ಆಂಧ್ರಪ್ರದೇಶ ರಾಜಧಾನಿಯಾಗಿ ಅಮರಾವತಿ: ವಿಧಾನಸಭೆಯ ಸರ್ವಾನುಮತ ನಿರ್ಣಯ

ಹೈದರಾಬಾದ್: ಮಾರ್ಚ್‌ 28ರಂದು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ರಾಜ್ಯದ ರಾಜಧಾನಿಯಾಗಿ ಅಮರಾವತಿ ನಗರಕ್ಕೆ ಕಾನೂನುಬದ್ಧ ಮಾನ್ಯತೆ ನೀಡುವುದಕ್ಕೆ ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಯಿತು.
ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಮಂಡಿಸಿದ ನಿರ್ಣಯ ಕುರಿತು ಸುದೀರ್ಘ ಐದೂವರೆ ಗಂಟೆ ಚರ್ಚೆ ನಡೆಸಿ, ಬಳಿಕ ಅಂಗೀಕರಿಸಲಾಯಿತು. ಇದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿತ್ತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು,’ಅಮರಾವತಿಯು ಶಾಶ್ವತವಾಗಿ ಆಂಧ್ರಪ್ರದೇಶದ ರಾಜಧಾನಿಯಾಗಿರಲಿದೆ’ ಎಂದು ಘೋಷಿಸಿದರು.

ಇದನ್ನೂ ಓದಿ: ಮತದಾರರನ್ನು ಅಳಿಸಲು ಆರ್‌ಎಸ್‌ಎಸ್-ಬಿಜೆಪಿ ಸಂಚು: ಸಿಪಿಐ(ಎಂ) ಆರೋಪ; ಪ್ರತಿಭಟನೆ ಘೋಷಣೆ

ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನಮೋಹನ್‌ ರೆಡ್ಡಿ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿದ ನಾಯ್ಡು,’ಅಮರಾವತಿ ಅಭಿವೃದ್ಧಿ ಯೋಜನೆಯನ್ನು ಜಗನ್‌ ಮೋಹನ್‌ ರೆಡ್ಡಿ ಸಮರ್ಪಕವಾಗಿ ಅನುಷ್ಠಾನ ಮಾಡಲಿಲ್ಲ. ಯೋಜನೆ ಕುರಿತು ಪದೇ ಪದೇ ತಮ್ಮ ನಿಲುವು ಬದಲಿಸುವ ಮೂಲಕ ಅಮರಾವತಿಗೆ ದ್ರೋಹ ಬಗೆದರು’ ಎಂದು ಆರೋಪಿಸಿದರು.

‘ಅಮರಾವತಿಯನ್ನು ಆಡಳಿತ ಕೇಂದ್ರವಾಗಿ ಮಾತ್ರವಲ್ಲ ಹೈದರಾಬಾದ್‌, ಬೆಂಗಳೂರು ಹಾಗೂ ಚೆನ್ನೈ ನಗರಗಳಂತೆ ವಿಶ್ವದರ್ಜೆಯ ನಗರವನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದರು. ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ವಿಪಕ್ಷವಾದ ವೈಎಸ್‌ಆರ್‌ ಕಾಂಗ್ರೆಸ್‌ ಈ ಚರ್ಚೆಯಲ್ಲಿ ಭಾಗವಹಿಸಲಿಲ್ಲ.

ಅಮರಾವತಿ ರಾಜಧಾನಿ ಯೋಜನೆಯು ಸುಮಾರು 64,000 ಕೋಟಿ ರೂ.ಗಳ ಅಂದಾಜು ವೆಚ್ಚವಾಗಿದ್ದು, ಇದರ ಅನುಷ್ಠಾನಕ್ಕಾಗಿ ಆಂಧ್ರಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅಮರಾವತಿ ರಾಜಧಾನಿ ಅಭಿವೃದ್ಧಿಗಾಗಿ ಸುಮಾರು 30,000 ರೈತರು 34,000 ಎಕರೆಯಷ್ಟು ಫಲವತ್ತಾದ ಕೃಷಿ ಭೂಮಿಯ ಸ್ವಯಂಪ್ರೇರಣೆಯಿಂದ ಒದಗಿಸಿದ್ದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜಧಾನಿಯ ಅಭಿವೃದ್ಧಿಗಾಗಿ 15,000 ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ನೀಡಿದೆ, ಅದರಲ್ಲಿ ಸುಮಾರು 4,200 ಕೋಟಿ ರೂ.ಗಳಷ್ಟು ಬಿಡುಗಡೆಯಾಗಿದೆ ಎನ್ನಲಾಗಿದೆ.

ಇದನ್ನೂ ನೋಡಿ: “ಬಸವಣ್ಣರಿಂದ ಕುವೆಂಪುವರೆಗೂ: ಮಾನವೀಯತೆ ಬೆಳೆಸುವ ಕನ್ನಡ ಚಿಂತನೆ” – ಎಲ್ ಎನ್ ಮುಕುಂದರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *