ಸಂಗ್ರಹ:ಸಿ.ಚಿ.
ಸಪ್ಟಂಬರ್ ೨೬ರಂದು , ಚುನಾವಣಾ ಆಯೋಗ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗಳಲ್ಲಿ ಹೊಸ ಸಡಿಲಿಕೆಗಳನ್ನು ಘೋಷಿಸಿದೆ. ಇವು ಇಂಡಿಯನ್ ಎಕ್ಸ್‌ಪೆಸ್ ನಲ್ಲಿ ಪ್ರಕಟವಾದ ವರದಿಗಳಿಗೆ ಪ್ರತಿಕ್ರಿಯೆಯಾಗಿ ದೇಶದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು, ಇಲ್ಲವೇ ಅವರನ್ನು ವಜಾ ಮಾಡಬೇಕು ಎಂಬ ಕೂಗು ದೇಶಾದ್ಯಂತ ಪ್ರತಿಭಟನೆಗಳಲ್ಲಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಂದಿರುವುದು ಗಮನಾರ್ಹ. ಸಿಇಸಿ ಮೇಲೆ ಬಂದಿರುವ ಆರೋಪಗಳು, ವಾಸ್ತವವಾಗಿ ಸರಕಾರದ ಮೇಲೆಯೇ ಬಂದಿರುವ ಆರೋಪಗಳು, ಇದರಿಂದ ನುಣುಚಿಕೊಳ್ಳಲು “ಹಾನಿ ನಿಯಂತ್ರಿಸುವʼ (damage controĺ) ಕ್ರಮಗಳಾಗಿ ಇವನ್ನು ಪ್ರಕಟಿಸಲಾಗಿದೆ ಎಂಬ ಭಾವನೆ ಸಹಜವಾಗಿ ಮೂಡಿದೆ. SIR
ಹೊಸ ಮತದಾರರನ್ನು ಸೇರಿಸುವ ಫಾರ್ಮ್ ೬ ನ್ನು ಅದರ ತಿದ್ದುಪಡಿಯ ಹಿಂದಿನ ಸ್ವರೂಪದಲ್ಲೇ ಬಳಸಲಾಗುವುದು, ಎಸ್‌ಐಆರ್ ಅಲ್ಲದ ಅವಧಿಯಲ್ಲಿ ಬಳಸಲಾಗುವುದು, ECINet ನ ಕಾರ್ಯನಿರ್ವಣೆಯ ಪರಾಮರ್ಶೆಯನ್ನು ಐಐಟಿ/ಐಐಐಟಿ ಯ ಒಬ್ಬ ಸ್ವತಂತ್ರ ಪರಿಣಿತರು ಇರುವ ಒಂದು ಸಮಿತಿಯಿಂದ ನಡೆಸಲಾಗುವುದು ಮತ್ತು ಎಸ್‌ಐಆರ್‌ನಲ್ಲಿ ಕೈಬಿಡಲಾಗಿರುವ ಮತದಾರರಿಗೆ ನೆರವಾಗಲು ಒಂದು ವಿಶೇಷ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಚುನಾವಣಾ ಆಯೋಗದ ಪ್ರಕಟಣೆ ಹೇಳಿದೆ. ಸೆಪ್ಟೆಂಬರ್ 26ರಂದು ಜ್ಞಾನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.
ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ SIR ಗೆ ಸಂಬಂಧಿಸಿದ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಸಮಾಯಾವಧಿಯನ್ನು ವಿಸ್ತರಿಸಲಾಗಿದೆ. ದೆಹಲಿಯಲ್ಲಿ ಅಕ್ಟೋಬರ್ 30 ರವರೆಗೆ ಹಾಗೂ ಮಹಾರಾಷ್ಟ್ರದಲ್ಲಿ ಅಕ್ಟೋಬರ್ 12 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಇವುಗಳ ಇತ್ಯರ್ಥಕ್ಕೆ ಅಂತಿಮ ದಿನಾಂಕಗಳನ್ನು ಅನುಕ್ರಮವಾಗಿ ನವೆಂಬರ್ 30 ಮತ್ತು ನವೆಂಬರ್ 10 ಎಂದು ನಿಗದಿಪಡಿಸಲಾಗಿದೆ.
ಸಭೆಯ ನಿರ್ಧಾರದಂತೆ, ‘ಅನ್‌ಮ್ಯಾಪ್ಡ್’ (ದಾಖಲೆಯಲ್ಲಿ ಸ್ಪಷ್ಟವಿಲ್ಲದ) ಮತದಾರರು ಮತ್ತು ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದವರು ಇನ್ನು ಮುಂದೆ ಸಾಮಾನ್ಯವಾಗಿ ಇಲೆಕ್ಟೋರಲ್ ರಿಜಿಸ್ಟ್ರೇಷನ್ ಆಫೀಸರ್ (ERO) ಮುಂದೆ ನೇರವಾಗಿ ಹಾಜರಾಗುವ ಅಗತ್ಯವಿಲ್ಲ. ಬದಲಿಗೆ BLO (ಬೂತ್ ಮಟ್ಟದ ಅಧಿಕಾರಿ) ಗಳೇ ಮನೆ ಮನೆಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಿ ECINet ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಚಾರಣೆ ನಡೆಸಲಾಗುತ್ತದೆ. ಸಾಧ್ಯವಿರುವ ಕಡೆಗಳಲ್ಲೆಲ್ಲಾ ಆನ್‌ಲೈನ್ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಮತದಾರರಿಗೆ ನೇರವಾಗಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಕುಟುಂಬದ ಹಿರಿಯ ಅಥವಾ ಪ್ರೌಢ ಸದಸ್ಯರೊಬ್ಬರನ್ನು ಪ್ರತಿನಿಧಿಯಾಗಿ ನೇಮಿಸಬಹುದು.
ಇದನ್ನೂ ಓದಿ : ಮತದಾರರ ಪಟ್ಟಿಯಿಂದ ಹೆಸರು ಮರುಸೇರ್ಪಡೆಗೆ ಆಗ್ರಹ: ಸಿಇಒ ಕಚೇರಿಗೆ AIDWA ಮೆರವಣಿಗೆ
ಕೇವಲ ನೋಟಿಸ್ ಲಭಿಸಿದ ತಕ್ಷಣಕ್ಕೇ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ ಎಂದೂ ಆಯೋಗ ಸ್ಪಷ್ಟಪಡಿಸಿದೆ. ಕಾರ್ಮಿಕರು, ಬಡವರು ಮತ್ತು ನಿರಾಶ್ರಿತರಿಗೆ ನೆರವಾಗಲು ಹೆಲ್ಪ್‌ಡೆಸ್ಕ್ ಹಾಗೂ ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸಲು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದೂ ತಿಳಿಸಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತನ್ನ ಇತರ ಇಬ್ಬರು ಸಹಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ತಾನೊಬ್ಬನೇ ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಇದರಿಂದಾಗಿ ಆ ಇಬ್ಬರು ಆಯುಕ್ತರುಗಳು ಕಳೆದ ೧೦ ತಿಂಗಳಲ್ಲಿ ೧೪ ಆಕ್ಷೇಪಗಳನ್ನು ಸಲ್ಲಿಸಬೇಕಾಗಿ ಬಂದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ತನಿಖಾ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಈ ಕ್ರಮಗಳನ್ನು ನೋಡಿದರೆ ಆ ತನಿಖೆಯಲ್ಲಿ ಬಯಲಿಗೆ ಬಂದಿರುವ ಸಂಗತಿಗಳು ನಿಜವೆಂದು ಈಗ ಆಯೋಗವೇ , ಬಹುಶಃ ಆ ಮೂಲಕ ಮೋದಿ ಸರಕಾರವೇ ಸಾಬೀತು ಪಡಿಸಿದಂತಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಚುನಾವಣಾ ಅಯೋಗ ಮತ್ತು ಅದರ ಸಮರ್ಥನೆಗೆ ಧಾವಿಸಿದ ಆಳುವ ಪಕ್ಷ ಬಿಜೆಪಿಯ ವಕ್ತಾರರೂ ಕೂಡ “ಭಿನ್ನ ಅಭಿಪ್ರಾಯ”ಗಳು ಚುನಾವಣಾ ಆಯೋಗದ ನಿರ್ಣಯ ಪ್ರಕ್ರಿಯೆ ಭಾಗ,ಅವನ್ನೆಲ್ಲ ಪರಿಗಣಿಸಿಯೇ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಸೂಚಿಸುತ್ತ ಮುಖ್ಯ ಚುನಾವಣಾ ಆಯುಕ್ತರ ವರ್ತನೆ ಸರಿಯಾಗಿಯೇ ಇದೆ ಎಂದು ಬಿಂಬಿಸಲು ಪ್ರಯತ್ನಿಸಿದರು. ಬಿಜೆಪಿಯ ವಕ್ತಾರರಂತೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಕರ್ತರ ತನಿಖಾ ವರದಿ ಆಧಾರಹೀನ ಎಂಬಂತೆ ಮಾತನಾಡಿದರು. ಆದರೆ ಕಳೆದ ಹತ್ತು ತಿಂಗಳಲ್ಲಿ ಮಾಡದ್ದನ್ನು, ಅಲ್ಲದೆ ವಿವಿಧ ವಿಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳು ಮತ್ತೆ-ಮತ್ತೆ ಆಗ್ರಹಿಸಿದರೂ, ಪ್ರತಿಭಟಿಸಿದರೂ ಸುಮ್ಮನಿದ್ದ ಆಯೋಗ ಈಗ ಇದ್ದಕ್ಕಿದ್ದಂತೆ ಈ ಕೆಲವು ಕ್ರಮಗಳನ್ನಾದರೂ ಏಕೆ ಪ್ರಕಟಿಸಿದೆ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ.
ಎಲ್ಲವೂ ನಿಯಂತ್ರಣದಲ್ಲಿದೆ , ಸರ್!
ವ್ಯಂಗ್ಯಚಿತ್ರ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್
ಇದನ್ನೂ ನೋಡಿ : ಮತದಾರರ ಹಕ್ಕಿಗಾಗಿ ಹೋರಾಟ: SIR ವಿರುದ್ಧ ಪ್ರತಿರೋಧ ಪ್ರವಾಸ! Janashakthi Media
