ಡಿಜಿಟಲ್ ಯುಗ ಅಥವಾ ಎಲೆಕ್ಟ್ರಿಕ್ ವಾಹನಗಳ ಜಗತ್ತು ಅಂದುಕೊಂಡಷ್ಟು ಕ್ಷೀನೂ ಅಲ್ಲ ಅಥವಾ ಹಸಿರೂ ಅಲ್ಲ. ಬಂಡವಾಳಶಾಹಿ ವ್ಯವಸ್ಥೆಯು ತನ್ನ ಲಾಭ ಮತ್ತು ಪೈಪೋಟಿಗಾಗಿ ಹೊಸ ತಂತ್ರಜ್ಞಾನಗಳನ್ನು ತರುತ್ತಿದೆಯಾದರೂ, ಅದಕ್ಕೆ ಬೇಕಾದ ಕಚ್ಚಾ ಪದಾರ್ಥಗಳಿಗೆ ದಕ್ಷಿಣದ ದೇಶಗಳ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆಹೊಡೆಯಬೇಕು. ಮತ್ತು ಬಡ ಕಾರ್ಮಿಕರ ಆರೋಗ್ಯವನ್ನು ಬಲಿಕೊಡಬೇಕು, ಹಲವು ಸಂದರ್ಭಗಳಲ್ಲಿ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಬಂಡವಾಳಶಾಹಿಯ ಈ ಶೋಷಣೆಯ ಸ್ವರೂಪ ಮಾತ್ರ ಬದಲಾಗಿಲ್ಲ.
-ವೇಣುಗೋಪಾಲ್ ಟಿ ಎಸ್
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಕಂಪ್ಯೂಟರ್, ಸ್ಮಾರ್ಟ್‌ಫೋನ್, ಇಂಟರ್ನೆಟ್, ಕೃತಕ ಬುದ್ಧಿಮತ್ತೆ ಮತ್ತು ಪರಿಸರಸ್ನೇಹಿ ಎಲೆಕ್ಟ್ರಿಕ್ ವಾಹನಗಳು ಎಲ್ಲೆಡೆ ರಾರಾಜಿಸುತ್ತಿವೆ. ಮೇಲ್ನೋಟಕ್ಕೆ ಇವೆಲ್ಲವೂ ತೀರ ಸ್ವಚ್ಛ, ಅತಿ ನವೀನ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಂತೆ ಕಾಣುತ್ತವೆ. ಡಿಜಿಟಲ್ ಕ್ರಾಂತಿಯೆಂದರೆ ಕೇವಲ ಸಾಫ್ಟ್‌ವೇರ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕಚೇರಿಯಲ್ಲಿ ಕೂತು ಮಾಡುವ ಕೆಲಸ ಎಂಬ ಭ್ರಮೆಯಿದೆ. ಆದರೆ ಮಾಂತ್ಲಿ ರಿವ್ಯೂ ಪತ್ರಿಕೆಯಲ್ಲಿ ಬೆಂಜಮಿನ್ ಸೆಲ್ವಿನ್ ಬರೆದಿರುವ ವ್ಯಾಲ್ಯೂ ಚೈನ್ ಇನ್ ದಿ ಡಿಜಿಟಲ್ ಎಜೆ ಲೇಖನ ಆ ಭ್ರಮೆಯನ್ನು ಸಂಪೂರ್ಣವಾಗಿ ಒಡೆದುಹಾಕುತ್ತದೆ. ಡಿಜಿಟಲ್ ಯುಗದಲ್ಲೂ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯು ಕಾರ್ಮಿಕರ ದೇಹಗಳನ್ನು ಮತ್ತು ನಿಸರ್ಗವನ್ನು ಹೇಗೆ ಭೀಕರವಾಗಿ ಹಿಂಡಿ ಹಿಪ್ಪೆ ಮಾಡುತ್ತಿದೆ ಎಂಬುದನ್ನು ಲೇಖಕರು ಜಾಗತಿಕ ಮೌಲ್ಯ ಸರಪಳಿಯ (Global Value Chains) ಮೂಲಕ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ತಂತ್ರಜ್ಞಾನದ ಬದಲಾವಣೆ ಮತ್ತು ಬಂಡವಾಳಶಾಹಿಯ ದಕ್ಷತೆ
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಸ್ಥಗಿತವಾಗಿರುವುದಿಲ್ಲ. ಬೆಳೆಯುತ್ತಲೇ ಇರುತ್ತದೆ. ಕಂಪನಿಗಳ ನಡುವಿನ ತೀವ್ರ ಪೈಪೋಟಿ ಮತ್ತು ಬಂಡವಾಳವನ್ನು ಹೆಚ್ಚಿಸಿಕೊಳ್ಳುವ ಹಪಾಹಪಿಯೇ ಇದಕ್ಕೆ ಕಾರಣ. ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ದಕ್ಷತೆ ಹೆಚ್ಚಿಸಿಕೊಳ್ಳುವುದು ಬಂಡವಾಳ ಕ್ರೋಢೀಕರಣಕ್ಕೆ ಸಮಾನಾರ್ಥಕವಾಗಿದೆ. ಕಡಿಮೆ ಕಚ್ಚಾ ವಸ್ತು ಮತ್ತು ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಮಾಡುವುದರಿಂದ ಕಂಪನಿಗಳಿಗೆ ಎದುರಾಳಿಗಳನ್ನು ಮಣಿಸಲು, ಮಾರುಕಟ್ಟೆ ನಿಯಂತ್ರಿಸಲು ಸಾಧ್ಯವಾಗುತ್ತದೆ. ಆದರೆ ಇದರರ್ಥ ಬಂಡವಾಳಶಾಹಿ ಪರಿಸರವನ್ನು ರಕ್ಷಿಸುತ್ತದೆ ಎಂದಲ್ಲ. 19ನೇ ಶತಮಾನದಲ್ಲೇ ಅರ್ಥಶಾಸ್ತ್ರಜ್ಞ ವಿಲಿಯಂ ಸ್ಟಾನ್ಲಿ ಜೆವನ್ಸ್ ಇದನ್ನು ಹೇಳಿದ್ದರು. ಅದನ್ನು ‘ಜೆವನ್ಸ್ ವಿರೋಧಾಭಾಸ’ ಎನ್ನುತ್ತಾರೆ. ತಂತ್ರಜ್ಞಾನದಿಂದ ಸಂಪನ್ಮೂಲ ಬಳಕೆ ಸಲೀಸಾದಾಗ ಮತ್ತು ಅಗ್ಗವಾದಾಗ, ಜನರು ಅದನ್ನು ಉಳಿಸುವ ಬದಲು ಹೆಚ್ಚೆಚ್ಚು ಬಳಸತೊಡಗುತ್ತಾರೆ. ಜೇಮ್ಸ್ ವ್ಯಾಟ್ ಸುಧಾರಿತ ಹಬೆಯಂತ್ರ ಕಂಡು ಹಿಡಿದಾಗ ಕಲ್ಲಿದ್ದಲು ಉಳಿಯಲಿಲ್ಲ. ಬದಲಿಗೆ ಅದರ ಬಳಕೆ ಇನ್ನಷ್ಟು ಹೆಚ್ಚಾಯಿತು. ಇಂದಿನ ಡಿಜಿಟಲ್ ಮತ್ತು ಹಸಿರು ತಂತ್ರಜ್ಞಾನದಲ್ಲೂ ಇದೇ ನಡೆಯುತ್ತಿದೆ.
ಡಿಜಿಟಲ್ ಯುಗದ ಕಚ್ಚಾ ವಸ್ತುಗಳು ಮತ್ತು ಲಿಥಿಯಂ ಸರಪಳಿ
ಇಂದು ಜಗತ್ತು ಎರಡು ದೊಡ್ಡ ಪರಿವರ್ತನೆಗಳನ್ನು ಒಟ್ಟಿಗೆ ತರುತ್ತಿದೆ. ಒಂದು ಡಿಜಿಟಲ್ ಕ್ರಾಂತಿ, ಇನ್ನೊಂದು ಹಸಿರು ಶಕ್ತಿಯ ಕ್ರಾಂತಿ. ಬ್ಯಾಟರಿಗಳು. ಗಾಳಿ ಯಂತ್ರಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಲಿಥಿಯಂ, ಕೋಬಾಲ್ಟ್, ನಿಕಲ್, ಗ್ರ್ಯಾಫೈಟ್ ಮುಂತಾದ ಖನಿಜಗಳು ಅತ್ಯಗತ್ಯ. ಇದರಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಅತ್ಯಂತ ಪ್ರಮುಖವಾದುದು. ಇದು ಹಗುರವಾಗಿದೆ. ಅದರಲ್ಲಿ ಹೆಚ್ಚು ಶಕ್ತಿಯನ್ನು ಶೇಖರಿಸಬಹುದು. ವಿಶ್ವ ಆರ್ಥಿಕ ವೇದಿಕೆಯು ಇದನ್ನು ಹವಾಮಾನ ಬಿಕ್ಕಟ್ಟನ್ನು ತಡೆಯುವ ಅಸ್ತ್ರವೆಂದು ಕರೆಯುತ್ತದೆ. ಆದರೆ, ಈ ಬ್ಯಾಟರಿ ಉತ್ಪಾದನೆ ಪ್ರಕೃತಿಯನ್ನು ಮತ್ತು ಮನುಷ್ಯರ ದೇಹವನ್ನು ಇನ್ನೂ ಕೊಲ್ಲುತ್ತಿದೆ.
ಲಿಥಿಯಂ ಅನ್ನು ಎರಡು ರೀತಿಯಲ್ಲಿ ತೆಗೆಯುತ್ತಾರೆ. ಒಂದು, ಕಲ್ಲುಗಳ ಗಣಿಗಾರಿಕೆ. ಇನ್ನೊಂದು, ಉಪ್ಪುನೀರಿನಿಂದ ಅದನ್ನು ಪ್ರತ್ಯೇಕಿಸುವುದು. ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್‌ಬುಷಸ್ ವಿಶ್ವದಲ್ಲೇ ದೊಡ್ಡ ಲಿಥಿಯಂ ಗಣಿ. ಜಾಗತಿಕ ಬೇಡಿಕೆಗೆ ತಕ್ಕಂತೆ ಇಲ್ಲಿ ಉತ್ಪಾದನೆ ಹೆಚ್ಚಿಸಿದಾಗ, ಹವಾಮಾನದಲ್ಲಿ ಸಿಲಿಕಾ ಧೂಳು ವಿಪರೀತವಾಯಿತು. ಕಂಪನಿಗಳು ನಿಗದಿತ ಸುರಕ್ಷತಾ ಮಿತಿಗಳನ್ನು ಗಾಳಿಗೆ ತೂರಿದವು. ಕಾರ್ಮಿಕರು ಮತ್ತು ಸುತ್ತಮುತ್ತಲಿನ ನಿವಾಸಿಗಳು ಉಸಿರಾಟದ ತೊಂದರೆ ಮತ್ತು ತೀವ್ರ ಕೆಮ್ಮಿನಿಂದ ನರಳುತ್ತಿದ್ದಾರೆ.
ಇನ್ನೊಂದೆಡೆ, ಚಿಲಿ ದೇಶದಲ್ಲಿ ಉಪ್ಪುನೀರಿನಿಂದ ಲಿಥಿಯಂ ತೆಗೆಯಲಾಗುತ್ತದೆ. ಅಲ್ಲಿನ ಸಲಾರ್ ಡೆ ಅಟಕಾಮಾ ಮರುಭೂಮಿಯ ಉಪ್ಪು ನೀರಿನಿಂದ ಕೋಟ್ಯಂತರ ಐಫೋನ್‌ಗಳಿಗೆ ಬೇಕಾಗುವ ಲಿಥಿಯಂ ಉತ್ಪಾದಿಸಲಾಗುತ್ತಿದೆ. ಆದರೆ ಇದರಿಂದ ಅಂತರ್ಜಲ ಬರಿದಾಗಿದೆ, ನೀರಿನ ಮಟ್ಟ ಶೇಕಡ 30ರಷ್ಟು ಕುಸಿದಿದೆ, ಸ್ಥಳೀಯ ಸಸ್ಯವರ್ಗ ಮತ್ತು ಫ್ಲೆಮಿಂಗೊ ಹಕ್ಕಿಗಳು ನಾಶವಾಗುತ್ತಿವೆ. ಅಲ್ಲಿನ ಸ್ಥಳೀಯ ಬುಡಕಟ್ಟು ಜನರ ಬದುಕು ಅತಂತ್ರವಾಗಿದೆ. ಅಲ್ಲಿನ ಕಾರ್ಮಿಕರು ಕುಟುಂಬದಿಂದ ನೂರಾರು ಕಿಲೋಮೀಟರ್ ದೂರದಲ್ಲಿ, 7 ದಿನ ಕೆಲಸ-7 ದಿನ ರಜೆ ಅಥವಾ 14 ದಿನ ಸತತ ಕೆಲಸದ ಕಠಿಣ ಪಾಳಿಯಲ್ಲಿ ದುಡಿಯುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟರೂ ಅವರಿಗೆ ತಾಮ್ರದ ಗಣಿಗಾರಿಕೆಯಲ್ಲಿ ಸಿಗುವಷ್ಟೂ ಕೂಲಿ ಸಿಗುವುದಿಲ್ಲ. ಕಾರ್ಮಿಕರು ಸಂಘಟನೆಯಾಗದಂತೆ ಕಂಪನಿಗಳು ಕಣ್ಗಾವಲು ಇಟ್ಟು ದಮನ ಮಾಡುತ್ತವೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಬರದ ಆತಂಕ; ಕುಡಿಯುವ ನೀರು, ವಿದ್ಯುತ್ ಕೊರತೆ ಸಾಧ್ಯತೆ: ಜನರು ‘ಮಾನಸಿಕವಾಗಿ ಸಿದ್ಧರಾಗಿ’ ಎಂದ ಡಿ.ಕೆ. ಶಿವಕುಮಾರ್
ಸಂಸ್ಕರಣೆ ಮತ್ತು ಬ್ಯಾಟರಿ ಕಾರ್ಖಾನೆಗಳ ದುರಂತ
ಗಣಿಯಿಂದ ತೆಗೆದ ಲಿಥಿಯಂ ಅನ್ನು ರಾಸಾಯನಿಕವಾಗಿ ಸಂಸ್ಕರಿಸುವಾಗ ಕಾರ್ಮಿಕರು ಅತ್ಯಂತ ಅಪಾಯಕಾರಿ ಅನಿಲಗಳು ಮತ್ತು ದ್ರವಗಳು ಭಾದಿಸುತ್ತವೆ. ಇದು ಶ್ವಾಸಕೋಶವನ್ನು ಹಾಳುಮಾಡುತ್ತದೆ, ಕಣ್ಣು ಕಳೆದುಕೊಳ್ಳುವ ಅಪಾಯವೂ ಇದೆ. ಸಂಸ್ಕರಿಸಿದ ನಂತರ ಬ್ಯಾಟರಿ ತಯಾರಿಸುವ ಹಂತದಲ್ಲೂ ನಿಕಲ್ ಮತ್ತು ಕೋಬಾಲ್ಟ್‌ಗಳ ಸಂಪರ್ಕದಿಂದಾಗಿ ಕಾರ್ಮಿಕರ ಚರ್ಮ ಮತ್ತು ಶ್ವಾಸಕಾಂಗಗಳು ರೋಗಗ್ರಸ್ತವಾಗುತ್ತವೆ. ದಕ್ಷಿಣ ಕೊರಿಯಾದಲ್ಲಿ 2024ರಲ್ಲಿ ನಡೆದ ಅರಿಸೆಲ್ ಬ್ಯಾಟರಿ ಕಾರ್ಖಾನೆಯ ಅಗ್ನಿ ದುರಂತದಲ್ಲಿ 23 ಬಡ ವಲಸೆ ಕಾರ್ಮಿಕರು ಜೀವಂತ ಸುಟ್ಟುಹೋದರು. ಲಾಭದಾಸೆಗಾಗಿ ಸುರಕ್ಷತೆಯನ್ನು ಕಡೆಗಣಿಸಿದ್ದೇ ಇದಕ್ಕೆ ಕಾರಣವೆಂದು ಕೋರ್ಟ್ ಹೇಳಿತು. ಅಮೆರಿಕದ ಕಾರ್ಖಾನೆಗಳಲ್ಲೂ ಬೆಂಕಿ ಬಿದ್ದು ವಿಷಕಾರಿ ಹೊಗೆಯಿಂದಾಗಿ ಕಾರ್ಮಿಕರು ಶಾಶ್ವತ ಶ್ವಾಸಕೋಶ ಹಾನಿಗೆ ಒಳಗಾಗಿದ್ದಾರೆ.
ಅಂತಿಮವಾಗಿ,
ಡಿಜಿಟಲ್ ಯುಗ ಅಥವಾ ಎಲೆಕ್ಟ್ರಿಕ್ ವಾಹನಗಳ ಜಗತ್ತು ಅಂದುಕೊಂಡಷ್ಟು ಕ್ಷೀನೂ ಅಲ್ಲ ಅಥವಾ ಹಸಿರೂ ಅಲ್ಲ. ಬಂಡವಾಳಶಾಹಿ ವ್ಯವಸ್ಥೆಯು ತನ್ನ ಲಾಭ ಮತ್ತು ಪೈಪೋಟಿಗಾಗಿ ಹೊಸ ತಂತ್ರಜ್ಞಾನಗಳನ್ನು ತರುತ್ತಿದೆಯಾದರೂ, ಅದಕ್ಕೆ ಬೇಕಾದ ಕಚ್ಚಾ ಪದಾರ್ಥಗಳಿಗೆ ದಕ್ಷಿಣದ ದೇಶಗಳ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆಹೊಡೆಯಬೇಕು. ಮತ್ತು ಬಡ ಕಾರ್ಮಿಕರ ಆರೋಗ್ಯವನ್ನು ಬಲಿಕೊಡಬೇಕು, ಹಲವು ಸಂದರ್ಭಗಳಲ್ಲಿ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಬಂಡವಾಳಶಾಹಿಯ ಈ ಶೋಷಣೆಯ ಸ್ವರೂಪ ಮಾತ್ರ ಬದಲಾಗಿಲ್ಲ.
ಇದನ್ನೂ ನೋಡಿ : ಕಸ್ತೂರಿ ರಂಗನ್ ವರದಿಯಿಂದ ಜನರ ಬದುಕಿಗೆ ಕುತ್ತೇ? | ಸಿಪಿಐ(ಎಂ) ಕೊಟ್ಟ ಎಚ್ಚರಿಕೆಗಳೇನು? Janashakthi Media
