ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬೀದಿಬದಿ ವ್ಯಾಪಾರಿಯ ಮಗಳು 11 ಚಿನ್ನದ ಪದಕ, ರೈತರ ಮಕ್ಕಳು, ಆಟೊ ಚಾಲಕನ ಮಗ, ಚಿನ್ನದ ಪದಕ ಪಡೆದು ಪ್ರತಿಭೆಗೆ ಬಡತನದ ಹಂಗಿಲ್ಲ ಎಂದು ಸಾಬೀತುಪಡಿಸಿದ್ದಾರೆ. ಬೆಂಗಳೂರು
11 ಚಿನ್ನದ ಪದಕಗಳನ್ನು ಪಡೆದ ಪ್ರೇಮಾ ಎಸ್ ಅವರ ತಂದೆ ಜಾಲಹಳ್ಳಿ ಕ್ರಾಸ್ ನಿವಾಸಿ ಶರಣಪ್ಪ ಮುದಿಯಪ್ಪ ಮುಕ್ಕಣ್ಣವರ್ ಬೀದಿಬದಿ ವ್ಯಾಪಾರಿ. ತಾಯಿ ಸಾವಿತ್ರಿ ಅವರು ಬೇರೆಯವರ ಮನೆಯಲ್ಲಿ ಚಪಾತಿ ತಯಾರಿಸಿ ಹೋಟೆಲ್‌ಗಳಿಗೆ ನೀಡುವ ಕೆಲಸ ಮಾಡುತ್ತಾರೆ. ‘ಬಿ.ಇಡಿ ಮಾಡ್ತಾ ಇದ್ದೇನೆ. ಪಿಎಚ್.ಡಿ. ಮಾಡಬೇಕು. ಸಹಾಯಕ ಪ್ರಾಧ್ಯಾಪಕಿ ಆಗಬೇಕು’ ಎಂದು ಪ್ರೇಮಾ ತನ್ನ ಕನಸುಗಳನ್ನು ಹಂಚಿಕೊಂಡರು. ‘ನಾವಂತೂ ಓದಿಲ್ಲ. ಮಗಳು ಪ್ರೇಮಾ, ಮಗ ಪ್ರಶಾಂತ್ ಆದರೂ ಓದಲಿ’ ಎಂದು ಹೆತ್ತವರು ಅಭಿಮಾನದಿಂದ ಹೇಳಿಕೊಂಡರು.
ಇದನ್ನೂ ಓದಿ : ಒಬಿಸಿ ಮೀಸಲಾತಿ ಕುರಿತು ಬಿಜೆಪಿಯ ಸ್ಪಷ್ಟ ನಿಲುವನ್ನು ತಿಳಿಸಿ: ಜೆ.ಪಿ.ನಡ್ಡಾ ಗೆ ಪತ್ರ
ಎಂ.ಎಸ್‌ಸಿ ರಸಾಯನ ವಿಜ್ಞಾನ ವಿಭಾಗದಲ್ಲಿ ಪದಕಗಳನ್ನು ಪಡೆದ ವಿದ್ಯಾಶ್ರೀ ಬಿ.ಎಸ್. ಇವರ ತಂದೆ ಸೋಮಶೇಖರ್ ಎ. ಮತ್ತು ತಾಯಿ ರೂಪಾ ದೇವಿ ಕೋಲಾರ ಜಿಲ್ಲೆಯ ಬೆಳಮಾರನಹಳ್ಳಿಯಲ್ಲಿ ಕೃಷಿಕರಾಗಿದ್ದಾರೆ. ‘ಪಿಎಚ್.ಡಿ ಮಾಡಬೇಕು. ಪ್ರಾಧ್ಯಾಪಕಿಯಾಗಬೇಕು’ ಎಂದು ಮಗಳು ಕನಸು ಇಟ್ಟುಕೊಂಡಿದ್ದರೆ, ಇಷ್ಟು ಓದಿಸಿದ್ದೇ ಕಷ್ಟದಲ್ಲಿ, ಇನ್ನು ಎಲ್ಲಿಯಾದರೂ ಉದ್ಯೋಗ ಹುಡುಕಬೇಕು’ ಎಂದು ಹೆತ್ತವರು ಹೇಳಿಕೊಂಡರು.
ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಹೇಮಂತ್ ಎ.ಎಸ್. ಏಳು ಚಿನ್ನದ ಪದಕ ಪಡೆದಿದ್ದಾರೆ. ಇವರು ಶಿವಮೊಗ್ಗದ ಅಬ್ಬಲಗೆರೆ ಗ್ರಾಮದ ಕಲ್ಲಗಂಗೂರು ನಿವಾಸಿ ಶಿವಕುಮಾರ್–ಭಾಗ್ಯಲಕ್ಷ್ಮೀ ದಂಪತಿಯ ಮಗ. ಶಿವಕಮಾರ್ ಆಟೊ ಚಾಲಕರಾಗಿ ದುಡಿದು ಕುಟುಂಬವನ್ನು ಸಾಕುತ್ತಿದ್ದಾರೆ. ಭಾಗ್ಯಲಕ್ಷ್ಮೀ ಗೃಹಿಣಿ. ‘ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಜೊತೆಗೆ ಶೋಭಾ ಲಿಮಿಟೆಡ್ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಮಂತ್ ತಿಳಿಸಿದರು.
ಏಳು ಪದಕಗಳನ್ನು ಪಡೆದವರಲ್ಲಿ ರುಫಿಯಾ ಕೆ.ಎಂ. ಕೂಡ ಒಬ್ಬರು. ಅವರು ಎಂ.ಎಸ್‌ಸಿ ಭೌತವಿಜ್ಞಾನದಲ್ಲಿ ಈ ಸಾಧನೆ ಮಾಡಿದ್ದಾರೆ. ತಂದೆ ಕೆಎಸ್‌ಆರ್‌ಟಿಸಿಯಲ್ಲಿ ಸಂಚಾರ ನಿಯಂತ್ರಣಾಧಿಕಾರಿ. ತಾಯಿ ನಹೀದಾ ನುಜ್ರತ್ ಗೃಹಿಣಿಯಾಗಿದ್ದಾರೆ. ಚಿಂತಾಮಣಿಯ ರುಫಿಯಾ ‘ಪಿಎಚ್.ಡಿ ಮಾಡಬೇಕು. ಪ್ರಾಧ್ಯಾಪಕಿಯಾಗಬೇಕು’ ಎಂಬ ಗುರಿ ಇಟ್ಟುಕೊಂಡಿದ್ದಾರೆ.
ಹೂವಿನ ಹಡಗಲಿ ತಾಲ್ಲೂಕಿನ ತಿಪ್ಪಾಪುರ ಗ್ರಾಮದ ಕೃಷಿಕರಾದ ಮಾಲತೇಶ್, ರೇಣಿಕಾ ಮಂತ್ರೋಡಿಯವರ ಮಗ ವಿಕಾಸ್ ಮಂತ್ರೋಡಿ ಎಂ.ಎ ಆರ್ಥಶಾಸ್ತ್ರದಲ್ಲಿ 5 ಚಿನ್ನದ ಪದಕ ಪಡೆದಿದ್ದಾರೆ. ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗಿ ಬಡಜನರ ಸೇವೆ ಮಾಡಬೇಕು ಎಂಬ ಕನಸ್ಸನ್ನು ಹೊತ್ತಿದ್ದಾರೆ.
ಚಿನ್ನದ ಪದಕ ಪಡೆದವರಲ್ಲಿ ಬಹುತೇಕರು ಕಾರ್ಮಿಕ, ರೈತರ ಮಕ್ಕಳಾಗಿರುವುದು ವಿಶೇಷ, ಇವುಗಳು ಕೇವಲ ಪದಕಗಳಲ್ಲ, ಸಾಧನೆಯ ಮೈಲಿಗಳು ವಿವಿಯ ಪ್ರಾಧ್ಯಾಪಕವರ್ಗ ವಿದ್ಯಾರ್ಥಿಗಳ ಬೆನ್ನು ತಟ್ಟಿದ್ದಾರೆ.
ಇದನ್ನೂ ನೋಡಿ : ನಮಗೆ 10 ಸಾವಿರ ಪಿಂಚಣಿ ನೀಡಿ – ವಿಕಲಚೇತನರ ಆಗ್ರಹ Janashakthi Media
