ಹುಬ್ಬಳ್ಳಿ: ಏಪ್ರಿಲ್ 19ರ ಮಧ್ಯಾಹ್ನ ಹೈದ್ರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ91 ವಿಮಾನವು, ಹವಾಮಾನ ವೈಪರಿತ್ಯದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದೆ ಬಾನಂಗಳದಲ್ಲಿಯೇ ಮೂರು ಗಂಟೆಗೂ ಹೆಚ್ಚುಕಾಲ ಹಾರಾಡಿದೆ.
ಭಾನುವಾರ ಮಧ್ಯಾಹ್ನ 3ಗಂಟೆಗೆ ಹೈದರಾಬಾದ್‌ನಿಂದ ಹೊರಟಿದ್ದ ಫ್ಲೈ91 IC3401 ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಜೆ 4.30ಕ್ಕೆ ತಲುಪಬೇಕಿತ್ತು. ಆದರೆ, ಹವಾಮಾನ ವೈಪರಿತ್ಯದಿಂದಾಗಿ ಹುಬ್ಬಳ್ಳಿಯಲ್ಲಿ ಇಳಿಯಲು ಅವಕಾಶ ಸಿಗದೆ ಆಕಾಶದಲ್ಲಿಯೇ ಹಾರಾಡಿದೆ. ಹಳಿಯಾಳ, ಮುಂಡಗೋಡ, ಶಿವಮೊಗ್ಗ ಕಡೆಯಲ್ಲೆಲ್ಲ ಸುತ್ತಾಡಿ ರಾತ್ರಿ 8ರ ವೇಳೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.
ಇದನ್ನೂ ಓದಿ: ಕಲ್ಲಿದ್ದಲು ಲೆವಿ ಹಗರಣ: ಐಎಎಸ್ ಅಧಿಕಾರಿಯ 4 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಗೊಂಡಿದ್ದರು. ಜೀವಭಯದಿಂದ ದೇವರ ಮೊರೆ ಹೋಗಿದ್ದು ಹಾಗೂ ಚೀರಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿವೆ.
‘ಪ್ರಯಾಣಿಕರ ಸುರಕ್ಷತೆ ಬಗ್ಗೆ ವಿಮಾನ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದಾರೆ. ಪ್ರಯಾಣಿಕರನ್ನು ಬೆಂಗಳೂರಿಗೆ ಕರೆದೊಯ್ದು, ಹುಬ್ಬಳ್ಳಿಗೆ ತಲುಪಲು ಯಾವುದೇ ವ್ಯವಸ್ಥೆ ಮಾಡಿಲ್ಲ. ವಿಮಾನದಲ್ಲಿ ಕಂಡುಬಂದ ತಾಂತ್ರಿಕ ದೋಷವೇ ಇದಕ್ಕೆ ಕಾರಣ’ ಎಂದು ವಿಮಾನ ಪ್ರಯಾಣಿಕರ ಸಂಬಂಧಿ ಶ್ಲೋಕ್ ಅವರು ಆರೋಪಿಸಿದ್ದಾರೆ.
‘ಹುಬ್ಬಳ್ಳಿ ಸಮೀಪ ವಿಮಾನ ಬಂದಾಗ ದುರ್ಬಲ ಹವಾಮಾನ ಪರಿಸ್ಥಿತಿ ಎದುರಾಗಿತ್ತು. ವಿಮಾನ ನಿಯಂತ್ರಣಾಧಿಕಾರಿ ಸೂಚನೆಯಂತೆ ಬೆಂಗಳೂರಿನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ವಿಮಾನಯಾನದಲ್ಲಿ ಇದು ಸಾಮಾನ್ಯ. ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷಗಳು ಕಂಡು ಬಂದಿರಲಿಲ್ಲ. ಈ ಪ್ರಾದೇಶಿಕ ವಿಮಾನ ಸಂಸ್ಥೆಗೆ ಅತ್ಯುತ್ತಮ ಸುರಕ್ಷತಾ ದಾಖಲೆ ಇದೆ’ ಎಂದು ಫ್ಲೈ91 ಸಾರ್ವಜನಿಕ ಸಂಪರ್ಕಾಧಿಕಾರಿ ಕಲ್ಫೇಶ್ ಕುಬಲ್ ತಿಳಿಸಿದ್ದಾರೆ.
ಇದನ್ನೂ ನೋಡಿ: ಡಿಲಿಮಿಟೇಶನ್: ನ್ಯಾಯದ ಮುಖವಾಡದಲ್ಲಿ ಪ್ರಾಬಲ್ಯದ ರಾಜಕಾರಣ! Janashakthi Media
