ಉಮರ್ ಖಾಲಿದ್ ಬಂಧನ ಕಾನೂನುಬಾಹಿರ: ಐಕ್ಯರಾಷ್ಟ್ರ ಸಮಿತಿ ತೀರ್ಪು

ನವದೆಹಲಿ: ಭಾರತೀಯ ವಿದ್ಯಾರ್ಥಿ ಹೋರಾಟಗಾರ ಹಾಗೂ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮಾಜಿ ಸಂಶೋಧನಾ ವಿದ್ಯಾರ್ಥಿ ಉಮರ್ ಖಾಲಿದ್ ಅವರ ದೀರ್ಘಕಾಲದ ಬಂಧನವು ಮನಬಂದಂತೆ (ಅರ್ಬಿಟ್ರರಿ) ಆಗಿದ್ದು, ಯಾವುದೇ ಕಾನೂನು ಆಧಾರವಿಲ್ಲ ಎಂದು ಐಕ್ಯರಾಷ್ಟ್ರಗಳ ತಜ್ಞರ ಸಮಿತಿ ತೀರ್ಮಾನಿಸಿದೆ ಎಂಬುದಾಗಿ muslimmirror ವರದಿ ಮಾಡಿದೆ. ಉಮರ್

2026ರ ಫೆಬ್ರವರಿಯಲ್ಲಿ ಹೊರಡಿಸಲಾದ (ಇತ್ತೀಚೆಗೆ ಬಹಿರಂಗಗೊಂಡ) ಅಭಿಪ್ರಾಯದಲ್ಲಿ, ಐಕ್ಯರಾಷ್ಟ್ರಗಳ ಮನಬಂದ ಬಂಧನಗಳ ಕುರಿತ ಕಾರ್ಯಕಾರಿ ಸಮಿತಿ (UNWGAD) ಖಾಲಿದ್ ಅವರ ಬಂಧನವು ನಾಲ್ಕು ವಿಭಾಗಗಳಲ್ಲಿ ಮನಬಂದ ಬಂಧನಕ್ಕೆ ಸೇರಿದೆ ಎಂದು ತಿಳಿಸಿದೆ. ಉಮರ್

ಖಾಲಿದ್ ಅವರ ಸ್ವಾತಂತ್ರ್ಯ ಹರಣವು ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ಸೇರುವ ಹಕ್ಕು, ಸಂಘಟನೆ ಸ್ವಾತಂತ್ರ್ಯ ಹಾಗೂ ಸಾರ್ವಜನಿಕ ವ್ಯವಹಾರಗಳಲ್ಲಿ ಭಾಗವಹಿಸುವ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳ ಶಾಂತಿಯುತ ಬಳಕೆಯಿಂದ ಉಂಟಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಈ ಹಕ್ಕುಗಳು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನಡಿ ಸಂರಕ್ಷಿತವಾಗಿವೆ.

ಇದನ್ನೂ ಓದಿ: ಎಸ್. ಐ.ಆರ್: ‘ಭಾರತ’ ಎಂಬ ಭಾವಕ್ಕೆ ಅತ್ಯಂತ ಗಂಭೀರವಾದ ಬೆದರಿಕೆ

ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧ 2019-2020ರಲ್ಲಿ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಗಳಲ್ಲಿ ಪ್ರಮುಖ ಧ್ವನಿಯಾಗಿದ್ದ ಖಾಲಿದ್ ಅವರನ್ನು 2020ರ ಸೆಪ್ಟೆಂಬರ್‌ 13ರಂದು ಬಂಧಿಸಲಾಗಿತ್ತು.

2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಗಳ ಸಂಬಂಧ ಉಗ್ರಗಾಮಿತ್ವ, ದೇಶದ್ರೋಹ ಹಾಗೂ ಸಂಚು ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ. ‘ಕ್ರಾಂತಿ’ ಎಂಬ ಪದ ಬಳಕೆಯ ಭಾಷಣ ಹಾಗೂ ವಾಟ್ಸಾಪ್ ಗುಂಪಿನ ಸದಸ್ಯತ್ವವನ್ನು ಸಾಕ್ಷ್ಯವಾಗಿ ಉಲ್ಲೇಖಿಸಲಾಗಿದೆ ಎಂದು ವಿಮರ್ಶಕರು ಹೇಳುತ್ತಾರೆ.

ಐದು ವರ್ಷಕ್ಕಿಂತ ಹೆಚ್ಚು ಕಾಲ (2,000 ದಿನಗಳಿಗಿಂತ ಹೆಚ್ಚು) ವಿಚಾರಣೆಗೆ ಮುನ್ನವೇ ಬಂಧನದಲ್ಲಿದ್ದರೂ, ಅವರ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಜಾಮೀನು ಅರ್ಜಿಗಳು ಪದೇ ಪದೇ ತಿರಸ್ಕೃತವಾಗಿದ್ದು, ಇತ್ತೀಚೆಗೆ 2026ರ ಜನವರಿಯಲ್ಲಿ ಭಾರತದ ಸುಪ್ರೀಂ ಕೋರ್ಟ್ ಕೂಡ ಜಾಮೀನು ನಿರಾಕರಿಸಿದೆ. ಇತರ ಸಹ ಆರೋಪಿಗಳಿಗೆ ಕೆಲವು ಸಂದರ್ಭಗಳಲ್ಲಿ ಪರಿಹಾರ ಸಿಕ್ಕಿದ್ದರೂ ಖಾಲಿದ್‌ಗೆ ಅದು ಲಭ್ಯವಾಗಿಲ್ಲ.

2025ರ ಮಾರ್ಚ್‌ನಲ್ಲಿ ಮಾನವ ಹಕ್ಕುಗಳ ಪ್ರತಿಷ್ಠಾನ (HRF) ಸಲ್ಲಿಸಿದ ಅರ್ಜಿಯ ನಂತರ ಈ ಅಭಿಪ್ರಾಯ ಹೊರಬಂದಿದೆ. ನ್ಯಾಯಸಮ್ಮತ ವಿಚಾರಣೆಯ ಉಲ್ಲಂಘನೆ, ಅಸ್ಪಷ್ಟ ಕಾನೂನುಗಳ (ಉದಾ: ಯುಎಪಿಎ) ಬಳಕೆ, ವಿಶೇಷವಾಗಿ ಮುಸ್ಲಿಂ ಹೋರಾಟಗಾರರನ್ನು ಗುರಿಯಾಗಿಸುವ ಭೇದಭಾವ ಹಾಗೂ ದೀರ್ಘಕಾಲದ ವಿಚಾರಣೆಗೆ ಮುನ್ನದ ಬಂಧನದ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಐಕ್ಯರಾಷ್ಟ್ರಗಳ ಸಂವಹನಗಳಿಗೆ ಭಾರತೀಯ ಸರ್ಕಾರ ಪ್ರತಿಕ್ರಿಯಿಸಿಲ್ಲ ಎಂದು ತಿಳಿದುಬಂದಿದೆ.

ಐಕ್ಯರಾಷ್ಟ್ರಗಳ ತಜ್ಞರು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಖಾಲಿದ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಾಗೂ ಅಂತರರಾಷ್ಟ್ರೀಯ ಕಾನೂನಿನಡಿ ಪರಿಹಾರ ಮತ್ತು ಪರಿಹಾರಧನ ನೀಡುವಂತೆ ಸೂಚಿಸಿದ್ದಾರೆ. HRF ಈ ತೀರ್ಪನ್ನು “ಬಂಧನಕ್ಕೆ ಯಾವುದೇ ಕಾನೂನು ಆಧಾರವೇ ಇರಲಿಲ್ಲ” ಎಂಬುದನ್ನು ಸ್ಥಾಪಿಸುತ್ತದೆ ಎಂದು ಹೇಳಿದೆ.

ಈ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಖಾಲಿದ್ ಬಿಡುಗಡೆಗೆ ಹಾಗೂ ಭಾರತದಲ್ಲಿನ ಇಂತಹ ಬಂಧನಗಳನ್ನು ಪರಿಶೀಲಿಸಲು ಐಕ್ಯರಾಷ್ಟ್ರಗಳಿಗೆ ಹೆಚ್ಚಿನ ಪ್ರವೇಶ ನೀಡುವಂತೆ ಮಾನವ ಹಕ್ಕು ಸಂಘಟನೆಗಳು ಮತ್ತು ಶಾಸಕರು ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ – 170 | ಚಿತ್ರ : ಮ್ಯಾಗೆಲ್ಲನ್, ವಿಶ್ಲೇಷಣೆ : ಮ ಶ್ರಿ ಮುರಳಿ ಕೃಷ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *