ಬೆಂಗಳೂರು: ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಗೀತೆಯಲ್ಲಿ ಈಗಿಲ್ಲದ ‘ಬೌದ್ಧ’ ಧರ್ಮದ ಹೆಸರನ್ನು ಮರು ಸೇರ್ಪಡೆಗೊಳಿಸುವ ಬಗ್ಗೆ ತಜ್ಞರ ಸಮಿತಿ ಶಿಫಾರಸು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿ, ನಾಡಗೀತೆಯಲ್ಲಿನ ‘ಜೈನರುದ್ಯಾನ’ ಎಂಬ ಪದಬದಲಿಗೆ ‘ಜೈನಬೌದ್ಧರುದ್ಯಾನ’ ಎಂದು ಪರಿಷ್ಕರಿಸಲು ಸಲಹೆ ನೀಡಿದೆ. ಕುವೆಂಪು ಅವರ ಮೂಲ ರಚನೆಯಲ್ಲಿ ಬೌದ್ಧ ಧರ್ಮದ ಉಲ್ಲೇಖವಿದ್ದರೂ, ಕಾಲಕ್ರಮೇಣ ಅದು ಬಳಕೆಯಿಂದ ಹೊರಗುಳಿದಿರುವುದನ್ನು ಸಮಿತಿ ಗಮನಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಬೌದ್ಧ ಧರ್ಮದ ಸಾಂಸ್ಕೃತಿಕ ಪ್ರಾಮುಖ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಮೂಲ ಆಶಯವನ್ನು ಮರುಸ್ಥಾಪಿಸುವ ಉದ್ದೇಶದಿಂದ ಈ ಬದಲಾವಣೆಯನ್ನು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ: ಎಚ್.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್
ಈ ಹೊಸ ಪದವನ್ನು ಗಾಯನದಲ್ಲೂ ಅಳವಡಿಸಲು ತಜ್ಞರ ಸಮಿತಿ ರೂಪಿಸಲಾಗಿದ್ದು, ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿರುವ ಜನಪ್ರಿಯ ರಾಗದಲ್ಲಿಯೇ ಮರು ಸಂಯೋಜನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈ ಸಮಿತಿಯಲ್ಲಿ ಪ್ರೊ. ಹಂಪ ನಾಗರಾಜಯ್ಯ, ಪ್ರೊ. ಬರಗೂರು ರಾಮಚಂದ್ರಪ್ಪ, ಡಾ. ಚಿದಾನಂದ ಗೌಡ ಸೇರಿದಂತೆ ಹಲವು ಗಣ್ಯರು ಸದಸ್ಯರಾಗಿದ್ದಾರೆ.
1924ರಲ್ಲಿ ಕೇವಲ 20ನೇ ವಯಸ್ಸಿನಲ್ಲಿ ಕುವೆಂಪು ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಲ್ಲಿ ಈ ಗೀತೆಯನ್ನು ರಚಿಸಿದ್ದರು. ‘ಕೊಳಲು’ ಕವನ ಸಂಕಲನದ ಮೂಲಕ ಈ ಗೀತೆ ಮೊದಲ ಬಾರಿಗೆ ಜನಪ್ರಿಯಗೊಂಡಿತ್ತು. ಇತ್ತೀಚೆಗೆ ಈ ನಾಡಗೀತೆಯ ಶತಮಾನೋತ್ಸವ ರಾಜ್ಯಾದ್ಯಂತ ಆಚರಿಸಲ್ಪಟ್ಟ ಹಿನ್ನೆಲೆ, ಈಗ ಅದರ ಮೂಲ ಸ್ವರೂಪಕ್ಕೆ ತಕ್ಕಂತೆ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ.
ಸದ್ಯ ಈ ಶಿಫಾರಸು ಸರ್ಕಾರದ ಪರಿಶೀಲನೆಯಲ್ಲಿ ಇದ್ದು, ಅಂತಿಮ ನಿರ್ಧಾರಕ್ಕಾಗಿ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಇದನ್ನೂ ನೋಡಿ: ಬಿಎಲ್ಒ ಕಾರ್ಯದಿಂದ ಮುಕ್ತಗೊಳಿಸಿ: ಜಿಲ್ಲಾಧಿಕಾರಿ ಕಚೇರಿಗೆ ಅಂಗನವಾಡಿ ನೌಕರರ ಮುತ್ತಿಗೆ Janashakthi Media
