ಸಮಾಜವಾದೀ ವ್ಯವಸ್ಥೆಯು ಬಂಡವಾಳಶಾಹಿಯಂತೆ ಒಂದು ದಂಡಿಸುವ ವ್ಯವಸ್ಥೆಯಲ್ಲ. ಅದರಲ್ಲಿ ಜನರು ತಾವು ಸೇರಿರುವ ಸಮುದಾಯವು ಉತ್ಪಾದನಾ ಸಾಧನಗಳ ಒಡೆತನವನ್ನು ಹೊಂದಿರುವುದರಿಂದ, ಆ ಸಮುದಾಯದ ಪ್ರಯೋಜನಕ್ಕಾಗಿ ಕೆಲಸ ಮಾಡುತ್ತಾರೆ. ಅಂತಹ ಒಂದು ಸಮುದಾಯದ ರಚನೆಗಾಗಿ ಉತ್ಪಾದನಾ ಸಾಧನಗಳ ಸಾಮಾಜಿಕ ಒಡೆತನ ಅತ್ಯಗತ್ಯವಾಗುತ್ತದೆ. ಆದರೆ ಸಾಮಾಜಿಕ ಒಡೆತನವೇ ಸಮಾಜವಾದವನ್ನು ನಿರೂಪಿಸುವುದಿಲ್ಲ. ಅದು ಸಮಾಜವಾದವು ಅಸ್ತಿತ್ವ ತಳೆಯಲು ಅಗತ್ಯವಾದ ಒಂದು ಷರತ್ತು ಆಗಿರುತ್ತದೆ. ಸಮಾಜವಾದವು ಅಸ್ತಿತ್ವಕ್ಕೆ ಬರುವ ಸಮಯದಲ್ಲಿನ ವಿಚಲನೆಗಳು ಮತ್ತು ವಿಕೃತಿಗಳು ಏನೇ ಇರಲಿ, ಅವುಗಳನ್ನೇ ವ್ಯವಸ್ಥೆಯ ಶಾಶ್ವತ ಗುಣಲಕ್ಷಣಗಳೆಂದು ಭಜಿಸುವುದು ಒಂದು ಗಂಭೀರ ತಪ್ಪಾಗುತ್ತದೆ. ಸಮಾಜವಾದ
– ಅನು: ಕೆ.ಎಂ. ನಾಗರಾಜ್
ಇಂದಿನ ದಿನಗಳಲ್ಲಿ ಬೂರ್ಜ್ವಾ ತತ್ವಸಿದ್ಧಾಂತವು ಎಲ್ಲರನ್ನೂ ಅದೆಷ್ಟು ಮಟ್ಟಿಗೆ ವ್ಯಾಪಿಸಿಕೊಂಡಿದೆ ಎಂದರೆ, ಸಮಾಜವಾದದ ಕಣ್ಣೋಟದ ಬಗ್ಗೆ ಪೂರ್ಣ ಬದ್ಧತೆ ಹೊಂದಿರುವವರಲ್ಲೇ ಹಲವರು ಅದರ ಬಗ್ಗೆ ಇಟ್ಟುಕೊಂಡಿರುವ ವಿಚಾರಗಳು ಪೂರ್ಣವಾಗಿ ತಪ್ಪಾಗಿರುತ್ತವೆ. ಆದ್ದರಿಂದ ಈ ಮೂಲಭೂತ ಪ್ರಶ್ನೆಗೆ ಮತ್ತೊಮ್ಮೆ ಮರಳುವುದು ಅವಶ್ಯವಾಗಿದೆ. ಸಮಾಜವಾದ ಎಂದರೆ, ಉತ್ಪಾದನಾ ಸಾಧನಗಳು ಸಾಮಾಜಿಕ ಒಡೆತನದಲ್ಲಿರುತ್ತವೆ ಎಂದು ನಿರೂಪಿಸಿರುವ ಒಂದು ಸಮಾಜ ಎಂಬುದು ಒಂದು ಸಾಮಾನ್ಯ ಗ್ರಹಿಕೆ. ಈ ವ್ಯಾಖ್ಯಾನದ ಸಂದರ್ಭದಲ್ಲಿ ಪ್ರಭುತ್ವದ ಒಡೆತನವನ್ನು ಸಾಮಾಜಿಕ ಒಡೆತನಕ್ಕೆ ಒಂದು ಬದಲಿ ಎಂದು ಭಾವಿಸಲಾಗಿದೆ.
ಆದರೆ, ಇದು (ಪ್ರಭುತ್ವದ ಒಡೆತನ) ಅಗತ್ಯವಾದ ಒಂದು ಷರತ್ತು ಎಂಬುದು ಹೌದಾದರೂ, ಅಷ್ಟು ಮಾತ್ರವೇ ಸಾಕಾಗುತ್ತದೆ ಎನ್ನುವ ಒಂದು ಸ್ಥಿತಿಯೇನಲ್ಲ. ಈ ಬಗ್ಗೆ ಒಂದು ಉದಾಹರಣೆಯನ್ನು ಹೇಳುವುದಾದರೆ, ಬಂಡವಾಳಶಾಹಿ ವ್ಯವಸ್ಥೆಯೊಂದಿಗೆ ಗುರುತಿಸಲ್ಪಡುವ ನಿರುದ್ಯೋಗ, ಹಣದುಬ್ಬರ ಮತ್ತು ವ್ಯಕ್ತಿ-ವ್ಯಕ್ತಿಗಳ ನಡುವಿನ ಮತ್ತು ಪ್ರದೇಶ-ಪ್ರದೇಶಗಳ ನಡುವಿನ ಅಸಮಾನತೆಯಂತಹ ಅನೇಕ ಲಕ್ಷಣಗಳನ್ನು (ಇವುಗಳನ್ನು ನವ-ಉದಾರವಾದಿ ಬಂಡವಾಳಶಾಹಿಯು ಇಂದು “ಸಾಧಿಸಿರುವ” ಮಟ್ಟದಲ್ಲಿ ಅಲ್ಲದಿದ್ದರೂ) ಹೊಂದಿದ್ದರೂ ಸಹ, ಅದರ ಉತ್ಪಾದನಾ ಸಾಧನಗಳು ಪ್ರಧಾನವಾಗಿ ಪ್ರಭುತ್ವದ ಒಡೆತನದಲ್ಲಿದ್ದ ಲಕ್ಷಣದಿಂದಾಗಿ, ಹಿಂದಿನ ಯುಗೊಸ್ಲಾವಿಯಾವು ಒಂದು ಸಮಾಜವಾದಿ ವ್ಯವಸ್ಥೆ ಎಂದೇ ಗುರುತಿಸಲ್ಪಟ್ಟಿತ್ತು.
ಇದನ್ನೂ ಓದಿ: ಕರ್ನಾಟಕದಲ್ಲಿ SIR ಪ್ರಕ್ರಿಯೆತಂದೊಡ್ಡಿರುವ ಅವಾಂತರದ; ನಮ್ಮ ತುರ್ತು ಆಗ್ರಹಗಳು
ಅದೇ ರೀತಿಯಲ್ಲಿ, ಫ್ರಾನ್ಸ್‌ನಂತಹ ಒಂದು ಬಂಡವಾಳಶಾಹಿ ದೇಶದಲ್ಲಿ ರಾಷ್ಟ್ರೀಕೃತ ವಲಯವು ಒಂದು ಗಮನಾರ್ಹ ಮಟ್ಟದಲ್ಲಿದ್ದರೂ, ಅದು ಫ್ರಾನ್ಸ್ ಅನ್ನು ಒಂದು ಸಮಾಜವಾದಿ ದೇಶವನ್ನಾಗಿ ಮಾಡುವುದಿಲ್ಲ. ಆದ್ದರಿಂದ ಸಮಾಜವಾದ ಎಂದರೆ ಸಾಮಾಜಿಕ ಒಡೆತನಕ್ಕಿಂತಲೂ ಅಥವಾ ಪ್ರಭುತ್ವದ ಒಡೆತನಕ್ಕಿಂತಲೂ ಮಿಗಿಲಾದುದು.
ಬಂಡವಾಳಶಾಹಿಯು ಮೂಲಭೂತವಾಗಿ ಆರ್ಥಿಕ ಮಧ್ಯವರ್ತಿಗಳ ನಡುವೆ ಒಂದು ಪೈಪೋಟಿಯನ್ನು ಉತ್ತೇಜಿಸುತ್ತದೆ. ಈ ಪೈಪೋಟಿಯು ತಮಗೆ ಸಾಧ್ಯವಾಗುವಷ್ಟು ಬಂಡವಾಳವನ್ನು ಶೇಖರಿಸುವಂತೆ ಬಂಡವಾಳಗಾರರನ್ನು ಬಲವಂತಪಡಿಸುತ್ತದೆ. ಈ ವಿದ್ಯಮಾನವು ಬಂಡವಾಳಗಾರರನ್ನು ನವ ನವೀನ ಪ್ರಕ್ರಿಯೆಗಳು ಹಾಗೂ ಉತ್ಪನ್ನ-ನಾವೀನ್ಯತೆಗಳನ್ನು ಪರಿಚಯಿಸುವಂತೆ ಮಾಡುತ್ತದೆ (ಇಲ್ಲದಿದ್ದರೆ ಅವರು ಹಾಳಾಗುತ್ತಾರೆ) ಮತ್ತು ಕಾರ್ಮಿಕರ ನಡುವೆ ಪೈಪೋಟಿ ಏರ್ಪಡುವಂತೆ ಮಾಡುತ್ತದೆ (ಯಾವುದನ್ನು ಮಾರ್ಕ್ಸ್ “ಸಂಯೋಜನೆಗಳು” ಎಂದಿದ್ದರೋ ಅಥವಾ ಬಂಡವಾಳಶಾಹಿಗಳು ಯಾವುದನ್ನು ಮುರಿಯಲು ಅಥವಾ ಶಾಶ್ವತವಾಗಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವರೋ ಆ ಟ್ರೇಡ್ ಯೂನಿಯನ್‌ಗಳನ್ನು ರಚಿಸಿಕೊಳ್ಳುವ ಮೂಲಕ ಕಾರ್ಮಿಕರು ಈ ಪೈಪೋಟಿಯನ್ನು ಜಯಿಸುತ್ತಾರೆ).
ಪೈಪೋಟಿ vs ಸಹಕಾರ
ಇದಕ್ಕೆ ವ್ಯತಿರಿಕ್ತವಾಗಿ, ಸಮಾಜವಾದವು ಆರ್ಥಿಕ ಮಧ್ಯವರ್ತಿಗಳ ನಡುವಿನ ಸಹಕಾರವನ್ನು ಆಧರಿಸಿದೆ. ಇಂತಹ ಸಹಕಾರವು ಉತ್ಪಾದನಾ ಸಾಧನಗಳು ಸಾಮಾಜಿಕ ಒಡೆತನದಲ್ಲಿ ಇಲ್ಲದಿದ್ದರೆ, ಆಮೂಲಕ ಬಂಡವಾಳಗಾರ ವರ್ಗ ಅದೃಶ್ಯವಾಗದಿದ್ದರೆ ಸಹ ಅಸಾಧ್ಯವಾಗುತ್ತದೆಯಾದ್ದರಿಂದ ಸಮಾಜವಾದವು ಕಾರ್ಮಿಕರ ನಡುವಿನ ಸಹಕಾರವನ್ನು ಒಳಗೊಂಡಿರುತ್ತದೆ, ಅಂದರೆ, ಕಾರ್ಮಿಕರ ನಡುವೆ ಪೈಪೋಟಿಯನ್ನು ತಪ್ಪಿಸುತ್ತದೆ. ಈ ಮೊದಲು ಪ್ರಸ್ತಾಪಿಸಿದ ಯುಗೊಸ್ಲಾವಿಯಾದ ಪ್ರಕರಣದಲ್ಲಿ ಅದು “ಮಾರುಕಟ್ಟೆ ಸಮಾಜವಾದ”ವನ್ನು ಅನುಸರಿಸುತ್ತಿತ್ತು, ಅಂದರೆ ಬಂಡವಾಳಶಾಹಿಯ ಅಡಿಯಲ್ಲಿ ಖಾಸಗಿ ಸ್ವಾಮ್ಯದ ಸಂಸ್ಥೆಗಳು ಮೂಲತಃ ಮಾರುಕಟ್ಟೆಯಲ್ಲಿ ತೊಡಗುವ ಪೈಪೋಟಿಯ ರೀತಿಯಲ್ಲೇ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೂ ಸಹ ಪರಸ್ಪರ ಪೈಪೋಟಿಯಲ್ಲಿ ತೊಡಗಿದ್ದವು. ಮತ್ತು ಇದು ಯುಗೊಸ್ಲಾವಿಯಾದ ಸಮಾಜವಾದವು ಕೆಲವು ಬಂಡವಾಳಶಾಹಿ ಲಕ್ಷಣಗಳನ್ನು ಹೊಂದಿದ್ದಕ್ಕೆ ಕಾರಣವಾಗಿತ್ತು. ಸಮಾಜವಾದ
ಬಂಡವಾಳಶಾಹಿಯು ಮೂಲಭೂತವಾಗಿ ಆರ್ಥಿಕ ಮಧ್ಯವರ್ತಿಗಳ ನಡುವೆ ಒಂದು ಪೈಪೋಟಿಯನ್ನು ಉತ್ತೇಜಿಸುತ್ತದೆ.ಇದಕ್ಕೆ ವ್ಯತಿರಿಕ್ತವಾಗಿ, ಸಮಾಜವಾದವು ಆರ್ಥಿಕ ಮಧ್ಯವರ್ತಿಗಳ ನಡುವಿನ ಸಹಕಾರವನ್ನು ಆಧರಿಸಿದೆ. ಇಂತಹ ಸಹಕಾರವು ಉತ್ಪಾದನಾ ಸಾಧನಗಳು ಸಾಮಾಜಿಕ ಒಡೆತನದಲ್ಲಿ ಇಲ್ಲದಿದ್ದರೆ, ಆಮೂಲಕ ಬಂಡವಾಳಗಾರ ವರ್ಗ ಅದೃಶ್ಯವಾಗದಿದ್ದರೆ ಸಹ ಅಸಾಧ್ಯವಾಗುತ್ತದೆಯಾದ್ದರಿಂದ ಸಮಾಜವಾದವು ಕಾರ್ಮಿಕರ ನಡುವಿನ ಸಹಕಾರವನ್ನು ಒಳಗೊಂಡಿರುತ್ತದೆ, ಅಂದರೆ, ಕಾರ್ಮಿಕರ ನಡುವೆ ಪೈಪೋಟಿಯನ್ನು ತಪ್ಪಿಸುತ್ತದೆ.
ಪೈಪೋಟಿಯು ಬಂಡವಾಳಶಾಹಿ ವ್ಯವಸ್ಥೆಯ ಮೂಲ ಕಾರ್ಯವಿಧಾನವಾಗಿರುವುದರಿಂದ, ಪೈಪೋಟಿಯ ಓಟದಲ್ಲಿ ಸೋತವರು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಮತ್ತು ಅದು ವ್ಯವಸ್ಥೆಯಿಂದ “ಹೊರಹಾಕುವ” ರೂಪದಲ್ಲಿರಬೇಕಾಗುತ್ತದೆ. ಇದು ಅಂತಹ “ವೈಫಲ್ಯಗಳನ್ನು” ವರ್ಗಾಯಿಸಬಹುದಾದ ಕಸದ ಬುಟ್ಟಿಯ ರೀತಿಯ ಒಂದು ವ್ಯವಸ್ಥೆಯು “ಹೊರಗಡೆ” ಇರುತ್ತದೆ ಎಂಬುದನ್ನು ಸೂಚಿಸುತ್ತದೆ. ಈ “ಹೊರಗಿನ” ವ್ಯವಸ್ಥೆಯನ್ನು ಮಾರ್ಕ್ಸ್ ಮತ್ತು ಎಂಗೆಲ್ಸ್ “ಕಾರ್ಮಿಕರ ಮೀಸಲು ಸೈನ್ಯ” ಎಂದು ಕರೆದಿದ್ದರು. ಇದು ಬಂಡವಾಳಶಾಹಿಯ ಅಡಿಯಲ್ಲಿ ಇನ್ನೂ ಒಂದು ಹೆಚ್ಚು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅದು ಈ ಕೆಳಗಿನಂತಿದೆ.
ಪ್ರತಿಯೊಂದು ಉತ್ಪಾದನಾ ವ್ಯವಸ್ಥೆಯಲ್ಲಿ ಕಾರ್ಮಿಕರಲ್ಲಿ ʼಕೆಲಸದ ಪ್ರೇರಣೆʼಯನ್ನು ಮತ್ತು ʼಕೆಲಸದ ಶಿಸ್ತʼನ್ನು ತರುವ ಕೆಲವು ಕಾರ್ಯವಿಧಾನಗಳು ಇರುತ್ತವೆ. ಗುಲಾಮಗಿರಿ ಪದ್ಧತಿಯ ಅಡಿಯಲ್ಲಿ, ಸ್ವತಃ ಗುಲಾಮನೇ “ಯಜಮಾನ”ನ ಒಡೆತನದಲ್ಲಿದ್ದನು. ಒಬ್ಬ ಗುಲಾಮನು ಶಿಸ್ತಿನಿಂದ ದುಡಿಯುವಂತೆ ಮಾಡಲು ಈ “ಯಜಮಾನ” ಅವನನ್ನು ಹೊಡೆಯಬಹುದಿತ್ತು ಅಥವಾ ಯಾವ ರೀತಿಯಲ್ಲಿ ಬೇಕಾದರೂ ಶಿಕ್ಷಿಸಬಹುದಿತ್ತು. ಅದೇ ರೀತಿಯಲ್ಲಿ, ಊಳಿಗಮಾನ್ಯ ಪದ್ಧತಿಯ ಅಡಿಯಲ್ಲಿ, ಕೆಲಸದ-ಪ್ರೇರಣೆಯನ್ನು ಮತ್ತು ಕೆಲಸದ-ಶಿಸ್ತನ್ನು ತರುವ ಸಾಧನವಾಗಿ ಊಳಿಗಮಾನ್ಯ ಯಜಮಾನನು(feudal lord) ಚಾಟಿಯನ್ನು ಬಳಸುತ್ತಿದ್ದ.
ಆದರೆ ಬಂಡವಾಳಶಾಹಿಯ ಅಡಿಯಲ್ಲಿ, ಕೊನೆಯಪಕ್ಷ ಒಂದು ಆದರ್ಶವಾಗಿಯೇ ಆಗಲಿ, ಕಾರ್ಮಿಕರ ಮೇಲೆ ದೈಹಿಕ ಬಲವನ್ನು ಬಳಸುವ ಅವಕಾಶವಿಲ್ಲ. ಹಾಗಾದರೆ, ಕೆಲಸಗಾರರು ಶಿಸ್ತುಬದ್ಧ ರೀತಿಯಲ್ಲಿ ದುಡಿಯುವಂತೆ ಪ್ರೇರೇಪಿಸಲ್ಪಡುತ್ತಾರಾದರೂ ಹೇಗೆ? ಉತ್ತರವೆಂದರೆ, ಅವರು ಹಾಗೆ ಮಾಡದಿದ್ದರೆ, “ವಜಾ” ಆಗುತ್ತಾರೆ. ಅಂದರೆ, ಅವರನ್ನು ವ್ಯವಸ್ಥೆಯಿಂದ ಹೊರಹಾಕಲಾಗುತ್ತದೆ ಮತ್ತು ಅದನ್ನು ಕಾರ್ಯಗತಗೊಳಿಸಲು ವ್ಯವಸ್ಥೆಯು ಒಂದು “ಹೊರಭಾಗ”ವನ್ನು ಹೊಂದಿರುತ್ತದೆ.
ಒಳಗು + ಹೊರಗು
ಈ “ಹೊರಭಾಗ”ವು ಎರಡು ಇತರ ನಿರ್ಣಾಯಕ ಉದ್ದೇಶಗಳಿಂದಾಗಿಯೂ ಮುಖ್ಯವಾಗುತ್ತದೆ: ಮೊದಲನೆಯದು, ಶ್ರಮ ಉತ್ಪಾದಕತೆಗೆ ಹೋಲಿಸಿದರೆ ನಿಜ ಕೂಲಿಯನ್ನು ಅಂಕೆಯಲ್ಲಿಡಲಾಗಿದೆ ಎಂಬುದನ್ನು ಖಚಿತಪಡಿಸಲು. ಇದರಿಂದ ಬಂಡವಾಳಗಾರನು ಮಿಗುತಾಯ ಮೌಲ್ಯವನ್ನು ಸತತವಾಗಿ ತನ್ನದಾಗಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಎರಡನೆಯದು, ಹಣ ಕೂಲಿಯನ್ನು ತನ್ನ ಹಕ್ಕಾಗಿ ಕೇಳುವುದನ್ನು ಅಂಕೆಯಲ್ಲಿಡಲಾಗಿದೆ ಎಂಬುದನ್ನು ಖಚಿತಪಡಿಸಲು. ಇದು ಹಣ-ಮೌಲ್ಯದ ಸ್ಥಿರತೆಗೆ ಆಧಾರವಾಗಿದೆ. ಆದ್ದರಿಂದ, ಬಂಡವಾಳಶಾಹಿ ಉತ್ಪಾದನಾ ವಿಧಾನದ ಒಂದು “ಒಳ ಭಾಗ” ಮತ್ತು ಒಂದು “ಹೊರಭಾಗ”ವನ್ನು ಒಳಗೊಂಡಿರುವ ಪೂರ್ಣತೆ ಎಂದು ವ್ಯಾಖ್ಯಾನಿಸಬೇಕು. ಈ “ಹೊರಭಾಗ”ವು ವ್ಯವಸ್ಥೆಯ ತಾರ್ಕಿಕ ಘಟಕವಾಗಿದೆ. ಇದು ಇಡೀ ವ್ಯವಸ್ಥೆಯನ್ನು ನಿರೂಪಿಸುವಲ್ಲಿ “ಒಳಭಾಗ”ದಷ್ಟೇ ಅವಶ್ಯವಾದುದು.
ಮಾರ್ಕ್ಸ್‌ವಾದ ಮಾತ್ರವೇ ಈ ಸಂಗತಿಯನ್ನು ಗ್ರಹಿಸುತ್ತದೆ. ಮಾರ್ಕ್ಸ್‌ವಾದವನ್ನು ಹೊರತುಪಡಿಸಿದರೆ ಅರ್ಥಶಾಸ್ತ್ರದ ಬೇರೆ ಯಾವ ಧಾರೆಗಳೂ ಈ ಸಂಗತಿಯನ್ನು ಗ್ರಹಿಸುವುದಿಲ್ಲ. ಉದಾಹರಣೆಗೆ, ಅರ್ಥಶಾಸ್ತ್ರದ ಅತ್ಯಂತ ಸಾಮಾನ್ಯ ಧಾರೆ ಎನಿಸಿದ ವಾಲ್ರೇಷಿಯನ್ ಅರ್ಥಶಾಸ್ತ್ರವು, ಮಾರುಕಟ್ಟೆಯಲ್ಲಿ ಒಂದು ಸಮತೋಲನ ಏರ್ಪಡುವುದನ್ನು ಕಾಣುತ್ತದೆ. ಅಂದರೆ, ಕಾರ್ಮಿಕ ಮಾರುಕಟ್ಟೆಯೂ ಸೇರಿದಂತೆ ಎಲ್ಲ ಮಾರುಕಟ್ಟೆಗಳಲ್ಲೂ ಸಹ, ಬೇಡಿಕೆ ಮತ್ತು ಪೂರೈಕೆಗಳು ಸಮನಾಗಿರುತ್ತವೆ ಎಂದಾಗುತ್ತದೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಅದರ ಪ್ರಕಾರ ಈ ವ್ಯವಸ್ಥೆಯು ಪ್ರತಿ ಅವಧಿಯಲ್ಲೂ ಪೂರ್ಣ ಉದ್ಯೋಗವನ್ನು ಹೊಂದಿರುತ್ತದೆ; ಅಲ್ಲಿ ಕಾರ್ಮಿಕ ಮೀಸಲು ಪಡೆ ಎಂಬುದು ಇಲ್ಲ; ಅಲ್ಲಿ ಅನೈಚ್ಛಿಕ ನಿರುದ್ಯೋಗ ಎಂಬುದು ಇಲ್ಲ; ಆದ್ದರಿಂದ, ಅಲ್ಲಿ “ಹೊರಗಿನದು” ಎಂಬುದೂ ಇಲ್ಲ; ಅಲ್ಲಿ “ಒಳಗಿನದು” ಮಾತ್ರ ಇದೆ. ಮತ್ತು, ಈ ವ್ಯವಸ್ಥೆಯಲ್ಲಿ ʼಕೆಲಸದ-ಪ್ರೇರಣೆʼ ಮತ್ತು ʼಕೆಲಸದ-ಶಿಸ್ತʼನ್ನು ಖಚಿತಪಡಿಸುವ ಅಂಶ ಏನೆಂದು ವಿವರಿಸಲಾಗಿಲ್ಲ. ಅಂದರೆ, ಉತ್ಪಾದನೆ ಎಂಬುದೇ ಇಲ್ಲ ಎಂದಾಗುತ್ತದೆ. ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರಲ್ಲಿ ಪ್ರಮುಖರೆನಿಸಿದ್ದ ಡೇವಿಡ್ ರಿಕಾರ್ಡೊ ಒಬ್ಬ “ಶ್ರೇಷ್ಠ ಉತ್ಪಾದನಾ ಸಿದ್ಧಾಂತಿ” ಎಂದು ಮಾರ್ಕ್ಸ್ ಬಹಳ ಔದಾರ್ಯಪೂರ್ಣವಾಗಿ ಒಮ್ಮೆ ಬಣ್ಣಿಸಿದ್ದರೂ ಕೂಡ, ಸಾಂಪ್ರದಾಯಕ ರಾಜಕೀಯ ಅರ್ಥಶಾಸ್ತ್ರ ಕೂಡ ಉತ್ಪಾದನೆಯನ್ನು ವಿವರಿಸಲಾರದು. ಏಕೆಂದರೆ ಕೆಲಸದ-ಪ್ರೇರಣೆ ಮತ್ತು ಕೆಲಸದ-ಶಿಸ್ತನ್ನು ವಿವರಿಸುವುದು ಅದಕ್ಕೆ ಸಾಧ್ಯವಿಲ್ಲ.
ಇದು ಬಂಡವಾಳಶಾಹಿ ಮತ್ತು ಸಮಾಜವಾದದ ನಡುವಿನ ವ್ಯತ್ಯಾಸದ ಮೂಲಕ್ಕೆ ನಮ್ಮನ್ನು ತರುತ್ತದೆ: ಬಂಡವಾಳಶಾಹಿಯು ಜನರನ್ನು ದುಡಿಯುವಂತೆ ಮಾಡುವಲ್ಲಿ ದೈಹಿಕ ದಬ್ಬಾಳಿಕೆಯನ್ನು ಅವಲಂಬಿಸಿಲ್ಲದಿದ್ದರೂ, ಅದು ಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಅಥವಾ ಅವರನ್ನು “ಒಳಗಿ”ನಿಂದ “ಹೊರಗೆ” ಎಸೆಯುವ “ವಜಾ” ಎಂಬ ಒಂದು ಬಲವಂತವನ್ನು ಅವಲಂಬಿಸಿದೆ. ಆದರೆ, ಸಮಾಜವಾದವು “ಹೊರಗು” ಎಂಬುದನ್ನೇ ಹೊಂದಿಲ್ಲ. ಸಮಾಜವಾದದ ಅಡಿಯಲ್ಲಿ ಜನರು ಯಾವುದೇ ಬಲವಂತದಿಂದ ಕೆಲಸ ಮಾಡುವುದಿಲ್ಲ. ಆದರೆ, ಅವರು ಸೇರಿರುವ ಸಮುದಾಯವು ಉತ್ಪಾದನಾ ಸಾಧನಗಳ ಒಡೆತನವನ್ನು ಹೊಂದಿರುವುದರಿಂದ, ಆ ಸಮುದಾಯದ ಪ್ರಯೋಜನಕ್ಕಾಗಿ ಜನರು ಕೆಲಸ ಮಾಡುತ್ತಾರೆ. ಅಂತಹ ಒಂದು ಸಮುದಾಯದ ರಚನೆಗಾಗಿ ಉತ್ಪಾದನಾ ಸಾಧನಗಳ ಸಾಮಾಜಿಕ ಒಡೆತನ ಅತ್ಯಗತ್ಯವಾಗುತ್ತದೆ. ಸ್ವತಃ ಅದುವೇ (ಅಂದರೆ, ಸಾಮಾಜಿಕ ಒಡೆತನವೇ) ಸಮಾಜವಾದವನ್ನು ನಿರೂಪಿಸುವುದಿಲ್ಲ. ಆದರೆ, ಅದು ಸಮಾಜವಾದವು ಅಸ್ತಿತ್ವ ತಳೆಯಲು ಅಗತ್ಯವಾದ ಒಂದು ಷರತ್ತು ಆಗುತ್ತದೆ.
ಬಂಡವಾಳಶಾಹಿಯು ಜನರನ್ನು ದುಡಿಯುವಂತೆ ಮಾಡುವಲ್ಲಿ ದೈಹಿಕ ದಬ್ಬಾಳಿಕೆಯನ್ನು ಅವಲಂಬಿಸಿಲ್ಲದಿದ್ದರೂ, ಅದು ಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಅಥವಾ ಅವರನ್ನು “ಒಳಗಿ”ನಿಂದ “ಹೊರಗೆ” ಎಸೆಯುವ “ವಜಾ” ಎಂಬ ಒಂದು ಬಲವಂತವನ್ನು ಅವಲಂಬಿಸಿದೆ. ಆದರೆ, ಸಮಾಜವಾದವು “ಹೊರಗು” ಎಂಬುದನ್ನೇ ಹೊಂದಿಲ್ಲ. ಸಮಾಜವಾದದ ಅಡಿಯಲ್ಲಿ ಜನರು ಯಾವುದೇ ಬಲವಂತದಿಂದ ಕೆಲಸ ಮಾಡುವುದಿಲ್ಲ. ಆದರೆ, ಅವರು ಸೇರಿರುವ ಸಮುದಾಯವು ಉತ್ಪಾದನಾ ಸಾಧನಗಳ ಒಡೆತನವನ್ನು ಹೊಂದಿರುವುದರಿಂದ, ಆ ಸಮುದಾಯದ ಪ್ರಯೋಜನಕ್ಕಾಗಿ ಜನರು ಕೆಲಸ ಮಾಡುತ್ತಾರೆ. ಅಂತಹ ಒಂದು ಸಮುದಾಯದ ರಚನೆಗಾಗಿ ಉತ್ಪಾದನಾ ಸಾಧನಗಳ ಸಾಮಾಜಿಕ ಒಡೆತನ ಅತ್ಯಗತ್ಯವಾಗುತ್ತದೆ.
ದಂಡಿಸುವ ಮತ್ತು ದಂಡಿಸದ ವ್ಯವಸ್ಥೆಗಳು
ಬಂಡವಾಳಶಾಹಿ ಮತ್ತು ಸಮಾಜವಾದದ ನಡುವೆ ಇರುವ ಈ ಮೂಲಭೂತ ವ್ಯತ್ಯಾಸದಿಂದ, ಮತ್ತೊಂದು ಪ್ರಮುಖ ವ್ಯತ್ಯಾಸವು ಅದನ್ನು ಅನುಸರಿಸುತ್ತದೆ. ಬಂಡವಾಳಶಾಹಿಯು ಒಂದು ದಂಡಿಸುವ ವ್ಯವಸ್ಥೆಯಾಗಿರುತ್ತದೆ ಮತ್ತು ಇರಬೇಕಾಗುತ್ತದೆ. ಏಕೆಂದರೆ ಅದು ಹಿಂದೆ ಬೀಳುವವರನ್ನು ದಂಡಿಸುವ ವಿಧಾನವನ್ನು ಆಧರಿಸಿದ ವ್ಯವಸ್ಥೆಯಾಗಿದೆ. ಆದರೆ, ಸಹಕಾರವನ್ನು ಒಂದು ಸಾರಭೂತ ಅಂಶವಾಗಿ ಹೊಂದಿರುವ ಸಮಾಜವಾದವು ದಂಡಿಸುವ ವ್ಯವಸ್ಥೆಯಾಗುವುದು ಸಾಧ್ಯವಿಲ್ಲ. ಈ ದಂಡಿಸುವ ಅಂಶವು ಬಂಡವಾಳಶಾಹಿ ವ್ಯವಸ್ಥೆಯ ಕಾರ್ಯವಿಧಾನದಲ್ಲಿ ಬಲವಾಗಿ ಬೇರೂರಿದೆ.
ಇದು ಯಾರೊಬ್ಬರ ಹೊಲಸು ಸ್ವಭಾವದ ಪರಿಣಾಮವಾಗಿ ಬಂದ ಅಂಶವಲ್ಲ. ಬಂಡವಾಳವನ್ನು ಅಪಾರವಾಗಿ ಶೇಖರಿಸದ ಕಾರಣದಿಂದ ಹೊಸ ಹೊಸ ಪ್ರಕ್ರಿಯೆಗಳು ಮತ್ತು ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಅನುಕೂಲವಿಲ್ಲದ ಬಂಡವಾಳಗಾರರು ವ್ಯವಸ್ಥೆಯಲ್ಲಿ ತಮ್ಮ ಸ್ಥಾನ-ಮಾನವನ್ನು ಕಳೆದುಕೊಳ್ಳುವ ಮೂಲಕ ಶಿಕ್ಷೆಗೆ ಗುರಿಯಾಗುತ್ತಾರೆ. ಅವರ ಸ್ಥಾನವನ್ನು ಬಂಡವಾಳವನ್ನು ಅಪಾರವಾಗಿ ಶೇಖರಿಸುವ ಮತ್ತು ಹೊಸ ತಂತ್ರಜ್ಞಾನವನ್ನು ಬಹಳವಾಗಿ ಮತ್ತು ವೇಗವಾಗಿ ಪರಿಚಯಿಸುವ ಬಂಡವಾಳಗಾರರು ಆಕ್ರಮಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಅವರು ದೊಡ್ಡ ಬಂಡವಾಳಗಾರರೇ ಆಗಿರುತ್ತಾರೆ. ಈ ವಿದ್ಯಮಾನವನ್ನು ಮಾರ್ಕ್ಸ್ ಬಂಡವಾಳದ “ಕೇಂದ್ರೀಕರಣ” ಎಂದರು. ತಮ್ಮ ತೃಪ್ತಿಗೆ ತಕ್ಕನಾಗಿ ಕಾರ್ಯನಿರ್ವಹಿಸದ ಕಾರ್ಮಿಕರನ್ನು ಬಂಡವಾಳಗಾರರು ವಜಾ ಮಾಡುತ್ತಾರೆ. ಈ ಮೂಲಕ ಕಾರ್ಮಿಕರು ವ್ಯವಸ್ಥೆಯೊಳಗೆ ತಮ್ಮ ಸ್ಥಾನ-ಮಾನವನ್ನು ಕಳೆದುಕೊಂಡು ನಿರುದ್ಯೋಗಿಗಳ ಸಾಲಿಗೆ ಎಸೆಯಲ್ಪಡು ಶಿಕ್ಷೆಗೆ ಒಳಗಾಗುತ್ತಾರೆ. ಈ ರೀತಿಯಲ್ಲಿ ವ್ಯವಸ್ಥೆಯ “ಹೊರಗು” ಎಂಬುದು ಅಥವಾ ಕಾರ್ಮಿಕರ ಮೀಸಲು ಪಡೆ ಎಂಬುದು ಶಿಕ್ಷೆಗೆ ಒಳಗಾದ ಕಾರ್ಮಿಕರಿಗೆ ಒಂದು ಕಸದ ಬಟ್ಟಿಯಾಗುವ ಸಮಯದಲ್ಲೇ ಅದು ಕಾರ್ಮಿಕರ ಮೇಲೆ ಬಂಡವಾಳದ ಶಕ್ತಿಯನ್ನು ಪ್ರತಿಪಾದಿಸುವ ಕಾರ್ಯವಿಧಾನವೂ ಹೌದು.
ಇದನ್ನೂ ನೋಡಿ: ‘ಶ್ರಮಿಕರ ದೈವ – ಯಕ್ಷಗಾನ ಮತ್ತು ಅಳವು ಅರಿಯದ ಭಾಷೆ: ತುಳು ಮತ್ತು ಬ್ಯಾರಿ’ | ಡಾ. ಗಣನಾಥ ಎಕ್ಕಾರು
ಇದನ್ನನುಸರಿಸಿ ತಕ್ಷಣವೇ ಎರಡು ತೀರ್ಮಾನಗಳು ಕಾಣುತ್ತವೆ: ಒಂದು, ಜನತೆಯ ಒಟ್ಟು ಸ್ಥಿತಿ-ಗತಿಗಳನ್ನು ಸುಧಾರಿಸುವ “ಕಲ್ಯಾಣ ಬಂಡವಾಳಶಾಹಿ”ಯತ್ತ ಸಾಗುವ ಯಾವುದೇ ನಡೆಯು ಅದೇ ಸಮಯದಲ್ಲಿ ವ್ಯವಸ್ಥೆಯ ದಂಡಿಸುವ ಅಧಿಕಾರದ ಇಳಿಕೆ, ಅದರಿಂದಾಗಿ ಕಾರ್ಮಿಕರ ಮೇಲೆ ಬಂಡವಾಳವು ಹೊಂದಿರುವ ಅಧಿಕಾರದ ಇಳಿಕೆಯೂ ಆಗುತ್ತದೆ. ಈ ಅಂಶವನ್ನು ಕೀನ್ಸ್ ಅವರು ಗಮನಿಸದೇ ಹೋದರು, ಏಕೆಂದರೆ ವಾಲ್ರೇಷಿಯನ್ನರು ಕಲ್ಪಿಸಿಕೊಂಡ ಬಂಡವಾಳಶಾಹಿ ವ್ಯವಸ್ಥೆಯ ನ್ಯೂನತೆಗಳನ್ನು ಅವರು ಗ್ರಹಿಸಿದ್ದರಾದರೂ ಸಹ, ಈ ವ್ಯವಸ್ಥೆಯನ್ನು ಅವರು ವಿಶಾಲ ವಾಲ್ರೇಷಿಯನ್ ಪರಿಭಾಷೆಯಲ್ಲೇ ಕಂಡರು. ಅಂದರೆ, ಅದು ಒಂದು “ಒಳಗನ್ನು” ಮತ್ತು ಒಂದು “ಹೊರಗನ್ನು” ಹೊಂದಿದೆ ಎಂಬುದಾಗಿ ಅಲ್ಲ, ಬದಲಿಗೆ ಅದು “ಒಳಗನ್ನು” ಮಾತ್ರ ಹೊಂದಿದೆ ಎಂಬ ಅರ್ಥದಲ್ಲಿ ಕಂಡರು.
ಕೀನ್ಸ್ ಮಾದರಿಯ ಕ್ರಮಗಳಿಗೆ ಬಂಡವಾಳದ ಆಕ್ಷೇಪಣೆಯು ವ್ಯವಸ್ಥೆಯ ಕಾರ್ಯನಿರ್ವಹಣೆಯ ತಿಳುವಳಿಕೆಯ ಕೊರತೆಯಿಂದಲೇ ಉದ್ಭವಿಸಿದೆ ಮತ್ತು ಉತ್ತಮ ತಿಳುವಳಿಕೆಯು ಜಿನುಗುತ್ತಿದ್ದಂತೆಯೇ ಈ ಆಕ್ಷೇಪಣೆ ಕಾಲ ಕ್ರಮೇಣ ಮರೆಯಾಗುತ್ತದೆ ಎಂಬುದಾಗಿ ಕೀನ್ಸ್ ಕಂಡಿದ್ದರೂ, ಬಂಡವಾಳದ ಆಕ್ಷೇಪಣೆಯು ಒಂದು ಭದ್ರ ನೆಲೆಯ ಮೇಲೆ ನಿಂತಿತ್ತು. ಬಂಡವಾಳಶಾಹಿಯ ಅಡಿಯಲ್ಲಿ ಪೂರ್ಣ ಉದ್ಯೋಗವನ್ನು ಸಾಧಿಸುವುದು ಅಸಾಧ್ಯ ಮಾತ್ರವಲ್ಲ, ಅದರತ್ತ ಸಾಗುವ ಯಾವುದೇ ನಡೆಯು ಕಾರ್ಮಿಕರ ಮೇಲೆ ಬಂಡವಾಳವು ಹೊಂದಿರುವ ಅಧಿಕಾರವನ್ನು ದುರ್ಬಲಗೊಳಿಸುವ ಪ್ರವೃತ್ತಿಯನ್ನೂ ಹೊಂದಿರುತ್ತದೆ (ಇದರರ್ಥ ಅಂತಹ ಒಂದು ನಡೆಯನ್ನು ಬಂಡವಾಳವು ಕೆಲವು ಸಂದರ್ಭಗಳಲ್ಲಿ ಒಪ್ಪುವುದಿಲ್ಲ ಎಂದೇನೂ ಅಲ್ಲ). ಬಂಡವಾಳಶಾಹಿಯನ್ನು ಸ್ಥಿರಗೊಳಿಸುವ ಕೀನೀಷಿಯನ್ ಕ್ರಮಗಳು ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಕಳಕೊಂಡಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. “ಸುಧಾರಿತ ಬಂಡವಾಳಶಾಹಿ” ಅಥವಾ “ಕಲ್ಯಾಣ ಬಂಡವಾಳಶಾಹಿ” ಎಂಬುದೊಂದು ಭ್ರಮೆ, ಏಕೆಂದರೆ ಬಂಡವಾಳಶಾಹಿಯು ಒಂದು ದಂಡಿಸುವ ಒಂದು ವ್ಯವಸ್ಥೆ ಎಂಬ ಅಂಶವನ್ನು ಅದು ನಿರ್ಲಕ್ಷಿಸುತ್ತದೆ.
“ಸುಧಾರಿತ ಬಂಡವಾಳಶಾಹಿ” ಅಥವಾ “ಕಲ್ಯಾಣ ಬಂಡವಾಳಶಾಹಿ” ಎಂಬುದೊಂದು ಭ್ರಮೆ, ಏಕೆಂದರೆ ಬಂಡವಾಳಶಾಹಿಯು ಒಂದು ದಂಡಿಸುವ ಒಂದು ವ್ಯವಸ್ಥೆ ಎಂಬ ಅಂಶವನ್ನು ಅದು ನಿರ್ಲಕ್ಷಿಸುತ್ತದೆ. ಸ್ವಭಾವತಃ ಸಮಾಜವಾದವು ದಂಡಿಸುವ ವ್ಯವಸ್ಥೆಯಲ್ಲದ ಕಾರಣ, ಪೂರ್ಣ ಉದ್ಯೋಗ ಅದರ ಲಕ್ಷಣವಾಗಿರಬೇಕಾಗುತ್ತದೆ. ದಂಡಿಸುವುದು ಸಮಾಜವಾದದ ಲಕ್ಷಣವಲ್ಲ. ಬದಲಿಗೆ ಅದು ಸಮಾಜವಾದಕ್ಕೆ ವಿರುದ್ಧವಾದದ್ದೇ.
ಎರಡನೆಯದು, ಸ್ವಭಾವತಃ ಸಮಾಜವಾದವು ದಂಡಿಸುವ ವ್ಯವಸ್ಥೆಯಲ್ಲದ ಕಾರಣ, ಪೂರ್ಣ ಉದ್ಯೋಗ ಅದರ ಲಕ್ಷಣವಾಗಿರಬೇಕಾಗುತ್ತದೆ. ಪೂರ್ಣ ಉದ್ಯೋಗದ ಕೊರತೆಯ ಅರ್ಥದಲ್ಲಾಗಲಿ ಅಥವಾ ಕೆಲಸದ ಪ್ರೇರಣೆಯನ್ನು ಮತ್ತು ಕೆಲಸದ ಶಿಸ್ತನ್ನು ತರುವಲ್ಲಿ ಹೆಚ್ಚು ನೇರ ಬಲಾತ್ಕಾರದ ವಿಧಾನಗಳನ್ನು ಬಳಸುವ ಅರ್ಥದಲ್ಲಾಗಲಿ ಅದು ಒಂದು ದಂಡಿಸುವ ವ್ಯವಸ್ಥೆಯಾಗುವ ಸಂದರ್ಭವು ಅದು ಸ್ಥಾಪನೆಯಾಗುವ ಅವಧಿಯ ಒಂದು ಪರಿವರ್ತನಾ ವಿದ್ಯಮಾನವಾಗಿರಬಹುದೇ ವಿನಃ, ಅದು ಸಮಾಜವಾದದ ಲಕ್ಷಣವಲ್ಲ. ಹಾಗೆ ನೋಡಿದರೆ, ಅದು ಸಮಾಜವಾದಕ್ಕೆ ವಿರುದ್ಧವಾದದ್ದೇ.
ಆಧುನಿಕ ಕಾಲಮಾನದಲ್ಲಿ ಪೂರ್ಣ ಉದ್ಯೋಗದ ಗುಣಲಕ್ಷಣಗಳನ್ನು ಹೊಂದಿದ್ದ ಅರ್ಥವ್ಯವಸ್ಥೆಗಳೆಂದರೆ ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಸಮಾಜವಾದಿ ಅರ್ಥವ್ಯವಸ್ಥೆಗಳು ಮಾತ್ರವೇ ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಸಮಾಜವಾದವು ಅಲ್ಲಿ ಪತನವಾದ ನಂತರ, ಆ ಸಮಾಜಗಳಲ್ಲಿ ವ್ಯಾಪಕ ನಿರುದ್ಯೋಗದ ಪರಿಸ್ಥಿತಿ ಉಂಟಾಗಿದೆ. ಆದರೆ, ಸಮಾಜವಾದವು ಅಸ್ತಿತ್ವಕ್ಕೆ ಬರುವ ಸಮಯದಲ್ಲಿನ ವಿಚಲನೆಗಳು ಮತ್ತು ವಿಕೃತಿಗಳು ಏನೇ ಇರಲಿ, ಅವುಗಳನ್ನೇ ವ್ಯವಸ್ಥೆಯ ಶಾಶ್ವತ ಗುಣಲಕ್ಷಣಗಳೆಂದು ಭಜಿಸುವುದು ಒಂದು ಗಂಭೀರ ತಪ್ಪಾಗುತ್ತದೆ.

