ಹೌದು ನಾನೂ ಕೊಕ್ರೋಚ್‌ ಪಾರ್ಟಿಗೆ ಹೋಗಿದ್ದೆ…

ಯುವಕ-ಯುವತಿಯರೆಲ್ಲ ಹೀಗೆ ರಾಷ್ಟ್ರಮಟ್ಟದಲ್ಲಿ ಸಂಘಟಿತರಾಗಿ ಎದ್ದು ನಿಂತಿದ್ದು ನೋಡಿ ಸಂತೋಷ ಆಗ್ತಾ ಇದೆ. ಆ ಯುವಶಕ್ತಿಗೆ ನಮಸ್ಕಾರ! ನಮ್ಮ ಕಾಲದಲ್ಲಿ ನಾವು ಹೀಗೆ ಒಂದಾಗಿರಲಿಲ್ಲವಲ್ಲ ಎಂಬ ಅಪರಾಧೀ ಪ್ರಜ್ಞೆ ಇದ್ದರೂ, ನಮ್ಮಿಂದಾಗದ್ದನ್ನು ನೀವು ಆರಂಭಿಸಿದ್ದೀರಿ ಎಂಬ ಹೆಮ್ಮೆಯೂ ಜೊತೆಗಿದೆ. ಹೌದು
ನಾಗೇಶ ಹೆಗಡೆ 

ನಿನ್ನೆ ಬೆಂಗಳೂರಿನಲ್ಲಿ ನಡೆದ ಸಿಜೆಪಿ ಸಮಾವೇಶಕ್ಕೆ ಬರುವಂತೆ ನನಗೂ ದಿಲ್ಲಿಯಿಂದ ಆಹ್ವಾನ ಬಂದಿತ್ತು. ಕೊಕ್ರೋಚ್‌ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್‌ ದೀಪ್ಕೆಯ ಪರವಾಗಿ ಸೌರವ್‌ ದಾಸ್‌ ಅಲ್ಲಿಂದಲೇ ಕರೆ ಮಾಡಿ “15 ನಿಮಿಷ ಮಾತಾಡಿ” ಎಂದಿದ್ದರು. ಮೈಸೂರಿನ ಮಿತ್ರ ಡಾ. ಪೂರ್ಣಾನಂದ ಕೈಗಾ ಚಳವಳಿಯ ದಿನಗಳನ್ನು ನನಗೆ ನೆನಪಿಸಿ, ತಾನು ತಂಡ ಕಟ್ಟಿಕೊಂಡು ಬರುತ್ತೇನೆಂದರು. ಸೌರವ್‌ ದಾಸ್‌ ಸಂಜೆ 4ಕ್ಕೆ ಮತ್ತೆ ಕರೆಮಾಡಿ “ಹೊರಟ್ರಾ?” ಎಂದು ಕೇಳಿದರು.

ಘನಘೋರ ಮಳೆ, ಟ್ರಾಫಿಕ್‌ ಗೋಜಿನಲ್ಲಿ ಸಿಕ್ಕು ಒದ್ದೆ ಮೈಯಲ್ಲಿ ಹಾಗೂ ಹೀಗೂ ಫ್ರೀಡಮ್‌ ಪಾರ್ಕ್‌ ಸೇರಿದೆ. ಎಲ್ಲೆಲ್ಲೂ ಕೊಡೆ, ರೇನ್‌ಕೋಟ್‌, ಪ್ಲಾಸ್ಟಿಕ್‌ ಹೊದಿಕೆಗಳ ಸಂದುಗೊಂದು ಸವರುತ್ತ ವೇದಿಕೆಯ ಹಿಂಭಾಗವನ್ನು ತಲುಪಿದೆ. ಅಲ್ಲೂ ತುಂಬಾ ಜನಜಂಗುಳಿ. ನಾಲ್ಕಡಿ ಎತ್ತರದ ಆ ವೇದಿಕೆಯ ಮೇಲೆ ಮೈಗೆ ಮೈಹಚ್ಚಿ 30ಕ್ಕೂ ಹೆಚ್ಚು ಜನ ನಿಂತಿದ್ದರು. ಮಳೆಯ ಅಬ್ಬರವನ್ನೂ ಮೀರಿಸಿ ಧ್ವನಿವರ್ಧಕದಲ್ಲಿ ಮಾತು, ಪ್ರೇಕ್ಷಕರ ಶಿಳ್ಳೆ, ಘೋಷಣೆ ಕೇಳುತ್ತ ನಡುಗುತ್ತ ನಿಂತಿದ್ದೆ.

ವೇದಿಕೆಯ ಸಂದಣಿಯಲ್ಲಿದ್ದ ಕೃಪಾಕರ್‌ ನನ್ನನ್ನು ಗುರುತಿಸಿದರು. ಯಾರೋ ಇಬ್ಬರು ನನ್ನನ್ನು ಅನಾಮತ್ತಾಗಿ ಎತ್ತಿ ವೇದಿಕೆಯ ಹತ್ತಿಪ್ಪತ್ತು ಒದ್ದೆಕಾಲುಗಳ ಮಧ್ಯೆ ತೂರಿಸಿದರು. ದೀಪ್ಕೆ, ಪ್ರಕಾಶ್‌ ರಾಜ್‌, ಸೋನಮ್‌ ವಾಂಗ್ಚುಕ್‌ ಅವರ ಮಾತುಗಳೆಲ್ಲ ಆಗಲೇ ಮುಗಿದಿದ್ದವು.

ನನಗೇ ಕಾಯ್ತಾ ಇದ್ದಂತೆ ಪ್ರಕಾಶ್‌ ರಾಜ್‌ ನನ್ನನ್ನು ಮುಂದಕ್ಕೆ ಜರುಗಿಸಿ, ಅಲ್ಲಿ ಮೈಕ್‌ನಲ್ಲಿ ಘೋಷಣೆ ಮಾಡುತ್ತಿದ್ದ ಮಹಿಳೆಯ ಪಕ್ಕಕ್ಕೆ ನಿಲ್ಲಿಸಿದರು. ಏದುಸಿರು ಬಿಡುತ್ತಿದ್ದ ನನ್ನ ಬಾಯಿಗೇ ಮೈಕ್‌ ಬಂತು. ಶಿಳ್ಳೆ, ಸ್ಲೋಗನ್‌ಗಳ ನಿಲ್ಲದ ಗಲಾಟೆ ಮತ್ತು ಮಳೆಹನಿಗಳ ಮಧ್ಯೆ ನಾನು ಅಲ್ಲಿ ಮಾತಾಡಿದ್ದು ಐದೇ ನಿಮಿಷ. ಅಲ್ಲಿ ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ:

ಯುವಕ-ಯುವತಿಯರೆಲ್ಲ ಹೀಗೆ ರಾಷ್ಟ್ರಮಟ್ಟದಲ್ಲಿ ಸಂಘಟಿತರಾಗಿ ಎದ್ದು ನಿಂತಿದ್ದು ನೋಡಿ ಸಂತೋಷ ಆಗ್ತಾ ಇದೆ. ಆ ಯುವಶಕ್ತಿಗೆ ನಮಸ್ಕಾರ! ನಮ್ಮ ಕಾಲದಲ್ಲಿ ನಾವು ಹೀಗೆ ಒಂದಾಗಿರಲಿಲ್ಲವಲ್ಲ ಎಂಬ ಅಪರಾಧೀ ಪ್ರಜ್ಞೆ ಇದ್ದರೂ, ನಮ್ಮಿಂದಾಗದ್ದನ್ನು ನೀವು ಆರಂಭಿಸಿದ್ದೀರಿ ಎಂಬ ಹೆಮ್ಮೆಯೂ ಜೊತೆಗಿದೆ.

ಯುವಜನರನ್ನು ಅವಹೇಳನ ಮಾಡುವ ರೀತಿಯಲ್ಲಿ ನಿಮ್ಮನ್ನು ‘ಕೊಕ್ರೋಚ್‌’ ಎಂದು ಉನ್ನತ ಸ್ಥಾನದಲ್ಲಿದ್ದ ಯಾರೋ ಹೇಳಿದ್ದಕ್ಕೆ ನೀವು ಸಿಡಿದೆದ್ದಿದ್ದೀರಿ. ಮೋಹನ್‌ದಾಸ್‌ ಗಾಂಧಿಯವರಿಗೂ ದಕ್ಷಿಣ ಆಫ್ರಿಕಾದಲ್ಲಿ ಇನ್‌ಸಲ್ಟ್‌ ಮಾಡಿದ್ದರಿಂದಲೇ ಹೊಸ ಶಕ್ತಿಯೊಂದು ಉದಯವಾಯಿತು. ನೆಲ್ಸನ್‌ ಮಂಡೇಲಾರಿಗೂ ಇನ್‌ಸಲ್ಟ್‌ ಆಗಿದ್ದರಿಂದಲೇ ಯುವಕರ ಹೊಸ ಪಕ್ಷವೊಂದು ಅಲ್ಲಿ ಉದಯಿಸಿತು. ಭೀಮರಾವ್‌ ಅಂಬೇಡ್ಕರ್‌ಗೂ ಮಹಾಡ್‌ ಕೆರೆಯ ನೀರನ್ನು ಮುಟ್ಟದಂತೆ ಅವಹೇಳನ ಮಾಡಿದ್ದರಿಂದಲೇ ಹೊಸದೊಂದು ಚಳವಳಿ ಭುಗಿಲೆದ್ದಿತು.

ಇದನ್ನೂ ಓದಿ : ಕಾಕ್ರೋಚ್‌ ಪ್ರತಿಭಟನೆ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಪ್ರಧಾನ್‌ ರಾಜೀನಾಮೆಗೆ ಆಗ್ರಹ

ನೀವೂ ಸರಿದಾರಿಯಲ್ಲೇ ಸಿಡಿದೆದ್ದಿದ್ದೀರಿ. ನಿಮಗೆ ಶುಭ ಹಾರೈಸುತ್ತಿದ್ದೇನೆ. ಜೊತೆಗೆ ನನ್ನದೊಂದು ಪುಟ್ಟ ಸಲಹೆ ಇದೆ.

ನೀವೆಲ್ಲ ಸುಶಿಕ್ಷಿತರು. ಈ ಸೋಶಿಯಲ್‌ ಮೀಡಿಯಾವನ್ನು ಬಳಸಿಕೊಂಡು ಒಂದಾಗಿದ್ದೀರಿ ಹೌದು. ಆದರೆ ಇಂದಿನ ಈ ಸಮಾವೇಶಕ್ಕೆ ಬರಬೇಕಿದ್ದ ಬಹುದೊಡ್ಡ ಯುವಶಕ್ತಿ ಅಲ್ಲಿ ಹೊಲಗಳಲ್ಲಿ, ಕಾಡಿನಲ್ಲಿ, ಸಮುದ್ರದಂಚಿನಲ್ಲಿ ಬದುಕುಳಿಯುವ ಹೋರಾಟದಲ್ಲಿ ಸಿಲುಕಿದೆ. ಅವರಿಗೆ ಬರಲು ಆಗ್ತಾ ಇಲ್ಲ.

ಕರ್ನಾಟಕದ ಬಹಳಷ್ಟು ಯುವಕರು ಬಿತ್ತನೆ ಬೀಜಕ್ಕಾಗಿ, ರಸಗೊಬ್ಬರಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಅವರ ಸಂಕಟಗಳು ರಾಜಕಾರಣಿಗಳನ್ನೂ ತಟ್ಟುತ್ತಿಲ್ಲ. ಆಡಳಿತಶಾಹಿಗೂ ತಟ್ಟುತ್ತಿಲ್ಲ. ಹೌದು

ಉತ್ತರದ ನಾನಾ ರಾಜ್ಯಗಳಲ್ಲಿ ಒಂದು ಬೊಗಸೆ ನೀರಿಗಾಗಿ ಹೆಣ್ಣುಮಕ್ಕಳು, ಹುಡುಗರು ಪರದಾಡುತ್ತಿದ್ದಾರೆ. ‘ಹರ್‌ ಘರ್‌ ಜಲ್‌’ ಯೋಜನೆಯ ದೇಶದುದ್ದಕ್ಕೂ ಹಾಸಿಬಿದ್ದ ಒಣ ಪೈಪ್‌ಲೈನ್‌, ಆಕಾಶದೆತ್ತರ ಒಣ ಕಾಂಕ್ರೀಟ್‌ ಟ್ಯಾಂಕ್‌ಗಳನ್ನು ನೋಡುತ್ತ ಬಸವಳಿದಿದ್ದಾರೆ.

ಮಧ್ಯಪ್ರದೇಶದ ವಿಶಾಲ ಹಸ್‌ದೇವ್‌ ಅರಣ್ಯದಲ್ಲಿ ಕಲ್ಲಿದ್ದಲ ಗಣಿ ಅಗೆತ ಬೇಡವೆಂದು ಅಲ್ಲಿನ ಆದಿವಾಸಿ ಯುವಕ-ಯುವತಿಯರು ಮೂರು ವರ್ಷಗಳಿಂದ ಸಂಘರ್ಷ ನಡೆಸುತ್ತ, ಪೊಲೀಸರಿಂದ ಏಟು ತಿನ್ನುತ್ತ ಮುಷ್ಕರ ನಿರತರಾಗಿದ್ದಾರೆ. ಅವರಿಗೂ ನಿಮ್ಮ ಕೊಕ್ರೋಚ್‌ ಸಮಾವೇಶಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

ಉತ್ತರ ಪ್ರದೇಶಕ್ಕೆ ನೀರು ಹರಿಸುತ್ತೇವೆಂದು ಕೆನ್‌–ಬೆಟ್ವಾ ನದಿಜೋಡಣೆಯ ಹೆಸರಿನ ಮಹಾಯೋಜನೆಯ ವಿರುದ್ಧ ಅಲ್ಲಿನ ವನ್ಯಪ್ರೇಮಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕ್ಷಮಿಸಿ, ಅವರಿಗೂ ಬರಲಾಗುತ್ತಿಲ್ಲ. ಹೌದು

ತಾಪಮಾನ ಏರಿಕೆಯಿಂದಾಗಿ ಬಂಗಾಳದ ಸುಂದರಬನ ದ್ವೀಪದಲ್ಲಿ ಸಮುದ್ರಮಟ್ಟ ಏರುತ್ತಿದೆ. ಅವರ ತೆರೆದಬಾವಿಗಳಲ್ಲಿ ಉಪ್ಪುನೀರು ಶೇಖರವಾಗುತ್ತಿದೆ. ಸವುಳು ಜೌಗಿನಲ್ಲಿ ಅವರು ಕುಡಿಯುವ ನೀರನ್ನು, ಇಷ್ಟಗಲ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ನಿಮ್ಮೊಂದಿಗೆ ದನಿಯೆತ್ತಲು ಅವರಿಗೂ ಸಾಧ್ಯವಾಗುತ್ತಿಲ್ಲ.

ದೇಶವನ್ನು ಕಟ್ಟಬೇಕಾದ ಯುವಶಕ್ತಿಯನ್ನು ಕಡೆಗಣಿಸಿ, ದೊಡ್ಡ ದೊಡ್ಡ ಕಾರ್ಪೊರೇಟ್‌ ಮಶಿನ್‌ಗಳಿಗೆ ದೇಶದ ಅಭಿವೃದ್ಧಿಯ ಗುತ್ತಿಗೆ ನೀಡಲಾಗಿದೆ. ಇವಕ್ಕೆ ಇಡೀ ಅರಾವಲಿ ಪರ್ವತಶ್ರೇಣಿ ಬೇಕಂತೆ; ನಿಕೊಬಾರ್‌ ದ್ವೀಪಸಮೂಹ ಬೇಕಂತೆ; ಪಶ್ಚಿಮ ಘಟ್ಟಗಳಲ್ಲಿ ಅಣುಸ್ಥಾವರ ಬೇಕಂತೆ; ಅಂಡಮಾನ್‌ ದ್ವೀಪದಲ್ಲಿ ನೈಸರ್ಗಿಕ ಅನಿಲ, ಪೆಟ್ರೋಲಿಯಂ ಗಣಿಗಾರಿಕೆ ಮಾಡ್ತಾರಂತೆ.

ಅಲ್ಲಾರೀ, ಇಡೀ ಜಗತ್ತು ಪೆಟ್ರೋಲು, ಕಲ್ಲಿದ್ದಲುಗಳಂಥ ಫಾಸಿಲ್‌ ಇಂಧನ ಬೇಡಾಂತ ಕೂಗೆಬ್ಬಿಸಿ ಎಲ್ಲೆಡೆ ಸೌರಶಕ್ತಿ, ಗಾಳಿಶಕ್ತಿಗೆ ಆದ್ಯತೆ ಕೊಡ್ತಾ ಇರುವಾಗ ಇಲ್ಲಿ ನೋಡಿದರೆ ಅಂಡಮಾನ್‌ನಲ್ಲಿ ಕಚ್ಚಾತೈಲದ ನಿಧಿ ಸಿಗ್ತೂ ಅಂತ ಕುಣೀತಿದಾರೆ ನೋಡಿ.

ನಿಮಗೆ ಗ್ರೇತಾ ಥನ್‌ಬರ್ಗ್‌ ಎಂಬ ಸ್ವೀಡಿಶ್‌ ಯುವತಿಯ ಬಗ್ಗೆ ಗೊತ್ತಿರಬೇಕು. “ನಮ್ಮ ಭವಿಷ್ಯದ ಮೇಲೆ ನೀವೆಲ್ಲ ಕಕ್ಕ ಮಾಡ್ತಾ ಇದೀರಿ” ಅಂತ ಜಾಗತಿಕ ನೇತಾರರ ಮುಖಕ್ಕೆ ಗುಡುಗಿದವಳು ಅವಳು. ‘ಫ್ರೈಡೇಸ್‌ ಫಾರ್‌ ಫ್ಯೂಚರ್‌’ ಎಂಬ ಜಾಗತಿಕ ಆಂದೋಲನವನ್ನು ಆರಂಭಿಸಿದವಳು. “ನಮ್ಮ ಭವಿಷ್ಯವನ್ನೆಲ್ಲ ಮಣ್ಣುಪಾಲು ಮಾಡಹೊರಟಿರುವಾಗ ನಾವ್ಯಾಕೆ ಶಾಲೆಗೆ ಅಂತ ಮಣ್ಣು ಹೊರಬೇಕು?” ಎಂದು ಕೇಳಿದವಳು. ಹೌದು

ನಮ್ಮ ದೇಶದ ದುರ್ದೆಸೆ ಗೊತ್ತಲ್ಲ? ಮಂಗಳಲೋಕದಲ್ಲಿ ಮೀಥೇನ್‌ ಹುಡುಕಬಲ್ಲ ಸಾಮರ್ಥ್ಯ ಇದ್ದರೂ ಒಳಚರಂಡಿ ಕ್ಲೀನ್‌ ಮಾಡುವ ಶ್ರಮಿಕರು ಅಲ್ಲಿ ಮೀಥೇನ್‌ ಇರುವುದು ಗೊತ್ತಾಗದೇ ಉಸಿರುಗಟ್ಟಿ ಸಾಯುತ್ತಾರೆ.

ವರ್ಷದಲ್ಲಿ 365 ದಿನ ದುಡಿದರೂ ಮರ್ಯಾದೆಯಿಂದ ಬದುಕಲಾರದೆ ಇದುವರೆಗೆ ಆರು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿವರ್ಷವೂ ಹತ್ತು ಸಾವಿರ ಯುವ ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ.

ನಮ್ಮ ದೇಶದಲ್ಲಿ ಪ್ರತಿ ವರ್ಷ 30 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳ ಅತ್ಯಾಚಾರ ಆಗುತ್ತಿದೆ. ಪ್ರತಿ ಇಪ್ಪತ್ತು ನಿಮಿಷಕ್ಕೊಬ್ಬ ಹೆಣ್ಣುಮಗಳು ಬಲಿಯಾಗುತ್ತಿದೆ!

ನಮ್ಮ ನೇತಾರರು ರಾಷ್ಟ್ರೀಯ ಭದ್ರತೆಯ ಬಗ್ಗೆ ಮತ್ತೆ ಮತ್ತೆ ಹೇಳ್ತಾ ಇರ್ತಾರೆ. ಈ ವರ್ಷ ಏಳು ಲಕ್ಷ ಕೋಟಿ ಹಣವನ್ನು ಭದ್ರತೆಗೆ ಖರ್ಚು ಮಾಡ್ತಾರಂತೆ. ದೇಶದ ಭದ್ರತೆ ಎಂದರೇನು? ಅದು ಕೇವಲ ಮಿಲಿಟರಿ ಭದ್ರತೆ ಅಲ್ಲ.

ದೇಶದ ಭದ್ರತೆ ಅಂದರೆ ನಾಗರಿಕರ ಭದ್ರತೆಗೂ ಆದ್ಯತೆ ಇರಬೇಕು. ಯುವಜನರು ಸುಶಿಕ್ಷಿತರಾಗಿರಬೇಕು; ಉದ್ಯೋಗಸ್ಥರಾಗಿರಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯವಂತರಾಗಿರಬೇಕು. ಉತ್ತಮ ವೈದ್ಯರು, ಉತ್ತಮ ಶಿಕ್ಷಕರು, ಉತ್ತಮ ಎಂಜಿನಿಯರ್‌ಗಳು, ಉತ್ತಮ ಅರ್ಥತಜ್ಞರು, ಯೋಜನಾತಜ್ಞರು ಇವರೆಲ್ಲ ದೇಶದ ಭದ್ರತೆಗೆ ನೆಲೆಗಟ್ಟಾಗುತ್ತಾರೆ.

ಯುವಜನರಲ್ಲಿ ಬದುಕಿನ ಭದ್ರತೆ ಇದ್ದರೆ ದೇಶದ ಪರಿಸರವೂ ಭದ್ರವಾಗಿರುತ್ತದೆ. ಕೆರೆಕಟ್ಟೆ, ನದಿಕೊಳ್ಳ, ಸಮುದ್ರ, ವನ್ಯಲೋಕ, ಪಕ್ಷಿಲೋಕದ ಬದುಕೂ ಭದ್ರವಾಗಿರುತ್ತದೆ. ಇಂದು ಅವೆಲ್ಲವೂ ಅವನತಿಯ ಹಾದಿ ಹಿಡಿದಿವೆ. ಜಗತ್ತಿನ 180 ದೇಶಗಳಲ್ಲಿ ನಮ್ಮದು ಕೊನೆಯ 176ನೇ ಸ್ಥಾನ! ನದಿಗಳ ಕತೆ ಗೊತ್ತಲ್ಲ? ಆದರೂ ನಮ್ಮದು ಸುಭದ್ರ ದೇಶವಂತೆ.

ದೇಶದ ಯುವಪೀಳಿಗೆಯನ್ನು ಕಡೆಗಣಿಸಿ ಅದೆಂಥ ಭದ್ರತೆ? ದೇಶದ ನದಿ, ಕೊಳ್ಳ, ನಿಸರ್ಗವನ್ನು ಕಡೆಗಣಿಸಿ ಅದೆಂಥ ಭದ್ರತೆ? ದೇಶದ ರೈತರನ್ನು, ಮಹಿಳೆಯರನ್ನು ಕಡೆಗಣಿಸಿ ಅದೆಂಥ ಭದ್ರತೆ?

ನೀವು ಎಚ್ಚೆತ್ತಿದ್ದೀರಿ, ಆ ಖುಷಿ ನಮಗಿದೆ. ನೀವು ಶಿಕ್ಷಣ ವ್ಯವಸ್ಥೆಯ ವಿರುದ್ಧ, ಸ್ವಾರ್ಥ ರಾಜಕೀಯದ ವಿರುದ್ಧ, ಹದಗೆಟ್ಟ ನ್ಯಾಯಾಂಗದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ಕಾರ್ಪೊರೇಟ್‌ ಮುಷ್ಟಿಯಲ್ಲಿ ಸಿಲುಕಿದ ಮಾಧ್ಯಮಗಳ ವಿರುದ್ಧ ಧ್ವನಿ ಎತ್ತಿದ್ದೀರಿ. ಅವೆಲ್ಲ ಸರಿ. ಆದರೆ ಇನ್ನೂ ಕೆಲವಿವೆ.

ಯುವ ರೈತರನ್ನೂ ನಿಮ್ಮ ಸಂಘಟನೆ ಒಳಗೊಳ್ಳಬೇಕು. ಏಕೆಂದರೆ ರೈತರ ನೆರವಿಲ್ಲದೇ ನೀವು ಬದುಕಲಾರಿರಿ. ಕಸ ಎತ್ತುವ, ಚರಂಡಿ ಕ್ಲೀನ್‌ ಮಾಡುವ ದಲಿತ ಶ್ರಮಿಕರನ್ನೂ ನಿಮ್ಮ ಸಂಘಟನೆಗೆ ಸೇರಿಸಿಕೊಳ್ಳಬೇಕು.

ಶುದ್ಧಗಾಳಿ, ಶುದ್ಧನೀರು, ಸಮೃದ್ಧ ಅರಣ್ಯ, ಜೀವಸಂಪತ್ತಿನ ಉಳಿವಿಗೆ ಶ್ರಮಿಸುವ ಪರಿಸರಪ್ರೇಮಿಗಳನ್ನೂ ನಿಮ್ಮ ಸಂಘಟನೆ ಒಳಗೊಳ್ಳಬೇಕು. ನಾಳಿನ ಬದುಕಿನ ಭದ್ರತೆಗೆ ಅವು ಬೇಕೇಬೇಕು. ಹೌದು

ಕೊಕ್ರೋಚ್‌ ಎಂದು ಎಲ್ಲರ ಅವಹೇಳನಕ್ಕೆ ತುತ್ತಾದ ಆ ಬಡಪಾಯಿ ಪ್ರಾಣಿಗೆ ನಿಸರ್ಗದಲ್ಲಿ ಬಹುಮಹತ್ವದ ಸ್ಥಾನವಿದೆ. ವ್ಯವಸ್ಥೆಯಲ್ಲಿ ಯಾರಿಗೂ ಬೇಡವಾದದ್ದನ್ನು ಜೀರ್ಣಿಸಿಕೊಂಡು ಜೀವಸಮತೋಲವನ್ನು ಕಾಪಾಡುವ ಕೆಲಸವನ್ನು ಅದು ಮಾಡುತ್ತದೆ. ಆ ಹೆಸರಿಗೆ ಅಂಟಿಕೊಂಡ ಕಳಂಕ ಮತ್ತು ಅವಹೇಳನವನ್ನು ಜೀರ್ಣಿಸಿಕೊಂಡು ನೀವು ಬೆಳೆಯುತ್ತೀರಿ, ನಿಮಗಿಂತ ಕಿರಿಯರಿಗೆ ಮಾದರಿ ಆಗುತ್ತೀರಿ ಎಂದು ಆಶಿಸುತ್ತೇನೆ.

You are the nation builder. You are the nation!

ನಿಮಗೆ ಶುಭವಾಗಲಿ. ನಿಮ್ಮ ಯತ್ನದಿಂದ ಭಾರತವೂ ಉಜ್ವಲವಾಗಲಿ!

ಇದನ್ನೂ ನೋಡಿ : ಯುವಜನರನ್ನು “ಕಾಕ್ರೋಚ್” ಎಂದವರ ವಿರುದ್ಧ ಡಿಜಿಟಲ್‌ ಚಳವಳಿ! – ಕಾಕ್ರೋಚ್ ಜನತಾ ಪಾರ್ಟಿ Janashakthi Media

Donate Janashakthi Media

Leave a Reply

Your email address will not be published. Required fields are marked *