ಮಲ್ಪೆ: ಕೊಡವೂರು ಜುಮಾದಿ ನಗರದ ಸಮೀಪ ಬಸ್ ನಿಲ್ದಾಣದ ಪಕ್ಕ ಮೇ 22ರ ಸಂಜೆ ಹೊಸ ಬಾವಿ ನಿರ್ಮಾಣ ಮಾಡುತ್ತಿರುವ ವೇಳೆ ಮಣ್ಣು ಕುಸಿದು ಅದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಕೊಪ್ಪಳ ಜಿಲ್ಲೆಯ ರಮೇಶ್ ಎಂಬಾತ ಮಣ್ಣಿನಡಿ ಸಿಲುಕಿ ಅಸುನೀಗಿದ್ದು ಸತತ 5 ಗಂಟೆಗಳ ಕಾರ್ಯಚರಣೆ ನಡೆಸಿದ ಬಳಿಕ ತಡರಾತ್ರಿ ಸುಮಾರು 12-30ರ ವೇಳೆ ಕಾರ್ಮಿಕನ ಮೃತದೇಹ ಪತ್ತೆಯಾಗಿದ್ದು ಯಂತ್ರದ ಮೂಲಕ ಮೇಲೆತ್ತಲಾಗಿದೆ.
ಕೆಲಸ ಬಿಡುತ್ತಿದ್ದ ಸಂದಂರ್ಭದಲ್ಲಿ ನಡೆದಿತ್ತು ದುರ್ಘಟನೆ:
ಬಾವಿ ನಿರ್ಮಾಣಕ್ಕೆ ಅಡಿಭಾಗದಲ್ಲಿ ಕೆಲವು ಸಾಲು ಕಲ್ಲುಕಟ್ಟಲಾಗಿತ್ತು. ಆಂದು ಸಂಜೆ ಸುಮಾರು 5 ಗಂಟೆಗೆ ಕೆಲಸ ಮುಗಿಯುವ ಸಮಯದಲ್ಲಿ ಮೂರು ಮಂದಿ ಬಾವಿಯಲ್ಲಿ ಇಬ್ಬರು ಬಾವಿಯ ಮೇಲೆ ನಿಂತು ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಆರ್ಥಿಕ ಅಭಿವೃದ್ಧಿ ಎಂದರೆ ಬರಿಯ ಜಿಡಿಪಿ ಬೆಳವಣಿಗೆಯಲ್ಲ
ಈ ವೇಳೆ ಬಾವಿಯ ದಂಡೆಯ ಮಣ್ಣು ಒಮ್ಮೆಲೆ ಕುಸಿದಿತ್ತು. ಮಣ್ಣು ಜರಿಯುತ್ತಿದ್ದಂತೆ ಇಬ್ಬರು ಮೇಲೆ ಬಂದಿದ್ದರು. ಬಾವಿಯೊಳಗಿದ್ದ ರಮೇಶ್ ಅವರ ಮೈಮೇಲೆ ಮಣ್ಣು ಬಿದ್ದು ಮಣ್ಣಿನಡಿಯಲ್ಲಿ ಹೂತು ಹೋದರು.
ಬಾವಿ ನಿರ್ಮಾಣವಾಗುತ್ತಿದ್ದ ಜಾಗದ ಮಣ್ಣು ಮೆದುವಾಗಿದ್ದು, ಹೊಯಿಗೆ ಮಿಶ್ರಿತವಾಗಿತ್ತು. ಅಲ್ಲದೆ ಈ ಭಾಗದಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗಿ ಮಣ್ಣು ಮತ್ತಷ್ಟುಸಡಿಲವಾಗಿತ್ತು. ಜರಿಯುತ್ತಿದ್ದ ಮಣ್ಣನ್ನು ಅಷ್ಟುಸುಲಭವಾಗಿ ನಿಲ್ಲಿಸುವುದಕ್ಕೆ ಸಾಧ್ಯವಾಗಿಲ್ಲ. ಬಾವಿಯೊಳಗೆ ರಕ್ಷಣೆಗಾಗಿ ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆ, ಬಾವಿ ನಿರ್ಮಾಣ ಕಾರ್ಯದಲ್ಲಿ ಪರಿಣಿತರಾಗಿದ್ದ ಮೂರು ಮಂದಿ ಕಾರ್ಯಚರಣೆಗೆ ಇಳಿದಿದ್ದರು.
ಈ ವೇಳೆ ಮೇಲಿನಿಂದ ಮಣ್ಣು ಜರಿದು ಬೀಳುತ್ತಿತ್ತು. ರಕ್ಷಣಾ ತಂಡದ ಮೇಲೂ ಮಣ್ಣು ಬಿದ್ದಿತ್ತು. ತತ್‌ಕ್ಷಣ ಬಾವಿಯ ಮೇಲ್ಭಾಗದಲ್ಲಿ ಸಡಿಲವಾಗಿದ್ದ ಮಣ್ಣನ್ನು ಯಂತ್ರದ ಮೂಲಕ ಹೊರಗೆ ಸರಿಸಿ ಕಾರ್ಯಾಚರಣೆ ಮಾಡಲಾಗಿತ್ತು. ಅಗ್ನಿಶಾಮಕ ದಳ ಮತ್ತು ಪೊಲೀಸರು ಕಾರ್ಯಚರಣೆಗೆ ಪೂರ್ಣ ಸಹಕಾರ ನೀಡಿದ್ದರು.
ಬಾವಿಯಿಂದ ಹೊರ ತೆಗೆದು ರಮೇಶ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ: ಯುವಜನರನ್ನು “ಕಾಕ್ರೋಚ್” ಎಂದವರ ವಿರುದ್ಧ ಡಿಜಿಟಲ್ ಚಳವಳಿ! – ಕಾಕ್ರೋಚ್ ಜನತಾ ಪಾರ್ಟಿ Janashakthi Media
