ರೋಹಿತ್ ವೇಮುಲ ಮಸೂದೆಗೆ ಸಂಪುಟ ಒಪ್ಪಿಗೆ: ಡಿಎಚ್‌ಎಸ್–ಡಿಎಸ್ಎಂಎಂ ಹೋರಾಟಕ್ಕೆ ಜಯ

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ವಿದ್ಯಾರ್ಥಿಗಳ ರಕ್ಷಣೆಗೆ ಸಂಬಂಧಿಸಿದ ‘ಕರ್ನಾಟಕ ರೋಹಿತ್ ವೇಮುಲ’ ಮಸೂದೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದನ್ನು ಡಿಎಚ್‌ಎಸ್–ಕರ್ನಾಟಕ ಹಾಗೂ ಡಿಎಸ್ಎಂಎಂ ಸಂಘಟನೆಗಳು ಸ್ವಾಗತಿಸಿ, ತಮ್ಮ ಹೋರಾಟಕ್ಕೆ ದೊರೆತ ವಿಜಯ ಎಂದು ಹೇಳಿವೆ.

ದೀರ್ಘಕಾಲದಿಂದ ಚರ್ಚೆಗೆ ಗ್ರಾಸವಾಗಿದ್ದ ‘ಕರ್ನಾಟಕ ರೋಹಿತ್ ವೇಮುಲ (ತಾರತಮ್ಯ, ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ, 2026’ ಅನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.

ಇದನ್ನೂ ಓದಿ: ಹೈಕಮಾಂಡ್ ಗೊಂದಲ ಪರಿಹಾರ ಮಾಡದೇ ಹೋದ್ರೆ ಪಕ್ಷಕ್ಕೆ ತೊಂದರೆ – ಹೆಚ್. ಸಿ. ಬಾಲಕೃಷ್ಣ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಸಭೆಯ ಬಳಿಕ ಮಾತನಾಡಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಶಿಕ್ಷಣದ ಹಕ್ಕು ಮತ್ತು ಘನತೆಯನ್ನು ಕಾಪಾಡುವುದು ಮಸೂದೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಈ ಮಸೂದೆಯನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಸೂದೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಮೇಲೆ ನಡೆಯಬಹುದಾದ ದೌರ್ಜನ್ಯಗಳ ಸುಮಾರು 30 ವಿಧಗಳನ್ನು ಪಟ್ಟಿ ಮಾಡಲಾಗಿದೆ.

ಈ ಸಂಬಂಧ, 2017ರಿಂದ ಡಿಎಚ್‌ಎಸ್–ಕರ್ನಾಟಕ ರಾಜ್ಯ ಮಟ್ಟದಲ್ಲಿ ಹಾಗೂ ಡಿಎಸ್ಎಂಎಂ ಅಖಿಲ ಭಾರತ ಮಟ್ಟದಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದೇವೆ ಎಂದು ಸಂಘಟನೆಗಳು ತಿಳಿಸಿವೆ. ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ತಮ್ಮ ಹೋರಾಟಕ್ಕೆ ಸಿಕ್ಕ ಮಹತ್ವದ ಜಯವಾಗಿದೆ ಎಂದು ಅವು ಹೇಳಿವೆ.

ಇನ್ನು ಮಸೂದೆಯನ್ನು ಶೀಘ್ರದಲ್ಲೇ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

ಇದನ್ನೂ ನೋಡಿ: SC ಒಳಮೀಸಲಾತಿ| ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಸಿಪಿಐ(ಎಂ) ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *