TET ಅಕ್ರಮದ ವಿರುದ್ಧ ರಾಹುಲ್ ಗಾಂಧಿ ಕಿಡಿ: ‘ಪ್ರಾಮಾಣಿಕವಾಗಿ ಓದಿದವರೇ ಸಂಕಷ್ಟದಲ್ಲಿದ್ದಾರೆ’

ನವದೆಹಲಿ: ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಪರೀಕ್ಷೆಗೆ ಹೊಸ ದಿನಾಂಕವನ್ನು ತಕ್ಷಣ ಘೋಷಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜುಲೈ 14ರಂದು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಇದರಿಂದ ತೊಂದರೆಗೆ ಒಳಗಾದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ TET 2026 ಪರೀಕ್ಷೆಯನ್ನು ಜೂನ್ 27ರಂದು, ಪರೀಕ್ಷೆ ನಡೆಯಬೇಕಿದ್ದ ಒಂದು ದಿನ ಮುನ್ನ ಮುಂದೂಡಲಾಗಿತ್ತು. ಥಾಣೆ ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 10 ಮಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ರೈಲಿನಲ್ಲಿ ಪೂಜೆ ನಡೆಸಿದ ಘಟನೆ: : ₹3 ಲಕ್ಷ ನೀಡಿ ಖಾಸಗಿ ಕೋಚ್ ಬುಕ್ಕಿಂಗ್ – ರೈಲ್ವೆ ಸ್ಪಷ್ಟನೆ

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಮಹಾರಾಷ್ಟ್ರ TET ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ, ಪರೀಕ್ಷೆ ರದ್ದಾಗಿದೆ. 6 ಲಕ್ಷ ಅಭ್ಯರ್ಥಿಗಳು ಅನಿಶ್ಚಿತತೆಯಲ್ಲಿ ಸಿಲುಕಿದ್ದಾರೆ. ಎರಡು ವಾರಗಳು ಕಳೆದರೂ ಹೊಸ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದ್ದಾರೆ.

ಪ್ರಾಮಾಣಿಕವಾಗಿ ತಯಾರಿ ನಡೆಸಿದ ಅಭ್ಯರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರು ಇನ್ನೂ ಕಾನೂನಿನ ಹಿಡಿತಕ್ಕೆ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ.

“ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ತಯಾರಿ ನಡೆಸಿದವರೇ ನಮ್ಮ ದೇಶದ ಪ್ರಸ್ತುತ ಮತ್ತು ಭವಿಷ್ಯದ ಶಿಕ್ಷಕರು. ಅವರು ಭಾರತದ ಭವಿಷ್ಯ ರೂಪಿಸುವವರು,” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅಭ್ಯರ್ಥಿಗಳು ಹಲವು ವರ್ಷಗಳ ಕಾಲ ತಯಾರಿ ನಡೆಸಿದ್ದು, ಪರೀಕ್ಷಾ ಶುಲ್ಕ ಪಾವತಿಸಿ ದೂರದ ಕೇಂದ್ರಗಳಿಗೆ ಪ್ರಯಾಣಿಸಿದ್ದರು. ಆದರೆ ಈಗ ಯಾವುದೇ ಸ್ಪಷ್ಟತೆ ಇಲ್ಲದೆ ಕಾಯುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಮೂರು ಕ್ರಮಗಳನ್ನು ಕೈಗೊಳ್ಳುವಂತೆ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಮೊದಲನೆಯದಾಗಿ, TET ಮರುಪರೀಕ್ಷೆಯ ದಿನಾಂಕವನ್ನು ತಕ್ಷಣ ಪ್ರಕಟಿಸಬೇಕು. ಎರಡನೆಯದಾಗಿ, ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅಭ್ಯರ್ಥಿಗಳ ವಿರುದ್ಧವಲ್ಲ. ಮೂರನೆಯದಾಗಿ, ಸೋರಿಕೆಯಿಂದ ಒಂದು ವರ್ಷ ಕಳೆದುಕೊಂಡ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ಸಾಂಸ್ಥಿಕ ವೈಫಲ್ಯದ ಪರಿಣಾಮಗಳನ್ನು ಅಭ್ಯರ್ಥಿಗಳು ಎದುರಿಸುವಂತಾಗಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಜುಲೈ 17ರಂದು ಡೆಹ್ರಾಡೂನ್‌ನಲ್ಲಿ ತಮ್ಮ ‘ಛಾತ್ರೋನ್ ಕಿ ಗೂಂಜ್’ ಕಾರ್ಯಕ್ರಮದಡಿ ವಿದ್ಯಾರ್ಥಿಗಳೊಂದಿಗೆ ನಡೆಯುವ ಸಂವಾದದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸಮಸ್ಯೆ ಕುರಿತು ವಿವರವಾಗಿ ಮಾತನಾಡುವುದಾಗಿ ಅವರು ತಿಳಿಸಿದ್ದಾರೆ.

ಇದೇ ವೇಳೆ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಹಣಕಾಸು ಮತ್ತು ಡಿಜಿಟಲ್ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಪ್ರಕರಣದ ಪ್ರಮುಖ ಆರೋಪಿಗಳೆಂದು ಹೇಳಲಾಗಿರುವ ಬಿಜೇಂದ್ರ ಕುಮಾರ್ ಗುಪ್ತಾ ಮತ್ತು ಸೋನುಕುಮಾರ್ ಕಿಶನ್‌ಲಾಲ್ ಇನ್ನೂ ತಲೆಮರೆಸಿಕೊಂಡಿದ್ದಾರೆ.

ತನಿಖೆಯಲ್ಲಿ ದೆಹಲಿ, ಆಗ್ರಾ, ಬಿಹಾರ ಮತ್ತು ಹರಿಯಾಣ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾಲದ ಸಂಪರ್ಕ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆಯಿಂದ ಸುಮಾರು 6 ಲಕ್ಷ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಅಸ್ತವ್ಯಸ್ತಗೊಂಡಿದೆ.

ಇದನ್ನೂ ನೋಡಿ: “ಭೂಗಳ್ಳರ ಸರ್ಕಾರ!” ಜನಾಕ್ರೋಶ ಸಮಾವೇಶದಲ್ಲಿ ಜಿ.ಎನ್. ನಾಗರಾಜರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *