ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳು ತೀವ್ರಗೊಂಡಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೋರಿದ್ದಾರೆ ಎಂಬ ಸುದ್ದಿಗೆ ಲೋಕಭವನ ಸ್ಪಷ್ಟನೆ ನೀಡಿದೆ ಎಂದು ನ್ಯೂ ಇಂಡಿಯನ್‌ ಎಕ್ಸಪ್ರೆಸ್‌ ವರದಿ ಮಾಡಿದೆ.

ಮುಖ್ಯಮಂತ್ರಿ ಇದೂವರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಲು ಯಾವುದೇ ಅಧಿಕೃತ ಮನವಿ ಸಲ್ಲಿಸಿಲ್ಲ ಎಂದು ಲೋಕಭವನ ಅಧಿಕಾರಿಗಳು ಮೇ 28ರಂದುತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಹಸ್ತಾಂತರಿಸುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಒಕಳಿಪುರಂ ಅಂಡರ್‌ಪಾಸ್‌ ವಾಹನ ಸಂಚಾರಕ್ಕೆ 25 ದಿನ ಗಡುವು

ಬುಧವಾರ ಮುಖ್ಯಮಂತ್ರಿ ಕಚೇರಿ ಮೂಲಗಳು, ಸಿದ್ದರಾಮಯ್ಯ ಅವರು ಮೇ 28ರಂದು ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ ಎಂದು ಮಾಹಿತಿ ನೀಡಿದ್ದವು. ಇದರಿಂದ ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಊಹಾಪೋಹಗಳು ಮತ್ತಷ್ಟು ಜೋರಾಗಿದ್ದವು.

ಆದರೆ, ಲೋಕಭವನದ ಹಿರಿಯ ಅಧಿಕಾರಿಯೊಬ್ಬರು, “ರಾಜ್ಯಪಾಲರು ಪ್ರಸ್ತುತ ಮಧ್ಯಪ್ರದೇಶದ ಇಂದೋರ್‌ನಲ್ಲಿ ತಮ್ಮ ಸ್ವಗ್ರಾಮದಲ್ಲಿದ್ದಾರೆ. ಮುಖ್ಯಮಂತ್ರಿ ಭೇಟಿಗೆ ಸಮಯ ಕೇಳಿದ್ದಾರೆ ಎಂಬ ಯಾವುದೇ ಅಧಿಕೃತ ಮಾಹಿತಿ ನಮ್ಮ ಬಳಿ ಇಲ್ಲ” ಎಂದು ತಿಳಿಸಿದ್ದಾರೆ.

“ಈ ಕ್ಷಣಕ್ಕೆ ಅಂತಹ ಯಾವುದೇ ಸಂದೇಶ ಅಥವಾ ಮಾಹಿತಿ ಬಂದಿಲ್ಲ. ರಾಜ್ಯಪಾಲರು ಬೆಂಗಳೂರಿಗೆ ಮರಳಿದ ಬಳಿಕವೇ ಮುಖ್ಯಮಂತ್ರಿ ಅವರನ್ನು ಭೇಟಿಯಾಗಬಹುದು” ಎಂದೂ ಅವರು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ನೇರವಾಗಿ ರಾಜ್ಯಪಾಲರನ್ನು ಭೇಟಿಯಾಗದೇ ಲೋಕಭವನ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, “ಅವರು ಬಯಸಿದರೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಬಹುದು” ಎಂದು ಹೇಳಿದ್ದಾರೆ.

ಅದೇ ವೇಳೆ, “ಆ ರಾಜೀನಾಮೆ ರಾಜ್ಯಪಾಲರಿಗೆ ನೇರವಾಗಿ ಸಲ್ಲಿಸಿದಂತೆಯೇ ಮಾನ್ಯವಾಗುತ್ತದೆ. ಆದರೆ ರಾಜ್ಯಪಾಲರು ಮರಳಿದ ಬಳಿಕ ಮತ್ತೊಮ್ಮೆ ಮುಖ್ಯಮಂತ್ರಿ ಅವರನ್ನು ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವಂತೆ ಕೇಳುವ ಸಾಧ್ಯತೆಯೂ ಇದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ನೋಡಿ: “ಗ್ರಾಮಗಳ ಸ್ವಚ್ಛತೆಗೆ ಶ್ರಮ, ಬದುಕಿಗೆ ಸಂಕಷ್ಟ: ಸ್ವಚ್ಛವಾಹಿನಿ ನೌಕರರ ಅಳಲು” Janashakthi Media

Donate Janashakthi Media

Leave a Reply

Your email address will not be published. Required fields are marked *