ಬೆಂಗಳೂರು: ಕೇಂದ್ರ ಉಕ್ಕು ಸಚಿವರಾಗಿ ಕಳೆದ ಎರಡು ವರ್ಷಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿ ಏನು ಸಾಧನೆ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಪ್ರಶ್ನಿಸಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್‌ಎಂಟಿ ಭೂಮಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗದಿರುವುದರಿಂದ ಅದು ಅರಣ್ಯವಾಗಿಯೇ ಉಳಿಯುತ್ತದೆ. ಈ ಭೂಮಿಯ ಮೇಲೆ ಹಕ್ಕು ರಾಜ್ಯ ಸರ್ಕಾರಕ್ಕೇ ಹೊರತು ಎಚ್‌ಎಂಟಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎಚ್‌ಎಂಟಿ ಭೂಮಿಯನ್ನು ರಾಜ್ಯ ಸರ್ಕಾರದ ವಶಕ್ಕೆ ಪಡೆದು, ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್‌ಗಿಂತ ದೊಡ್ಡ ಉದ್ಯಾನ ನಿರ್ಮಿಸಿ ಉತ್ತರ ಬೆಂಗಳೂರಿಗೆ ಶ್ವಾಸತಾಣ ಒದಗಿಸುವ ಉದ್ದೇಶವಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಉತ್ತರ ನೀಡುತ್ತಿದ್ದೇನೆ ಎಂದರು.
ಇದನ್ನೂ ಓದಿ: ಭೋಪಾಲ್| ವಕ್ಫ್ ಮಂಡಳಿಗೆ ಇಬ್ಬರು ಮುಸ್ಲಿಮೇತರರ ನೇಮಕ ವಿರೋಧಿಸಿ ಪ್ರತಿಭಟನೆ
ಈ ವಿಷಯ ನ್ಯಾಯಾಲಯದಲ್ಲಿರುವುದಾಗಿ ಕುಮಾರಸ್ವಾಮಿ ಹೇಳಿರುವುದರ ಜೊತೆಗೆ ಸರ್ಕಾರಕ್ಕಿಲ್ಲ ಹಕ್ಕು ಎಂದು ಹೇಳುವುದು ಸರಿಯಲ್ಲ. ಈ ಬಗ್ಗೆ ತೀರ್ಪು ನೀಡಬೇಕಾದದ್ದು ನ್ಯಾಯಾಲಯವೇ ಹೊರತು ರಾಜಕಾರಣಿಗಳಲ್ಲ ಎಂದು ಖಂಡ್ರೆ ಟೀಕಿಸಿದರು.
ಸುಪ್ರೀಂಕೋರ್ಟ್ ತೀರ್ಪುಗಳ ಪ್ರಕಾರ, ಒಮ್ಮೆ ಅರಣ್ಯ ಎಂದು ಘೋಷಿತವಾದ ಭೂಮಿ ಕಾನೂನುಬದ್ಧವಾಗಿ ಪರಿವರ್ತನೆ ಆಗದಿದ್ದರೆ ಅರಣ್ಯವಾಗಿಯೇ ಉಳಿಯುತ್ತದೆ. ಪರಿಸರದ ಹಕ್ಕುಗಳು ಭೂ ಒಡೆತನಕ್ಕಿಂತ ಮೇಲು ಎಂಬುದನ್ನೂ ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು ಹೇಳಿದರು.
ಬೆಂಗಳೂರು ನಗರ ಡಿಸಿಎಫ್ ನೀಡಿರುವುದು ನೋಟಿಸ್ ಅಲ್ಲ, ಅರೆ ನ್ಯಾಯಿಕ ಪ್ರಾಧಿಕಾರದ ಆದೇಶವಾಗಿದೆ. ಈ ಬಗ್ಗೆ ತಿಳುವಳಿಕೆ ಇಲ್ಲದೆ ಹೇಳಿಕೆ ನೀಡಿರುವುದು ದುಃಖಕರ ಎಂದು ವ್ಯಂಗ್ಯವಾಡಿದರು.
ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64ಎ ಅಡಿ ಒತ್ತುವರಿ ತೆರವು ಪ್ರಕ್ರಿಯೆ ನಡೆಯುತ್ತಿದ್ದು, ದಾಖಲೆ ಸಲ್ಲಿಸಲು ಅವಕಾಶ ನೀಡಿದರೂ ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ. ಇದಕ್ಕೆ ತಕರಾರು ಇದ್ದರೆ ಕಾನೂನುಬದ್ಧವಾಗಿ ಮೇಲ್ಮನವಿ ಸಲ್ಲಿಸಬಹುದು ಎಂದರು.
ಎಚ್‌ಎಂಟಿ ಭೂಮಿಯನ್ನು ಅರಣ್ಯ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿರುವುದಾಗಿ 2018ರ ಪತ್ರವ್ಯವಹಾರದ ದಾಖಲೆಗಳನ್ನು ಉಲ್ಲೇಖಿಸಿದರು. ಅರಣ್ಯ ಸಂರಕ್ಷಣಾ ಕಾಯಿದೆ 1980 ಅನ್ವಯ ಈ ಭೂಮಿಗೆ ನೀರಾಕ್ಷೇಪಣಾ ಪತ್ರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ ಎಂದು ಹೇಳಿದರು.
ಎಚ್‌ಎಂಟಿ ತನ್ನ ಕಾರ್ಯಾಚರಣೆ ನಿಲ್ಲಿಸಿದ್ದು, ಸಂಸ್ಥೆಯನ್ನೇ ರದ್ದುಪಡಿಸಲು ಮುಂದಾಗಿದೆ. ಹೀಗಿರುವಾಗ ಭೂಮಿ ಮಾರಾಟ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಇದೇ ವೇಳೆ, ಬಳ್ಳಾರಿ ಜಿಲ್ಲೆಯ ವೇಣಿವೀರಾಪುರದಲ್ಲಿ ಎನ್‌ಎಂಡಿಸಿ ಉಕ್ಕು ಕಾರ್ಖಾನೆ ಸ್ಥಾಪನೆ ವಿಚಾರವನ್ನು ಪ್ರಸ್ತಾಪಿಸಿದ ಖಂಡ್ರೆ, 10 ವರ್ಷ ಕಳೆದರೂ ಯೋಜನೆ ಆರಂಭವಾಗಿಲ್ಲ. ಇದರಿಂದ ಸಾವಿರಾರು ಉದ್ಯೋಗ ಅವಕಾಶಗಳು ಕಳೆದುಹೋಗಿವೆ ಎಂದು ಟೀಕಿಸಿದರು.
“ನೀವು ಕೇಂದ್ರ ಸಚಿವರಾಗಿದ್ದರೂ ಕರ್ನಾಟಕದ ಹಿತಾಸಕ್ತಿಯನ್ನು ಮರೆಯಬಾರದು. ಜಲ, ನೆಲ, ಅರಣ್ಯವನ್ನು ಕಾಪಾಡುವ ಜವಾಬ್ದಾರಿ ಎಲ್ಲರಿಗೂ ಇದೆ” ಎಂದು ಕುಮಾರಸ್ವಾಮಿಗೆ ಸಲಹೆ ನೀಡಿದರು.
ಇದನ್ನೂ ನೋಡಿ: “ವೋಟ್ ಬೇಕಾದಾಗ ನಾವು ಬೇಕು, ವ್ಯಾಪಾರಕ್ಕೆ ಜಾಗ ಕೇಳಿದರೆ ಬೇಡವೇ?” Janashakthi Media
