ಯಲಬುರ್ಗಾ: ಕೊನಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಯಲಬುರ್ಗಾಕ್ಕೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್‌ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಹೆಚ್ಚುವರಿ ಬಸ್ ಕಳುಹಿಸುವ ವ್ಯವಸ್ಥೆ ಮಾಡಿದರು.
ಎಸ್ಎಫ್‌ಐ ತಾಲೂಕು ಮುಖಂಡ ರಾಮಮೂರ್ತಿ ಮಾತನಾಡಿ, ಕೊನಸಾಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಯಲಬುರ್ಗಾಕ್ಕೆ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಆದರೆ ಈ ಮಾರ್ಗದಲ್ಲಿ ಒಂದೇ ಬಸ್ ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ತುಂಬರಗುದ್ದಿ, ಅಗೇದಾಳ, ಬೋನಕೊಪ್ಪ, ಚಿಕ್ಕಬಂಡವಾಳ ತಾಂಡ, ಕೊನಸಾಗರ, ವಜ್ರಬಂಡಿ, ಜೀಜರಕುಂಟಿ ಹಾಗೂ ಕುದುರೆಕೋಟಗಿ ಮಾರ್ಗವಾಗಿ ಬಸ್ ಯಲಬುರ್ಗಾಕ್ಕೆ ತೆರಳುತ್ತದೆ. ಒಂದೇ ಬಸ್ ಇರುವುದರಿಂದ ಕೊನಸಾಗರ ಹಾಗೂ ಬನ್ನಿಗೋಳ ಭಾಗದ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ದೊರೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಅವರು ತಿಳಿಸಿದರು.
ಇದನ್ನು ಓದಿ : ರೈಲು ನಿಲ್ದಾಣಗಳಲ್ಲಿ ಅವಧಿ ಮೀರಿದ ಮೊಸರು, ಹಾಲು: ಪತ್ರಿಕೆಯಲ್ಲಿ ಆಹಾರ ಪ್ಯಾಕಿಂಗ್ ಪತ್ತೆ
ಸಮಸ್ಯೆ ಪರಿಹರಿಸುವಂತೆ ವಿದ್ಯಾರ್ಥಿಗಳು ಡಿಪೋ ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮನವಿ ಮಾಡಿದ್ದರೂ ಸಮರ್ಪಕವಾಗಿ ಸ್ಪಂದಿಸಿರಲಿಲ್ಲ. ಅಲ್ಲದೆ, ಬಳಿಕ ದೂರವಾಣಿ ಸ್ವಿಚ್ ಆಫ್ ಮಾಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಯಿತು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದನ್ನು ಖಂಡಿಸಿ ಎಸ್ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಹೆಚ್ಚುವರಿ ಬಸ್ ಕಳುಹಿಸುವ ವ್ಯವಸ್ಥೆ ಮಾಡಿದರು. ಇದರಿಂದ ವಿದ್ಯಾರ್ಥಿಗಳ ತಕ್ಷಣದ ಬೇಡಿಕೆಗೆ ಸ್ಪಂದನೆ ದೊರೆತಂತಾಯಿತು.
ಆದರೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡುವುದಕ್ಕಿಂತ ವಿದ್ಯಾರ್ಥಿಗಳ ಸಂಚಾರದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿಯೂ ಅಗತ್ಯ ಹೆಚ್ಚುವರಿ ಬಸ್‌ಗಳನ್ನು ನಿಯಮಿತವಾಗಿ ಓಡಿಸಬೇಕು ಎಂದು ಎಸ್ಎಫ್‌ಐ ಮುಖಂಡರು ಆಗ್ರಹಿಸಿದರು.
ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸದಿದ್ದರೆ ಎಸ್ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಯಲಬುರ್ಗಾ ಬಂದ್ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಸ್ಎಫ್‌ಐ ತಾಲೂಕು ಮುಖಂಡ ರಾಮಮೂರ್ತಿ, ಅಂಬೇಡ್ಕರ್ ಯುವಪಡೆಯ ಆರ್.ಎಕ್ಸ್. ಸೂರಿ, ಎಸ್ಎಫ್‌ಐ ಕಾರ್ಯಕರ್ತರಾದ ಚಿರಂತ್ ಅಂಗಡಿ, ನಾಗರಾಜ್ ಬುಡಶೆಟ್ನಾಳ, ಬಸು ಬನ್ನಿಗೋಳ, ನೇತ್ರ, ಅಕ್ಷತ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ನೋಡಿ : “ಕನಿಷ್ಠ ವೇತನವೂ ಇಲ್ಲ, ಜೀವಕ್ಕೆ ಗ್ಯಾರಂಟಿಯೂ ಇಲ್ಲ! ಬೇಯುತ್ತಿದೆ ವಿದ್ಯುತ್ ಕಾರ್ಮಿಕರ ಬದುಕು” | ಎಸ್ ವರಲಕ್ಷ್ಮಿ
