ಸೋನಂ ವಾಂಗ್ಚುಕ್ ಆಸ್ಪತ್ರೆಗೆ ವರ್ಗಾವಣೆಗೆ ಪತ್ನಿಯಿಂದ ಹೈಕೋರ್ಟ್ ಮೊರೆ

ನವದೆಹಲಿ: ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲು ಅನುಮತಿ ನೀಡುವಂತೆ ಅವರ ಪತ್ನಿ ಗೀತಾಂಜಲಿ ಜೆ ಅಂಗ್ಮೋ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತುರ್ತು ವಿಚಾರಣೆಯನ್ನು ಬೇಡಿಕೊಂಡಿದ್ದಾರೆ. ಸೋನಂ

ಸಫ್ದರ್‌ಜಂಗ್ ಆಸ್ಪತ್ರೆಯ ಮೇಲೆ “ನಂಬಿಕೆ ಕಳೆದುಕೊಂಡಿದ್ದೇನೆ” ಎಂದು ಅರ್ಜಿಯಲ್ಲಿ ತಿಳಿಸಿರುವ ಅಂಗ್ಮೋ, ವಾಂಗ್ಚುಕ್ ಅವರ ಆರೋಗ್ಯ ಮತ್ತಷ್ಟು ಹದಗೆಡುವ ಮುನ್ನ ಅವರನ್ನು ತಮ್ಮ ಆಯ್ಕೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಆಸ್ಪತ್ರೆ ಅಧಿಕಾರಿಗಳು “ಆಯ್ದ ಮಾಹಿತಿಯನ್ನು ಮಾತ್ರ” ಹಂಚಿಕೊಳ್ಳುತ್ತಿದ್ದಾರೆ ಹಾಗೂ ಬೇರೆ ಆಸ್ಪತ್ರೆಗೆ ವರ್ಗಾವಣೆಗೆ ಅವಕಾಶ ನೀಡದಿರುವುದು ಅವರ ಆರೋಗ್ಯದ ಸ್ವತಂತ್ರ ಪರಿಶೀಲನೆಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಪತಿಯ ಆರೋಗ್ಯದ ಬಗ್ಗೆ “ತೀವ್ರ ಚಿಂತೆ” ವ್ಯಕ್ತಪಡಿಸಿರುವ ಅವರು, ವೈದ್ಯಕೀಯ ಕ್ರಮಗಳು “ಗುಪ್ತ ಹಾಗೂ ಅಪಾರದರ್ಶಕ” ರೀತಿಯಲ್ಲಿ ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜುಲೈ 16ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಪೊಲೀಸರು ದುರುಪಯೋಗ ಮಾಡಿಕೊಂಡು ಯಾವುದೇ ತುರ್ತು ವೈದ್ಯಕೀಯ ಅವಶ್ಯಕತೆ ಇಲ್ಲದೇ ಜಂತರ್ ಮಂತರ್‌ನಿಂದ ವಾಂಗ್ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮೆಸ್ಸಿಯ ಕನಸೋ? ಸ್ಪೇನ್‌ನ ಹೊಸ ಯುಗವೋ? ವಿಶ್ವಕಪ್ ಫೈನಲ್‌ನಲ್ಲಿ ಏನಾಗಲಿದೆ?

ಶನಿವಾರ ನೀಡಲಾದ ರಕ್ತ ಮಾದರಿಗಳಲ್ಲಿ ಪೊಟ್ಯಾಸಿಯಂ ಮಟ್ಟದ ವ್ಯತ್ಯಾಸ ಕಂಡುಬಂದಿದೆ ಎಂದು ಅರ್ಜಿ ಹೇಳುತ್ತದೆ. ಸಫ್ದರ್‌ಜಂಗ್ ಆಸ್ಪತ್ರೆ ನೀಡಿದ ವರದಿಯಲ್ಲಿ 2.9 ಮಿಗ್ರಾಂ ಇದ್ದರೆ, ಸ್ವತಂತ್ರ ಸಂಸ್ಥೆ ಪರೀಕ್ಷೆಯಲ್ಲಿ 3.6 ಮಿಗ್ರಾಂ ಎಂದು ತೋರಿದೆ ಎಂದು ಆರೋಪಿಸಲಾಗಿದೆ. ಈ ವ್ಯತ್ಯಾಸದಿಂದ ಪ್ರತಿವಾದಿಗಳ “ದುರುದ್ದೇಶಿತ ನಡೆ” ಸ್ಪಷ್ಟವಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ವಾಂಗ್ಚುಕ್ ಅವರನ್ನು ಪರಿಶೀಲಿಸುತ್ತಿದ್ದ ವೈದ್ಯರಿಗೆ ಹಾಗೂ ಕಾನೂನು ಸಲಹೆಗಾರರಿಗೆ ನಿರ್ಬಂಧವಿಲ್ಲದ ಪ್ರವೇಶ, ಸ್ವತಂತ್ರ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಅನುಮತಿ, ಮತ್ತು ತಕ್ಷಣ ಬಿಡುಗಡೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

ಭಾನುವಾರ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅಂಗ್ಮೋ, “ಕುಟುಂಬದವರು ತಮ್ಮ ಪ್ರಿಯ ವ್ಯಕ್ತಿಗೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಆಯ್ಕೆ ಮಾಡಲು ಹೋರಾಡಬೇಕಾದ ಪರಿಸ್ಥಿತಿ ಬರಬಾರದು” ಎಂದಿದ್ದಾರೆ. ಆಸ್ಪತ್ರೆ ಬಿಡುಗಡೆ ಮಾಡಿದ ಆರೋಗ್ಯ ವರದಿಯಲ್ಲಿ ಪೊಟ್ಯಾಸಿಯಂ ಮಟ್ಟದ ನಿಖರ ಮಾಹಿತಿ “ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ” ಎಂದು ಅವರು ಆರೋಪಿಸಿದ್ದಾರೆ. ಆಸ್ಪತ್ರೆಯೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಇದ್ದು, ತಮ್ಮ ಚಲನವಲನಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಫ್ದರ್‌ಜಂಗ್ ಆಸ್ಪತ್ರೆ, ವಾಂಗ್ಚುಕ್ ಅವರು ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು ತಜ್ಞರ ತಂಡವು ನಿಗಾವಹಿಸಿದೆ ಎಂದು ತಿಳಿಸಿದೆ. ದೀರ್ಘಕಾಲದ ಉಪವಾಸದಿಂದ ದೇಹದ ಮೇಲೆ ಆಗಿರುವ ಪರಿಣಾಮದಿಂದ ರಕ್ತದ ಅಂಶಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.

ಜೂನ್ 28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಾಂಗ್ಚುಕ್ ಅವರನ್ನು ಶನಿವಾರ 21ನೇ ದಿನದಂದು ದೆಹಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. NEET ಪರೀಕ್ಷೆಯ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಅವರು ಈ ಉಪವಾಸ ಆರಂಭಿಸಿದ್ದರು.

ಇದನ್ನೂ ನೋಡಿ: ಮಫ್ತಿ ಪೊಲೀಸರ ಕಾರ್ಯಾಚರಣೆ! ಸೋನಂ ವಾಂಗ್‌ಚುಕ್‌ರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ ಕೇಂದ್ರದ ವಿರುದ್ಧ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *