ವಾರಾಣಸಿ | ಕಸ ತೆಗೆಯುವ ಕೈಗಳಿಗೆ ಕಾಸಿಲ್ಲ, ಸ್ವಚ್ಛ ಭಾರತದ ಘೋಷಣೆ ಮಾತ್ರ!

ವಾರಾಣಸಿ: ದೇಶಾದ್ಯಂತ ‘ಸ್ವಚ್ಛ ಭಾರತ’ ಅಭಿಯಾನದ ಹೆಸರಿನಲ್ಲಿ ಸ್ವಚ್ಛತೆಯ ಬಗ್ಗೆ ಭರ್ಜರಿ ಪ್ರಚಾರ ನಡೆಯುತ್ತಿದ್ದರೂ, ನಗರಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಬದುಕು ಮಾತ್ರ ಇನ್ನೂ ಅಸ್ವಚ್ಛತೆಯಲ್ಲೇ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿಯಲ್ಲೇ ಕಡಿಮೆ ವೇತನ, ವೇತನ ವಿಳಂಬ, ಸಾಮಾಜಿಕ ಭದ್ರತೆಯ ಕೊರತೆ ಮತ್ತು ಗುತ್ತಿಗೆ ಉದ್ಯೋಗದ ಅಸ್ಥಿರತೆಯಿಂದ ನೂರಾರು ಪೌರ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಮೇ 13ರಂದು ಸುಮಾರು 100 ಗುತ್ತಿಗೆ ಪೌರ ಕಾರ್ಮಿಕರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಮೀಪದ ಮಾಲವೀಯ ಚೌಕದಲ್ಲಿ ರಸ್ತೆಗೆ ಕಸ ಸುರಿದು ವಿನೂತನ ಪ್ರತಿಭಟನೆ ನಡೆಸಿದರು. ‘ನಗರವನ್ನು ಸ್ವಚ್ಛವಾಗಿಡುವ ನಮ್ಮ ಬದುಕು ಮಾತ್ರ ಏಕೆ ಕೊಳಕಾಗಿರಬೇಕು?’ ಎಂದು ಅವರು ಪ್ರಶ್ನಿಸಿದರು.

10,700 ರೂ. ವೇತನ; 2,500 ರೂ. ಪೆಟ್ರೋಲ್‌ಗೆ

ಸಾಮಾಜಿಕ ವಿಜ್ಞಾನದಲ್ಲಿ ಪದವಿ ಪಡೆದಿರುವ 29 ವರ್ಷದ ಸನ್ನಿ ಕುಮಾರ್ ರಾವತ್ ಅವರು ಪತ್ನಿ ಪೂನಮ್ ಅವರೊಂದಿಗೆ ವಾರಾಣಸಿಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾರನಾಥ್‌ನಿಂದ ಪ್ರತಿದಿನ ಸುಮಾರು 26ರಿಂದ 30 ಕಿಲೋಮೀಟರ್ ಪ್ರಯಾಣಿಸಿ ಕೆಲಸಕ್ಕೆ ತೆರಳುತ್ತಾರೆ.

ತಮಗೆ ತಿಂಗಳಿಗೆ ಕೇವಲ 10,700 ರೂ. ವೇತನ ಸಿಗುತ್ತದೆ. ವಿವಿಧ ಕಡಿತಗಳ ಬಳಿಕ ಕೆಲವೊಮ್ಮೆ ಕೈಗೆ 8ರಿಂದ 9 ಸಾವಿರ ರೂ. ಮಾತ್ರ ಬರುತ್ತದೆ. ಅದರಲ್ಲಿ ಸುಮಾರು 2,500 ರೂ. ಪೆಟ್ರೋಲ್‌ಗೇ ಖರ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇಬ್ಬರು ಮಕ್ಕಳ ಶಿಕ್ಷಣ, ಶಾಲಾ ಬಸ್ ಮತ್ತು ಮನೆಯ ಖರ್ಚುಗಳನ್ನು ಭರಿಸುವುದು ಕಷ್ಟವಾಗಿದೆ ಎಂದು ಸನ್ನಿ ಅಳಲು ತೋಡಿಕೊಂಡಿದ್ದಾರೆ.

20 ಸಾವಿರ ರೂ. ಭರವಸೆ; ಸಿಕ್ಕಿದ್ದು 13,006 ರೂ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ವಾರಾಣಸಿಯಲ್ಲಿ ನಡೆದ ಸ್ವಚ್ಛತಾ ಮಿತ್ರ ಸನ್ಮಾನ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೌರ ಕಾರ್ಮಿಕರಿಗೆ 16 ಸಾವಿರದಿಂದ 20 ಸಾವಿರ ರೂ.ವರೆಗೆ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಘೋಷಿಸಿದ್ದರು.

ಆದರೆ ಈ ಭರವಸೆ ಸಂಪೂರ್ಣವಾಗಿ ಜಾರಿಯಾಗಲಿಲ್ಲ ಎಂಬುದು ಕಾರ್ಮಿಕರ ಆರೋಪ. ಪ್ರತಿಭಟನೆಯ ಬಳಿಕ ವಾರಾಣಸಿ ಮಹಾನಗರ ಪಾಲಿಕೆ ಹೊರಗುತ್ತಿಗೆ ಪೌರ ಕಾರ್ಮಿಕರ ಗೌರವಧನವನ್ನು ಏಪ್ರಿಲ್ 1ರಿಂದ ಹೆಚ್ಚಿಸುವುದಾಗಿ ಘೋಷಿಸಿದ್ದು, ಹೊಸ ವ್ಯವಸ್ಥೆಯಲ್ಲಿ ತಿಂಗಳಿಗೆ 13,006 ರೂ. ನೀಡಲಾಗುವುದು ಎಂದು ತಿಳಿಸಿದೆ. ಆದರೆ ಕಾರ್ಮಿಕರು ಕನಿಷ್ಠ 18 ಸಾವಿರ ರೂ. ವೇತನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಪೌರ ಕಾರ್ಮಿಕರ ಕೆಲಸ ಕೇವಲ ಕಸ ಸಂಗ್ರಹಿಸುವುದಕ್ಕೆ ಸೀಮಿತವಾಗಿಲ್ಲ. ಮ್ಯಾನ್‌ಹೋಲ್‌ಗೆ ಇಳಿಯುವುದು, ಚರಂಡಿ ಸ್ವಚ್ಛಗೊಳಿಸುವುದು, ಕಸ ಸಾಗಿಸುವುದು ಮತ್ತು ರಸ್ತೆಗಳನ್ನು ಸ್ವಚ್ಛಗೊಳಿಸುವಂತಹ ಅಪಾಯಕಾರಿ ಕೆಲಸಗಳನ್ನು ಅವರು ಪ್ರತಿನಿತ್ಯ ಮಾಡುತ್ತಿದ್ದಾರೆ.

ಕರ್ತವ್ಯದಲ್ಲಿರುವಾಗ ಮ್ಯಾನ್‌ಹೋಲ್‌ಗೆ ಇಳಿದು ಮೃತಪಟ್ಟರೆ ಅಥವಾ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದರೆ ಗುತ್ತಿಗೆದಾರರು ಅಥವಾ ಮಹಾನಗರ ಪಾಲಿಕೆಯಿಂದ ಪರಿಹಾರ ಸಿಗುವುದಿಲ್ಲ ಎಂದು ಸಹಾಯಕ ಮೇಲ್ವಿಚಾರಕರೊಬ್ಬರು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.

ಶಾಶ್ವತ ಪೌರ ಕಾರ್ಮಿಕರಿಗೆ ತಿಂಗಳಿಗೆ 40 ಸಾವಿರದಿಂದ 60 ಸಾವಿರ ರೂ.ವರೆಗೆ ವೇತನ ಸಿಗುತ್ತಿದ್ದರೆ, ತಾತ್ಕಾಲಿಕ ಹಾಗೂ ಗುತ್ತಿಗೆ ಕಾರ್ಮಿಕರಿಗೆ 18 ಸಾವಿರದಿಂದ 21 ಸಾವಿರ ರೂ.ವರೆಗೆ ಮಾತ್ರ ಸಿಗುತ್ತಿದೆ. ಕೆಲ ಹೊರಗುತ್ತಿಗೆ ಕಾರ್ಮಿಕರಿಗೆ ಕೇವಲ 10,700 ರೂ. ವೇತನ ದೊರೆಯುತ್ತಿದೆ.

‘ನಾವೂ ಕಸ ಸ್ವಚ್ಛಗೊಳಿಸುತ್ತೇವೆ, ಚರಂಡಿಗೆ ಇಳಿಯುತ್ತೇವೆ, ರಸ್ತೆಗಳನ್ನು ಸ್ವಚ್ಛಗೊಳಿಸುತ್ತೇವೆ. ಹಾಗಿದ್ದರೆ ನಮ್ಮ ವೇತನ ಏಕೆ ಇಷ್ಟು ಕಡಿಮೆ?’ ಎಂಬ ಪ್ರಶ್ನೆ ಕಾರ್ಮಿಕರದ್ದಾಗಿದೆ.

ಇದನ್ನೂ ಓದಿ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ 50:50 ಸೈಟ್ ಹಂಚಿಕೆ ರದ್ದು: ಯತೀಂದ್ರ

ಈಎಸ್‌ಐಗೆ ಹಣ ಕಡಿತ; ಕಾರ್ಡ್ ಮಾತ್ರ ಇಲ್ಲ!

ವೇತನದಿಂದ ಈಎಸ್‌ಐಗಾಗಿ ಹಣ ಕಡಿತ ಮಾಡಲಾಗುತ್ತಿದ್ದರೂ, ವೈದ್ಯಕೀಯ ಸೌಲಭ್ಯ ಪಡೆಯಲು ಅಗತ್ಯವಾದ ಈಎಸ್‌ಐ ಕಾರ್ಡ್ ಅಥವಾ ಇತರ ದಾಖಲೆಗಳನ್ನು ನೀಡಲಾಗಿಲ್ಲ ಎಂದು ಹಲವು ಕಾರ್ಮಿಕರು ಆರೋಪಿಸಿದ್ದಾರೆ.

ಪರಿಣಾಮವಾಗಿ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ ಈಎಸ್‌ಐ ಸೌಲಭ್ಯ ಪಡೆಯಲು ಸಾಧ್ಯವಾಗದೆ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗುತ್ತಿದೆ ಎಂದು ಕಾರ್ಮಿಕ ವಿಶಾಲ್ ತಿಳಿಸಿದ್ದಾರೆ.

ಖಾಸಗಿ ಏಜೆನ್ಸಿಗಳ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯುತ್ತಿರುವುದರಿಂದ ಟೆಂಡರ್ ಬದಲಾದಾಗ ಗುತ್ತಿಗೆದಾರರೂ ಬದಲಾಗುತ್ತಾರೆ. ಹೀಗಾಗಿ ತಮ್ಮ ಉದ್ಯೋಗ ಮುಂದುವರಿಯುತ್ತದೆಯೇ ಎಂಬ ಆತಂಕ ಕಾರ್ಮಿಕರನ್ನು ಕಾಡುತ್ತಿದೆ. ತಮ್ಮ ಮೇಲಿನ ಶೋಷಣೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದರೆ ಧ್ವನಿ ಅಡಗಿಸಲಾಗುತ್ತದೆ ಎಂಬ ಭಯದಿಂದ ಅನೇಕ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ನಗರದ ರಸ್ತೆಗಳು, ಚರಂಡಿಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಕಾರ್ಮಿಕರೇ ಕನಿಷ್ಠ ಜೀವನ ಭದ್ರತೆಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ‘ಸ್ವಚ್ಛ ಭಾರತ’ ಅಭಿಯಾನದ ಸಾಮಾಜಿಕ ಮುಖದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಜನರ ಕಸವನ್ನು ಪ್ರತಿದಿನ ಸ್ವಚ್ಛಗೊಳಿಸುವ ಕೈಗಳಿಗೆ ಗೌರವಯುತ ವೇತನ, ಉದ್ಯೋಗ ಭದ್ರತೆ, ಆರೋಗ್ಯ ಸೌಲಭ್ಯ ಮತ್ತು ಜೀವ ರಕ್ಷಣೆ ಸಿಗದಿದ್ದರೆ ಸ್ವಚ್ಛ ನಗರದ ಘೋಷಣೆ ಮಾತ್ರ ಉಳಿಯುತ್ತದೆ; ಅದನ್ನು ಕಟ್ಟುವ ಕಾರ್ಮಿಕರ ಬದುಕು ಮಾತ್ರ ಬದಲಾಗುವುದಿಲ್ಲ.

ಇದನ್ನೂ ನೋಡಿ :1 ಕೋಟಿ ಮತದಾರರ ಮೇಲೆ SIR ತೂಗುಕತ್ತಿ: Form-8 ಬದಲು Form-6 ಏಕೆ? ವಿಶ್ಲೇಷಣೆ : ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *