ಚೆನ್ನೈ: ಚೆಂಗಲ್ಪಟ್ಟು ಜಿಲ್ಲೆಯ ತಿರುಪೊರುರ್ ಬ್ಲಾಕ್ ಅಭಿವೃದ್ಧಿ ಕಚೇರಿಗೆ ಸಂಬಂಧಿಸಿದ ಮೂವರು ಮಹಿಳಾ ಅಧಿಕಾರಿಗಳನ್ನು ₹1,000 ಲಂಚ ಬೇಡಿಕೆ ಮತ್ತು ಸ್ವೀಕಾರ ಆರೋಪದ ಮೇಲೆ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಜೂನ್ 22ರಂದು ಬಂಧಿಸಿದೆ.
ಬಂಧಿತರನ್ನು ಕೆ. ಜಯಾ ಅಲಿಯಾಸ್ ಜಯಲಕ್ಷ್ಮಿ (58) – ಗ್ರಾಮೀಣ ಕಲ್ಯಾಣಾಧಿಕಾರಿ, ಜಿ. ಉಷಾರಾಣಿ (57) – ವಿಸ್ತರಣಾ ಅಧಿಕಾರಿ, ಮತ್ತು ಜೆ. ವಲರ್ಮತಿ (52) – ಗ್ರಾಮೀಣ ಕಲ್ಯಾಣಾಧಿಕಾರಿ ಎಂದು ಗುರುತಿಸಲಾಗಿದೆ.
ಕರುಂಬಕ್ಕಂ ಗ್ರಾಮದ ಸತ್ಯಪ್ರಿಯಾ ನೀಡಿದ ದೂರಿನ ಆಧಾರದ ಮೇಲೆ ಡಿವಿಎಸಿ ಅಧಿಕಾರಿಗಳು ಟ್ರ್ಯಾಪ್ ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ. ಜಯಾ ಲಂಚವನ್ನು ಬೇಡಿದ್ದರೆ, ಉಳಿದ ಇಬ್ಬರು ಅದನ್ನು ಸ್ವೀಕರಿಸಲು ಸಹಕರಿಸಿದ್ದರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಅಕ್ರಮ ದತ್ತು ಹಾಗೂ ಶಿಶು ಮಾರಾಟ ಪ್ರಕರಣ – ವೈದ್ಯ ಸೇರಿದಂತೆ ಇಬ್ಬರ ಬಂಧನ
ಸತ್ಯಪ್ರಿಯಾ ಅವರು ಜೂನ್ 3ರಂದು ಇ-ಸೇವೈ ಕೇಂದ್ರದ ಮೂಲಕ ಮುಖ್ಯಮಂತ್ರಿ ಬಾಲಕಿ ರಕ್ಷಣಾ ಯೋಜನೆಯಡಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕೆಲವು ದಿನಗಳ ನಂತರ, ಅಗತ್ಯ ದಾಖಲೆಗಳನ್ನು ತಿರುಪೊರುರ್ ಬ್ಲಾಕ್ ಕಚೇರಿಗೆ ತರಲು ಜಯಾ ಅವರು ಸತ್ಯಪ್ರಿಯಾ ಅವರ ಪತಿಯನ್ನು ಸಂಪರ್ಕಿಸಿದ್ದರೆಂದು ಆರೋಪಿಸಲಾಗಿದೆ.
ದಂಪತಿಗಳು ಕಚೇರಿಗೆ ಭೇಟಿ ನೀಡಿದಾಗ, ಫಿಕ್ಸ್ಡ್ ಡೆಪಾಸಿಟ್ ಪ್ರಮಾಣಪತ್ರವನ್ನು ಶೀಘ್ರವಾಗಿ ನೀಡಲು ₹1,000 ನೀಡಬೇಕು ಎಂದು ಜಯಾ ಕೇಳಿದ್ದರೆಂದು ದೂರಿನಲ್ಲಿ ಹೇಳಲಾಗಿದೆ. ನಂತರ ಮತ್ತೊಮ್ಮೆ ಸಂಪರ್ಕಿಸಿ “ಕಚೇರಿ ವೆಚ್ಚ” ಹೆಸರಿನಲ್ಲಿ ಒಟ್ಟು ₹2,000 ನೀಡಬೇಕು ಎಂದು ಒತ್ತಾಯಿಸಿದ್ದರೆಂದು ತಿಳಿದುಬಂದಿದೆ.
ಈ ಬಗ್ಗೆ ದೂರು ಬಂದ ನಂತರ ಡಿವಿಎಸಿ ಪ್ರಾಥಮಿಕ ಪರಿಶೀಲನೆ ನಡೆಸಿ, ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7 ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಇದನ್ನೂ ನೋಡಿ: ಬೀದಿ ವ್ಯಾಪಾರಿಗಳನ್ನು ರಕ್ಷಿಸಿ – ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ Janashakthi Media
