ಮರ್ಯಾದೆಗೇಡು ಹತ್ಯೆ ತಡೆಗೆ ‘ಇವ ನಮ್ಮವ ಇವ ನಮ್ಮವ ಮಸೂದೆ-2026’ ಮಂಡನೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಮಾರ್ಚ್‌ 18ರಂದು ವಿಧಾನಸಭೆಯಲ್ಲಿ ರ್ಯಾದೆಗೇಡು ಹತ್ಯೆ ಹಾಗೂ ಜಾತಿ ಕಾರಣಕ್ಕೆ ಮದುವೆಗೆ ಅಡ್ಡಿಪಡಿಸುವವರಿಗೆ ಕಠಿಣ ಶಿಕ್ಷೆ ವಿಧಿಸಿ, ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ಒದಗಿಸುವ ಉದ್ದೇಶದೊಂದಿಗೆ ರೂಪಿಸಲಾಗಿರುವ ‘ಇವ ನಮ್ಮವ ಇವ ನಮ್ಮವ ಮಸೂದೆ-2026’ ಅನ್ನು  ಮಂಡಿಸಿದರು.
ರಾಜ್ಯದಲ್ಲಿ ಮರ್ಯಾದೆ ಹತ್ಯೆ, ಅಂತರ್ಜಾತಿ ವಿವಾಹದ ಕಾರಣಕ್ಕೆ ಆಗುವ ಹಲ್ಲೆ, ಜಾತಿ ದ್ವೇಷ ತಡೆಯುವ ಉದ್ದೇಶದೊಂದಿಗೆ ಮರ್ಯಾದಾ ಹತ್ಯೆಗಳನ್ನು ತಡೆಯಲು ಹಾಗೂ ಅಂತರ್ಜಾತೀಯ ವಿವಾಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ಮಸೂದೆಯನ್ನು ರಾಜ್ಯ ಸರ್ಕಾರ ರೂಪಿಸಿದೆ.

ಅಂತರ್ಜಾತಿ ವಿವಾಹವಾದವರನ್ನು ಗೌರವದ ಹೆಸರಿನಲ್ಲಿ ಹತ್ಯೆ ಮಾಡುವುದು, ಹಲ್ಲೆ ಅಥವಾ ಕಿರುಕುಳ ನೀಡುವುದು, ಆರ್ಥಿಕ ಅಥವಾ ಸಾಮಾಜಿಕವಾಗಿ ಬಹಿಷ್ಕರಿಸುವುದು ಶಿಕ್ಷಾರ್ಹ ಅಪರಾಧ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಅಲ್ಲದೇ, ಮರ್ಯಾದೆ ಹೆಸರಿನಲ್ಲಿ ನಡೆಯುವ ಹತ್ಯೆ ಅಥವಾ ಸಾವಿಗೆ ಕಾರಣರಾದವರಿಗೆ ಕನಿಷ್ಠ ಐದು ವರ್ಷ ಜೈಲು ಶಿಕ್ಷೆ ವಿಧಿಸುವುದು. ದಂಪತಿ ಅಥವಾ ಅವರಲ್ಲಿ ಯಾರೊಬ್ಬರಿಗೆ ತೀವ್ರ ಗಾಯಗಳಾಗುವಂತೆ ಮಾಡುವವರಿಗೆ ಮೂರು ವರ್ಷಕ್ಕೆ ಕಡಿಮೆಯಿಲ್ಲದ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸುವುದಕ್ಕೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ; ಜ್ಯೋತಿಷಿ ಅಶೋಕ್ ಖಾರಟ್ ಬಂಧನ

ಅಲ್ಲದೇ, ಕಾನೂನುಬಾಹಿರವಾಗಿ ಸಭೆ ನಡೆಸುವವರಿಗೆ ಮತ್ತು ಅದಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲ ನೀಡುವವರಿಗೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸಬಹುದು. ಬೆದರಿಕೆ ಹಾಕುವವರಿಗೆ ಕನಿಷ್ಠ 3 ವರ್ಷಗಳಿಂದ ಗರಿಷ್ಠ 5 ವರ್ಷಗಳವರೆಗೆ ಜೈಲು ಮತ್ತು ಗರಿಷ್ಠ ₹2 ಲಕ್ಷದವರೆಗೆ ದಂಡ ವಿಧಿಸುವುದಕ್ಕೂ ಅನುವು ಮಾಡಿಕೊಡಲಾಗಿದೆ. ಅಪರಾಧ ಎಸಗಿ ನಂತರ ಸಾಕ್ಷಿಗಳನ್ನು ತಿರುಚುವುದು, ಪಿತೂರಿ ಮಾಡುವುದಕ್ಕೂ ಶಿಕ್ಷೆ ನಿಗದಿ ಮಾಡಲಾಗಿದ್ದು, ಈ ಎಲ್ಲ ಶಿಕ್ಷೆಗಳು ಜಾಮೀನು ರಹಿತ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಮದುವೆಯ ಭರವಸೆ ನೀಡಿ ಯುವತಿ ಜತೆ ಲೈಂಗಿಕ ಸಂಪರ್ಕ ನಡೆಸಿ ಬಳಿಕ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದರೆ ಅಂತಹ ಪ್ರಕರಣವನ್ನು ಅತ್ಯಾಚಾರ ಎಂದು ಪರಿಗಣಿಸಲು ವಿಧೇಯಕದಲ್ಲಿ ತಿಳಿಸಲಾಗಿದೆ. ಮನೆಯವರ ಒತ್ತಡ ಅಥವಾ ಇತರೆ ಜಾತಿ ಆಧಾರಿತ ಕಾರಣ ಸೇರಿ ಜಾತಿ ಆಧಾರಿತ ಯಾವುದೇ ನೆಪ ನೀಡಿ ಮದುವೆ ನಿರಾಕರಿಸಿದರೂ 5 ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ ಜೀವಾವಧಿವರೆಗೆ ವಿಸ್ತರಿಸಬಹುದಾದ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಅಂತರ್ಜಾತಿ ವಿವಾಹವಾದ ಜೋಡಿಗೆ ರಕ್ಷಣೆ ಒದಗಿಸುವುದು ಪೊಲೀಸರ ಜವಾಬ್ದಾರಿಯಾಗಿದೆ. ಅದಕ್ಕಾಗಿ ಸುರಕ್ಷಿತ ವ್ಯವಸ್ಥೆ ಮಾಡಬೇಕು. ಅಂತರಜಾತಿಯ ವಿವಾಹ ಕಾರಣಕ್ಕೆ ನಡೆಯುವ ಅಪರಾಧಗಳನ್ನು ವಿಚಾರಣೆ ನಡೆಸಿ, ತ್ವರಿತ ನ್ಯಾಯ ಒದಗಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಹಾಗೂ ಸಹಾಯವಾಣಿ, ಜಾಗೃತಿ ಕಾರ್ಯಕ್ರಮಗಳು, ಮೇಲ್ವಿಚಾರಣಾ ಸಮಿತಿ ರಚನೆ ಬಗ್ಗೆಯೂ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಜಾತಿ ಆಧಾರಿತ ಅಪರಾಧಗಳನ್ನು ನಿರ್ಬಂಧಿಸುವುದು; ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ನೀಡುವುದು; ಮಾನವ ಹಕ್ಕುಗಳ ಉಲ್ಲಂಘನೆ ತಡೆ; ಅಂತರ್ಜಾತಿ ವಿವಾಹಕ್ಕೆ ಗೌರವ ನೀಡಲು; ಬಲವಂತದ ಜಾತಿ ಆಧಾರಿತ ತಾರತಮ್ಯ ನಿರ್ಬಂಧಿಸಲು; ಅಂತರ್ಜಾತಿ ವಿವಾಹ ವಿಧಿವತ್ತಾಗಿ ನೆರವೇರಿಸಲು ‘ಇವ ನಮ್ಮವ ಇವ ನಮ್ಮವ’ ವೇದಿಕೆ ರಚಿಸಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಇದನ್ನೂ ನೋಡಿ: ₹1ಕ್ಕೆ 1 ಲೀಟರ್ ಹಾಲು – ಫ್ಲಿಪ್‌ಕಾರ್ಟ್ ವಿರುದ್ಧ ಸಿಡಿದೆದ್ದ ರೈತರು Janashakthi Media

Donate Janashakthi Media

Leave a Reply

Your email address will not be published. Required fields are marked *