ಕರ್ನಾಟಕದಲ್ಲಿ ಎಸ್‌ಐಆರ್‌ ಪರಿಷ್ಕರಣೆ ವೇಳಾಪಟ್ಟಿ ಪರಿಷ್ಕರಣೆ; ಅಂತಿಮ ಮತದಾರರ ಪಟ್ಟಿ ಅಕ್ಟೋಬರ್‌ 19ಕ್ಕೆ ಪ್ರಕಟ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ ಪರಿಷ್ಕರಿಸಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಬೂತ್‌ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮನೆ-ಮನೆ ಭೇಟಿ ಕಾರ್ಯ ಆಗಸ್ಟ್‌ 8ರವರೆಗೆ ಮುಂದುವರಿಯಲಿದ್ದು, ಕರಡು ಮತದಾರರ ಪಟ್ಟಿಯನ್ನು ಆಗಸ್ಟ್‌ 17ರಂದು ಪ್ರಕಟಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್‌ 19ರಂದು ಪ್ರಕಟವಾಗಲಿದೆ. ಕರ್ನಾಟಕ

ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿದೆ. ಚುನಾವಣಾ ಆಯೋಗದ ಜುಲೈ 15ರ ಆದೇಶದಂತೆ, 2026ರ ಅಕ್ಟೋಬರ್‌ 1ನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಮುಂದುವರಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಬೂತ್‌ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮನೆ-ಮನೆ ಭೇಟಿ ಕಾರ್ಯ ಜೂನ್‌ 30ರಿಂದ ಆಗಸ್ಟ್‌ 8ರವರೆಗೆ ನಡೆಯಲಿದೆ. ಇದೇ ಅವಧಿಯಲ್ಲಿ ಮತಗಟ್ಟೆಗಳ ಮರುಜೋಡಣೆ ಹಾಗೂ ಮರುಹಂಚಿಕೆ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗುತ್ತದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್‌ 17ರಂದು ಪ್ರಕಟಿಸಲಾಗುತ್ತದೆ.

ಆಗಸ್ಟ್‌ 17ರಿಂದ ಸೆಪ್ಟೆಂಬರ್‌ 16ರವರೆಗೆ ಮತದಾರರ ಹಕ್ಕು-ದಾವೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆ ಮತ್ತು ವಿಲೇವಾರಿ ಪ್ರಕ್ರಿಯೆ ಆಗಸ್ಟ್‌ 17ರಿಂದ ಅಕ್ಟೋಬರ್‌ 15ರವರೆಗೆ ನಡೆಯಲಿದೆ. ಬಳಿಕ ಅಕ್ಟೋಬರ್‌ 19ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ, ಎಸ್‌ಐಆರ್‌ ಪ್ರಗತಿ ಕುರಿತು ಚುನಾವಣಾಧಿಕಾರಿಗಳ ಕಚೇರಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಜೂನ್‌ 16ರ ಮತದಾರರ ಪಟ್ಟಿಯಂತೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದಾರೆ. ಇವರಿಗಾಗಿ ಮುದ್ರಿಸಲಾದ ಎಣಿಕೆ ನಮೂನೆಗಳಲ್ಲಿ 5,30,42,667 (95.69%) ನಮೂನೆಗಳನ್ನು ಬಿಎಲ್‌ಒಗಳು ಈಗಾಗಲೇ ಮತದಾರರಿಗೆ ವಿತರಿಸಿದ್ದಾರೆ. ರಾಜ್ಯದ 44,798 ಮತಗಟ್ಟೆಗಳಲ್ಲಿ (75.86%) ಶೇ.100ರಷ್ಟು ನಮೂನೆ ವಿತರಣೆ ಪೂರ್ಣಗೊಂಡಿದ್ದು, ಮತ್ತಷ್ಟು 6,932 ಮತಗಟ್ಟೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ವಿತರಣೆ ಪೂರ್ಣಗೊಂಡಿದೆ. ಕರ್ನಾಟಕ

ಇದನ್ನೂ ಓದಿ :ಎಸ್‌ಐಆರ್‌ ಅವಧಿ ವಿಸ್ತರಿಸಿ, ಗೊಂದಲ ನಿವಾರಿಸಿ: ಚುನಾವಣಾ ಆಯೋಗಕ್ಕೆ ಸಿಪಿಐ(ಎಂ) ಮನವಿ

ಡಿಜಿಟಲೀಕರಣ ಕಾರ್ಯವೂ ಪ್ರಗತಿಯಲ್ಲಿದ್ದು, ಇದುವರೆಗೆ 2,25,60,605 (40.70%) ನಮೂನೆಗಳನ್ನು ಡಿಜಿಟಲೀಕರಿಸಲಾಗಿದೆ. ಆನ್‌ಲೈನ್‌ ಮೂಲಕ 2,11,138 ಮತದಾರರು ನಮೂನೆಗಳನ್ನು ಸಲ್ಲಿಸಿದ್ದಾರೆ. ಪರಿಶೀಲನೆ ವೇಳೆ 14,49,952 ನಮೂನೆಗಳು ವಿಶೇಷ ಗುರುತಿಸುವಿಕೆ ವಿಭಾಗಕ್ಕೆ ಸೇರಿದ್ದರೆ, 1,52,323 ಮತದಾರರು ವಿಳಾಸದಲ್ಲಿ ಪತ್ತೆಯಾಗಿಲ್ಲ. 8,35,251 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, 3,85,086 ಮತದಾರರು ಮೃತಪಟ್ಟಿರುವ ಮಾಹಿತಿ ದಾಖಲಾಗಿದೆ. ಈಗಾಗಲೇ ನೋಂದಣಿಯಾಗಿರುವ 73,031 ಮತದಾರರ ವಿವರಗಳೂ ಪತ್ತೆಯಾಗಿವೆ.

ಪರಿಷ್ಕೃತ ವೇಳಾಪಟ್ಟಿಯ ಹಿನ್ನೆಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಎಲ್ಲ ರಾಜಕೀಯ ಪಕ್ಷಗಳು, ಬಿಎಲ್‌ಒಗಳು ಮತ್ತು ಮತದಾರರು ಸಹಕರಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮನವಿ ಮಾಡಿದೆ.

ಇದನ್ನೂ ನೋಡಿ : ಉಸಿರಾಡುವ ಗಾಳಿಯೇ ವಿಷ! ಆಯುಷ್ಯ ಕಸಿಯುತ್ತಿರುವ ‘ಸೈಲೆಂಟ್ ಕಿಲ್ಲರ್’ | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *