ಮೀಸಲು ಕರೆನ್ಸಿಯಾಗಿ ಡಾಲರಿನ ಪಾತ್ರವು ಕಾಲಕ್ರಮೇಣ ಒಂದು ಆಯುಧವಾಗಿ ಬದಲಾಯಿತು. ಅಮೆರಿಕಕ್ಕೆ ಆರ್ಥಿಕ ಅನುಕೂಲ ನೀಡುವ ಸಾಧನವಾಗಿಯಷ್ಟೇ ಉಳಿಯದೆ, , ಇತರ ದೇಶಗಳ ಕೈತಿರುಚಲು ಅತ್ಯಂತ ಸಿನಿಕತನದಿಂದ ಬಳಸುವ ಅಮೆರಿಕದ ಸಾಮ್ರಾಜ್ಯಶಾಹಿಯ ಒಂದು ಅಪಾಯಕಾರಿ ಮತ್ತು ಪ್ರಬಲ ಸಾಧನವಾಗಿ ಅದು ಮಾರ್ಪಟ್ಟಿತು. ಈ ವಿದ್ಯಮಾನವು, “ಅಪ-ಡಾಲರೀಕರಣ” ದ ಕೂಗಿಗೆ, ಅಂದರೆ ಡಾಲರ್ ಬದಲಿಗೆ ಪರಸ್ಪರ ಕರೆನ್ಸಿಗಳ ಬಳಕೆಗೆ ಹೆಚ್ಚಿನ ತುರ್ತನ್ನು ಕೊಟ್ಟಿತು. ಈ ಅಂಶವು ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಸ್ಪಷ್ಟವಾಗಿ ಕಂಡುಬಂತು. ಆದರೆ ಜಾಗತಿಕ ರಂಗದಲ್ಲಿ ಒಂದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಬ್ರಿಕ್ಸ್ ಇನ್ನೂ ಬಹಳ ದೂರ ಸಾಗಬೇಕಿದೆ. ಸಾಮ್ರಾಜ್ಯಶಾಹಿ–ಪರ ದೇಶಗಳನ್ನೂ ಒಳಗೊಂಡಿರುವ ಬ್ರಿಕ್ಸ್‌ನ ಬಹುವಿಧ ಸ್ವರೂಪವನ್ನು ಗಮನಿಸಿದರೆ, ಅಷ್ಟು ದೂರ ಅದು ಸಾಗುತ್ತದೆಯೇ ಎಂಬುದು ಒಂದು ಚರ್ಚಾಸ್ಪದ ವಿಷಯ. ಸಾಮ್ರಾಜ್ಯಶಾಹಿ
ಅನು:ಕೆ.ಎಂ.ನಾಗರಾಜ್
ಬ್ರೆಟ್ಟನ್ ವುಡ್ಸ್ ವ್ಯವಸ್ಥೆಯು ಅಮೆರಿಕದ ಡಾಲರನ್ನು ಒಂದು ಜಾಗತಿಕ ಮೀಸಲು ಕರೆನ್ಸಿಯಾಗಿ ಸಾಂಸ್ಥಿಕಗೊಳಿಸಿತು. ಈ ವ್ಯವಸ್ಥೆಯಡಿಯಲ್ಲಿ, ವಿದೇಶಿ ಸರ್ಕಾರಗಳಿಂದ ಮತ್ತು ಕೇಂದ್ರೀಯ ಬ್ಯಾಂಕ್‌ಗಳಿಂದ ಪ್ರತಿ ಔನ್ಸ್ ಚಿನ್ನವನ್ನು ನಿಗದಿತ 35 ಡಾಲರ್ ದರದಲ್ಲಿ ಖರೀದಿಸಲು ಮತ್ತು ಮಾರಾಟ ಮಾಡಲು ಅಮೆರಿಕ ಬದ್ಧವಾಗಿತ್ತು. ಡಾಲರ್‌ನ ಈ ಮೀಸಲು ಕರೆನ್ಸಿಯ ಪಾತ್ರವು ಒಂದು ನಂಬಿಕೆಯ ಮೇಲೆ – ಡಾಲರ್‌ಗಳನ್ನು ಚಿನ್ನದೊಂದಿಗೆ ಬದಲಾಯಿಸಲು ಎಲ್ಲರೂ ಏಕ ಕಾಲದಲ್ಲಿ ಮುಗಿಬೀಳುವುದಿಲ್ಲ ಎಂಬ ನಂಬಿಕೆಯ ಮೇಲೆ – ಆಧಾರಿತವಾಗಿತ್ತು. ಈ ನಂಬಿಕೆಯು ಚಿನ್ನದ ಡಾಲರ್ ಬೆಲೆ ಬಹಳ ಕಾಲಸ್ಥಿರವಾಗಿರುತ್ತದೆ ಎಂಬ ನಿರೀಕ್ಷೆಯನ್ನು ಆಧರಿಸಿತ್ತು. ಡಾಲರ್ ಕರೆನ್ಸಿಯ ಮೌಲ್ಯ ಸ್ಥಿರವಾಗಿರುತ್ತದೆ ಎಂಬ ನಿರೀಕ್ಷೆಯು ಸರಕು-ಸಾಮಗ್ರಿಗಳ ಬೆಲೆಗಳ ಸ್ಥಿರತೆಯ (ಅಲ್ಪಾವಧಿಯ ಏರಿಳಿತಗಳನ್ನು ಹೊರತುಪಡಿಸಿ, ಬಹಳ ಕಾಲ ಸ್ಥಿರವಾಗಿ ಉಳಿಯುವ ನಂಬಿಕೆ) ಮೇಲೆ ಅವಲಂಬಿತವಾಗಿತ್ತು. ಈ ನಿರೀಕ್ಷೆ ಎಷ್ಟು ಕಾಲ ಬಾಳುತ್ತದೆಯೋ ಅಷ್ಟೂ ಕಾಲ ಅಮೆರಿಕ ತನಗೆ ಬೇಕಾದಷ್ಟು ಹಣವನ್ನು ಖರ್ಚು ಮಾಡಬಹುದಿತ್ತು, ಏಕೆಂದರೆ ಉಳಿದ ಜಗತ್ತು ಡಾಲರ್‌ಗಳನ್ನು ಮತ್ತು ಡಾಲರ್ ರೂಪದ ಆಸ್ತಿಗಳನ್ನು ಹಿಡಿದಿಟ್ಟುಕೊಳ್ಳಲು ಸದಾ ಸಿದ್ಧವಿತ್ತು. ವಿಯೆಟ್ನಾಂ ಯುದ್ಧವು ಒಂದು ಉಗ್ರ ಸ್ವರೂಪ ತಳೆದ ನಂತರ ಅಮೆರಿಕದಲ್ಲಿ ಉಂಟಾದ ಹಣದುಬ್ಬರದಿಂದಾಗಿ ಈ ನಿರೀಕ್ಷೆಗಳು ಶಿಥಿಲಗೊಂಡವು ಮತ್ತು ಪ್ರತಿ ಔನ್ಸ್ ಚಿನ್ನವನ್ನು ನಿಗದಿತ 35 ಡಾಲರ್ ದರದಲ್ಲಿ ಖರೀದಿಸುವ ಮತ್ತು ಮಾರಾಟ ಮಾಡುವ ಬ್ರೆಟ್ಟನ್ ವುಡ್ಸ್ ವ್ಯವಸ್ಥೆಯೂ ಕುಸಿದು ಬಿತ್ತು.
ಸಂಕ್ರಮಣದ ಒಂದು ಅವಧಿಯ ನಂತರ ಡಾಲರ್ ತನ್ನ ಪ್ರಾಬಲ್ಯವನ್ನು ಮರಳಿ ಪಡೆಯಿತು. ನಿಗದಿತ ದರದಲ್ಲಿ ಚಿನ್ನದೊಂದಿಗೆ ಬದಲಾಯಿಸಿಕೊಳ್ಳುವ ಸೌಲಭ್ಯ ನಿಂತುಹೋದರೂ, ಡಾಲರ್ ವಸ್ತುತಃ (de facto) ಜಾಗತಿಕ ಹಣದ ಪಾತ್ರವನ್ನು ಮುಂದುವರಿಸಿತು. ಜಾಗತಿಕ ವ್ಯಾಪಾರದಲ್ಲಿ, ಎಲ್ಲಕ್ಕಿಂತ ಮಿಗಿಲಾಗಿ ತೈಲ ವ್ಯಾಪಾರದಲ್ಲಿ, ವಿನಿಮಯದ ಒಂದು ಮಾಧ್ಯಮವಾಗಿ ಡಾಲರ್‌ನ ವ್ಯಾಪಕ ಬಳಕೆ ಮತ್ತು ಸಂಪತ್ತನ್ನು ಹಿಡಿದಿಟ್ಟುಕೊಳ್ಳುವ ಒಂದು ಸಾಧನವಾಗಿ ಅದರ ಬಳಕೆಯು ಅದು ವಹಿಸುತ್ತಿದ್ದ ಜಾಗತಿಕ ಹಣದ ಪಾತ್ರವನ್ನು ಪ್ರತಿಬಿಂಬಿಸಿತು. ಡಾಲರ್‌ನ ಈ ಜಾಗತಿಕ ಹಣದ ಪಾತ್ರವು, ಸರಕುಗಳ ಜಗತ್ತಿಗೆ ಹೋಲಿಸಿದರೆ ಅದರ ಮೌಲ್ಯವು ಸ್ಥಿರವಾಗಿರುತ್ತದೆ ಎಂಬ ನಿರೀಕ್ಷೆಯ ಮೇಲೆ ಆಧಾರಿತವಾಗಿತ್ತು. ಇದು ಸಹಜವಾಗಿಯೇ ಅಮೆರಿಕಕ್ಕೆ ಒಂದು ವಿಶೇಷವಾದ ಅನುಕೂಲವನ್ನು ದಯಪಾಲಿಸಿತು, ಏಕೆಂದರೆ ಅದು ಉಳಿದ ಜಗತ್ತಿನಿಂದ ಸಾಲ ಪಡೆಯುವುದು ಮತ್ತು ತನಗೆ ಬೇಕಾದಷ್ಟನ್ನು ಖರ್ಚು ಮಾಡುವುದು ಸಾಧ್ಯವಾಯಿತು. ಈ ಅನುಕೂಲದ ಬಗ್ಗೆ ಉಳಿದ ಜಗತ್ತಿನ ಪ್ರತಿಕ್ರಿಯೆ “ತಥಾಸ್ತು”/ “ಹಾಗೆಯೇ ಆಗಲಿ” ಎಂಬುದು ಸುದೀರ್ಘವಾಗಿತ್ತು.
ಆದರೆ, ಡಾಲರ್ ವಹಿಸುತ್ತಿದ್ದ ಈ ಪಾತ್ರವು ಕಾಲಕ್ರಮೇಣ ಒಂದು ಆಯುಧವಾಗಿ ಬದಲಾಯಿತು. ಉಳಿದ ಜಗತ್ತು ಹಿಡಿದಿಟ್ಟುಕೊಂಡ ಡಾಲರ್‌ಗಳು ಮತ್ತು ಡಾಲರ್ ರೂಪದ ಆಸ್ತಿಗಳ ಮೂಲಕ ದೊರಕಿದ ಅವಕಾಶವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಉದ್ದೇಶದಿಂದ ಅಮೆರಿಕ ತನ್ನ ತೀರ್ಮಾನಗಳನ್ನು ಉಳಿದ ದೇಶಗಳ ಮೇಲೆ ಹೇರಲು ಆರಂಭಿಸಿದ ಹಂತದಲ್ಲಿ, ಅಮೆರಿಕಕ್ಕೆ ಆರ್ಥಿಕ ಅನುಕೂಲ ನೀಡುವ ಕೇವಲ ಒಂದು ಮೀಸಲು ಕರೆನ್ಸಿಯಾಗಿ ಡಾಲರ್ ಉಳಿಯಲಿಲ್ಲ; ಬದಲಾಗಿ, ಇತರರನ್ನು ಬಲವಂತವಾಗಿ ಮಣಿಸುವುದಕ್ಕಾಗಿ ಅತ್ಯಂತ ಸಿನಿಕತನದಿಂದ ಬಳಸುವ ಒಂದು ಅಪಾಯಕಾರಿ ಮತ್ತು ಪ್ರಬಲ ಸಾಧನವಾಗಿ ಮಾರ್ಪಟ್ಟಿತು. ಸಾಮ್ರಾಜ್ಯಶಾಹಿ
೧೯೭೯ ರಿಂದ ಅನೇಕ ಬಾರಿ
ಒಂದು ಆಯುಧವಾಗಿ ಡಾಲರ್‌ನ ಮೊದಲ ಬಳಕೆ 1979ರಲ್ಲಿ ಸಂಭವಿಸಿತು. ‘ಒತ್ತೆ ಪ್ರಕರಣ ಬಿಕ್ಕಟ್ಟು’ ಎಂದು ಕರೆಯಲಾದ ಘಟನೆಯ ನಂತರ, ಅಂದಿನ ಅಧ್ಯಕ್ಷ ಜಿಮ್ಮಿ ಕಾರ್ಟರ್ ಇರಾನ್‌ನ 12 ಶತಕೋಟಿ ಡಾಲರ್ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳದಿದ್ದರೂ ಅದನ್ನು ತಾತ್ಕಾಲಿಕ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಇದೊಂದು ಅಂತರರಾಷ್ಟ್ರೀಯ ದರೋಡೆಯ ಕೃತ್ಯವೇ ಸರಿ. ಅಂದಿನಿಂದ ಈ ಕೃತ್ಯವು ಅನೇಕ ಬಾರಿ ಪುನರಾವರ್ತನೆಗೊಂಡಿದೆ. ವಿಶ್ವದ ಬಹುಭಾಗವು ಸಂಪತ್ತನ್ನು ಅಮೆರಿಕದ ಕರೆನ್ಸಿಯ ರೂಪದಲ್ಲಿ ಇಟ್ಟುಕೊಂಡಿದೆ ಎಂಬ ಕಾರಣದಿಂದಾಗಿ, ತನಗೆ ಇಷ್ಟಬಂದಂತೆ ಆ ಸಂಪತ್ತನ್ನು ತಾತ್ಕಾಲಿಕ ಸ್ವಾಧೀನಕ್ಕೆ ತೆಗೆದುಕೊಳ್ಳುವ ಯಾವುದೇ ಕಾನೂನುಬದ್ಧ ಅಥವಾ ನೈತಿಕ ಹಕ್ಕನ್ನು ಅಮೆರಿಕ ಹೊಂದಿಲ್ಲ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಉದಾಹರಣಾ ರೂಪದ ಸಂಗತಿಯನ್ನು ಗಮನಿಸಬಹುದು: ದೇಶವೊಂದರಲ್ಲಿ ಚಲಾವಣೆಯಲ್ಲಿರುವ ಕರೆನ್ಸಿಯು ಆ ದೇಶದ ಕೇಂದ್ರ ಬ್ಯಾಂಕಿನ ಹೊಣೆಗಾರಿಕೆಯಾಗಿರುತ್ತದೆ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಇಟ್ಟುಕೊಂಡಿರುವ ನಗದು ಹಣವನ್ನು ಮನಬಂದಂತೆ ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕು ಆ ದೇಶದ ಸರ್ಕಾರಕ್ಕಾಗಲಿ ಅಥವಾ ಸಂಬಂಧಿಸಿದ ಕೇಂದ್ರ ಬ್ಯಾಂಕ್‌ಗೆ ಆಗಲಿ ಇರುವುದಿಲ್ಲ. ಇದೇ ಈ ತರ್ಕವು ಡಾಲರ್ ರೂಪದಲ್ಲಿ ಇಟ್ಟುಕೊಂಡಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಮೆರಿಕದ ಕ್ರಮಕ್ಕೂ ಅನ್ವಯಿಸುತ್ತದೆ. ಡಾಲರ್ ವಹಿವಾಟುಗಳು ಎಲ್ಲಿಯೇ ನಡೆದರೂ (ಅಮೆರಿಕದ ಒಳಗಿರಲಿ ಅಥವಾ ಹೊರಗಿರಲಿ), ಅವು ಅಮೆರಿಕದ “ಸಂಬಂಧಿತ” (“corresponding”) ಬ್ಯಾಂಕ್‌ಗಳ ಮೂಲಕವೇ ನಡೆಯಬೇಕೆಂಬ ಅಂಶವನ್ನು ಬಳಸಿಕೊಂಡು, ಅಮೆರಿಕವು ವಿದೇಶಿ ಡಾಲರ್ ಆಸ್ತಿಗಳನ್ನು ಸ್ಥಗಿತಗೊಳಿಸುವ ಹಕ್ಕನ್ನು ಚಲಾಯಿಸುತ್ತಿದೆ. ಅಲ್ಲದೆ, ಈ ರೀತಿ ಅಕ್ರಮವಾಗಿ ಪಡೆದ ಪ್ರಭಾವವನ್ನು ಬಳಸಿ, ಇತರ ದೇಶಗಳು ತನ್ನ ಆದೇಶಗಳನ್ನು ಪಾಲಿಸುವಂತೆ ಅವುಗಳ ಕೈತಿರುಚುತ್ತಿದೆ.
ಡಾಲರ್ ವಹಿಸುತ್ತಿದ್ದ ಪಾತ್ರವು ಕಾಲಕ್ರಮೇಣ ಒಂದು ಆಯುಧವಾಗಿ ಬದಲಾಯಿತು. ಉಳಿದ ಜಗತ್ತು ಹಿಡಿದಿಟ್ಟುಕೊಂಡ ಡಾಲರ್‌ಗಳು ಮತ್ತು ಡಾಲರ್ ರೂಪದ ಆಸ್ತಿಗಳ ಮೂಲಕ ದೊರಕಿದ ಅವಕಾಶವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಉದ್ದೇಶದಿಂದ ಅಮೆರಿಕ ತನ್ನ ತೀರ್ಮಾನಗಳನ್ನು ಉಳಿದ ದೇಶಗಳ ಮೇಲೆ ಹೇರಲು ಆರಂಭಿಸಿದ ಹಂತದಲ್ಲಿ, ಅಮೆರಿಕಕ್ಕೆ ಆರ್ಥಿಕ ಅನುಕೂಲ ನೀಡುವ ಕೇವಲ ಒಂದು ಮೀಸಲು ಕರೆನ್ಸಿಯಾಗಿ ಡಾಲರ್ ಉಳಿಯಲಿಲ್ಲ; ಬದಲಾಗಿ, ಇತರರನ್ನು ಬಲವಂತವಾಗಿ ಮಣಿಸುವುದಕ್ಕಾಗಿ ಅತ್ಯಂತ ಸಿನಿಕತನದಿಂದ ಬಳಸುವ ಒಂದು ಅಪಾಯಕಾರಿ ಮತ್ತು ಪ್ರಬಲ ಸಾಧನವಾಗಿ ಮಾರ್ಪಟ್ಟಿತು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಡಾಲರ್ ಈಗ ಅಮೆರಿಕನ್ ಸಾಮ್ರಾಜ್ಯಶಾಹಿಯ ಒಂದು ಬಹಿರಂಗ ಸಾಧನವಾಗಿ ಮಾರ್ಪಟ್ಟಿದೆ. ಅಮೆರಿಕವು ಯಾವುದಾದರೂ ದೇಶದೊಂದಿಗೆ ಸಂಘರ್ಷಕ್ಕಿಳಿದರೆ, ಅದು ವಿಶ್ವಸಂಸ್ಥೆಯ ಬೆಂಬಲವಿಲ್ಲದೆಯೇ ಆ ದೇಶದ ಮೇಲೆ ಏಕಪಕ್ಷೀಯ ನಿರ್ಬಂಧಗಳನ್ನು ಹೇರುತ್ತದೆ ಮತ್ತು ಈ “ಸಂಬಂಧಿತ” (“corresponding”) ಬ್ಯಾಂಕ್‌ಗಳ ವ್ಯವಸ್ಥೆಯ ಮೂಲಕ ಆ ದೇಶದ ಡಾಲರ್ ಆಸ್ತಿಗಳನ್ನು ತಾತ್ಕಾಲಿಕ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತದೆ. ಇಂತಹ ಕ್ರಮಕ್ಕೆ ಇತ್ತೀಚೆಗೆ ಒಳಗಾದ ದೇಶವೆಂದರೆ ರಷ್ಯಾ: ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಹೇರಲಾದ ನಿರ್ಬಂಧಗಳ ಭಾಗವಾಗಿ, ಅದರ ಸುಮಾರು 300 ಶತಕೋಟಿ ಡಾಲರ್ ಮೌಲ್ಯದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಅಮೆರಿಕ ಮತ್ತು ಅದರ ಯುರೋಪಿಯನ್ ಒಕ್ಕೂಟದ ಮಿತ್ರರಾಷ್ಟ್ರಗಳು ತಾತ್ಕಾಲಿಕ ಸ್ವಾಧೀನಕ್ಕೆ ಪಡೆದಿವೆ. ಅದೇ ರೀತಿಯಲ್ಲಿ, ಇಸ್ರೇಲ್‌ನೊಂದಿಗೆ ಸೇರಿಕೊಂಡು ಇರಾನ್ ವಿರುದ್ಧ ಯುದ್ಧ ಹೂಡಿರುವ ಅಮೆರಿಕವು, ಇರಾನ್‌ನ 100 ರಿಂದ 150 ಶತಕೋಟಿ ಡಾಲರ್ ಮೌಲ್ಯದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಸ್ವಾಧೀನಪಡಿಸಿಕೊಂಡಿದೆ. ಗಮನಾರ್ಹ ಸಂಗತಿಯೆಂದರೆ, ಈ ಹಣವನ್ನು ಬಹುತೇಕ ಅಮೆರಿಕದ ಹೊರಗಿನ ಬ್ಯಾಂಕ್‌ಗಳಲ್ಲಿ, ಅದರಲ್ಲೂ ವಿಶೇಷವಾಗಿ ಭಾರತ ಮತ್ತು ಚೀನಾದಲ್ಲಿರುವ ಬ್ಯಾಂಕ್‌ಗಳಲ್ಲಿ ಇಟ್ಟುಕೊಳ್ಳಲಾಗಿತ್ತು. ಸಾಮ್ರಾಜ್ಯಶಾಹಿ
ಇದನ್ನೂ ಓದಿ : ನೈಸ್ ಯೋಜನೆಯಲ್ಲಿ ₹3 ಲಕ್ಷ ಕೋಟಿ ಅಕ್ರಮ ಆರೋಪ: ಡಿಕೆಶಿಗೆ ಕುಮಾರಸ್ವಾಮಿ ಸವಾಲು
“ಅಪ-ಡಾಲರೀಕರಣ“
ಡಾಲರ್ ವಹಿಸುತ್ತಿದ್ದ ಪಾತ್ರದಲ್ಲಾಗಿರುವ ಈ ಬಹಿರಂಗ ಬದಲಾವಣೆಯು, ಅಂದರೆ ಕೇವಲ ಒಂದು ಮೀಸಲು ಕರೆನ್ಸಿಯಾಗಿರುವುದರ ಬದಲು ಅಮೆರಿಕವನ್ನು ಎದುರಿಸುವ ಧೈರ್ಯ ತೋರುವ ಯಾವುದೇ ದೇಶದ ವಿರುದ್ಧ ಬಳಸಲಾಗುವ ಅಮೆರಿಕದ ಸಾಮ್ರಾಜ್ಯಶಾಹಿಯ ಒಂದು ಬಹಿರಂಗ ಆಯುಧವಾಗಿ ಮಾರ್ಪಟ್ಟಿರುವ ವಿದ್ಯಮಾನವು, “ಅಪ-ಡಾಲರೀಕರಣ” (“de-dollarisation”) ಕೂಗಿಗೆ ಒಂದು ಹೆಚ್ಚಿನ ತುರ್ತನ್ನು ನೀಡಿದೆ. ಈ ಅಂಶವು ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಸ್ಪಷ್ಟವಾಗಿ ಕಂಡುಬಂತು. ರಷ್ಯಾ, ಚೀನಾ ಮತ್ತು ಇರಾನ್ ದೇಶಗಳು ಬೇರೆ ಬೇರೆ ಅಂಶಗಳಿಗೆ ಬೇರೆ ಬೇರೆಯಾದ ಒತ್ತು ನೀಡಿವೆಯಾದರೂ ಅಮೆರಿಕ ಹೇರಿದ ಏಕಪಕ್ಷೀಯ ನಿರ್ಬಂಧಗಳ ವ್ಯವಸ್ಥೆಯನ್ನು ವಿರೋಧಿಸುವ ಮತ್ತು ಒಂದು ಪರ್ಯಾಯ ವ್ಯಾಪಾರ ಹಾಗೂ ಹಣಕಾಸು ವ್ಯವಸ್ಥೆಯ ಅಗತ್ಯವನ್ನು ಒಂದು ಆದ್ಯತೆಯಾಗಿ ಪ್ರತಿಪಾದಿಸಿದವು. ಈ ಸಂದರ್ಭದಲ್ಲಿ ಬ್ರಿಕ್ಸ್ ಸದಸ್ಯ ದೇಶಗಳ ನಡುವಿನ ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆಗೆ ಕರೆ ನೀಡಲಾಯಿತು. ಈ ವ್ಯಾಪಾರದ ಗಾತ್ರವನ್ನು ಗಣನೀಯವಾಗಿ ವಿಸ್ತರಿಸುವ ಅಗತ್ಯವನ್ನೂ ಗುರುತಿಸಲಾಯಿತು.
ಇದು ಜಾಗತಿಕ ದಕ್ಷಿಣ ದೇಶಗಳಿಗೆ ಮಾತ್ರವೇ ಪ್ರಯೋಜನವಾಗುವಂತಹ ಒಂದು ನ್ಯಾಯಯುತವಾದ ವ್ಯವಸ್ಥೆಗಾಗಿ ನೀಡಿದ ಕರೆಯಾಗಿರಲಿಲ್ಲ. ಬದಲಿಗೆ, ಅಮೆರಿಕದ ನಿಲುವನ್ನು ಅನುಸರಿಸದ ದೇಶಗಳ ಮೇಲೆ ಹೇರಲಾದ ಸ್ವಪ್ನಪಿಶಾಚಿಯಂತೆ ಕಾಡುವ ಏಕಪಕ್ಷೀಯ ನಿರ್ಬಂಧಗಳಿಗೆ ಒಳಗಾದ ದೇಶಗಳ ಡಾಲರ್ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮಗಳ ವಿರುದ್ಧ ಒಂದು ಮುಚ್ಚುಮರೆಯಿಲ್ಲದ ಕರೆಯಾಗಿತ್ತು. ಭಾರತವು ಬ್ರಿಕ್ಸ್ ದೇಶಗಳ ನಡುವಿನ ವ್ಯಾಪಾರ ವಿಸ್ತರಣೆ ಮತ್ತು ಸ್ಥಳೀಯ ಕರೆನ್ಸಿಗಳ ಬಳಕೆಯ ಅಗತ್ಯವನ್ನು ಸಾಮಾನ್ಯವಾಗಿ ಒಪ್ಪಿಕೊಂಡಿತಾದರೂ, ಡಾಲರ್ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದನ್ನು ವಿರೋಧಿಸುವ ವಿಷಯದಲ್ಲಿ ಮೌನ ವಹಿಸಿತು ಎಂಬುದು ವಿಷಾದನೀಯ. ಎನ್‌ಡಿಎ ಸರ್ಕಾರದ ಅಡಿಯಲ್ಲಿ ಭಾರತವು ವಿಶ್ವಸಂಸ್ಥೆಯ ಬೆಂಬಲವಿಲ್ಲದ ಏಕಪಕ್ಷೀಯ ನಿರ್ಬಂಧಗಳನ್ನು ಸಾಮಾನ್ಯವಾಗಿ ವಿರೋಧಿಸುತ್ತದೆಯಾದರೂ, ನಿರ್ಬಂಧಕ್ಕೊಳಗಾದ ದೇಶಗಳ ಡಾಲರ್ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಅಮೆರಿಕದ ಕ್ರಮವನ್ನು ಅದು ಬಹಿರಂಗವಾಗಿ ಟೀಕಿಸುವುದಿಲ್ಲ. ಅಷ್ಟೇ ಅಲ್ಲ. ವಿದೇಶಾಂಗ ವ್ಯವಹಾರಗಳ ಸಚಿವರು “ಅಪ-ಡಾಲರೀಕರಣ” ಕರೆಯ ವಿರುದ್ಧವಾಗಿಯೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ! ಸಾಮ್ರಾಜ್ಯಶಾಹಿ
ಸ್ಥಳೀಯ ಕರೆನ್ಸಿಗಳ ಬಳಕೆಯ ಆಧಾರದ ಮೇಲೆ ಬ್ರಿಕ್ಸ್ ದೇಶಗಳ ನಡುವಿನ ವ್ಯಾಪಾರ ವಿಸ್ತರಣೆಯಾಗಬೇಕು ಎಂದಾದರೆ, ವ್ಯಾಪಾರದ ‘ನಿಯಮಗಳು’ ಪ್ರಸ್ತುತ ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿರುವ ನಿಯಮಗಳಿಗಿಂತ ಭಿನ್ನವಾಗಿರಬೇಕಾಗುತ್ತದೆ. ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಸುಮ್ಮನೇ ಹೆಚ್ಚಿಸುವುದರಿಂದ, ಪ್ರಸ್ತುತ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಪಾವತಿ ವ್ಯವಸ್ಥೆಯನ್ನು ಬಾಧಿಸುತ್ತಿರುವ ಅದೇ ವೈರುಧ್ಯಗಳು ಬ್ರಿಕ್ಸ್ ಒಕ್ಕೂಟದೊಳಗೂ ಮರುಕಳಿಸುತ್ತವೆ.
ಬ್ರಿಕ್ಸ್ ಸದಸ್ಯ ದೇಶಗಳ ನಡುವಿನ ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆ ಸಂಬಂಧವಾಗಿ ಎದುರಾಗುವ ಸವಾಲುಗಳನ್ನು ಖಂಡಿತವಾಗಿಯೂ ಕೀಳಂದಾಜು ಮಾಡುವಂತಿಲ್ಲ. ಈ ವ್ಯಾಪಾರವು ಅನೇಕ ಕರೆನ್ಸಿಗಳ ಬಳಕೆಯ ಮೇಲೆ ಆಧಾರಿತವಾಗಿದ್ದರೆ, ಆಗ ಸಟ್ಟಾ ವಹಿವಾಟುಗಳನ್ನು ತಪ್ಪಿಸಲು ಆ ಕರೆನ್ಸಿಗಳ ನಡುವಿನ ವಿನಿಮಯ ದರಗಳು ಹೆಚ್ಚುಕಡಿಮೆ ಸ್ಥಿರವಾಗಿರಬೇಕಾಗುತ್ತದೆ. ಈ ಸ್ಥಿರತೆಯನ್ನು ಸುದೀರ್ಘವಾಗಿ ಕಾಯ್ದುಕೊಳ್ಳಬೇಕಾದರೆ, ‘ಪಾವತಿ ಶೇಷ’ದ (balance of payments) ಕೊರತೆಗಳನ್ನು ಮತ್ತು ಆಧಿಕ್ಯಗಳನ್ನು ಸರಿಹೊಂದಿಸುವ ನಿಯಮಗಳು ಪ್ರಸ್ತುತ ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿರುವುದಕ್ಕಿಂತ ಭಿನ್ನವಾದ ನಿಯಮಗಳನ್ನು ಬ್ರಿಕ್ಸ್ ಒಕ್ಕೂಟ ಹೊಂದಿರಬೇಕಾಗುತ್ತದೆ. ಪ್ರಸ್ತುತದಲ್ಲಿ ಅಂತರರಾಷ್ಟ್ರೀಯ ವ್ಯಾಪಾರದ ಅಸಮತೋಲನವನ್ನು (ಅಂದರೆ, ದೇಶವೊಂದು ಹೊಂದಿರುವ ‘ಪಾವತಿ ಶೇಷ’ದ ಕೊರತೆಯನ್ನು) ನೀಗಿಸಲು ತಮ್ಮ ಆರ್ಥಿಕ ಚಟುವಟಿಕೆಗಳ ಮಟ್ಟವನ್ನು ಇಳಿಕೆ ಮಾಡುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳುವಂತೆ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿರುವ ದೇಶಗಳ ಮೇಲೆ ಒತ್ತಡ ಹೇರಲಾಗುತ್ತದೆ; ಹೀಗಾಗಿ, ವಿಶ್ವದ ಕಡು ಬಡ ದೇಶಗಳು ಕಠಿಣ “ಮಿತವ್ಯಯ ಕ್ರಮಗಳನ್ನು” (“austerity”) ಕೈಗೊಳ್ಳುವಂತೆ ಒತ್ತಾಯಕ್ಕೆ ಒಳಪಡುತ್ತವೆ. ‘ಪಾವತಿ ಶೇಷ’ದಲ್ಲಿ ಆಧಿಕ್ಯವನ್ನು(ಮಿಗುತಾಯವನ್ನು) ಹೊಂದಿರುವ ದೇಶಗಳು ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡುವ ಕ್ರಮವು ಒಂದು ಹೆಚ್ಚು ವಿವೇಚನಾಯುಕ್ತ ಹಾಗೂ ಮಾನವೀಯ ವ್ಯವಸ್ಥೆಯಾಗಿರುತ್ತದೆ. ಏಕೆಂದರೆ, ಆಧಿಕ್ಯವನ್ನು(ಮಿಗುತಾಯವನ್ನು) ಹೊಂದಿರುವ ದೇಶಗಳ ಆಂತರಿಕ(ದೇಶೀಯ) ಬೇಡಿಕೆಯು ಒಂದು ವೇಳೆ ಏರಿಕೆಯಾದರೆ, ಅವುಗಳ ವ್ಯಾಪಾರದ ಮಿಗುತಾಯವು (ಪಾವತಿ ಶೇಷದಲ್ಲಿ ಆಧಿಕ್ಯವು) ಇಳಿಕೆಯಾಗುತ್ತದೆ ಮತ್ತು ಅದರೊಂದಿಗೆ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿರುವ ದೇಶಗಳ ವ್ಯಾಪಾರದ ಕೊರತೆಯೂ (ಪಾವತಿ ಶೇಷದಲ್ಲಿ ಕೊರತೆಯೂ) ಇಳಿಕೆಯಾಗುತ್ತದೆ. ಆದ್ದರಿಂದ, ಸ್ಥಳೀಯ ಕರೆನ್ಸಿಗಳ ಬಳಕೆಯ ಆಧಾರದ ಮೇಲೆ ಬ್ರಿಕ್ಸ್ ದೇಶಗಳ ನಡುವಿನ ವ್ಯಾಪಾರ ವಿಸ್ತರಣೆಯಾಗಬೇಕು ಎಂದಾದರೆ, ವ್ಯಾಪಾರದ ‘ನಿಯಮಗಳು’ ಪ್ರಸ್ತುತ ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿರುವ ನಿಯಮಗಳಿಗಿಂತ ಭಿನ್ನವಾಗಿರಬೇಕಾಗುತ್ತದೆ. ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಸುಮ್ಮನೇ ಹೆಚ್ಚಿಸುವುದರಿಂದ, ಪ್ರಸ್ತುತ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಪಾವತಿ ವ್ಯವಸ್ಥೆಯನ್ನು ಬಾಧಿಸುತ್ತಿರುವ ಅದೇ ವೈರುಧ್ಯಗಳು ಬ್ರಿಕ್ಸ್ ಒಕ್ಕೂಟದೊಳಗೂ ಮರುಕಳಿಸುತ್ತವೆ. ಸಾಮ್ರಾಜ್ಯಶಾಹಿ
ಭಾರತ – ಸೋವಿಯತ್ ಒಕ್ಕೂಟದೊಂದಿಗೆ ಹೊಂದಿದ್ದ ದ್ವಿಪಕ್ಷೀಯ ವ್ಯಾಪಾರ
ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಭಾರತವು ಸೋವಿಯತ್ ಒಕ್ಕೂಟದೊಂದಿಗೆ ಹೊಂದಿದ್ದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳನ್ನು ಈ ಸಂದರ್ಭದಲ್ಲಿ ಅನುಕರಿಸುವ ದೃಷ್ಟಿಯಿಂದ ಮರುಪರಿಶೀಲಿಸಬೇಕಾಗಿದೆ. ಆ ವ್ಯಾಪಾರವು ಬಹಳ ಮಟ್ಟಿಗೆ ಎರಡೂ ಕಡೆಯ ಸಾರ್ವಜನಿಕ ವಲಯದ ಉದ್ಯಮಗಳ ಮೂಲಕ ನಡೆಯುತ್ತಿತ್ತು. ಇದನ್ನು ಈಗಲೂ ಗಮನಾರ್ಹ ಪ್ರಮಾಣದಲ್ಲಿ ಆಚರಣೆಗೆ ತಂದರೆ, ತತ್ವಶಃ ಕರೆನ್ಸಿ ಸಟ್ಟಾ(currency speculation) ವ್ಯಾಪ್ತಿಯನ್ನು ಇಳಿಕೆ ಮಾಡಬಹುದು. ಅಲ್ಲದೆ, ಇತ್ಯರ್ಥವಾಗದೆ ಉಳಿದ ‘ಪಾವತಿ ಶೇಷ’ದ ಕೊರತೆಯ (deficit) ಮತ್ತು ಆಧಿಕ್ಯದ (surplus) ಮೊತ್ತಗಳನ್ನು ಮುಂದಿನ ಅವಧಿಗೆ ಕೊಂಡೊಯ್ಯಲಾಗುತ್ತಿದ್ದುದರಿಂದ, ಈ ವ್ಯವಸ್ಥೆಯಲ್ಲಿ ಆಧಿಕ್ಯವನ್ನು ಹೊಂದಿರುವ ದೇಶವು ಕೊರತೆಯಲ್ಲಿರುವ ದೇಶಕ್ಕೆ ಸ್ವಯಂಚಾಲಿತವಾಗಿ ಸಾಲವನ್ನು ಒದಗಿಸಿತು ಎಂದಾಗುತ್ತಿತ್ತು. ಈ ಆಧಿಕ್ಯಗಳನ್ನು ಮತ್ತು ಕೊರತೆಗಳನ್ನು ಕಾಲಕ್ರಮೇಣ ಸೂಕ್ತ ಖರೀದಿಗಳ ಮೂಲಕ ಸರಿದೂಗಿಸಲಾಗುತ್ತಿದ್ದುದರಿಂದ, ಕೊರತೆ ಇರುವ ದೇಶ ಮಾತ್ರವೇ ತನ್ನ ಕೊರತೆಯನ್ನು ನೀಗಿಸುವ ಸಲುವಾಗಿ ಕಠಿಣ “ಮಿತವ್ಯಯ” ಕ್ರಮಗಳನ್ನು ಅನುಸರಿಸಬೇಕಾಗುವ ಪರಿಸ್ಥಿತಿ ಉದ್ಭವಿಸಲಿಲ್ಲ. ಆದ್ದರಿಂದ, ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ವ್ಯವಸ್ಥೆಯಡಿಯಲ್ಲಿ ದೆವ್ವದಂತೆ ಜಾಗತಿಕ ದಕ್ಷಿಣದ ದೇಶಗಳನ್ನು ಕಾಡುತ್ತಿರುವ ಸಮಸ್ಯೆಗಳು ಭಾರತ-ಸೋವಿಯತ್ ವ್ಯಾಪಾರ ಒಪ್ಪಂದ ವ್ಯವಸ್ಥೆಯನ್ನು ಕಾಡಲಿಲ್ಲ. ಸ್ಥಳೀಯ ಕರೆನ್ಸಿಗಳ ಆಧಾರದ ಮೇಲೆ ಬ್ರಿಕ್ಸ್ ರಾಷ್ಟ್ರಗಳ ನಡುವಿನ ವ್ಯಾಪಾರದ ವಿಸ್ತರಣೆಯು, ಆರಂಭಿಕವಾಗಿ ಭಾರತ-ಸೋವಿಯತ್ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾದರಿಯಲ್ಲಿ ಸದಸ್ಯ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಮೂಲಕ ನಡೆಯಬಹುದು.
ಬ್ರಿಕ್ಸ್ ದೇಶಗಳ ನಡುವಿನ ವ್ಯಾಪಾರ ವಿಸ್ತರಣೆಯ ವಿಷಯವನ್ನು ಬ್ರಿಕ್ಸ್ ಶೃಂಗಸಭೆಯಲ್ಲಿ ಸಾಕಷ್ಟು ಪ್ರಸ್ತಾಪಿಸಲಾಗಿದೆ. ಈ ವ್ಯಾಪಾರವನ್ನು ಸ್ಥಳೀಯ ಕರೆನ್ಸಿಗಳ ಬಳಕೆ ಮೂಲಕ ನಡೆಸುವುದರಿಂದ, ವ್ಯಾಪಾರದಲ್ಲಿ ಒಂದು ಪರಿಚಲನೆಯ ಮಾಧ್ಯಮವಾಗಿ ಡಾಲರ್ ವಹಿಸುತ್ತಿರುವ ಪಾತ್ರವನ್ನು ಕತ್ತರಿಸಿಹಾಕಿದಂತಾಗುತ್ತದೆ. ಇದು ಬ್ರಿಕ್ಸ್ ದೇಶಗಳ ನಡುವಿನ ವ್ಯಾಪಾರವನ್ನು ವಿಸ್ತರಿಸುವಲ್ಲಿ ಒಂದು ಉಪಯೋಗಕರ ಪಾತ್ರವನ್ನು ವಹಿಸುತ್ತದೆ ಎಂಬುದು ಬೋಧಪ್ರದವಾಗಿದೆ. ಆದರೆ ಅಲ್ಲಿ ಸ್ಥಳೀಯ ಕರೆನ್ಸಿಗಳನ್ನು ಬಳಸುವ ಕ್ರಿಯೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಚರ್ಚಿಸಲಿಲ್ಲ. ಇದು ಜಾಗತಿಕ ರಂಗದಲ್ಲಿ ಒಂದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಬ್ರಿಕ್ಸ್ ಇನ್ನೂ ಬಹಳ ದೂರ ಸಾಗಬೇಕಿದೆ ಎಂಬುದನ್ನು ತೋರಿಸುತ್ತದೆ. ಸಾಮ್ರಾಜ್ಯಶಾಹಿ-ಪರ ದೇಶಗಳನ್ನೂ ಒಳಗೊಂಡಿರುವ ಬ್ರಿಕ್ಸ್‌ನ ಬಹುವಿಧ ಸ್ವರೂಪವನ್ನು ಗಮನಿಸಿದರೆ, ಅಷ್ಟು ದೂರ ಅದು ಸಾಗುತ್ತದೆಯೇ ಎಂಬುದು ಒಂದು ಚರ್ಚಾಸ್ಪದ ವಿಷಯ. ಸಾಮ್ರಾಜ್ಯಶಾಹಿ
ಇದನ್ನೂ ನೋಡಿ : ದಿಗ್ಬಂಧನದ ನಡುವೆಯೂ ಕ್ಯೂಬಾ ಹೇಗಿದೆ? | ಕಣ್ಣಾರೆ ಕಂಡ ವಿಭಿನ್ನ ಬದುಕಿನ ಅನುಭವ | ಮೀನಾಕ್ಷಿ ಸುಂದರಂ
