ಕೇರಳದಲ್ಲಿ, ಚುನಾವಣಾ ಚರ್ಚೆಗಳು ವ್ಯಕ್ತಿಪೂಜೆಗೆ ಬದಲಾಗಿ ನೀತಿ ದೃಷ್ಟಿಕೋನಗಳ ಸುತ್ತ ಕೇಂದ್ರಿತವಾಗಿವೆ. ದಶಕದ ಹಿಂದೆ ಎಲ್ಡಿಎಫ್ ಸಮಗ್ರ ಅಭಿವೃದ್ಧಿ ಅಜೆಂಡಾವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿತು. ಐದು ವರ್ಷಗಳ ಆಡಳಿತದಲ್ಲಿ ವಾಗ್ದಾನಗಳನ್ನು ಒಂದೊಂದಾಗಿ ನೆರವೇರಿಸಿ, ಮತ್ತೊಮ್ಮೆ ಜನಾದೇಶ ಪಡೆದು ಇನ್ನಷ್ಟು ಬಲವಾದ ಜಯ ಸಾಧಿಸಿತು. ಅದರ ಘೋಷಣಾಪತ್ರವು ಜಾಗತಿಕವಾಗಿ ಬಲಪಂಥೀಯರು ಹರಡಿದ “ಪರ್ಯಾಯವೇ ಇಲ್ಲ” (TINA) ಎಂಬ ಸಿದ್ಧಾಂತಕ್ಕೆ ವಿರುದ್ಧವಾಗಿ ಜನಪರ “ಎಡ ಪರ್ಯಾಯ”ವನ್ನು ಮಂಡಿಸಿತು. ಇದಕ್ಕೆ ವಿರುದ್ಧವಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಜಾಗತಿಕ ಆರ್ಥಿಕ ಶಕ್ತಿಗಳ ಹಿತಾಸಕ್ತಿಗಳಿಗೆ ಹೊಂದಿಕೊಂಡಿರುವ ನವಉದಾರವಾದಿ ನೀತಿಗಳನ್ನೇ ಅನುಸರಿಸುತ್ತಿವೆ. ಹೀಗಾಗಿ ಅಭಿವೃದ್ಧಿ ಮತ್ತು ಆರ್ಥಿಕ ನೀತಿಗಳ ವಿಷಯದಲ್ಲಿ ಬಹುಪಾಲು ಒಂದೇ ರೀತಿಯ ನಿಲುವು ಹೊಂದಿರುವ ಯುಡಿಎಫ್ ಮತ್ತು ಎನ್ಡಿಎಗಳ ವಿರುದ್ಧವಾಗಿ, ಸಂಪೂರ್ಣ ವಿಭಿನ್ನ ಪರ್ಯಾಯಗಳನ್ನು ಪ್ರತಿಪಾದಿಸುವ ಎಲ್ಡಿಎಫ್ ನಡುವೆ ಈ ಹೋರಾಟ ನಡೆಯುತ್ತಿದೆ.
– ಟಿ. ಗೋಪಕುಮಾರ್
ದೇಶದ ಮಟ್ಟದಲ್ಲಿ ಮಹತ್ವದ ಗಮನ ಸೆಳೆದಿರುವ ಕೇರಳ ವಿಧಾನಸಭಾ ಚುನಾವಣೆಯ ಪ್ರಾರಂಭಿಕ ಹಂತ ಈಗ ಪೂರ್ಣಗೊಂಡಿದೆ. ಮುಖ್ಯ ಸ್ಪರ್ಧೆ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ(ಎಲ್ಡಿಎಫ್), , ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ( (ಯುಡಿಎಫ್)ದ ನಡುವೆ ನಡೆಯುತ್ತಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ( (ಎನ್ಡಿಎ) ಕೂಡ ಸ್ಪರ್ಧೆಯಲ್ಲಿ ಇದೆ.
ಚುನಾವಣೆ ಅಧಿಸೂಚನೆ ಹೊರಬಂದ ಕೆಲವೇ ಗಂಟೆಗಳೊಳಗೆ ಎಲ್ಡಿಎಫ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿ ಪ್ರಚಾರ ಆರಂಭಿಸಿತು. ಇದಕ್ಕೆ ವಿರುದ್ಧವಾಗಿ, ಅಭ್ಯರ್ಥಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕ ಸಮೀಪಿಸುತ್ತಿದ್ದರೂ ಯುಡಿಎಫ್ ಒಳಜಗಳಗಳಿಂದ ಗೊಂದಲದಲ್ಲಿತ್ತು. ಎನ್ಡಿಎ ಕೂಡ ತನ್ನ ಅಭ್ಯರ್ಥಿಗಳನ್ನು ಅಂತಿಮ ಹಂತದಲ್ಲಷ್ಟೇ ಅಂತಿಮಗೊಳಿಸಿತು.
ಇದನ್ನೂ ಓದಿ: 48ರಲ್ಲಿ 18 ಹಾಲಿನ ಮಾದರಿ ಕಡಿಮೆ ಗುಣಮಟ್ಟ: ಎಂ.ಆರ್.ರವಿ
ಎಲ್ಡಿಎಫ್ಗೆ ಮುಖ್ಯಮಂತ್ರಿಯಾದ ಪಿಣರಾಯಿ ವಿಜಯನ್, ಸಿಪಿಐ(ಎಂ) ಪೊಲಿಟ್ಬ್ಯೂರೋ ಸದಸ್ಯರು, ನಾಯಕತ್ವ ವಹಿಸಿದ್ದಾರೆ. ಯುಡಿಎಫ್ ಶಿಬಿರದಲ್ಲಿ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಹಾಗೂ ಮಾಜಿ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಮತ್ತು ಮಾಜಿ ಅಧ್ಯಕ್ಷ ಕೆ. ಮುರಳೀಧರನ್ ಕೂಡ ಸ್ಪರ್ಧೆಯಲ್ಲಿ ಇದ್ದಾರೆ. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸ್ಪರ್ಧಿಸುತ್ತಿಲ್ಲದಿದ್ದರೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಪುನರಾಯ್ಕೆಗಾಗಿ ಸ್ಪರ್ಧಿಸುತ್ತಿರುವ ಎಲ್ಡಿಎಫ್ನ ಅನೇಕ ಶಾಸಕರು ಸಮರ್ಥ ಕಾರ್ಯಚಟುವಟಿಕೆ ಮತ್ತು ತಳಮಟ್ಟದ ಸಂಪರ್ಕ ಹೊಂದಿದ್ದಾರೆ. ಒಟ್ಟು 55 ಮಂದಿ ಪ್ರಸ್ತುತ ಶಾಸಕರು ಮತ್ತೆ ಸ್ಪರ್ಧಿಸುತ್ತಿದ್ದು, ಇದು ಅವರ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ರಾಜಕೀಯವಾಗಿ ಪ್ರಗತಿಪರ ಹಾಗೂ ಪ್ರಜಾಸತ್ತಾತ್ಮಕ ಕೇರಳದಲ್ಲಿ, ಚುನಾವಣಾ ಚರ್ಚೆಗಳು ವ್ಯಕ್ತಿಪೂಜೆಗೆ ಬದಲಾಗಿ ನೀತಿ ದೃಷ್ಟಿಕೋನಗಳ ಸುತ್ತ ಕೇಂದ್ರಿತವಾಗಿವೆ. ದಶಕದ ಹಿಂದೆ ಎಲ್ಡಿಎಫ್ ಸಮಗ್ರ ಅಭಿವೃದ್ಧಿ ಅಜೆಂಡಾವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿತು. ಐದು ವರ್ಷಗಳ ಆಡಳಿತದಲ್ಲಿ ವಾಗ್ದಾನಗಳನ್ನು ಒಂದೊಂದಾಗಿ ನೆರವೇರಿಸಿ, ಮತ್ತೊಮ್ಮೆ ಜನಾದೇಶ ಪಡೆದು ಇನ್ನಷ್ಟು ಬಲವಾದ ಜಯ ಸಾಧಿಸಿತು. ಅದರ ಘೋಷಣಾಪತ್ರವು ಜಾಗತಿಕವಾಗಿ ಬಲಪಂಥೀಯರು ಹರಡಿದ “ಪರ್ಯಾಯವೇ ಇಲ್ಲ” (TINA) ಎಂಬ ಸಿದ್ಧಾಂತಕ್ಕೆ ವಿರುದ್ಧವಾಗಿ ಜನಪರ “ಎಡ ಪರ್ಯಾಯ”ವನ್ನು ಮಂಡಿಸಿತು.
ಇದಕ್ಕೆ ವಿರುದ್ಧವಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಜಾಗತಿಕ ಆರ್ಥಿಕ ಶಕ್ತಿಗಳ ಹಿತಾಸಕ್ತಿಗಳಿಗೆ ಹೊಂದಿಕೊಂಡಿರುವ ನವಉದಾರವಾದಿ ನೀತಿಗಳನ್ನೇ ಅನುಸರಿಸುತ್ತಿವೆ. ಹೀಗಾಗಿ ಅಭಿವೃದ್ಧಿ ಮತ್ತು ಆರ್ಥಿಕ ನೀತಿಗಳ ವಿಷಯದಲ್ಲಿ ಬಹುಪಾಲು ಒಂದೇ ರೀತಿಯ ನಿಲುವು ಹೊಂದಿರುವ ಯುಡಿಎಫ್ ಮತ್ತು ಎನ್ಡಿಎಗಳ ವಿರುದ್ಧವಾಗಿ, ಸಂಪೂರ್ಣ ವಿಭಿನ್ನ ಪರ್ಯಾಯಗಳನ್ನು ಪ್ರತಿಪಾದಿಸುವ ಎಲ್ಡಿಎಫ್ ನಡುವೆ ಈ ಹೋರಾಟ ನಡೆಯುತ್ತಿದೆ.
ಎಡಪಂಥದ ನೀತಿ ರೂಪುರೇಷೆ ಪ್ರಕಾರ ಕಾರ್ಮಿಕರು, ರೈತರು ಮತ್ತು ಅತೀ ಹಿಂದುಳಿದ ವರ್ಗಗಳಿಗೆ ಕಲ್ಯಾಣ ಯೋಜನೆಗಳನ್ನು ಒದಗಿಸುವುದು ಸರ್ಕಾರದ ಮೂಲಭೂತ ಹೊಣೆಗಾರಿಕೆ. ಎಡಶಕ್ತಿಗಳು ಆಡಳಿತದಲ್ಲಿದ್ದಾಗಲೆಲ್ಲ ಆಹಾರ ಭದ್ರತೆ, ಆರೋಗ್ಯ ಸೇವೆ, ವಸತಿ ಮತ್ತು ಶಿಕ್ಷಣ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ರಾಜ್ಯದ ಹಸ್ತಕ್ಷೇಪಕ್ಕೆ ಆದ್ಯತೆ ನೀಡಲಾಗಿದೆ, ಇದರಿಂದ ಸಮಾಜದ ಎಲ್ಲಾ ವರ್ಗಗಳಿಗೂ ಪ್ರಯೋಜನ ತಲುಪುವಂತೆ ಮಾಡಲಾಗಿದೆ.
ಆದರೆ ಕೇರಳದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಇದೇ ಮಟ್ಟದ ಬದ್ಧತೆಯನ್ನು ತೋರಿಸಲಿಲ್ಲ ಮತ್ತು ಈ ವಿಷಯಗಳನ್ನು ನಿರ್ಲಕ್ಷಿಸಿವೆ. ಅಧಿಕಾರ ಪಡೆಯಲು ಮತ್ತು ಉಳಿಸಿಕೊಳ್ಳಲು ಯುಡಿಎಫ್ ಹಲವು ಬಾರಿ ಕೋಮುವಾದಿ ಹಾಗೂ ಸಂಕುಚಿತವಾದಿ ಶಕ್ತಿಗಳ ಬೆಂಬಲಕ್ಕೆ ಪರದಾಡಿದ್ದು, ಅವರ ಹಿತಾಸಕ್ತಿಗಳಿಗೆ ಅನುಗುಣವಾಗಿ ನಡೆದುಕೊಂಡಿದೆ. ಕಮ್ಯುನಿಸ್ಟ್- ವಿರೋಧಿ ನೆಲೆಯಲ್ಲಿ ಯುಡಿಎಫ್ ಯಾವುದೇ ಕೋಮುವಾದಿ ಸಂಘಟನೆಯ ಸಹಾಯವನ್ನೂ ಸ್ವೀಕರಿಸಲು ಸಿದ್ಧವಿರುವಂತಿದೆ. ಅಧಿಕಾರಕ್ಕೆ ಬಂದ ನಂತರವೂ ಮತೀಯ ಹಾಗೂ ಜಾತೀಯ ಗುಂಪುಗಳ ಒತ್ತಡಕ್ಕೆ ಮಣಿಯುವ ಪ್ರವೃತ್ತಿ ಕಾಣಿಸಿಕೊಂಡಿದೆ. ಇದರಿಂದ ಸಚಿವ ಸ್ಥಾನಗಳು ಸೇರಿದಂತೆ ಹಲವಾರು ಹುದ್ದೆಗಳ ಬಗ್ಗೆ ಸಂಘರ್ಷಗಳೂ ಉಂಟಾಗಿವೆ.ಹಲವು ಬಾರಿ ಕೋಮುವಾದಿ ಒತ್ತಡ ಗುಂಪುಗಳೇ ನೀತಿ ರೂಪಿಸುವಂತೆಯೂ ಆಗಿದೆ.
ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ ಮೈತ್ರಿಯ ಭಾಗವಾಗಿದ್ದರೂ ಕೇರಳದಲ್ಲಿ ನಿರಂತರವಾಗಿ ಅದು ಕಮ್ಯುನಿಸ್ಟ್-ವಿರೋಧಿ ನಿಲುವನ್ನು ಅನುಸರಿಸಿದೆ. ಸ್ವಾತಂತ್ರ್ಯ ಹೋರಾಟ ಹಾಗೂ ಕಮ್ಯುನಿಸ್ಟ್ ಚಳವಳಿಯ ಪ್ರತಿಷ್ಠಿತ ನಾಯಕರಾದ ಇಎಂಎಸ್ ನಂಬೂದಿರಿಪಾಡ್ ಮತ್ತು ಎಕೆ ಗೋಪಾಲನ್ ವಿರುದ್ಧವೂ ಪ್ರತಿಕ್ರಿಗಾಮಿ ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸಲು ಸಹ ಅದು ಹಿಂದೇಟು ಹಾಕಿಲ್ಲ.
ಕೇರಳಳದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು, ವಿಶೇಷವಾಗಿ ಮುಸ್ಲಿಮರ ಹಕ್ಕುಗಳನ್ನು, ಎಡಶಕ್ತಿಗಳು ಸದಾ ರಕ್ಷಿಸುತ್ತಿದ್ದರೂ, ಮುಸ್ಲಿಂ ಲೀಗ್ ಅಧಿಕಾರದ ಪಾಲಿಗಾಗಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಇಂದಿಗೂ ಸಂಸತ್ತಿನಲ್ಲಿ ಹಾಗೂ ಇತರ ವೇದಿಕೆಗಳಲ್ಲಿ ನಡೆಯುವ ಮುಸ್ಲಿಂ ವಿರೋಧಿ ಪ್ರಚಾರಕ್ಕೆ ಕಾಂಗ್ರೆಸ್ ಅಥವಾ ಲೀಗ್ ಪರಿಣಾಮಕಾರಿಯಾಗಿ ವಿರೋಧ ವ್ಯಕ್ತಪಡಿಸುತ್ತಿಲ್ಲ. ಲೀಗ್ ಜೊತೆಗೆ ಮೈತ್ರಿ ಇದ್ದರೂ ಕಾಂಗ್ರೆಸ್ ಬಿಜೆಪಿ ಜೊತೆ ಸಹ ಸಮಜಾಯಿಷಿ ಮಾಡಿಕೊಳ್ಳುವುದರಲ್ಲಿ ಹಿಂಜರಿಯಲಿಲ್ಲ; ಇದೇ ವೇಳೆ ಬಹುಸಂಖ್ಯಾತ ಕೋಮುವಾದವನ್ನು ಪ್ರೋತ್ಸಾಹಿಸುವ ಮತ್ತು ಅಲ್ಪಸಂಖ್ಯಾತರ ವಿರುದ್ಧ ಉದ್ವಿಗ್ನತೆಯ ಬೆಂಕಿಗೆ ತುಪ್ಪಸುರಿಯುವ ಬಿಜೆಪಿಯೊಂದಿಗೂ ಒಂದು ತಿಳುವಳಿಕೆ ಬೆಸೆಯಲೂ ಅದು ಹೇಸಿಲ್ಲ.
2016ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ನೀಡಿದ ಮತಗಳ ನೆರವಿನಿಂದ ಬಿಜೆಪಿ ಕೇರಳದಲ್ಲಿ ತನ್ನ ಮೊದಲ ಸ್ಥಾನವನ್ನು ನೆಮೊಂ ಕ್ಷೇತ್ರದಿಂದ ಗೆದ್ದಿತು. 2011ರಲ್ಲಿ ಯುಡಿಎಫ್ ಮತಗಳು 20,248 ಇದ್ದವು, 2016ರಲ್ಲಿ ಅದು 13,860ಕ್ಕೆ ಕುಸಿತವಾಯಿತು. ಅದೇ ವೇಳೆ ಬಿಜೆಪಿಯ ಮತಗಳು 43,661ರಿಂದ 67,813ಕ್ಕೆ ಏರಿಕೆಯಾಗಿದ್ದವು. 2021ರಲ್ಲಿ ಎಲ್ಡಿಎಫ್ ಆ ಸ್ಥಾನವನ್ನು ಮರಳಿ ಗೆದ್ದು, ಯುಡಿಎಫ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿತು. 2024ರಲ್ಲಿ ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಮೊದಲ ಬಾರಿ ಗೆದ್ದಾಗಲೂ ಇದೇ ರೀತಿಯ ಧೋರಣೆ ಕಂಡುಬಂತು: ಯುಡಿಎಫ್ ಸುಮಾರು 86,000 ಮತಗಳನ್ನು ಕಳೆದುಕೊಂಡರೆ, ಬಿಜೆಪಿ ಸುಮಾರು 76,000 ಮತಗಳನ್ನು ಗಳಿಸಿತು. ಹೀಗಾಗಿ ಕೆರೆಳದಲ್ಲಿ ಬಿಜೆಪಿಗೆ ಸಿಕ್ಕ ಶಾಸಕ ಹಾಗೂ ಸಂಸದ ಸ್ಥಾನಗಳಿಗೆ ಯುಡಿಎಫ್ ನೀಡಿದ ಕೊಡುಗೆ ಸ್ಪಷ್ಟವಾಗಿದೆ.
ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗಲೇ ಬಾಬರಿ ಮಸೀದಿ ಧ್ವಂಸವಾಯಿತು. ಅದನ್ನು ತಡೆಯಲು ವಿಫಲವಾದಷ್ಟೇ ಅಲ್ಲ, ಪರೋಕ್ಷವಾಗಿ ಅವಕಾಶ ಕಲ್ಪಿಸಿತು ಎಂಬ ಆರೋಪವೂ ಇದೆ. ನಂತರ ಉತ್ತರ ಭಾರತದಲ್ಲಿ ನಡೆದ ಕೋಮು ಗಲಭೆಗಳನ್ನು ತಡೆಗಟ್ಟಲು ಅಥವಾ ಖಂಡಿಸಲು ಕೂಡ ಕಾಂಗ್ರೆಸ್ ಸರ್ಕಾರಗಳು ಪರಿಣಾಮಕಾರಿಯಾಗಿ ಕ್ರಮ ಕೈಗೊಂಡಿಲ್ಲ. ಆದರೆ ನಂತರ ಅದೇ ಸ್ಥಳದಲ್ಲಿ ನಿರ್ಮಿಸಲಾದ ರಾಮ ಮಂದಿರಕ್ಕೆ ಬೆಂಬಲ ನೀಡಿತು. ಈ ಅವಧಿಯಲ್ಲಿಯೂ ಮುಸ್ಲಿಂ ಲೀಗ್ ಕೇರಳದಲ್ಲಿ ಯುಡಿಎಫ್ ಭಾಗವಾಗಿಯೇ ಮುಂದುವರಿಯಿತು.
ಈಗ ಯುಡಿಎಫ್, ಲೀಗ್ ಜೊತೆಗಿನ ದೀರ್ಘಕಾಲದ ಮೈತ್ರಿ ಇದ್ದರೂ, ಕಟ್ಟಾಅಲ್ಪಸಂಖ್ಯಾತ ಕೋಮುವಾದಿ ಸಂಘಟನೆ ಎನ್ನಲಾದ ಜಮಾಅತ್-ಎ-ಇಸ್ಲಾಮಿ ಜೊತೆಗೆ ಸಹ ಕೈಜೋಡಿಸಲು ಸಿದ್ಧವಾಗಿರುವಂತೆ ಕಾಣುತ್ತದೆ. ಹೀಗಾಗಿ ಕಾಂಗ್ರೆಸ್ ಏಕಕಾಲದಲ್ಲಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದಿ ಶಕ್ತಿಗಳನ್ನು ಒಂದೇ ಮೆಚ್ಚಿಸುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಂತಹ ಸಮಯಸಾಧಕ ರಾಜಕಾರಣ ಕಾಂಗ್ರೆಸ್ಗೆ ಪ್ರಯೋಜನ ತಂದಿಲ್ಲವೆಂದು ಇತಿಹಾಸವೇ ತೋರಿಸುತ್ತಿದೆ. ಕ್ರಮೇಣ ಅದರ ಬಲ ಕುಸಿಯುತ್ತಿದ್ದು, ಯುಡಿಎಫ್ ಆತಂಕದಲ್ಲಿದೆ. ಹಿಂದಿನ ಚುನಾವಣೆಯಲ್ಲಿ ಎಲ್ಡಿಎಫ್ ಸಾಧಿಸಿದ ಐತಿಹಾಸಿಕ ಜಯ ಮತ್ತು ಕೇರಳದಲ್ಲಿ ಅಪರೂಪವಾದ ಸತತ ಎರಡನೇ ಬಾರಿ ಸರಕಾರ ರಚಿಸಿದ್ದು ಅದರ ತಂಕವನ್ನು ಇನ್ನೂ ಹೆಚ್ಚಿಸಿದೆ.
ರಾಷ್ಟ್ರೀಯ ಮಟ್ಟದಲ್ಲಿ ರಾಹುಲ್ ಗಾಂಧಿ ಇಂಡಿಯಾ ಮೈತ್ರಿಯ ಒಬ್ಬ ಪ್ರಮುಖ ಮುಖಂಡರಾಗಿದ್ದರೂ, ಅವರು ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಡಿಎಫ್ ಮತ್ತು ಬಿಜೆಪಿ ನಡುವೆ ಗುಪ್ತ ಒಪ್ಪಂದವಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಅವರು ನಗೆಪಾಟಲಾಗುತ್ತಿದ್ದಾರೆ.
ಕಾಂಗ್ರೆಸ್ ಈ ಹಿಂದೆಯೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಸೃಷ್ಟಿಸಿ ಅವರನ್ನು ಬಿಜೆಪಿ ಕೈಗೆ ಒಪ್ಪಿಸಿತು ಎಂದು ಕೆಲವು ವಿಶ್ಲೇಷಕರು ನೆನಪಿಸುತ್ತಾರೆ. ಅಧಿಕಾರದ ಹಂಬಲದಲ್ಲಿ ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಕೋಮುವಾದಿ ಶಕ್ತಿಗಳ ಜೊತೆ ಏಕಕಾಲದಲ್ಲಿ ವ್ಯವಹಾರ ಕುದುರಿಸಿಕೊಳ್ಳುವ ತಮ್ಮ ಪಕ್ಷದ “ಅಸಹ್ಯಕರ ದೃಶ್ಯ” ವನ್ನು ಸರಿಪಡಿಸಲು ಅಥವ ನಿಲ್ಲಿಸಲು ರಾಹುಲ್ ಗಾಂಧಿಯವರು ಅಸಮರ್ಥರಾಗಿದ್ದಾರೆಯೇ ಅಥವ ಸಿದ್ಧರಿಲ್ಲವೇ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಇದನ್ನೂ ನೋಡಿ: “ನಮ್ಮ ಆರೋಗ್ಯ ಮತ್ತು ಕರ್ನಾಟಕ ಬಜೆಟ್ 2026–27” Janashakthi Media
