ಪಾಶ್ಚ್ಯಾತ್ಯರು ಹೊಂದಿರುವ ಸಮೃದ್ಧಿಯು ಪಾಶ್ಚಾತ್ಯ ಕಾರ್ಯಶ್ರದ್ಧೆಯ ಮೂಲಕ ಮಾತ್ರವೇ ಸಾಧಿಸಲ್ಪಟ್ಟ ಒಂದು ಭಿನ್ನ ಮತ್ತು ಸ್ವತಂತ್ರವಾದ ಸ್ಥಿತಿಗತಿಯೇನಲ್ಲ. ಪಾಶ್ಚಾತ್ಯವಲಸಿಗರು ಪಲಾಯನ ಎಲ್ಲಿಗೆಹೋದರೋ ಆ ದೇಶಗಳ ಅರ್ಥವ್ಯವಸ್ಥೆಯನ್ನು ನಾಶಪಡಿಸುವ ಒಂದು ಪ್ರಕ್ರಿಯೆಯ ಮೂಲಕ ಆ ಸಮೃದ್ಧಿಯನ್ನು ಸಾಧಿಸಲಾಗಿದೆ. ಈ ಸಮೃದ್ಧಿಯು ಐತಿಹಾಸಿಕವಾಗಿ ಒಂದು ವಿಭಜಿತ ವಿಶ್ವವನ್ನು ಸೃಷ್ಟಿಸುವ ಮೂಲಕ ಘಟಿಸಿತು. ಪಶ್ಚಿಮದ ಭೌತಿಕ ಸಮೃದ್ಧಿಯ ಮೂಲಾಧಾರವೆಂದು ಭಾವಿಸಲಾದ ನವೀನತೆಯೂ ಈ ವಿಭಜನೆಯ ಮೂಲಕವೇ ಸಂಭವಿಸಿತು. ಮೂರನೇ ಜಗತ್ತಿನ ದೇಶಗಳು ಉತ್ಪಾದಿಸಿದ ಆರ್ಥಿಕ ಮಿಗುತಾಯದ ಒಂದು ಭಾಗವನ್ನು ಮುಂದುವರೆದ ದೇಶಗಳು ಪುಕ್ಕಟೆಯಾಗಿ ಸ್ವಾಹಾ ಮಾಡಿಕೊಳ್ಳುವ ಮೂಲಕ ಭೌತಿಕ ಅಭಿವೃದ್ಧಿ ಪ್ರಕ್ರಿಯೆಯಿಂದ ಅವನ್ನು ಉದ್ದೇಶಪೂರ್ವಕವಾಗಿ ಹೊರಗಿಡುವುದೇ ಈ ವಿಶ್ವ ವಿಭಜನೆಯ ಸಾರಸತ್ವವಾಗಿತ್ತು. ಮುಂಬರುವ ದಿನಗಳಲ್ಲಿ ಅಮೆರಿಕದಿಂದ ನಿರುದ್ಯೋಗವನ್ನು ವಿಶ್ವದ ಇತರ ಭಾಗಗಳಿಗೆ, ವಿಶೇಷವಾಗಿ ಮೂರನೇ ಜಗತ್ತಿಗೆ ರಫ್ತು ಮಾಡಲು ಪ್ರಯತ್ನಿಸುವ ಟ್ರಂಪ್ ಸುಂಕಗಳುಮತ್ತು ಬಂಡವಾಳಶಾಹಿಯ ಚೌಕಟ್ಟಿನೊಳಗೇ ಕೃತಕ ಬುದ್ಧಿಮತ್ತೆಯನ್ನು ತರುತ್ತಿರುವುದು. ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿವೆ.
-ಪ್ರೊ. ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಟೈಮ್ಸ್ ಆಫ್ ಇಂಡಿಯಾ (ನವೆಂಬರ್ 23) ಪತ್ರಿಕೆಯಲ್ಲಿ ಪ್ರಕಟವಾಗಿರುವ ಒಂದು ವರದಿಯ ಪ್ರಕಾರ, “ಪಾಶ್ಚಾತ್ಯ ನಾಗರೀಕತೆ”ಯನ್ನು ಸಂರಕ್ಷಿಸುವುದಕ್ಕಾಗಿ ವಲಸೆಯನ್ನು ನಿರ್ಬಂಧಿಸುವಂತೆ ಅಮೆರಿಕವು ಯುರೋಪಿಯನ್ ದೇಶಗಳನ್ನು ಕೇಳಿದೆ. ತೃತೀಯ ಜಗತ್ತಿನ ಅನೇಕ ಮಂದಿ “ಪಾಶ್ಚಾತ್ಯ ನಾಗರೀಕತೆ” ಎಂಬ ಪದವನ್ನು ಅದು ಅಮೂಲ್ಯವಾದದ್ದು ಮತ್ತು ಸಂರಕ್ಷಣಾ ಯೋಗ್ಯವಾದದ್ದು ಎನ್ನುವ ವಿಶೇಷ ಅರ್ಥದಲ್ಲಿ ಒಂದು ವೇಳೆ ಬಳಸಿದ್ದಾದರೆ ಅದನ್ನು ಹಾಸ್ಯಾಸ್ಪದವೆಂದು ತಿಳಿದುಕೊಳ್ಳುತ್ತಾರೆ. ಕಳೆದ ಕೆಲವು ಶತಮಾನಗಳ ಅವಧಿಯಲ್ಲಿ ಪಾಶ್ಚಾತ್ಯ ಸಾಮ್ರಾಜ್ಯಶಾಹಿ ದೇಶಗಳು ಜಗತ್ತಿನ ಉದ್ದಗಲಕ್ಕೂ ಜನತೆಯ ವಿರುದ್ಧ ಎಸಗಿದ ದೌರ್ಜನ್ಯಗಳು ಅದೆಷ್ಟು ಘೋರವಾಗಿವೆ ಎಂದರೆ, ಆ ಹೀನ ಕೃತ್ಯಗಳನ್ನು ಮರೆಮಾಡುವುದಕ್ಕಾಗಿ ಬಳಸುವ “ನಾಗರೀಕತೆ” ಎಂಬ ಪದವು ಒಂದು ವಿಕಾರವಾಗಿ ತೋರುತ್ತದೆ.
ಬ್ರಿಟಿಷ್ ವಸಾಹತುಶಾಹಿಯು ಭಾರತದಲ್ಲಿ ಒಂದು ಭೀಕರ ಬರಗಾಲವನ್ನು ಸೃಷ್ಟಿಸುವ ಮೂಲಕ ನತದೃಷ್ಟ ರೈತರಿಂದ ಕಂದಾಯ ಸಂಗ್ರಹಿಸುವ ಪ್ರಯತ್ನದಲ್ಲಿ ಲಕ್ಷಾಂತರ ಮಂದಿಯನ್ನು ಸಾವಿಗೀಡುಮಾಡಿದ್ದರಿಂದ ಹಿಡಿದು, ಬೆಲ್ಜಿಯಂ ದೊರೆ ಲೆಪಾಲ್ಡ್, ಕಾಂಗೋ ಜನರ ವಿರುದ್ಧ ಎಸಗಿದ ಹೇಳತೀರದ ಕ್ರೌರ್ಯ, ಜರ್ಮನಿಯು ನಮೀಬಿಯಾದ ಇಡೀ ಬುಡಕಟ್ಟು ಜನಾಂಗಗಳನ್ನು ನಿರ್ನಾಮಗೊಳಿಸಿದ ಯಾತನಾ ಶಿಬಿರಗಳ ವರೆಗೆ, ಮುಗ್ಧ ಜನರ ಮೇಲೆ ಎಸಗಿದ ಪಾಶ್ಚ್ಯಾತ್ಯರ ಭಯಾನಕ ಕ್ರೌರ್ಯದ ಕಥೆಯು ಕೇವಲ ದುರಾಸೆಯಿಂದಲೇ ಕೂಡಿತ್ತು. ಈ ಹಿನ್ನೆಲೆಯಲ್ಲಿ ಗಾಂಧೀಜಿಯವರನ್ನು ಪತ್ರಕರ್ತರೊಬ್ಬರು “ಪಾಶ್ಚಾತ್ಯ ನಾಗರೀಕತೆ” ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ, “ಅದು ಒಂದು ಬಹಳ ಒಳ್ಳೆಯ ಕಲ್ಪನೆಯಾಗುತ್ತದೆ” ಎಂದು ಅವರು ಮುಖ ಸಿಂಡರಿಸಿಕೊಂಡು ಹೇಳಿದ್ದು ಆಶ್ಚರ್ಯವಲ್ಲ.
ಇದನ್ನೂ ಓದಿ: ಆಂಧ್ರಪ್ರದೇಶ | ಶಸ್ತ್ರಚಿಕಿತ್ಸೆ : ಹಸುವಿನ ಹೊಟ್ಟೆಯಲ್ಲಿದ್ದ 52 ಕೆ.ಜಿ ಪ್ಲಾಸ್ಟಿಕ್ ಹೋರ ತೆಗೆದ ವೈದ್ಯರು
ಈ ಎಲ್ಲ ಕ್ರೌರ್ಯವನ್ನೂ ನಿರ್ಲಕ್ಷಿಸಿ, ಪಶ್ಚಿಮವು ಸಾಧಿಸಿದ ಭೌತಿಕ ಪ್ರಗತಿಯ ಬಗ್ಗೆ ಮಾತ್ರವೇ ಗಮನ ಹರಿಸೋಣ. ಈ ಭೌತಿಕ ಪ್ರಗತಿಯನ್ನು ಪಾಶ್ಚಾತ್ಯ ಸಾಮ್ರಾಜ್ಯಶಾಹಿ ದೇಶಗಳು ಸಾಧಿಸಿದ್ದು ಮೂರನೇ ಜಗತ್ತಿನೊಂದಿಗೆ ಹೊಂದಿದ್ದ ಒಂದು ಶೋಷಣೆಯ ಸಂಬಂಧದ ಮೇಲೆಯೇ. ಈ ಸಂಬಂಧವು ಮೂರನೇ ಜಗತ್ತನ್ನು ಎಂಥಹ ಪರಿಸ್ಥಿತಿಯಲ್ಲಿ ಬಿಟ್ಟಿದೆ ಎಂದರೆ, ಅದರ ನಿವಾಸಿಗಳು ಈ ಸಂಬಂಧದಿಂದ ಕಳಚಿಕೊಳ್ಳಬೇಕೆಂದು ಹಪಹಪಿಸುತ್ತಿದ್ದಾರೆ. ಪಾಶ್ಚಾತ್ಯರು ಹೊಂದಿರುವ ಸಮೃದ್ಧಿಯು ಪಾಶ್ಚಾತ್ಯ ಕಾರ್ಯಶ್ರದ್ಧೆಯ ಮೂಲಕ ಮಾತ್ರವೇ ಸಾಧಿಸಲ್ಪಟ್ಟ ಒಂದು ಭಿನ್ನ ಮತ್ತು ಸ್ವತಂತ್ರವಾದ ಸ್ಥಿತಿವಂತಿಕೆಯೇನಲ್ಲ. ವಲಸಿಗರು ಪಲಾಯನ ಮಾಡುತ್ತಿರುವ ದೇಶಗಳ ಅರ್ಥವ್ಯವಸ್ಥೆಯನ್ನು ನಾಶಪಡಿಸುವ ಒಂದು ಪ್ರಕ್ರಿಯೆಯ ಮೂಲಕ ಆ ಸಮೃದ್ಧಿಯನ್ನು ಸಾಧಿಸಲಾಗಿದೆ. ಇನ್ನೂ ಹೆಚ್ಚು ಗಮನಾರ್ಹವಾದ ಸಂಗತಿಯೆಂದರೆ, ಪಾಶ್ಚಾತ್ಯ ಸಾಮ್ರಾಜ್ಯಶಾಹಿಯು ವಲಸಿಗರ ಒಳಹರಿವನ್ನು ನಿಲ್ಲಿಸ ಬಯಸುತ್ತದೆ ಮಾತ್ರವಲ್ಲ, ಈ ಒಳಹರಿವನ್ನು ನಿಲ್ಲಿಸಿ ಈ ವಲಸಿಗರ ಸ್ವಂತ ನಾಡುಗಳಲ್ಲಿ ಅಭಿವೃದ್ಧಿಯನ್ನು ತರಬಹುದಾದ ಸಾಮಾಜಿಕ ಸಂರಚನೆಯ ಯಾವುದೇ ಬದಲಾವಣೆಯನ್ನೂ ಕೂಡ ಸಶಸ್ತç ಹಸ್ತಕ್ಷೇಪದ ಮೂಲಕವಾದರೂ ತಡೆಯ ಬಯಸುತ್ತದೆ.
ನನ್ನ ಈ ವಾದವನ್ನು ಒಂದು ಉತ್ಪ್ರೇಕ್ಷೆ ಎಂದು ತಳ್ಳಿಹಾಕಬಹುದು. ಅದೇನೇ ಇರಲಿ, ಪಾಶ್ಚಾತ್ಯ ಅರ್ಥವ್ಯವಸ್ಥೆಗಳು ಒಂದು ಗಮನಾರ್ಹ ಮಟ್ಟದ ನಾವೀನ್ಯತೆಗಳಿಗೆ ಹೆಸರಾಗಿವೆ. ಆ ನಾವೀನ್ಯತೆಗಳು ಶ್ರಮದ ಉತ್ಪಾದಕತೆಯನ್ನು ಒಮ್ಮಿಂದೊಮ್ಮೆಲೇ ಹೆಚ್ಚಿಸಿದವು. ಶ್ರಮದ ಉತ್ಪಾದಕತೆಯ ಹೆಚ್ಚಳವು ಪಾಶ್ಚಾತ್ಯ ಜನತೆಯ ನಿಜ ಕೂಲಿಯ ಮತ್ತು ನಿಜ ವರಮಾನಗಳ ಹೆಚ್ಚಳವನ್ನು ಸಾಧ್ಯಗೊಳಿಸಿತು. ಈ ನಾವೀನ್ಯತೆಯೇ ಅದನ್ನು ಭಿನ್ನವಾಗಿ ಗುರುತಿಸುತ್ತದೆ ಮತ್ತು ಮೂರನೇ ಜಗತ್ತಿನಲ್ಲಿ ಈ ನಾವೀನ್ಯತೆಯ ಕೊರತೆ ಎದ್ದು ಕಾಣುವಂತಿದೆ. ಈ ನಾವೀನ್ಯತೆ ಎಂಬುದು ವಿಶ್ವದ ಎರಡು ಭಾಗಗಳ ನಡುವಿನ ‘ನಿರ್ದಿಷ್ಟ ವ್ಯತ್ಯಾಸ’ದ ಗುರುತು. ಅದು ಅವರ ವೈವಿಧ್ಯಮಯ ಆರ್ಥಿಕ ಕಾರ್ಯಕ್ಷಮತೆಯ ಮೂಲ ಕಾರಣವೂ ಹೌದು ಮತ್ತು ಅದು ವಲಸಿಗರು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸ್ಥಳಾಂತರಗೊಳ್ಳ ಬಯಸುವ ಪ್ರೇರೇಪಣೆಯ ಅಂಶವೂ ಹೌದು.
ನಾವೀನ್ಯತೆ ಎಂಬುದರ ಎರಡು ಆಯಾಮಗಳು
ಈ ನಾವೀನ್ಯತೆಗಳ ಬಗ್ಗೆ ಎರಡು ಅಂಶಗಳನ್ನು ಗಮನಿಸಬೇಕಾಗುತ್ತದೆ. ಮೊದಲನೆಯದು, ನಾವೀನ್ಯತೆಯಿಂದಾಗಿ ಹೊರಬರುವ ಸರಕುಗಳಿಗೆ ಮಾರುಕಟ್ಟೆಯು ವಿಸ್ತರಿಸುತ್ತದೆ ಎನ್ನುವ ನಿರೀಕ್ಷೆಯಿದ್ದಾಗ ಮಾತ್ರ ನಾವೀನ್ಯತೆಗಳನ್ನು ಸಾಮಾನ್ಯವಾಗಿ ಪರಿಚಯಿಸಲಾಗುತ್ತದೆ. ಹಾಗಾಗಿಯೇ ಆರ್ಥಿಕ ಹಿಂಜರಿತದ ಸಮಯದಲ್ಲಿ ನಾವೀನ್ಯತೆಗಳನ್ನು ಪರಿಚಯಿಸುವುದಿಲ್ಲ. ಎರಡನೆಯದು, ಸ್ವತಃ ನಾವೀನ್ಯತೆಗಳೇ ನಿಜ ಕೂಲಿಯನ್ನು ಏರಿಕೆ ಮಾಢುವುದಿಲ್ಲ. ಕಾರ್ಮಿಕ ಮಾರುಕಟ್ಟೆಯಲ್ಲಿ ಸ್ವಾಯತ್ತ ಕಾರಣಗಳಿಂದಾಗಿ ಉದ್ಭವಿಸುವ ಬಿಗಿತ ಇದ್ದಾಗ ಮಾತ್ರ ನಿಜ ಕೂಲಿಯ ಏರಿಕೆಯಾಗುತ್ತದೆ. ಚರಿತ್ರೆಯಲ್ಲಿ ಒಂದು ಬಹು ದೀರ್ಘ ಕಾಲದಲ್ಲಿ,ಎಲ್ಲ ಮೂರನೇ ಜಗತ್ತಿನ ಮಾರುಕಟ್ಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಪಾಶ್ಚ್ಯಾತ್ಯ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆಯ ಬಗೆಗಿನ ನಿರೀಕ್ಷೆಯನ್ನು ಹುಟ್ಟಿಹಾಕಲಾಯಿತು. ಸ್ಥಳೀಯವಾಗಿ ಉತ್ಪಾದಿಸುತ್ತಿದ್ದ ಕರಕುಶಲ ಸರಕುಗಳನ್ನು ಹೊಸ ಯಂತ್ರ-ನಿರ್ಮಿತ ಸರಕುಗಳೊಂದಿಗೆ ಬದಲಾಯಿಸಬಹುದಾದ ವಸಾಹತು ಮಾರುಕಟ್ಟೆಗಳು ಲಭ್ಯವಿಲ್ಲದಿದ್ದರೆ, ಕೈಗಾರಿಕಾ ಬಂಡವಾಳಶಾಹಿ ಯುಗವನ್ನು ಪ್ರಾರಂಭಿಸಿದ ಬ್ರಿಟನ್ನಿನ ಕೈಗಾರಿಕಾ ಕ್ರಾಂತಿಯನ್ನು ಸುಸ್ಥಿರಗೊಳಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಆದ್ದರಿಂದ, ಪಾಶ್ಚಾತ್ಯ ನಾವೀನ್ಯತೆಯ ಇನ್ನೊಂದು ಆಯಾಮವೆಂದರೆ, ಅದು ವಸಾಹತುಗಳ ಅರ್ಥವ್ಯವಸ್ಥೆಗಳನ್ನು ಅಪ-ಕೈಗಾರಿಕೀಕರಣಗೊಳಿಸಿ ಅಲ್ಲಿ ಸೃಷ್ಟಿಸಿದ ಬೃಹತ್ ಶ್ರಮಶಕ್ತಿಯ ಮೀಸಲುಗಳೇ, ಅಂದರೆ ನಿರುದ್ಯೋಗವೇ.

ನಾವೀನ್ಯತೆಗಳನ್ನು ಪರಿಚಯಿಸಿದ ದೇಶಗಳಲ್ಲಿಯೂ ಸಹ, ತಾಂತ್ರಿಕ ಪ್ರಗತಿಯಿಂದಾಗಿ ಶ್ರಮಶಕ್ತಿಯ ಮೀಸಲುಗಳನ್ನು(ಅಂದರೆ ನಿರುದ್ಯೋಗವನ್ನು) ಸಹ ಸೃಷ್ಟಿಸಲಾಯಿತು. ಆದರೆ ಕೆನಡಾ, ಯುಎಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ಸಮಶೀತೋಷ್ಣ ಪ್ರದೇಶಗಳಿಗೆ ಈ ನಾವೀನ್ಯತೆಗಳನ್ನು ಪರಿಚಯಿಸಿದ ದೇಶಗಳಿಂದ ಜರುಗಿದ ಶ್ರಮಿಕರ ಬೃಹತ್ ಪ್ರಮಾಣದ ವಲಸೆಯಿಂದಾಗಿ ಅದಾಗಲೇ ಸೃಷ್ಟಿಯಾಗಿದ್ದ ನಿರುದ್ಯೋಗಿಗಳ ಸಂಖ್ಯೆ ಇಳಿಯಿತು. ಆದರೆ, ಈ ವಲಸೆಗಾರರು ತಾವು ವಲಸೆ ಹೋದ ದೇಶಗಳಲ್ಲಿ ಕೃಷಿ ಮಾಡುತ್ತಿದ್ದ ಸ್ಥಳೀಯ ಬುಡಕಟ್ಟು ಜನಾಂಗದವರನ್ನು ಹತ್ಯಾಕಾಂಡಗಳನ್ನು ಅವರ ಭೂಮಿಯನ್ನು ಆಕ್ರಮಿಸಿಕೊಂಡರು. ಹಾಗಾಗಿ, ಈ ನಾವೀನ್ಯತೆಯ ದೇಶಗಳಿಂದ ಜರುಗಿದ ಬೃಹತ್ ಪ್ರಮಾಣದ ವಲಸೆಯಿಂದಾಗಿ ಆ ದೇಶಗಳ ಶ್ರಮ ಮಾರುಕಟ್ಟೆಯಲ್ಲಿ ಒಂದು ಬಿಗಿತವನ್ನು ಪರಿಚಯಿಸಲಾಯಿತು. ಈ ಬಿಗಿತದಿಂದಾಗಿ ಶ್ರಮದ ಉತ್ಪಾದಕತೆ ಹೆಚ್ಚಿತು ಮತ್ತು ಮತ್ತಷ್ಟು ನಾವೀನ್ಯತೆಗಳ ಜೊತೆಗೆ ನಿಜ ವೇತನವೂ ಹೆಚ್ಚಿತು.
ವಸಾಹತುಗಳಲ್ಲಿ ಮತ್ತು ಅರೆ-ವಸಾಹತುಗಳಲ್ಲಿ ಸೃಷ್ಟಿಸಲಾದ ನಿರುದ್ಯೋಗಿಗಳು ಸಮಶೀತೋಷ್ಣ ಪ್ರದೇಶಗಳಿಗೆ ವಲಸೆ ಹೋಗುವುದು ಸಾಧ್ಯವಾಗಲಿಲ್ಲ. ಅವರ ವಲಸೆಯನ್ನು ಉಷ್ಣವಲಯದ ಮತ್ತು ಉಪ-ಉಷ್ಣವಲಯದ ಪ್ರದೇಶಗಳಿಗೆ, ಕಡಿಮೆ ಕೂಲಿಯ ಪರಿಸ್ಥಿತಿ ಮತ್ತು ಇಂದಿಗೂ ಮುಂದುವರೆದಿರುವ ಬಿಗಿ ವಲಸೆ ಕಾನೂನುಗಳಲ್ಲಿ ಸಿಲುಕಿಸುವ ಮೂಲಕ, ಸೀಮಿತಗೊಳಿಸಲಾಯಿತು. ಕಡಿಮೆ ಕೂಲಿಯ ಲಾಭ ಪಡೆದು ವಿಶ್ವ ಮಾರುಕಟ್ಟೆಗಾಗಿ ಸರಕುಗಳನ್ನು ಹೊಸ ತಂತ್ರಜ್ಞಾನಗಳೊಂದಿಗೆ ಉತ್ಪಾದಿಸಲು ಬಂಡವಾಳವು ಮುಂದುವರೆದ ದೇಶಗಳಿಂದ ವಸಾಹತು ಮತ್ತು ಅರೆ-ವಸಾಹತು ದೇಶಗಳಿಗೆ ಒಂದು ವೇಳೆ ಹರಿದು ಬಂದಿದ್ದರೆ, ಆಗ ಕೂಲಿ-ವ್ಯತ್ಯಾಸವು ಮರೆಯಾಗುತ್ತಿತ್ತು.
ಆದರೆ, ಅದು ಸಂಭವಿಸಲಿಲ್ಲ. ವಸಾಹತು ಮತ್ತು ಅರೆ-ವಸಾಹತು ದೇಶಗಳ ಕಡಿಮೆ ಕೂಲಿಯ ಹೊರತಾಗಿಯೂ ಸಮಶೀತೋಷ್ಣ ಪ್ರದೇಶಗಳಿಂದ ಬಂಡವಾಳವು ಈ ದೇಶಗಳ ಅರ್ಥವ್ಯವಸ್ಥೆಗಳಿಗೆ ಬರಲಿಲ್ಲ, ಅವುಗಳ ಪ್ರಾಥಮಿಕ ಸರಕು-ಉತ್ಪಾದನಾ ವಲಯಗಳಿಗಷ್ಟೇ ಬಂತು, ಮತ್ತು, ಈ ಕಡಿಮೆ-ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸ್ಥಳೀಯ ಉತ್ಪಾದಕರು ತಯಾರಿಸಿದ ಸರಕುಗಳು, ದುಬಾರಿ ಸುಂಕಗಳಿಂದಾಗಿ ಸಮಶೀತೋಷ್ಣ ಪ್ರದೇಶದ ಮಾರುಕಟ್ಟೆಗಳನ್ನು ಪ್ರವೇಶಿಸುವುದು ಸಾಧ್ಯವಾಗಲಿಲ್ಲ. ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಪಾಶ್ಚಾತ್ಯ ನಾವೀನ್ಯತೆಯು ಮುಂದುವರೆದ ದೇಶಗಳಲ್ಲಿ ಭೌತಿಕ ಸಮೃದ್ಧಿಯನ್ನು ತಂದಿತು, ಏಕೆಂದರೆ, ಜಾಗತಿಕ ಅರ್ಥವ್ಯವಸ್ಥೆಯ ಹೋಳು-ಹೋಳಾದ ಸಂರಚನೆಯು ಅದಕ್ಕೆ ಪೂರಕವಾಗಿತ್ತು.
ಅದಷ್ಟೇ ಅಲ್ಲ. ಬಂಡವಾಳಶಾಹಿಯ ಪ್ರಸರಣವೂ ಈ ಹೋಳು-ಹೋಳಾದ ಸಂರಚನೆಯೊಳಗೇ ಸಂಭವಿಸಿತು: ಕಾರ್ಮಿಕರು ಯುರೋಪಿನಿಂದ ಉತ್ತರ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ಸಮಶೀತೋಷ್ಣ ಪ್ರದೇಶಗಳಿಗೆ ವಲಸೆ ಹೋದುದರ ಜೊತೆಗೆ ಮತ್ತು ಈ ವಲಸೆಗೆ ಪೂರಕವಾಗಿ ಬಂಡವಾಳವೂ ಸಹ ಯುರೋಪಿನಿಂದ ಈ ಹೊಸ ನಾಡುಗಳಲ್ಲ್ಲಿ ಹೂಡಿಕೆಯಾಗಲಾರಂಭಿಸಿತು. ಆದರೆ, ಈ ಬಂಡವಾಳವನ್ನು ಉಷ್ಣವಲಯದ ಮತ್ತು ಉಪ-ಉಷ್ಣವಲಯದ ವಸಾಹತುಗಳ ಮತ್ತು ಅರೆ-ವಸಾಹತುಗಳ ರಫ್ತು ಗಳಿಕೆಯನ್ನು (ವಿದೇಶಿ ವಿನಿಮಯ ಗಳಿಕೆಯನ್ನು) ಪುಕ್ಕಟೆಯಾಗಿ ಸ್ವಾಹಾ ಮಾಡಿಕೊಳ್ಳುವ ಮೂಲಕ ಕಿತ್ತುಕೊಳ್ಳಲಾಯಿತು. ಇದು ಅವರ ಆರ್ಥಿಕ ಮಿಗುತಾಯದ ಒಂದು ದೊಡ್ಡ ಭಾಗವಾಯಿತು. ಇದನ್ನು ಮಿಗುತಾಯವನ್ನು “ಬರಿದು”(drain)ಗೊಳಿಸುವ ಪ್ರಕ್ರಿಯೆ ಎಂದು ಕರೆಯಲಾಗಿದೆ.
“ದೀರ್ಘವಾದ ಹತ್ತೊಂಬತ್ತನೇ ಶತಮಾನ”ದಲ್ಲಿ ಬಂಡವಾಳಶಾಹಿಯ ಈ ಪ್ರಸರಣವು ಬ್ರಿಟಿಷ್ ಮಾರುಕಟ್ಟೆಗಳನ್ನು ಖಂಡಾಂತರ ಯುರೋಪ್, ಕೆನಡಾ ಮತ್ತು ಯುಎಸ್‌ಗಳ ಸರಕುಗಳಿಗೆ ತೆರೆದಿಡುವ ಮತ್ತು ಅದೇ ಸಮಯದಲ್ಲಿ ಬ್ರಿಟನ್ನಿನಿಂದ ಅವುಗಳಿಗೆ ಬಂಡವಾಳವನ್ನು ರಫ್ತು ಮಾಡುವ ರೂಪವನ್ನು ಪಡೆದುಕೊಂಡಿತು. ಅಂದರೆ, ಈ ಪ್ರದೇಶಗಳೊಂದಿಗೆ ಬ್ರಿಟನ್ ತನ್ನ ಚಾಲ್ತಿ ಖಾತೆಯಲ್ಲಿ ಮತ್ತು ಬಂಡವಾಳ ಖಾತೆಯಲ್ಲಿ ಕೊರತೆಯನ್ನು ಹೊಂದಿತ್ತು. 1910ರಲ್ಲಿ ಈ ಮೂರೂ ಪ್ರಮುಖ ಪ್ರದೇಶಗಳೊಂದಿಗೆ ಬ್ರಿಟನ್ನಿನ್ನ ಚಾಲ್ತಿ ಖಾತೆಯ ಮತ್ತು ಬಂಡವಾಳ ಖಾತೆಯ ಒಟ್ಟು ಕೊರತೆಯು 120 ಮಿಲಿಯನ್ ಪೌಂಡ್‌ಗಳಷ್ಟಿತ್ತು.
ಆರ್ಥಿಕ ಇತಿಹಾಸಕಾರ ಎಸ್.ಬಿ.ಸೌಲ್ ಅವರ ಅಂದಾಜಿನ ಪ್ರಕಾರ, ಈ ಮೊತ್ತದ ಅರ್ಧದಷ್ಟನ್ನು ಭಾರತದ ಲೆಕ್ಕದಲ್ಲಿ ತುಂಬಲಾಯಿತು – ಅಂದರೆ, ವಿಶ್ವದ ಉಳಿದ ಭಾಗಗಳೊಂದಿಗಿನ ವ್ಯಾಪಾರದಲ್ಲಿ ಗಳಿಸಿದ ಭಾರತದ ರಫ್ತು ಮಿಗುತಾಯವನ್ನು ಬ್ರಿಟನ್ ಸಂಪೂರ್ಣವಾಗಿ ಸ್ವಾಹಾ ಮಾಡಿಕೊಳ್ಳುವ ಮೂಲಕ ಮತ್ತು ಬ್ರಿಟನ್ನಿಗೆ ಮಾರಾಟ ಮಾಡಿದ ಪ್ರಾಥಮಿಕ ಸರಕುಗಳ ರಫ್ತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬ್ರಿಟನ್ನಿನಿಂದ ಮಾಡಿಕೊಂಡ ಅಪ-ಕೈಗಾರಿಕೀಕರಣಗೊಳಿಸಿದ ಆಮದುಗಳಿಗೆ ಭಾರತವು ಪಾವತಿಸುವ ಮೂಲಕ ಆ ಕೊರತೆಯಲ್ಲಿ ಅರ್ಧದಷ್ಟನ್ನು ಪೂರೈಸಲಾಯಿತು. ಖಂಡಾಂತರ ಯುರೋಪ್ ಮತ್ತು ಅಮೆರಿಕವನ್ನು ಮಾತ್ರವೇ ನಾವು ಲೆಕ್ಕಕ್ಕೆ ತೆಗೆದುಕೊಂಡರೆ, ಬ್ರಿಟನ್ನಿನ ಒಟ್ಟು ಕೊರತೆಯು 95 ಮಿಲಿಯನ್ ಪೌಂಡ್‌ಗಳಷ್ಟಿತ್ತು. ಅದರಲ್ಲಿ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಈ ರೀತಿಯಲ್ಲಿ ಭಾರತದ ಹಣದಿಂದ ತುಂಬಿಕೊಡಲಾಯಿತು.
ವಿಭಜಿತ ವಿಶ್ವದ ಸೃಷ್ಟಿ
ಈ ರೀತಿಯಲ್ಲಿ ಬಂಡವಾಳಶಾಹಿಯ ಇಡೀ ಅಭಿವೃದ್ಧಿಯು ಐತಿಹಾಸಿಕವಾಗಿ ಒಂದು ಹೋಳು-ಹೋಳಾಗಿಸಿದ ವಿಶ್ವವನ್ನು ಸೃಷ್ಟಿಸುವ ಮೂಲಕ ಘಟಿಸಿತು. ಪಶ್ಚಿಮದ ಭೌತಿಕ ಸಮೃದ್ಧಿಯ ಮೂಲಾಧಾರವೆಂದು ಭಾವಿಸಲಾದ ನವೀನತೆಯೂ ಈ ವಿಭಜನೆಯ ಮೂಲಕವೇ ಸಂಭವಿಸಿತು. ಆದ್ದರಿಂದ, ಮೂರನೇ ಜಗತ್ತು ಸ್ಥಗಿತಗೊಂಡು ಕುಸಿಯುತ್ತಿರುವಾಗ ಪಶ್ಚಿಮವು ಏಕೆ ಸಮೃದ್ಧವಾಯಿತು ಎಂಬುದನ್ನು ಪಾಶ್ಚಿಮಾತ್ಯರ ನಾವೀನ್ಯತೆ ಎಂದು ವಿವರಿಸಲು ಸಾಧ್ಯವಿಲ್ಲ, ಬದಲಿಗೆ ವಿಶ್ವದ ವಿಭಜನೆಯ ಮೂಲಕವೇ ಇದು ಸಂಭವಿಸಿರುವುದು ಎಂದೇ ವಿವರಿಸಬೇಕಾಗುತ್ತದೆ. ಏಕೆಂದರೆ, ಭೌತಿಕ ಸಮೃದ್ಧಿಗೆ ನಾವೀನ್ಯತೆಗಳೇ ಕಾರಣವೆಂದು ಒತ್ತಿಹೇಳುವ ಜೋಸೆಫ್ ಶಂಪೀಟರ್‌ರಂಥವರ ಸಿದ್ಧಾಂತಗಳೂ ಸಹ, ಎಲ್ಲ ಕಾರ್ಮಿಕರೂ ನಾವೀನ್ಯತೆಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ತೋರಿಸುತ್ತವೆ.
ಆದರೆ, (ಬಂಡವಾಳಶಾಹಿಗಳನ್ನು ಹೊರತುಪಡಿಸಿ) ಕೆಲವು ಕಾರ್ಮಿಕರು ಮಾತ್ರವೇ ಇದರ ಫಲಾನುಭವಿಗಳಾಗಿದ್ದರೆ, ಮತ್ತು ಬೇರೆ ಪ್ರದೇಶಕ್ಕೆ ಸೇರಿದ ಇತರರು ಈ ಪ್ರಯೋಜನಗಳಿಂದ ಹೊರಗಿಡಲ್ಪಟ್ಟಿದ್ದ್ಟರೆ, ಆಗ ಅದರ ಕಾರಣವು, ನಾವೀನ್ಯತೆಯು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿದೆ ಎಂಬುದಲ್ಲ, ಬದಲಿಗೆ ಬೇರೆಯೇ ಇರಬೇಕಾಗುತ್ತದೆ. ಆ ಪ್ರದೇಶದ ಉತ್ಪನ್ನಗಳ ವಿರುದ್ಧ ಸುಂಕದ ಅಡೆತಡೆಗಳನ್ನು ಹೇರುವ ಮೂಲಕ ಮತ್ತು ಅದು ಮೆಟ್ರೋಪಾಲಿಟನ್ ಪ್ರದೇಶದ ಉತ್ಪನ್ನಗಳ ವಿರುದ್ಧ ತನ್ನ ಸುಂಕ ಅಡೆತಡೆಗಳನ್ನು ವಿಧಿಸಲು ಅನುಮತಿಸದಿರುವ ಮತ್ತು ಅದು ಉತ್ಪಾದಿಸಿದ ಆರ್ಥಿಕ ಮಿಗುತಾಯದ ಒಂದು ಭಾಗವನ್ನು ಮೆಟ್ರೋಪಾಲಿಟನ್ ದೇಶಗಳು ಪುಕ್ಕಟೆಯಾಗಿ ಸ್ವಾಹಾ ಮಾಡಿಕೊಳ್ಳುವ ಮೂಲಕ ಭೌತಿಕ ಅಭಿವೃದ್ಧಿ ಪ್ರಕ್ರಿಯೆಯಿಂದ ಆ ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಹೊರಗಿಡುವುದೇ ಈ ವಿಶ್ವ ವಿಭಜನೆಯ ಸಾರಸತ್ವವಾಗಿತ್ತು.
ವಸಾಹತುಶಾಹಿಯ ಆ ದಿನಗಳು ಮುಗಿದು ಹೋಗಿವೆ. ಅದಕ್ಕಿಂತಲೂ ಮಿಗಿಲಾಗಿ, ಬಂಡವಾಳವು ಮುಂದುವರೆದ ಬಂಡವಾಳಶಾಹಿ ದೇಶಗಳಿಂದ ಕಡಿಮೆ ಕೂಲಿಯ ಸ್ಥಳೀಯ ಕಾರ್ಮಿಕರನ್ನು ಮತ್ತು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ವಿಶ್ವ ಮಾರುಕಟ್ಟೆಗೆ ಸರಕುಗಳನ್ನು ಉತ್ಪಾದಿಸುವ ಮೂರನೇ ಜಗತ್ತಿಗೆ ಹರಿಯಲು ಈಗ ಸಿದ್ಧವಾಗಿದೆ. ಹಾಗಿದ್ದರೂ, ತೃತೀಯ ಜಗತ್ತಿನ ಬಡತನ ಈ ಹೊಸ ಸನ್ನಿವೇಶದಲ್ಲೂ ಹಾಗೆಯೇ ಉಳಿದಿರುವುದೇಕೆ? ಇಲ್ಲಿ ನಾವು ನಾವೀನ್ಯತೆಗಳಷ್ಟೇ ನಿಜ ಕೂಲಿಗಳಲ್ಲಿ ಏರಿಕೆಯನ್ನು ಮಾಡುವುದಿಲ್ಲ ಎಂಬ ಪ್ರತಿಪಾದನೆಗೆ ಹಿಂತಿರುಗಬೇಕಾಗುತ್ತದೆ.
ಈ ಪ್ರತಿಪಾದನೆಗೆ ತದ್ವಿರುದ್ಧವಾಗಿ, ಶ್ರಮ ಮೀಸಲುಗಳನ್ನು ಬಳಸಿಕೊಂಡು ಪೂರ್ಣ ಉದ್ಯೋಗ ಪರಿಸ್ಥಿತಿಗೆ ಹೊರಳುವುದು ಬಂಡವಾಳಶಾಹಿಯ ಸ್ವಯಂಸ್ಫೂರ್ತ ಪ್ರವೃತ್ತಿ ಎಂದು ಭಾವಿಸುವ ಶಂಪೀಟರ್‌ರಂಥವರ ಸಿದ್ಧಾಂತಗಳ ದಾವೆೆಗಳು ನಿಸ್ಸಂಶಯವಾಗಿಯೂ ತಪ್ಪೇ ತಪ್ಪು. ಮೂರನೇ ಜಗತ್ತಿನಲ್ಲಿ ಮುಂದುವರೆದ ದೇಶಗಳ ಬಂಡವಾಳದ ಆಸರೆಯಲ್ಲಾಗಲಿ ಅಥವಾ ಸ್ಥಳೀಯ ಬಂಡವಾಳದ ಆಸರೆಯಲ್ಲಾಗಲಿ, ಸಾಮಾನ್ಯವಾಗಿ ಶ್ರಮ-ಉಳಿಸುವಂತಹುದೇ ಆಗುವಂತಹ ನಾವೀನ್ಯತೆಗಳ ಹರಡಿಕೆಯ ಮೂಲಕ ಉಂಟಾಗುವ ತಾಂತ್ರಿಕ ಪ್ರಗತಿಯು ಅದರ ಶ್ರಮ-ಮೀಸಲುಗಳ ಸಾಪೇಕ್ಷ ಗಾತ್ರವನ್ನೇನೂ ಕಡಿಮೆ ಮಾಡುವುದಿಲ್ಲ. ಈ ಕಾರಣದಿಂದಾಗಿ ಅಲ್ಲಿ ಬಡತನದ ಸಾಪೇಕ್ಷ ಗಾತ್ರವೂ ಇಳಿಕೆಯಾಗುವುದಿಲ್ಲ. ಮಾತ್ರವಲ್ಲ, ಮೂರನೆಯ ಜಗತ್ತಿನ ಕಾರ್ಮಿಕರು ಸಮಶೀತೋಷ್ಣ ಪ್ರದೇಶಗಳಲ್ಲಿ ಎಲ್ಲಿಗೂ ವಲಸೆ ಹೋಗುವ ಯಾವ ಅವಕಾಶವೂ ಇರುವುದಿಲ್ಲ.
ಈ ಪರಿಸ್ಥಿತಿಯನ್ನು ಮುಂಬರುವ ದಿನಗಳಲ್ಲಿ ಎರಡು ಅಂಶಗಳು ಮತ್ತಷ್ಟು ಹದಗೆಡಿಸಲಿವೆ: ಒಂದು, ಅಮೆರಿಕದಿಂದ ನಿರುದ್ಯೋಗವನ್ನು ವಿಶ್ವದ ಇತರ ಭಾಗಗಳಿಗೆ, ವಿಶೇಷವಾಗಿ ಮೂರನೇ ಜಗತ್ತಿಗೆ ರಫ್ತು ಮಾಡಲು ಪ್ರಯತ್ನಿಸುವ ಟ್ರಂಪ್ ಸುಂಕಗಳು; ಮತ್ತು ಇನ್ನೊಂದು, ಬಂಡವಾಳಶಾಹಿಯ ಚೌಕಟ್ಟಿನೊಳಗೇ ಕೃತಕ ಬುದ್ಧಿಮತ್ತೆಯನ್ನು ತರುತ್ತಿರುವುದು.
ಇದನ್ನೂ ನೋಡಿ: ಸಾರಿಗೆ ಕಾರ್ಮಿಕರ ಭವಣೆಗಳು – ಕಣ್ತೆರೆಯದ ಸರಕಾರJanashakthi Media
