ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಗೆ ಸ್ಪಷ್ಟ ಬಹುಮತ ಸಿಗದಿರುವ ಹಿನ್ನೆಲೆಯಲ್ಲಿ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತಮಿಳಗ ವೆಟ್ರಿ ಕಳಗಂ (TVK) ನಾಯಕ ಸಿ. ಜೋಸೆಫ್ ವಿಜಯ್ ಅವರನ್ನು ತಕ್ಷಣ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಬೇಕು ಎಂದು ಸಿಪಿಐ(ಎಂ) ತಮಿಳುನಾಡು ರಾಜ್ಯ ಸಮಿತಿ ಆಗ್ರಹಿಸಿದೆ.
ಈ ಕುರಿತು ಪಕ್ಷದ ರಾಜ್ಯ ಕಾರ್ಯದರ್ಶಿ ಪಿ. ಶಣ್ಮುಗಂ ಪ್ರಕಟಣೆ ಹೊರಡಿಸಿದ್ದು, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ TVK 108 ಶಾಸಕರನ್ನು ಗೆಲ್ಲಿಸಿಕೊಂಡು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿರುವ ಏಕೈಕ ನಾಯಕ ವಿಜಯ್ ಎಂದು ಹೇಳಿದ್ದಾರೆ.
“ರಾಜ್ಯಪಾಲರ ಮೂಲಕ ಸಂವಿಧಾನ ವಿರೋಧಿ ಕ್ರಮಗಳನ್ನು ಅನುಸರಿಸಿ ತನ್ನ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದು ಬಿಜೆಪಿಯ ಧೋರಣೆಯಾಗಿದ್ದು, ಅದರ ಮುಂದುವರಿದ ಭಾಗವಾಗಿ ತಮಿಳುನಾಡು ರಾಜ್ಯಪಾಲರು ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವುದನ್ನು ವಿಳಂಬ ಮಾಡುತ್ತಿದ್ದಾರೆ. ಇದು ಒಪ್ಪಲಾಗದು” ಎಂದು ಪ್ರಕಟಣೆಯಲ್ಲಿ ಟೀಕಿಸಲಾಗಿದೆ.
ಯಾರೂ ಸರ್ಕಾರ ರಚನೆಗೆ ಹಕ್ಕು ಮಂಡಿಸದ ಪರಿಸ್ಥಿತಿಯಲ್ಲಿ, ಗೆಲುವು ಸಾಧಿಸಿರುವ ಅತಿ ದೊಡ್ಡ ಪಕ್ಷದ ನಾಯಕ ವಿಜಯ್ ಅವರನ್ನು ತಕ್ಷಣ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಲು ಆಹ್ವಾನಿಸಬೇಕು ಎಂದು ಸಿಪಿಐ(ಎಂ) ರಾಜ್ಯಪಾಲರಿಗೆ ಒತ್ತಾಯಿಸಿದೆ.
