ಬೆಂಗಳೂರು: “ಕೈಗಾರಿಕೆ ಸ್ಥಾಪಿಸಿ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಹೇಳಿ ರೈತರ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡರು. ಆದರೆ ಭರವಸೆಗಳನ್ನು ಈಡೇರಿಸದೆ ಸರ್ಕಾರ ಮತ್ತು ಕಂಪನಿಗಳು ಸೇರಿ ಮಹಾಮೋಸ ಮಾಡಿವೆ. ಭೂಮಿ ಕಸಿದುಕೊಂಡ ರಾಜಕಾರಣಿಗಳು ಮತ ಕೇಳಲು ಬಂದಾಗ ಅವರನ್ನು ಪ್ರಶ್ನಿಸಿ, ‘ನಮ್ಮ ಉಳುವ ಭೂಮಿಯನ್ನು ನಮಗೆ ಮರಳಿ ಕೊಡಿ’ ಎಂದು ಪಟ್ಟು ಹಿಡಿಯಿರಿ.”
ಇದು ಕುಡತಿನಿ ಪ್ರದೇಶದ ಭೂ ಸಂತ್ರಸ್ತರ ಪರವಾಗಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ವಿ. ಗೋಪಾಲಗೌಡ ನೀಡಿದ ಕಟು ಎಚ್ಚರಿಕೆ.
ಕುಡತಿನಿ ಪ್ರದೇಶದ ಭೂ ಸಂತ್ರಸ್ತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ನಗರದ ಗಾಂಧಿ ಭವನದಲ್ಲಿ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು. ಕುಡತಿನಿ ಪ್ರದೇಶದ ಭೂ ಸಂತ್ರಸ್ತರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ದಲಿತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.
ಇದನ್ನೂ ಓದಿ: ರಾಮ ಮಂದಿರ ನಿಧಿ ವಿವಾದ: ಮೋದಿ ಉತ್ತರಿಸಬೇಕು – ಮಲ್ಲಿಕಾರ್ಜುನ ಖರ್ಗೆ
ಕುಡತಿನಿ ಪ್ರದೇಶದಲ್ಲಿ ನಡೆದಿರುವ ಭೂ ಸ್ವಾಧೀನದಿಂದ ಸುಮಾರು 5 ಸಾವಿರ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಗೋಪಾಲಗೌಡ, “ಯಾವ ಉದ್ದೇಶಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲಾಗಿತ್ತೋ, ಅದು ಈವರೆಗೆ ಈಡೇರಿಲ್ಲ. ಕೈಗಾರಿಕೆ ಸ್ಥಾಪನೆ ಹಾಗೂ ಉದ್ಯೋಗದ ಭರವಸೆ ನೀಡಿ ರೈತರ ಭೂಮಿಯನ್ನು ಕಸಿದುಕೊಳ್ಳಲಾಗಿದೆ. ಆದರೆ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ನ್ಯಾಯ ಸಿಕ್ಕಿಲ್ಲ. ಸರ್ಕಾರ ಮತ್ತು ಕಂಪನಿಗಳು ಸೇರಿ ರೈತರಿಗೆ ವಂಚನೆ ಎಸಗಿವೆ” ಎಂದು ಆರೋಪಿಸಿದರು.
1894ರ ಭೂ ಸ್ವಾಧೀನ ಕಾಯ್ದೆಯಲ್ಲೇ ಪರಿಹಾರವನ್ನು ಯಾವ ರೀತಿಯಲ್ಲಿ ನೀಡಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. 2013ರಲ್ಲಿ ಜಾರಿಗೆ ಬಂದ ಭೂ ಸ್ವಾಧೀನ ಕಾಯ್ದೆಯಲ್ಲೂ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಪರಿಹಾರ ನೀಡಲು ಅವಕಾಶವಿದೆ. ಆದರೆ ಭೂ ಸ್ವಾಧೀನ ಅಧಿಕಾರಿಗಳು ಹಾಗೂ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಈ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
“ಈ ಕಾಯ್ದೆಗಳನ್ನು ಪಾಲಿಸದೆ ಯಾವುದೇ ಭೂ ಸ್ವಾಧೀನ ನಡೆಸಲು ಸಾಧ್ಯವಿಲ್ಲ. ಕಾನೂನು ಉಲ್ಲಂಘಿಸಿ ಭೂ ಸ್ವಾಧೀನ ನಡೆಸಿದರೆ ಆ ಪ್ರಕ್ರಿಯೆಯೇ ಅಮಾನ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ರೈತರು ತಮ್ಮ ಹಕ್ಕಿಗಾಗಿ ಕಾನೂನುಬದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕು” ಎಂದು ಕರೆ ನೀಡಿದರು.

“ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ ಜನವಿರೋಧಿ ಸರ್ಕಾರ. ನಾವು ಪ್ರತಿದಿನ ಕುಡಿಯುವ ಚಹಾ, ಹಾಲು, ತಿನ್ನುವ ಆಹಾರ, ಬಳಸುವ ತರಕಾರಿ, ಹಣ್ಣು ಎಲ್ಲವೂ ರೈತರ ಪರಿಶ್ರಮದ ಫಲ. ಅಂತಹ ರೈತರನ್ನು ನೋಯಿಸುವ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಒಗ್ಗಟ್ಟಿನ ಹೋರಾಟವೇ ನಿಮ್ಮನ್ನು ಗೆಲ್ಲಿಸುತ್ತದೆ. ನಿಮ್ಮ ಜನಾಂದೋಲನಕ್ಕೂ, ಕಾನೂನು ಹೋರಾಟಕ್ಕೂ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ” ಎಂದು ಅವರು ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜ ವಹಿಸಿದ್ದರು.
ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್, ಚಿಂತಕಿ ಮಾರುತಿ ಸುಕನ್ಯಾ, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್, ಮುಖಂಡ ಸತ್ಯಬಾಬು, ಕರ್ನಾಟಕ ಪ್ರಾಂತ ಕೂಲಿಕಾರ ಸಂಘದ ರಾಜ್ಯಾಧ್ಯಕ್ಷ ಚಂದ್ರಪ್ಪ ಹೊಸ್ಕೇರಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಪುಟ್ಟಮಾಧು, ದಲಿತ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಗೋಪಾಲಕೃಷ್ಣ ಅರಳಹಳ್ಳಿ, ಕರ್ನಾಟಕ ಪ್ರಾಂತ ರೈತ ಸಂಘದ ಟಿ. ಯಶವಂತ್, ಕುಡತಿನಿ ಪ್ರದೇಶದ ಭೂ ಸಂತ್ರಸ್ತರ ಹೋರಾಟ ಸಮಿತಿಯ ಮುಖಂಡರು ಉಪಸ್ಥಿತರಿದ್ದರು. ಆದಿವಾಸಿ ಹಕ್ಕುಗಳ ಸಮಿತಿಯ ರಾಜ್ಯ ನಾಯಕ ಎಸ್. ವೈ. ಗುರುಶಾಂತ್ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ನೋಡಿ: ‘ಶ್ರಮಿಕರ ದೈವ – ಯಕ್ಷಗಾನ ಮತ್ತು ಅಳವು ಅರಿಯದ ಭಾಷೆ: ತುಳು ಮತ್ತು ಬ್ಯಾರಿ’ | ಡಾ. ಗಣನಾಥ ಎಕ್ಕಾರು
