ಪೂಂಚ್ ಪ್ರವಾಹ ಪ್ರದೇಶಗಳಿಗೆ ಓಮರ್ ಅಬ್ದುಲ್ಲಾ ಭೇಟಿ: ಹಾನಿ ಪರಿಶೀಲನೆ

ಜಮ್ಮು: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಳೆದ ತಿಂಗಳ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಬಾಧಿತ ಪ್ರದೇಶಗಳ ಸ್ಥಿತಿಯನ್ನು ಪರಿಶೀಲಿಸಲು ಆಗಸ್ಟ್‌ 5ರಂದು ಪೂಂಚ್ ಜಿಲ್ಲೆಗೆ ಭೇಟಿ ನೀಡಿದರು. ಈ ಅವಾಂತರದಲ್ಲಿ 16 ಮಂದಿ ಮೃತಪಟ್ಟಿದ್ದು, ಇನ್ನೂ ಆರು ಮಂದಿ ಕಾಣೆಯಾಗಿದ್ದಾರೆ.

ಮುಖ್ಯಮಂತ್ರಿ ಕಚೇರಿ ಪ್ರಕಟಣೆ ಪ್ರಕಾರ, ಪೀಡಿತ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವುದರ ಜೊತೆಗೆ, ಪರಿಹಾರ, ಪುನರ್ವಸತಿ ಮತ್ತು ಮೂಲಸೌಕರ್ಯ ಪುನರ್‌ನಿರ್ಮಾಣ ಕಾರ್ಯಗಳನ್ನು ಜಿಲ್ಲಾ ಆಡಳಿತದೊಂದಿಗೆ ಪರಿಶೀಲಿಸಲಿದ್ದಾರೆ.

ಒಮರ್ ಅಬ್ದುಲ್ಲಾ ಅವರು ಇತಿಹಾಸ ಪ್ರಸಿದ್ಧ ಮುಘಲ್ ರಸ್ತೆಯ ಮೂಲಕ ಪೂಂಚ್‌ಗೆ ತೆರಳಿದರು. ಪೀರ್ ಕಿ ಗಲಿ ಬಳಿ ಜಲ್ ಶಕ್ತಿ ಸಚಿವ ಜಾವೇದ್ ಅಹ್ಮದ್ ರಾಣಾ ಹಾಗೂ ಸುರಂಕೋಟ್ ಶಾಸಕ ಚೌಧರಿ ಮೊಹಮ್ಮದ್ ಅಕ್ರಮ್ ಅವರು ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹಿರಿಯ ನಾಗರಿಕ ಹಾಗೂ ಪೊಲೀಸ್ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.

ಇದನ್ನೂ ಓದಿ: ರೈತ ಕಲ್ಯಾಣ ಯೋಜನೆಯಲ್ಲಿ ಬದಲಾವಣೆ: ಕುಟುಂಬ ಆಧಾರಿತ ಮಾದರಿಗೆ ಸಾಗುವ ಸರ್ಕಾರ

ಜುಲೈ 19ರಂದು ಸುರಂಕೋಟ್ ಪ್ರದೇಶವು ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದ್ದು, ಹೆಚ್ಚಿನ ಸಾವುಗಳು ಇಲ್ಲಿ ಸಂಭವಿಸಿವೆ. ಭಾರೀ ಮಳೆಯ ಪರಿಣಾಮವಾಗಿ ಮೋಡ ಸಿಡಿತ, ಅಕಸ್ಮಿಕ ಪ್ರವಾಹ ಹಾಗೂ ಭೂಕುಸಿತಗಳು ಸಂಭವಿಸಿ ಜಿಲ್ಲೆಯಾದ್ಯಂತ ಭಾರೀ ಹಾನಿ ಉಂಟಾಗಿದೆ. ಅನೇಕ ಮನೆಗಳು ಮತ್ತು ವಾಹನಗಳು ಕೊಚ್ಚಿಕೊಂಡು ಹೋಗಿದ್ದು, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ.

ಮುಖ್ಯಮಂತ್ರಿ ತಮ್ಮ ಭೇಟಿ ವೇಳೆ ಮೃತರ ಕುಟುಂಬಗಳನ್ನು ಭೇಟಿ ಮಾಡುವುದರ ಜೊತೆಗೆ, ಪೀಡಿತ ಪ್ರದೇಶಗಳನ್ನು ಪರಿಶೀಲಿಸಿ ಹಾನಿಯ ಪ್ರಮಾಣವನ್ನು ಅವಲೋಕಿಸಲಿದ್ದಾರೆ.

ಈ ಪ್ರಕೃತಿ ವಿಕೋಪದಿಂದ ಮನೆಗಳು, ರಸ್ತೆ, ಸೇತುವೆಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದ್ದು, ಅನೇಕ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಮತ್ತು ಅಗತ್ಯ ಸೇವೆಗಳು ವ್ಯತ್ಯಯಗೊಂಡಿವೆ. ನೂರಾರು ಕುಟುಂಬಗಳು ಪರಿಣಾಮಕ್ಕೊಳಗಾಗಿದ್ದು, ಹಲವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಜುಲೈ 19ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದ ಮುಖ್ಯಮಂತ್ರಿ, ಪೂಂಚ್ ಮತ್ತು ಸಮೀಪದ ರಾಜೌರಿ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹6 ಲಕ್ಷ ಪರಿಹಾರ ಘೋಷಿಸಿದ್ದರು. ರಾಜೌರಿ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದು, ಒಬ್ಬರು ಇನ್ನೂ ಕಾಣೆಯಾಗಿದ್ದಾರೆ.

ಮೃತರ ಬಗ್ಗೆ ಶೋಕ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಯಾವುದೇ ಹಣಕಾಸು ನೆರವು ಕುಟುಂಬಗಳ ನಷ್ಟವನ್ನು ಭರಿಸಲು ಸಾಧ್ಯವಿಲ್ಲದಿದ್ದರೂ, ಸರ್ಕಾರ ಸಂಕಷ್ಟದ ಸಮಯದಲ್ಲಿ ಪೀಡಿತರ ಜೊತೆ ನಿಂತಿದೆ ಎಂದು ತಿಳಿಸಿದ್ದಾರೆ.

ಇಂದಿನ ಭೇಟಿಯ ಬಳಿಕ ರಾಜೌರಿ ಜಿಲ್ಲೆಗೆ ಸಹ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ನೋಡಿ: ಕಥೆ ಮೊಗಳ್ಳಿ ಗಣೇಶ್‌ ಅವರನ್ನು ಬೆಳೆಸಿತು; ಮೊಗಳ್ಳಿ ಗಣೇಶ್‌ ಕೂಡ ಕಥೆಯನ್ನು ಬೆಳೆಸಿದರು – ಪ್ರೊ.ನಟರಾಜ್ ಹುಳಿಯಾರ್

Donate Janashakthi Media

Leave a Reply

Your email address will not be published. Required fields are marked *