ಚಾಮರಾಜನಗರ: ಅರಣ್ಯ ಇಲಾಖೆ ಸಫಾರಿ ಪ್ರವಾಸಿಗರಿಗೆ ಶಾಕ್ ನೀಡಿದ್ದು, ಪ್ರಸಿದ್ಧ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ದರವನ್ನು ಬಹುತೇಕ ದ್ವಿಗುಣಗೊಳಿಸಿದೆ.
ಸೆಪ್ಟೆಂಬರ್ 1ರಿಂದ ಪರಿಷ್ಕೃತ ದರ ಜಾರಿಯಾಗಲಿದ್ದು, ಬಸ್ ಮತ್ತು ಜೀಪ್ ಸಫಾರಿ, ಕ್ಯಾಮೆರಾ ಬಳಕೆ ಶುಲ್ಕ, ವಾಹನ ಪಾರ್ಕಿಂಗ್ ಸೇರಿದಂತೆ ಬಹುತೇಕ ಎಲ್ಲ ಶುಲ್ಕಗಳನ್ನು ಹೆಚ್ಚಿಸಲಾಗಿದೆ.
ಬಂಡೀಪುರದಲ್ಲಿ ಬಸ್ ಸಫಾರಿಗೆ ವಯಸ್ಕರ ದರವನ್ನು 650 ರೂ.ಯಿಂದ 1,000 ರೂ.ಗೆ ಏರಿಕೆ ಮಾಡಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ 350 ರೂ.ಯಿಂದ 500 ರೂ.ಗೆ ಹೆಚ್ಚಿಸಲಾಗಿದೆ. ಜೀಪ್ ಸಫಾರಿಗೆ ವಯಸ್ಕರ ದರ 750 ರೂ.ಯಿಂದ 1,500 ರೂ.ಗೆ ಏರಿಕೆಯಾಗಿದ್ದು, ಮಕ್ಕಳಿಗೆ 750 ರೂ. ನಿಗದಿಯಾಗಿದೆ. ಈ ದರಗಳಲ್ಲಿ ನೇಚರ್ ಗೈಡ್ ಶುಲ್ಕ ಒಳಗೊಂಡಿದೆ.
ಇದನ್ನೂ ಓದಿ: ಸಮಾಜಮುಖಿ ಕಾರ್ಯಕರ್ತ, ಪುಸ್ತಕ ಪರಿಚಾರಕ ಕಮಲಾಕರ ಭಂಡಾರಿ ನಿಧನ
ಇನ್ನೂ ಸಫಾರಿ ವೇಳೆ ಕ್ಯಾಮೆರಾ ಬಳಕೆಗೆ ಹೊಸ ನಿಯಮ ಜಾರಿಯಾಗಿದೆ. 200 ಮಿ.ಮೀ.ವರೆಗೆ ಲೆನ್ಸ್ ಹೊಂದಿರುವ ಕ್ಯಾಮೆರಾಗೆ ಯಾವುದೇ ಶುಲ್ಕ ಇಲ್ಲ. ಆದರೆ 200 ಮಿ.ಮೀ.ಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ 1,500 ರೂ. ಜೊತೆಗೆ 18% ಜಿಎಸ್‌ಟಿ ಪಾವತಿಸಬೇಕು.
ಬಂಡೀಪುರದಲ್ಲಿ ಸ್ವಂತ ಜೀಪ್, ಲಘು ವಾಣಿಜ್ಯ ವಾಹನ (ಎಲ್‌ಸಿವಿ) ಅಥವಾ ಬೋಟ್ ಮೂಲಕ ಅನುಮತಿ ಪಡೆದ ಪ್ರದೇಶಗಳಿಗೆ ಪ್ರವೇಶಿಸುವವರಿಗೂ ಹೊಸ ದರ ನಿಗದಿಯಾಗಿದೆ:
ವಯಸ್ಕರಿಗೆ – 600 ರೂ.
ಮಕ್ಕಳಿಗೆ – 300 ರೂ.
ಜೀಪ್ – 2,500 ರೂ.
ಲಘು ವಾಣಿಜ್ಯ ವಾಹನ – 3,500 ರೂ.
ಬೋಟ್ – 3,500 ರೂ.
ನಾಗರಹೊಳೆಯಲ್ಲಿ ಬಸ್ ಸಫಾರಿಗೆ ವಯಸ್ಕರಿಗೆ 1,000 ರೂ. ಹಾಗೂ ಮಕ್ಕಳಿಗೆ 500 ರೂ. ನಿಗದಿಯಾಗಿದೆ. ಜೀಪ್ ಸಫಾರಿಗೆ ವಯಸ್ಕರಿಗೆ 1,500 ರೂ. ಮತ್ತು ಮಕ್ಕಳಿಗೆ 750 ರೂ. ಇರಲಿದೆ. 200 ಮಿ.ಮೀ.ಗಿಂತ ಹೆಚ್ಚು ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ 1,500 ರೂ. ಶುಲ್ಕ ವಿಧಿಸಲಾಗಿದೆ.
ವಾಹನ ನಿಲುಗಡೆ ಶುಲ್ಕವೂ ಹೆಚ್ಚಳ ಕಂಡಿದ್ದು, ಕಾರಿಗೆ 100 ರೂ., ಲಘು ವಾಹನಗಳಿಗೆ 200 ರೂ. ಮತ್ತು ಬಸ್‌ಗೆ 300 ರೂ. ನಿಗದಿಯಾಗಿದೆ.
ಇದನ್ನೂ ನೋಡಿ: ನೀಟ್ ಹಗರಣ | ವಿದ್ಯಾರ್ಥಿಗಳೇ ಎದ್ದೇಳಿ! ಹೋರಾಟಕ್ಕೆ ಜೊತೆಯಾಗಿ — ನಟ ಕಿಶೋರ್ ಮನವಿ Janashakthi Media
