ಕೆರೂರ: ಜೂನ್ 1ರಂದು ರೈತ ಸಂಘ – ಹಸಿರು ಸೇನೆ ನೇತೃತ್ವದಲ್ಲಿ ಪಟ್ಟಣದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಬಾದಾಮಿ ಕ್ರಾಸ್‌ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಿ ತರಕಾರಿ ಮಾರುಕಟ್ಟೆ ತಲುಪಿ ಸಭೆಯಾಗಿ ಮಾರ್ಪಟ್ಟಿತು.
ಪ್ರತಿಭಟನೆ ಉದ್ದಕ್ಕೂ ರೈತರು ಸರ್ಕಾರ ವಿರುದ್ಧ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಟ್ಟಣ ಪಂಚಾಯಿತಿ ವತಿಯಿಂದ ಆಶ್ರಯ ಯೋಜನೆಯಡಿ ಬಡವರಿಗೆ ಮಂಜೂರಾದ ಮನೆಗಳ ಹಕ್ಕು ಪತ್ರ ವಿತರಿಸಬೇಕು, ಕೆರೆಯಿಂದ ಕೂಡ ಮೂಲ ಚರಂಡಿ ನೀರಿಗೆ ಸರಿಯಾದ ವ್ಯವಸ್ಥೆ, ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ ಹಿನ್ನೆಲೆ ಅಪಹರಣ: ನಾಗಾ, ಕುಕಿ ನಾಗರಿಕರ ಬಿಡುಗಡೆಗೆ ಸಿಎಂಗಳು ಮನವಿ
ರೈತ ಮುಖಂಡ ಗೋವಿಂದಪ್ಪ ಬೆಳಗಂಟಿ ಮಾತನಾಡಿ, ಕೆರೂರ ಕೆವಿಜಿ ಬ್ಯಾಂಕ್ ಈ ಹಿಂದೆ ಆದ ಕೋಟ್ಯಂತರ ರೂಪಾಯಿ ಅವ್ಯವಹಾರವನ್ನು ಸರಿಪಡಿಸಬೇಕು. ಇದರಿಂದ ಸಾಕಷ್ಟು ರೈತರಿಗೆ ಆರ್ಥಿಕವಾಗಿ ಅನ್ಯಾಯವಾಗಿದೆ, ಗೊಬ್ಬರ ಖರೀದಿಸಲು ಸರ್ಕಾರ ಆದೇಶ ಹೊರಡಿಸಿರುವ ಕಡ್ಡಾಯ ಆದಾರ ಲಿಂಕ್ ಹಿಂಪಡೆದು, ಈ ಮೊದಲು ಇದ್ದ ವ್ಯವಸ್ಥೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಅರ್ಧಕ್ಕೆ ನಿಂತಿರುವ ಹೆರಕಲ್ ದಕ್ಷಿಣ ಏತ ನೀರಾವರಿ ಯೋಜನೆ ಶೀಘ್ರ ಪ್ರಾರಂಭಿಸಬೇಕು. ಎಪಿಎಂಸಿ ಮಾರುಕಟ್ಟೆಯನ್ನು ಶೀಘ್ರ ಪ್ರಾರಂಭಿಸಬೇಕು, ಕೆರೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೂಡಲೇ ನೇಮಕ ಮಾಡಬೇಕು. ಸ್ಥಳೀಯ ನಾಡಕಚೇರಿ ಕಾರ್ಯಾಲಯವನ್ನು ಈ ಮೊದಲು ಇದ್ದ ಸ್ಥಳದಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರಾದ ದಿಲೀಪ ಕುಮಾರ ದೇಸಾಯಿ, ಚನ್ನಪ್ಪಮಲ್ಲಪ್ಪ ಘಟ್ಟದ, ಯಲ್ಲಪ್ಪ ಹೆಗಡೆ, ಸುರೇಶ ಪೂಜಾರ, ಭರಮಪ್ಪ ಉದಗಟ್ಟಿ, ಗೋವಿಂದಪ್ಪ ಬೆಳಗಂಟಿ, ಹುಸೇನಸಾಬ ಮಾಲದಾರ, ಹುಸೇನಸಾಬ ರಾಘಾಪೂರ ಇತರರಿದ್ದರು.
ಇದನ್ನೂ ನೋಡಿ: ಬೆಂಗಳೂರಿನ ಸರಕಾರಿ ಶಾಲೆಗಳ ದುಸ್ಥಿತಿಗೆ ಯಾರು ಹೊಣೆ? – ಜಯರತ್ನ Janashakthi Media
