ಹಾಸನ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಯಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ ಹಾಗೂ ಮೌಲ್ಯಮಾಪನ ಅಕ್ರಮಗಳಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳಿಗೆ ಭಾರತೀಯ ವಿದ್ಯಾರ್ಥಿ ಫೆಡರೇಶನ್ (SFI) ವತಿಯಿಂದ ಹಾಸನ ನಗರದ ಬಾಲಕರ ವಿದ್ಯಾರ್ಥಿ ವಸತಿ ನಿಲಯದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಯುವಜನ ಮುಖಂಡರು ಮೃತ ವಿದ್ಯಾರ್ಥಿಗಳ ಭಾವಚಿತ್ರಗಳಿಗೆ ನಮನ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಪರೀಕ್ಷಾ ಅಕ್ರಮಗಳಿಂದ ತಮ್ಮ ಭವಿಷ್ಯದ ಕನಸುಗಳನ್ನು ಕಳೆದುಕೊಂಡು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ SFI ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ವಿದ್ಯಾರ್ಥಿಗಳ ಹಲವು ವರ್ಷಗಳ ಪರಿಶ್ರಮ, ಪೋಷಕರ ತ್ಯಾಗ ಹಾಗೂ ದೇಶದ ಭವಿಷ್ಯದೊಂದಿಗೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಚೆಲ್ಲಾಟವಾಡುತ್ತಿವೆ ಎಂದು ಆರೋಪಿಸಿದರು. NEET ಪರೀಕ್ಷೆಯಲ್ಲಿನ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಆತಂಕಕ್ಕೆ ಸಿಲುಕಿದ್ದು, ಮಾನಸಿಕ ಒತ್ತಡಕ್ಕೆ ಒಳಗಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.
ಇದನ್ನೂ ಓದಿ : ಪೊಲೀಸ್ ಪೇದೆ ಪರೀಕ್ಷೆ ಸಮಯ ಬದಲಾವಣೆ ; ಜನಶಕ್ತಿ ಮೀಡಿಯಾ ವರದಿಯ ಫಲಶೃತಿ
NEET ಪರೀಕ್ಷಾ ಅಕ್ರಮದ ಕುರಿತು ಸಮಗ್ರ ಮತ್ತು ಪಾರದರ್ಶಕ ತನಿಖೆ ನಡೆಸಬೇಕು, ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿಗಳು ಹಾಗೂ ಜವಾಬ್ದಾರಿಯುತ NTA ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು SFI ಆಗ್ರಹಿಸಿತು. ಪರೀಕ್ಷಾ ಅಕ್ರಮದಿಂದ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ₹1 ಕೋಟಿ ಪರಿಹಾರ ನೀಡಬೇಕು ಮತ್ತು ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ NTAಯನ್ನು ವಿಸರ್ಜಿಸಿ, ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಲಾಯಿತು.
ಅನ್ಯಾಯಕ್ಕೊಳಗಾದ ಪ್ರತಿಯೊಬ್ಬ ವಿದ್ಯಾರ್ಥಿಗೂ ನ್ಯಾಯ ದೊರೆಯುವವರೆಗೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಖಚಿತವಾಗುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು SFI ಪದಾಧಿಕಾರಿಗಳು ಎಚ್ಚರಿಸಿದರು.
ಸಭೆಯಲ್ಲಿ SFI ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ರೈತ ಮುಖಂಡರಾದ ನವೀನ್ ಕುಮಾರ್, ವಿವೇಕ್, ಗಿರೀಶ್, ಪ್ರೇಮ್ ದೇಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಸಕ್ತರು ಭಾಗವಹಿಸಿದ್ದರು.
ಇದನ್ನೂ ನೋಡಿ :NEET ಹೋರಾಟದ ಒಳನೋಟ | ದಮನದ ಪ್ರತಿಯೊಂದು ಹೆಜ್ಜೆಗೂ ವಿದ್ಯಾರ್ಥಿಗಳ ಪ್ರತಿರೋಧ | ಗುರುರಾಜ ದೇಸಾಯಿ Janashakthi
