ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸಿದರು. ರಾಜ್ಯಪಾಲರು ಸದ್ಯ ಬೆಂಗಳೂರಿನಲ್ಲಿ ಇಲ್ಲದ ಹಿನ್ನೆಲೆ, ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಚೇರಿಯ ಕಾರ್ಯದರ್ಶಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು. ಸಿದ್ದರಾಮಯ್ಯ
ರಾಜೀನಾಮೆ ಬಳಿಕ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್, ಕೆ.ಜೆ. ಜಾರ್ಜ್, ಚಲುವರಾಯಸ್ವಾಮಿ ಹಾಗೂ ಡಾ. ಜಿ. ಪರಮೇಶ್ವರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ತಾವು ಸದಾ ಬದ್ಧರಾಗಿದ್ದು, ನಾಯಕತ್ವದ ಸೂಚನೆಯಂತೆ ಗುರುವಾರವೇ ರಾಜೀನಾಮೆ ಸಲ್ಲಿಸಿದ್ದಾಗಿ ಹೇಳಿದರು. ರಾಜ್ಯಪಾಲರು ಬೆಂಗಳೂರಿಗೆ ಮರಳಿದ ಬಳಿಕ ಸಂವಿಧಾನಾತ್ಮಕ ಪ್ರಕ್ರಿಯೆಯಂತೆ ರಾಜೀನಾಮೆ ಅಂಗೀಕರಿಸುವ ವಿಶ್ವಾಸವಿದೆ ಎಂದರು. ಸಿದ್ದರಾಮಯ್ಯ
ಇದನ್ನೂ ಓದಿ : ಸಿದ್ದರಾಮಯ್ಯ ಬದಲಾವಣೆ ಕಾಂಗ್ರೆಸ್ಗೆ ಲಾಭಕ್ಕಿಂತ ಸವಾಲು ಹೆಚ್ಚು? ಅಹಿಂದಾ ಮತಗಟ್ಟೆಯಲ್ಲಿ ಆತಂಕ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದ್ದು, ಪಕ್ಷದ 135ಕ್ಕೂ ಹೆಚ್ಚು ಶಾಸಕರ ಜೊತೆಗೆ ಪಕ್ಷೇತರರ ಬೆಂಬಲವೂ ಸರ್ಕಾರಕ್ಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ನಾಯಕತ್ವಕ್ಕೆ ಅವಕಾಶ ಕಲ್ಪಿಸುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಪ್ರಕ್ರಿಯೆಯ ಭಾಗ ಎಂದು ಅವರು ಅಭಿಪ್ರಾಯಪಟ್ಟರು.
ಈ ವೇಳೆ ನಟ ಡಾ. ರಾಜ್ಕುಮಾರ್ ಅವರ “ಅಭಿಮಾನಿ ದೇವರು” ಎಂಬ ಮಾತನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, “ನನಗೆ ಸಂವಿಧಾನವೇ ಧರ್ಮ. ರಾಜ್ಯದ ಜನರೇ ನನ್ನ ಅಭಿಮಾನಿ ದೇವರು” ಎಂದು ಹೇಳಿದರು. ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಕ್ಕಾಗಿ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದರು.
ಎರಡು ಬಾರಿ ಕರ್ನಾಟಕದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
550 ಭರವಸೆಗಳಲ್ಲಿ, ಸುಮಾರು 300 ಭರವಸೆಗಳನ್ನು ಇಲ್ಲಿಯವರೆಗೆ ಈಡೇರಿಸಲಾಗಿದೆ, ಜೊತೆಗೆ ಐದು ಗ್ಯಾರಂಟಿಗಳು. ನಾನು ನೀಡಿದ ಭರವಸೆಗಳಿಂದ ವಿಮುಖನಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ವಿರೋಧ ಪಕ್ಷಗಳು ನನ್ನ ವಿರುದ್ಧ ಹಲವು ಸುಳ್ಳು ಕಥೆಗಳನ್ನು ಕಟ್ಟಿದೆ. ‘ನಾನು ಹಣವನ್ನು ಬೆನ್ನಟ್ಟಿಲ್ಲ ಅಥವಾ ಆಸ್ತಿಗಳನ್ನು ಮಾಡಿಕೊಳ್ಳಲು ಹಂಬಲಿಸಿಲ್ಲ, ನನ್ನ ರಾಜಕೀಯ ಜೀವನವು ತೆರೆದ ಪುಸ್ತಕ’ ಎಂದು ಸಿದ್ದರಾಮಯ್ಯ ಹೇಳಿದರು.
ನಾನು ಮೊದಲಿನಿಂದಲೂ, ರಾಜಕಾರಣಕ್ಕೆ ಬಂದಂದಿನಿಂದ ಬುದ್ಧ ಬಸವ, ಅಂಬೇಡ್ಕರ್, ಗಾಂಧಿಜಿ ಇವರ ತತ್ವಾದರ್ಶಗಳಲ್ಲಿ ನಂಬಿಕೆ ಇಟ್ಟಿದ್ದೇನೆ. ಸಂವಿಧಾನದಲಲಿ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಯಾವುದೇ ಜಾತಿ ಮತ ವಿಲ್ಲದೇ ನಾವೆಲ್ಲ ಒಂದೇ ಕುಟುಂಬದವರಾಗಿ ಬಾಳಬೇಕು ಎಂದುಕೊಂಡಿದ್ದೇನೆ. ಆರ್ಥಿಕವಾಗಿ, ಸಾಮಾಜಿಕವಾಗಿ ಈ ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂಬ ತತ್ವ ಇಟ್ಟುಕೊಂಡಿದ್ದೇನೆ. ಬಸವಣ್ಣನವರ ವಿಚಾರ, ಗಾಂಧೀಜಿಯವರ ವಿಚಾರ, ಅಂಬೇಡ್ಕರ್ ಅವರ ವಿಚಾರ ನಮಗೆ ಆದರ್ಶಪ್ರಾಯ. ಸಾಯುವವರೆಗೂ ನಾನು ಕೋಮುವಾದದ ವಿರುದ್ಧ ಹೋರಾಡುತ್ತೇನೆ ಎಂದು ಪತ್ರಿಕಾಗೋಷ್ಠಿಯನ್ನು ಸಮಾಪ್ತಿಗೊಳಿಸಿದರು.
ಇದನ್ನೂ ನೋಡಿ : ಸಿದ್ದರಾಮಯ್ಯ ರಾಜೀನಾಮೆ – ಪತ್ರಿಕಾಗೋಷ್ಠಿ | ನೇರ ಪ್ರಸಾರ | LIVE
