ಸಚಿವ ಸಂಪುಟ ವಿಸ್ತರಣೆ: ಜುಲೈ 22ರಂದು ಪ್ರಮಾಣವಚನ ಸಾಧ್ಯತೆ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಮರಳಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಚುರುಕು ಸಿಕ್ಕಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಜುಲೈ 22ರಂದೇ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.

ಸದ್ಯ ಸಚಿವ ಸಂಪುಟದಲ್ಲಿ 20 ಸ್ಥಾನಗಳು ಖಾಲಿ ಇದ್ದರೂ, ಎಲ್ಲಾ ಸ್ಥಾನಗಳನ್ನು ಒಂದೇ ಹಂತದಲ್ಲಿ ಭರ್ತಿ ಮಾಡಲಾಗುತ್ತದೆಯೇ ಅಥವಾ ರಾಜಕೀಯ ಸಮತೋಲನ ಕಾಪಾಡಲು ಕೆಲ ಹುದ್ದೆಗಳನ್ನು ಖಾಲಿ ಇಡಲಾಗುತ್ತದೆಯೇ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆ ಆಡಳಿತವನ್ನು ಬಲಪಡಿಸುವ ಅಗತ್ಯ ಹೆಚ್ಚಿದ್ದು, ಶಾಸಕರಿಂದಲೂ ವಿಸ್ತರಣೆಗೆ ಒತ್ತಡ ಹೆಚ್ಚಾಗಿದೆ.

ಇದನ್ನೂ ಓದಿ: ಬಡವರ, ವಲಸೆ ಕಾರ್ಮಿಕರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲಿರುವ ಎಸ್‌ಐಆರ್‌

ಜುಲೈ 18ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಬಳಿಕ ಅವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಬೀಳ್ಕೊಟ್ಟರು. ಇದಕ್ಕೂ ಮುನ್ನ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ್ದರು.

ಪಕ್ಷದ ಮೂಲಗಳ ಪ್ರಕಾರ, ಖರ್ಗೆ ಅವರು ಹೊಸ ಮುಖಗಳಿಗೆ ಆದ್ಯತೆ ನೀಡುವ ಪರವಾಗಿದ್ದು, ಬಸನಗೌಡ ದದ್ದಲ್, ಡಾ. ಅಜಯ್ ಸಿಂಗ್, ಕನೀಜ್ ಫಾತಿಮಾ, ಎ.ಆರ್. ಕೃಷ್ಣಮೂರ್ತಿ, ಮಂಜುನಾಥ ಭಂಡಾರಿ ಹಾಗೂ ಎ. ವಸಂತಕುಮಾರ್ ಅವರ ಹೆಸರುಗಳು ಪ್ರಮುಖವಾಗಿ ಚರ್ಚೆಯಲ್ಲಿವೆ. ಮತ್ತೊಂದೆಡೆ ಮುಖ್ಯಮಂತ್ರಿ ಶಿವಕುಮಾರ್ ಅವರು ಲಕ್ಷ್ಮಣ ಸವದಿ, ಶಿವಣ್ಣ, ಶರತ್ ಬಚ್ಚೇಗೌಡ, ಎಸ್.ಆರ್. ಶ್ರೀನಿವಾಸ್, ಕೆ.ಎಂ. ಶಿವಲಿಂಗೇಗೌಡ, ಆರ್.ವಿ. ದೇಶಪಾಂಡೆ, ತನ್ವೀರ್ ಸೇಠ್, ಶ್ರೀನಿವಾಸ್ ಮಾನೆ ಹಾಗೂ ಡಾ. ಆರತಿ ಕೃಷ್ಣ ಅವರ ಹೆಸರನ್ನು ಮುಂದಿರಿಸಿರುವುದು ತಿಳಿದುಬಂದಿದೆ.

ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರಿಗೆ ಸಚಿವ ಸ್ಥಾನ ಸಿಗದಿದ್ದಲ್ಲಿ, ಅವರನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ನೋಡಿ: ಫಿಫಾ ವಿಶ್ವಕಪ್ 2026 ಫೈನಲ್ | ಮೆಸ್ಸಿಯ ಕೊನೆಯ ಕನಸೋ? ಸ್ಪೇನ್‌ನ ಹೊಸ ಇತಿಹಾಸವೋ? Janashakthi Media

Donate Janashakthi Media

Leave a Reply

Your email address will not be published. Required fields are marked *