಡುವಣ ಸಂಬಂಧಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳು, ಇವುಗಳಿಂದ ಉಂಟಾದ ಸಂಘಟನಾ ಸಮಸ್ಯೆಗಳು ಸಹ ಎಲ್.ಡಿ.ಎಫ್ ಸಾಧನೆ ಮತ್ತು ಇಮೇಜನ್ನು ಹಾಳುಗೆಡವಿರಬಹುದು. ಅಭ್ಯರ್ಥಿಗಳ ಮತ್ತು ಕ್ಷೇತ್ರಗಳ ಆಯ್ಕೆ ಬಗ್ಗೆ ಪಕ್ಷದೊಳಗೆ ಭಿನ್ನಾಭಿಪ್ರಾಯ ಕೆಲವು ಕ್ಷೇತ್ರಗಳಲ್ಲಿ ಬಂಡಾಯದ ವರೆಗೆ ಹೋಗಿದ್ದು ಮತ್ತು ಇತರ ಕ್ಷೇತ್ರಗಳಲ್ಲಿ ಒಳಗೊಳಗೆ ಇದ್ದ ಅತೃಪ್ತಿ ಸಹ ಐಕ್ಯ ಸ್ಫೂರ್ತಿದಾಯಕ ಚುನಾವಣಾ ಪ್ರಚಾರಕ್ಕೆ ತೊಡಕು ಉಂಟುಮಾಡಿರಬಹುದು.

ಇದನ್ನೂ ನೋಡಿ: ಮೇ ಡೇ ವಿಶೇಷ: ಕನಿಷ್ಠ ವೇತನ, ಹಕ್ಕುಗಳ ರಕ್ಷಣೆಗೆ ರಾಜ್ಯವ್ಯಾಪಿ ಕಾರ್ಮಿಕರ ಮೆರವಣಿಗೆ Janashakthi Media

Donate Janashakthi Media

Leave a Reply

Your email address will not be published. Required fields are marked *