ಮಿರ್ಜಾಪುರ್| ಹಲವು ವಾಹನಗಳ ಸರಣಿ ಅಪಘಾತದಲ್ಲಿ 11 ಮಂದಿ ಸಾವು

ಮಿರ್ಜಾಪುರ್: ಹಲವು ವಾಹನಗಳ ಸರಣಿ ಅಪಘಾತದಲ್ಲಿ ಮಕ್ಕಳು ಸೇರಿ 11 ಮಂದಿ ಮೃತಪಟ್ಟಿರುವ ಘಟನೆ ಏಪ್ರಿಲ್‌ 22ರ ರಾತ್ರಿ ಸುಮಾರು 8.30 ಗಂಟೆಗೆ ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯಲ್ಲಿ ನಡೆದಿದೆ. ಟ್ರಕ್‌ನ ಬ್ರೇಕ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ಎಸ್‌ಪಿ ಅಪರ್ಣಾ ರಜತ್ ಕೌಶಿಕ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘಟನೆಗೆ ಸಂತಾಪ ಸೂಚಿಸಿ, ಇದನ್ನು ಅತ್ಯಂತ ದುಃಖಕರ ಮತ್ತು ಮನಕಲಕುವ ಘಟನೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ತೃತೀಯ ಭಾಷೆ ಅಂಕ ವಿವಾದ ತೀವ್ರ: ಸಿಎಂ ಜೊತೆ ಚರ್ಚೆಗೆ ಸಚಿವ ಬಂಗಾರಪ್ಪ ಮುಂದು

ಈ ಅಪಘಾತವು ನ್ಯಾಷನಲ್ ಹೆದ್ದಾರಿ-135ರ ಡ್ರಾಮಂಡ್‌ಗಂಜ್ ಕಣಿವೆಯಿಂದ ಲಸೋಡಾ ಕಡೆ ಇಳಿಯುವ ಭಾಗದಲ್ಲಿ, ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಮೀ ದೂರದಲ್ಲಿ ನಡೆದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಇಳಿಜಾರಿನಲ್ಲಿ ಸಾಗುತ್ತಿದ್ದ ಟ್ರಕ್‌ ಬ್ರೇಕ್ ವೈಫಲ್ಯ ಉಂಟಾಗಿ ಮುಂದೆ ಸಾಗುತ್ತಿದ್ದ ಇನ್ನೊಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಎರಡು ಟ್ರಕ್‌ಗಳ ನಡುವೆ ಸಾಗುತ್ತಿದ್ದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಂತರ ನಡೆದ ಸರಣಿ ಅಪಘಾತದಲ್ಲಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅದು ಬೆಂಕಿಗೆ ಆಹುತಿಯಾಗಿದೆ ಎಂದು ಕೌಶಿಕ್ ತಿಳಿಸಿದ್ದಾರೆ.

ಪೊಲೀಸರು ಮತ್ತು ಸ್ಥಳೀಯರು ಸೇರಿ ಅವಶೇಷಗಳಲ್ಲಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಇದುವರೆಗೆ 11 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಪವನ್, ಮೃತಪಟ್ಟವರಲ್ಲಿ 7 ಮಂದಿ ಮಿರ್ಜಾಪುರ್ ಜಿಲ್ಲೆಯವರು, 3 ಮಂದಿ ಮಧ್ಯಪ್ರದೇಶದವರು ಮತ್ತು 1 ವ್ಯಕ್ತಿ ಸಮೀಪದ ಸೋನಭದ್ರ ಜಿಲ್ಲೆಯವರು. ಮೃತರಲ್ಲಿ ಮಿರ್ಜಾಪುರ್ ಜಿಲ್ಲೆಯ ಜಿಗ್ನಾ ಪ್ರದೇಶದ ಶಿವ ಸಿಂಗ್ (8), ಸೋನಮ್ ಸಿಂಗ್ (9), ಪಿಯೂಷ್ ಸಿಂಗ್ (14), ಪಂಕಜ್ ಸಿಂಗ್ (40), ವಂದನಾ ಸಿಂಗ್ (43), ವಿಷ್ಣು ಸಿಂಗ್ (45) ಮತ್ತು ವೀಣಾ ಸಿಂಗ್ (47) ಸೇರಿದ್ದಾರೆ.

ಇತರರು ಮಧ್ಯಪ್ರದೇಶದ ಸತ್ನಾದ ಕಾರ್ತಿಕೇಯ ಸಿಂಗ್ (18) ಮತ್ತು ಪ್ರಿಯಾಂಕಾ ಸಿಂಗ್ (42), ಸಾಗರ್‌ನ ವಿಕಾಸ್ ಶರ್ಮಾ (32), ಹಾಗೂ ಸೋನಭದ್ರದ ಜೈ ಪ್ರಕಾಶ್ (27) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತಕ್ಕೀಡಾದ ವಾಹನಗಳಲ್ಲಿ ಒಂದು ಬಿಹಾರ ನೋಂದಣಿಯ ಟ್ರಕ್ ಹಾಗೂ ಮತ್ತೊಂದು ಮಧ್ಯಪ್ರದೇಶ ನೋಂದಣಿಯ ಟ್ರಕ್ ಇದ್ದವು. ಕಾರುಗಳಲ್ಲಿ ಒಂದು ಸೋನಭದ್ರ ಜಿಲ್ಲೆಯದ್ದು ಹಾಗೂ ಮತ್ತೊಂದು ಮಿರ್ಜಾಪುರ್ ಜಿಲ್ಲೆಯದ್ದಾಗಿದೆ.

ಇಂದು ಬೆಳಗ್ಗೆ X ನಲ್ಲಿ ಪೋಸ್ಟ್ ಮಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಮಿರ್ಜಾಪುರ್‌ನ ರಸ್ತೆ ಅಪಘಾತದಲ್ಲಿ ಸಂಭವಿಸಿದ ಜೀವಹಾನಿ ಅತ್ಯಂತ ದುಃಖಕರವಾಗಿದೆ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು,” ಎಂದು ತಿಳಿಸಿದ್ದಾರೆ.

ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಗಂಗ್ವಾರ್, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ನೋಡಿ: ಅಂಬೇಡ್ಕರ್–ಮಾರ್ಕ್ಸವಾದ: ಚಿಂತನೆ ಮತ್ತು ಹೋರಾಟ | ಕೆ.ಎನ್.ಉಮೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *