ಬೆಂಗಳೂರು: ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಭಿಯಾನ ವೇಗ ಪಡೆದುಕೊಂಡಿದ್ದು, ನಾಲ್ಕು ದಿನಗಳಲ್ಲಿ 2,01,24,411 ಮತದಾರರ ಎಣಿಕೆ ನಮೂನೆಗಳನ್ನು (Enumeration Forms) ವಿತರಿಸಲಾಗಿದೆ. ಇದು ಒಟ್ಟು ಮತದಾರರ ಶೇ.36.30ರಷ್ಟಾಗಿದೆ. SIR ಕರ್ನಾಟಕ
ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಶುಕ್ರವಾರ ಸಂಜೆ 6 ಗಂಟೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಜೂನ್ 16ರ ವೇಳೆಗೆ ರಾಜ್ಯದಲ್ಲಿ 5,54,32,314 ಮತದಾರರಿದ್ದು, ಜೂನ್ 30ರಿಂದ ಮನೆ-ಮನೆಗೆ ತೆರಳಿ ಎಣಿಕೆ ನಮೂನೆ ವಿತರಣೆ ಮತ್ತು ಡಿಜಿಟಲೀಕರಣ ಕಾರ್ಯ ನಡೆಯುತ್ತಿದೆ. ಈ ಪ್ರಕ್ರಿಯೆ ಜುಲೈ 29ರವರೆಗೆ ಮುಂದುವರಿಯಲಿದೆ.
ಇಲ್ಲಿಯವರೆಗೆ 12,07,432 ಎಣಿಕೆ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಇದು ಒಟ್ಟು ಮತದಾರರ ಶೇ.2.18ರಷ್ಟಾಗಿದೆ. 54,823 ಮತದಾರರು ಆನ್‌ಲೈನ್ ಮೂಲಕ ನಮೂನೆ ಸಲ್ಲಿಸಿದ್ದಾರೆ.
ಇದುವರೆಗೆ 17,688 ಪ್ರಕರಣಗಳನ್ನು ‘ASDDO’ (Absent, Shifted, Dead, Duplicate and Others) ಎಂದು ಗುರುತಿಸಲಾಗಿದೆ. ಅಲ್ಲದೆ 8,853 ಮೃತ ಮತದಾರರು, 6,828 ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರು, 264 ಪತ್ತೆಯಾಗದ ಅಥವಾ ಗೈರುಹಾಜರಾಗಿರುವ ಮತದಾರರು, 1,636 ಈಗಾಗಲೇ ನೋಂದಣಿಯಾಗಿರುವ ಮತದಾರರು ಹಾಗೂ 107 ಇತರೆ ಪ್ರಕರಣಗಳನ್ನು ಗುರುತಿಸಲಾಗಿದೆ.
ಇದನ್ನೂ ಓದಿ : SIR ಕರ್ನಾಟಕ | ಮೂರು ದಿನದಲ್ಲಿ 1.12 ಕೋಟಿ ಗಣತಿ ನಮೂನೆ ವಿತರಣೆ
ಇದೇ ವೇಳೆ, ಕೆಲವು ಕಡೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ತೆರಳಿ ನಮೂನೆ ವಿತರಿಸುತ್ತಿಲ್ಲ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ನಮೂನೆ ವಿತರಿಸುವಂತೆ ಎಲ್ಲ ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.
ನಮೂನೆ ಭರ್ತಿ ಮಾಡಲು ತೊಂದರೆ ಅನುಭವಿಸುತ್ತಿರುವ ಮತದಾರರು ತಮ್ಮ ವ್ಯಾಪ್ತಿಯ ಮತದಾರರ ನೆರವು ಕೇಂದ್ರಗಳಿಗೆ (Voter Facilitation Centres) ಭೇಟಿ ನೀಡಿ ಸಹಾಯ ಪಡೆಯಬಹುದು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾವಾರು ಪ್ರಗತಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು 10.12 ಲಕ್ಷ ಎಣಿಕೆ ನಮೂನೆಗಳು ವಿತರಣೆಗೊಂಡಿದ್ದು, ಕಲಬುರಗಿ (11.59 ಲಕ್ಷ), ತುಮಕೂರು (10.23 ಲಕ್ಷ), ದಾವಣಗೆರೆ (9.36 ಲಕ್ಷ), ಕೊಪ್ಪಳ (8.70 ಲಕ್ಷ) ಹಾಗೂ ಹಾಸನ (8.53 ಲಕ್ಷ) ಜಿಲ್ಲೆಗಳಲ್ಲಿಯೂ ವಿತರಣೆ ಕಾರ್ಯ ಉತ್ತಮ ಪ್ರಗತಿಯಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. SIR ಕರ್ನಾಟಕ
ಇದನ್ನೂ ನೋಡಿ : ಆರ್‌ಎಸ್‌ಎಸ್ ನೋಂದಣಿ ಸುತ್ತಮುತ್ತ: ಎದ್ದಿರುವ ಪ್ರಶ್ನೆಗಳೇನು?
