ಬೆಂಗಳೂರು: ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್‌ಸಿ) ಜುಲೈ 26ರಂದು ತುರ್ತು ಸಭೆ ನಡೆಸಿ, ಆಂತರಿಕ ವಿಚಾರಣೆಗೆ ಉಪ ಸಮಿತಿಯನ್ನು ರಚಿಸಿದೆ.
ಅಭ್ಯರ್ಥಿಗಳ ದೂರಿನ ಮೇರೆಗೆ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಎಸ್. ಸಾಹುಕಾರ ಸೇರಿದಂತೆ ಇತರರ ವಿರುದ್ಧ ಜುಲೈ 24ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು ಹಿರಿಯ ಸದಸ್ಯರಾದ ಶಕುಂತಲಾ ಎಸ್. ದುಂಡಿಗೌಡರ್ ಅವರ ಅಧ್ಯಕ್ಷತೆಯಲ್ಲಿ ವಿಚಾರಣಾ ಸಮಿತಿಯನ್ನು ರಚಿಸಿದೆ. ಸದಸ್ಯರಾದ ಎಂ.ವಿ. ರಾಮಕೃಷ್ಣಪ್ರಸಾದ್, ಶಿವನಗೌಡ ಹಾಗೂ ಎಲ್ಫೀಡಾ ಡಿಸಿಲ್ವಾ ಸಮಿತಿಯಲ್ಲಿ ಸೇರಿದ್ದಾರೆ.
ಇದನ್ನೂ ಓದಿ: ಮೊದಲು ದಮನಚಕ್ರ, ನಂತರ ಎರಡು ‘ಪ್ರಧಾನಿ ರೀಲುಗಳು’-ಕೊನೆಗೆ ಶಿಕ್ಷಣ ಮಂತ್ರಿಯ ರಾಜೀನಾಮೆ
ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ಎಲ್ಲಾ ಹಂತಗಳು ಹಾಗೂ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಒಂದು ವಾರದೊಳಗೆ ವಾಸ್ತವ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ. ಕಾರ್ಯದರ್ಶಿ ಹಾಗೂ ಕಾನೂನು ಕೋಶದ ಮುಖ್ಯಸ್ಥರನ್ನು ಸಮನ್ವಯ ಅಧಿಕಾರಿಗಳಾಗಿ ನೇಮಿಸಲಾಗಿದೆ.
ಉಪ ಸಮಿತಿ ವರದಿ ಸಲ್ಲಿಸುವವರೆಗೆ ಜುಲೈ 17ರಂದು ಪ್ರಕಟಿಸಲಾಗಿದ್ದ ಪಶು ವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಜ್ಯೋತಿ ತಿಳಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಕಾಪಾಡಲು ಆಯೋಗ ಬದ್ಧವಾಗಿದ್ದು, ಸಮಿತಿಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಏನಿದು ಪ್ರಕರಣ?
400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚನ್ನರಾಯಪಟ್ಟಣ ತಾಲ್ಲೂಕಿನ ಪಶು ವೈದ್ಯ ಮಂಜುನಾಥ್ ಸೇರಿದಂತೆ 24 ಅಭ್ಯರ್ಥಿಗಳು ದೂರು ನೀಡಿದ್ದಾರೆ. ಇದರ ಮೇರೆಗೆ ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ, ಆಯೋಗದ ಸದಸ್ಯರು, ಅಧಿಕಾರಿಗಳು ಹಾಗೂ ಆಯ್ಕೆಯಾದ 29 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಆಯೋಗದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಂಬಂಧಿಕರು ಉನ್ನತ ರ‍್ಯಾಂಕ್ ಪಡೆದು ಆಯ್ಕೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಹುದ್ದೆ ಗಿಟ್ಟಿಸಿಕೊಡಲು ಮಧ್ಯವರ್ತಿಗಳು ಸುಮಾರು ₹80 ಲಕ್ಷ ಬೇಡಿಕೆ ಇಟ್ಟು, ₹40 ಲಕ್ಷ ಮುಂಗಡ ಪಡೆಯಲು ಯತ್ನಿಸಿದರೆಂಬ ಆಡಿಯೊ ಮತ್ತು ವಿಡಿಯೊ ಸಾಕ್ಷ್ಯಗಳೂ ಲಭ್ಯವಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೆಪಿಎಸ್‌ಸಿ ಸ್ವಾಯತ್ತ ಸಂಸ್ಥೆಯಾಗಿದ್ದು, ಅರ್ಹ ಅಭ್ಯರ್ಥಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡುವ ಬದ್ಧತೆಯಿದೆ. ಮಧ್ಯವರ್ತಿಗಳ ಮೋಸಕ್ಕೆ ಒಳಗಾಗಬಾರದು ಎಂದು ಹಂಗಾಮಿ ಅಧ್ಯಕ್ಷ ಬಿ. ಪ್ರಭುದೇವ ಎಚ್ಚರಿಕೆ ನೀಡಿದ್ದಾರೆ. ಯಾರಾದರೂ ಹಣಕ್ಕೆ ಉದ್ಯೋಗ ಕೊಡಿಸುವುದಾಗಿ ಹೇಳಿದರೆ ತಕ್ಷಣ ಆಯೋಗದ ಗಮನಕ್ಕೆ ತರಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ನೀಟ್ ಹಗರಣ: ದೆಹಲಿ ಹೋರಾಟಕ್ಕೆ ಮತ್ತಷ್ಟು ಬಲ! ಎನ್‌ಡಿಎ ಮಿತ್ರಪಕ್ಷಗಳ ಮೌನ ಏಕೆ? Janashakthi Media
