ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿರುವುದಕ್ಕೆ ಕಾರಣ ಪಕ್ಷ ನಿಷ್ಠೆಯೇ ಹೊರತು, ಮತ್ತೆ ಪಕ್ಷಕ್ಕೆ ಸೇರುವ ಉದ್ದೇಶವಲ್ಲ ಎಂದು ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, “ನಾನು ಬಿಜೆಪಿಗೆ ಕಮ್ಬ್ಯಾಕ್ ಮಾಡಲು ಮತ ಹಾಕಿಲ್ಲ. ನನ್ನ ರಾಜಕೀಯ ನಿಲುವು ಸ್ಪಷ್ಟವಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ,” ಎಂದು ಹೇಳಿದರು. ಕರ್ನಾಟಕ ಬಿಜೆಪಿಯಲ್ಲಿ ಕುಟುಂಬ ಆಧಾರಿತ ಹಾಗೂ ಭ್ರಷ್ಟ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಅದು ಅಂತ್ಯಗೊಳ್ಳುವವರೆಗೂ ತಮ್ಮ ನಿಲುವು ಮುಂದುವರೆಯುತ್ತದೆ ಎಂದು ತಿಳಿಸಿದರು.
ಹಿಂದೆಯೂ ಪಕ್ಷ ನಿಷ್ಠೆಯನ್ನು ಕಾಪಾಡಿಕೊಂಡಿದ್ದೇನೆ, ಇಂದಿಗೂ ಅದೇ ನಿಷ್ಠೆಯನ್ನು ಪಾಲಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಟೆಲಿಗ್ರಾಮ್ ನಿಷೇಧ ವಿವಾದ: ವಿದ್ಯಾರ್ಥಿಗಳ ಮೇಲೆ ಹೊರೆ ಹಾಕಿ ಸಮಸ್ಯೆ ಮರೆಮಾಚಲು ಯತ್ನ- ರಾಹುಲ್ ಗಾಂಧಿ
ತಮ್ಮ ರಾಜಕೀಯ ದೃಢತೆಯನ್ನು ವಿವರಿಸುವ ವೇಳೆ, ಎಂಎಲ್ಸಿ ಆಗಿದ್ದ ಕಾಲದ ಒಂದು ಘಟನೆಯನ್ನು ಅವರು ಸ್ಮರಿಸಿದರು. ಶಂಕರ್ ಮೂರ್ತಿ ವಿರುದ್ಧ ಉಗ್ರಪ್ಪ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ್ ಅವರು ತಮ್ಮನ್ನು ಸಂಪರ್ಕಿಸಿದ್ದರೆಂದು ಹೇಳಿದರು.
ಆ ಸಂದರ್ಭದಲ್ಲಿ ಸಿಂದಗಿ ಅಥವಾ ದೇವರಿಪ್ಪಳಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಹಾಗೂ ಅಭಿವೃದ್ಧಿ ನಿಧಿ ನೀಡುವುದಾಗಿ ಆಮಿಷವೊಡ್ಡಿ ಬೆಂಬಲ ಕೋರಲಾಗಿತ್ತು. ಆದರೆ, ತಾವು ಬಿಜೆಪಿ ಚಿಹ್ನೆಯಿಂದ ಆಯ್ಕೆಯಾಗಿರುವುದರಿಂದ ಪಕ್ಷ ನಿಷ್ಠೆಗೆ ಬದ್ಧರಾಗಿದ್ದೆ ಎಂದು ಹೇಳಿ ಆ ಪ್ರಸ್ತಾವವನ್ನು ತಿರಸ್ಕರಿಸಿದ್ದಾಗಿ ತಿಳಿಸಿದರು.
ಆ ನಿರ್ಣಾಯಕ ಮತದಾನದಿಂದಲೇ ಡಿ.ಎಸ್. ಶಂಕರ್ ಮೂರ್ತಿ ಸಭಾಪತಿಯಾಗಿ ಮುಂದುವರಿಯಲು ಸಾಧ್ಯವಾಯಿತು ಎಂದು ಯತ್ನಾಳ್ ತಿಳಿಸಿದ್ದಾರೆ.
ಇದನ್ನೂ ನೋಡಿ: ಹೋರ್ಮುಜ್ ಜಲಸಂಧಿ | 107 ದಿನಗಳಿಂದ ಸಮುದ್ರದಲ್ಲೇ ಸಿಲುಕಿರುವ 562 ಭಾರತೀಯ ನಾವಿಕರು Janashakthi Media
