ಹಾಸನ: ಮಹಿಳಾ ಚಳುವಳಿ ಹಲವು ಸವಾಲುಗಳನ್ನು ಎದುರಿಸುತ್ತಾ ಮುಂದೆ ಸಾಗುತ್ತಿದೆ. ದಲಿತ ಹಾಗೂ ಮುಸ್ಲಿಂ ಮಹಿಳೆಯರ ಮೇಲೆ ಅವಮಾನಕಾರಿ ನಡೆಗಳು ಹೆಚ್ಚುತ್ತಿವೆ. ಹಿಂದೂತ್ವದ ಹೆಸರಿನಲ್ಲಿ ಮಾತನಾಡುವವರು ಮನೆ ಕೆಲಸಗಾರರು ಹಾಗೂ ಸ್ವಚ್ಛತಾ ಕಾರ್ಮಿಕರನ್ನು ನಿಜವಾಗಿಯೂ ಗೌರವದಿಂದ ನೋಡಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆಯನ್ನು ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಎತ್ತಿದರು. ದ್ವೇಷ
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ದಿಕ್ಸೂಚಿ ಮಾತುಗಳನ್ನಾಡಿದರು. ದ್ವೇಷ
ಜಾತಿಯ ಹೆಸರಿನಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಮೇಲೂ ದಾಳಿಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಜಾಗತಿಕ ಮಟ್ಟದಲ್ಲಿಯೂ ಯುದ್ಧ ಹಾಗೂ ಸಾಮ್ರಾಜ್ಯಶಾಹಿ ರಾಜಕೀಯದ ಪರಿಣಾಮವಾಗಿ ಸಾಮಾನ್ಯ ಜನರು, ವಿಶೇಷವಾಗಿ ಮಕ್ಕಳು ಬಲಿಯಾಗುತ್ತಿರುವುದು ದುಃಖಕರ ಸಂಗತಿ ಎಂದು ಹೇಳಿದರು. ದ್ವೇಷ
ಇದನ್ನೂ ಓದಿ: ಲೇಬರ್ ಕೋಡ್ ವಿರುದ್ಧ ಕಾರ್ಮಿಕರ ಆಕ್ರೋಶ: ಕಾರ್ಮಿಕ ಭವನದ ಎದುರು ಆಕ್ಷೇಪಣೆ ಸಲ್ಲಿಕೆ
ಗಾಜಾದಲ್ಲಿ ಸಾವಿರಾರು ಜನರು, ಅದರಲ್ಲೂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿರುವುದು ಮಾನವೀಯ ಸಂಕಟದ ಸೂಚಕ ಎಂದು ಹೇಳಿದರು.
ರಂಜಾನ್ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಹತ್ಯೆ ನಡೆದಿರುವ ಘಟನೆ ಉಲ್ಲೇಖಿಸಿ, ಇಂತಹ ದ್ವೇಷಪರ ಘಟನೆಗಳ ವಿರುದ್ಧ ಮಹಿಳಾ ಚಳುವಳಿಗಳು ದೃಢವಾಗಿ ಹೋರಾಟ ಕಟ್ಟಬೇಕು ಎಂದು ಕರೆ ನೀಡಿದರು. ದ್ವೇಷ
ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೆ ತಂದ ಸಂದರ್ಭದಲ್ಲಿಯೇ ಪ್ರಶ್ನೆ ಎತ್ತಿದವರ ಮೇಲೆ ದೇಶದ್ರೋಹ ಹಾಗೂ ಯುಎಪಿಎ ಪ್ರಕರಣಗಳನ್ನು ದಾಖಲಿಸಲಾಯಿತು. ಆದರೆ ಸಾವಿರಾರು ಮುಸ್ಲಿಂ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಎಲ್ಲ ದಿಕ್ಕುಗಳಿಂದ ಚಳುವಳಿಯನ್ನು ಕುಂಠಿತಗೊಳಿಸಲು ಮೋದಿ ಸರ್ಕಾರ ಪ್ರಯತ್ನಿಸಿತು. ಆದರೆ ಚಳುವಳಿ ಬಲವಾಗಿದ್ದ ಕಾರಣ ಅವರ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಇದು ಜನಚಳುವಳಿಯ ತಾಕತ್ತಿಗೆ ಉದಾಹರಣೆ ಎಂದು ಹೇಳಿದರು.
ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸರ್ಕಾರ ಮತ್ತು ಕಾನೂನು ವ್ಯವಸ್ಥೆ ಹೇಗೆ ನಡೆದುಕೊಂಡಿತು ಎಂಬುದನ್ನು ದೇಶವೇ ನೋಡಿದೆ. ದಲಿತ ಹಾಗೂ ಆದಿವಾಸಿ ವಿರೋಧಿ ನೀತಿಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮಹಿಳಾ ಚಳುವಳಿಗಳು ಹೋರಾಟ, ಸಂವಾದ ಮತ್ತು ವಿಚಾರ ಸಂಕಿರಣಗಳ ಮೂಲಕ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ಮಾಧ್ಯಮಗಳು ಕಾರ್ಪೊರೇಟೀಕರಣಗೊಂಡಿರುವ ಹಿನ್ನೆಲೆಯಲ್ಲಿ ಸಮಾಜದ ಅಲ್ಪಸಂಖ್ಯಾತರ ಪ್ರಶ್ನೆಗಳು ಹಿಮ್ಮೆಟ್ಟುತ್ತಿವೆ ಎಂದು ಅವರು ಆರೋಪಿಸಿದರು. ಕೆಲವು ಮಾಧ್ಯಮಗಳು ಮುಸ್ಲಿಂ ಮಹಿಳೆಯರನ್ನು ತಪ್ಪಾಗಿ ಚಿತ್ರಿಸುವ ಮೂಲಕ ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಬಿತ್ತುತ್ತಿವೆ. ದಲಿತ, ಆದಿವಾಸಿ, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ದಾಖಲೆಗಳ ಹೆಸರಿನಲ್ಲಿ ಕಡಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಮಹಿಳೆಯರ ಮತದಾನದ ಹಕ್ಕಿಗೂ ಇಂತಹ ನೆಪಗಳಿಂದ ಧಕ್ಕೆ ತರುವ ಸಾಧ್ಯತೆ ಇದೆ. ಕರ್ನಾಟಕದಲ್ಲೂ ಈ ಅಪಾಯ ಎದುರಾಗಬಹುದು ಎಂದು ಎಚ್ಚರಿಸಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಮಹಿಳೆಯರು ಸ್ವತಂತ್ರವಾಗಿ ದುಡಿಯಲು ಮತ್ತು ಪ್ರಶ್ನಿಸಲು ಮನರೇಗಾ ಯೋಜನೆ ದೊಡ್ಡ ಮಾನಸಿಕ ಬಲ ನೀಡಿತ್ತು ಎಂದು ಹೇಳಿದರು. ಎಡಪಕ್ಷಗಳ ಹೋರಾಟದ ಫಲವಾಗಿ ಜಾರಿಯಾದ ಈ ಯೋಜನೆ ಗ್ರಾಮೀಣ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಕಾರಣವಾಗಿತ್ತು. ಆದರೆ ಈಗ ವಿವಿಧ ಹೆಸರಿನಲ್ಲಿ ಈ ಯೋಜನೆಯ ಮೂಲ ಉದ್ದೇಶವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಮನರೇಗಾ ಯೋಜನೆ ತನ್ನ ಮೂಲ ಸ್ವರೂಪದಲ್ಲಿಯೇ ಮುಂದುವರಿಯಬೇಕು ಎಂದು ಒತ್ತಾಯಿಸಿದರು.
ಸಾಹಿತಿ ಡಾ. ಸಬಿತಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, “ಸಾವಿರ ತಲೆ-ಕೈಕಾಲುಗಳಿರುವ ದೌರ್ಜನ್ಯಗಳನ್ನು ಎದುರಿಸಲು ಪದೇಪದೇ ಅವತಾರ ಪುರುಷರೇ ಯಾಕೆ ಬರಬೇಕು?” ಎಂದು ಪ್ರಶ್ನಿಸಿದರು. “ನಾವು ರಾಮ ಅಥವಾ ಕೃಷ್ಣರಂತೆ ದೌರ್ಜನ್ಯಕಾರರನ್ನು ಕೊಲ್ಲುವುದಿಲ್ಲ. ಬದಲಿಗೆ ದೌರ್ಜನ್ಯ ಎಸಗುವ ಕೈಗಳನ್ನು ಸೋಲಿಸುವುದು ಮತ್ತು ಮನಸ್ಥಿತಿಗಳನ್ನು ಬದಲಿಸುವುದರ ಮೂಲಕವೇ ನಾವು ಜಯ ಸಾಧಿಸುತ್ತೇವೆ. ಹೀಗೆ ಇತಿಹಾಸವನ್ನು ಬರೆಯುತ್ತೇವೆ,” ಎಂದರು.

ಜನಪರ ವೈದ್ಯೆ ಡಾ. ಎಚ್.ಎಸ್. ಅನುಪಮ ಮಾತನಾಡಿ, “ಗುಜರಾತ್ ಅನ್ನು 56 ಇಂಚಿನ ಎದೆ ಎಂಬ ರಾಜಕೀಯ ಘೋಷಣೆಯಿಂದಲ್ಲ, ದೌರ್ಜನ್ಯಕ್ಕೆ ವಿರುದ್ಧವಾಗಿ ನಿಂತ ಮಹಿಳೆಯರ ಹೋರಾಟಗಳಿಂದ ಗುರುತಿಸಬೇಕು,” ಎಂದರು. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ವಿರುದ್ಧವಾಗಿ ಹೋರಾಡಿ ನ್ಯಾಯ ಪಡೆದ ಬಿಲ್ಕಿಸ್ ಬಾನು, ದಿಟ್ಟ ಪತ್ರಕರ್ತೆ ತೀಸ್ತಾ ಸೆಟಲ್ವಾಡ್, ಹೋರಾಟಗಾರ್ತಿಯರಾದ ಮೇಧಾ ಪಾಟ್ಕರ್ ಹಾಗೂ ಜಕೀಯಾ ಸೋಮನ ಅವರಂತಹ ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಯುವ ನಾಯಕ ಜಿಗ್ನೇಶ್ ಮೆವಾನಿಯ ಹೋರಾಟವನ್ನೂ ಅವರು ಸ್ಮರಿಸಿದರು.
ಈ ಸಂದರ್ಭದಲ್ಲಿ ತೀಸ್ತಾ ಸೆಟಲ್ವಾಡ್ ಅವರಿಗೆ ಕೌದಿಯನ್ನು ಹೊದಿಸಿ ಗೌರವಿಸಲಾಯಿತು. ಕೌದಿ ಹೆಣ್ತನದ ಸಂಕೇತವಾಗಿದೆ ಎಂದು ವಾಣಿ ಪೆರಿಯೋಡಿ ತಿಳಿಸಿದರು. ವಾಣಿ ಪೆರಿಯೋಡಿ ಹಾಗೂ ಸಂಘಟನೆಯ ಕಾರ್ಯಕರ್ತೆಯರು ನೇಯ್ದ ಕೌದಿಯನ್ನು ಈ ವೇಳೆ ಸಮರ್ಪಿಸಲಾಯಿತು.
ಸಮಾವೇಶಕ್ಕೂ ಮುನ್ನ ಹಾಸನದ ಪ್ರಮುಖ ಬೀದಿಗಳಲ್ಲಿ ನೂರಾರು ಮಹಿಳೆಯರು ಮೆರವಣಿಗೆ ನಡೆಸಿದರು. ಕೋಲಾಟ ಮತ್ತು ಡೊಳ್ಳು ಬಾರಿಸುವ ಮೂಲಕ ಮಹಿಳೆಯರು ಗಮನ ಸೆಳೆದರು. ಇದೇ ವೇಳೆ ‘ಹಾಸನ ಮಣ್ಣಿನ ಹೆಣ್ಣು ದನಿಗಳು’ ಎಂಬ ಪುಸ್ತಕವೂ ಬಿಡುಗಡೆಯಾಯಿತು.
ಸಮಾವೇಶದ ಅಧ್ಯಕ್ಷತೆಯನ್ನು ಸಾಹಿತಿ ರೂಪಾ ಹಾಸನ ವಹಿಸಿದ್ದರು. ವೇದಿಕೆಯ ಮೇಲೆ ಮಮತಾ ನಿರಂಜನ, ಬಾ.ಹ. ರಮಾ, ಅರ್ಚನಾ ಜಯಂತ್, ಪ್ರಭಾವತಿ ದೇಸಾಯಿ, ಸುಜಾತ ಕುಮಾರಸ್ವಾಮಿ, ಮಮತರಾಣಿ, ಸೌಮ್ಯ ಬಿ.ಎಂ., ಶಾನು, ಧರಣಿ, ರಶ್ಮಿ, ನಾಗಮ್ಮ ಬೈಂದೂರು ಸೇರಿದಂತೆ ಅನೇಕ ಮಹಿಳಾ ನಾಯಕಿಯರು ಉಪಸ್ಥಿತರಿದ್ದರು. ಡಾ. ಶಭಾನ ಮೈಸೂರು ಮತ್ತು ಕೆ.ಬಿ. ಮನು ಕಾರ್ಯಕ್ರಮ ನಿರ್ವಹಿಸಿದರು.
ಇದನ್ನೂ ನೋಡಿ: ಪುಸ್ತಕ ಹೆಸರು ನೋಡಿ ಸಂವಾದಕ್ಕೆ ಬರಬೇಡಿ, ಓದಿ ಬನ್ನಿ – ಎಂ.ಜಿ. ಹೆಗಡೆ Janashakthi Media
