ಕೊಪ್ಪಳ: 700 ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಪಂಚಾಯತಿಯಲ್ಲಿ ಬರುವ ಸುತ್ತಮುತ್ತಲಿನ ಸರ್ಕಾರಿ ಶಾಲೆ / ಪದವಿ ಪೂರ್ವ ಕಾಲೇಜುಗಳನ್ನು ವಿಲೀನಗೊಳಿಸುವ ಹೆಸರಿನಲ್ಲಿ 5,000 ಕ್ಕೂ ಹೆಚ್ಚು ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳನ್ನು ಮುಚ್ಚುತ್ತಿರುವುದನ್ನು ಖಂಡಿಸಿ ಎಸ್.ಎಫ್.ಐ ಜಿಲ್ಲಾ ಸಮಿತಿ ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರುಗಡೆ ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ ರಾಜ್ಯದಲ್ಲಿ ಪ್ರಸ್ತುತ ಸುಮಾರು 47,493 ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು ಮತ್ತು 1,319 ಪದವಿಪೂರ್ವ ಕಾಲೇಜುಗಳಿರುತ್ತವೆ. ಹಾಗೂ 309 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯು 2015-16ರಲ್ಲಿ 47.1 ಲಕ್ಷದಿಂದ 2025-26ರಲ್ಲಿ 38.2 ಲಕ್ಷಕ್ಕೆ (19% ಕಡಿಮೆ) ಕುಸಿದಿರುತ್ತದೆ. ಒಟ್ಟು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ಪಾಲು 46% ರಿಂದ 38% ಕ್ಕೆ ಕುಸಿದಿರುತ್ತದೆ. ಆದರೆ ಖಾಸಗಿ ಅನುದಾನರಹಿತ ಶಾಲೆಗಳ ಪಾಲು 2015-16ರಲ್ಲಿ 36.3 ಲಕ್ಷ ವಿದ್ಯಾರ್ಥಿಗಳಿಂದ 2025-26ರಲ್ಲಿ 47 ಲಕ್ಷ ವಿದ್ಯಾರ್ಥಿಗಳಿಗೆ (29%) ಹೆಚ್ಚಾಗಿದೆ.
ಇದನ್ನೂ ಓದಿ: ರಾಮದುರ್ಗ | ದೇಶದಲ್ಲಿ ಸೌಹಾರ್ದತೆ ಉಳಿಸಲು ಗಾಂಧೀಜಿ ಜೀವನಪೂರ್ತಿ ಹೋರಾಡಿದರು – ಚಿಂತಕ ದಿನೇಶ್ ಅಮ್ಮೀನಮಟ್ಟು
25-10-2021 ರ ಸುತ್ತೋಲೆ ಪ್ರಕಾರ CSR ನಿಧಿಯಲ್ಲಿ ಪ್ರಾರಂಭವಾಗುವ ಹೊಸ KPS ಶಾಲೆಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸಂಪೂರ್ಣ ವೆಚ್ಚವನ್ನು ದಾನಿಗಳು / ಸಂಸ್ಥೆಗಳು ಬರಿಸಬೇಕು ಹಾಗೂ ಅಗತ್ಯ ಮೂಲಭೂತ ಸೌಕರ್ಯ ಮತ್ತು ಅತಿಥಿ ಶಿಕ್ಷಕರು ಮತ್ತು ಆಯಾಗಳನ್ನು ನೇಮಕ ಮಾಡಿಕೊಂಡು 2 ವರ್ಷಗಳ ಅವಧಿಗೆ ನಿಯಮಾನುಸಾರ ಗೌರವ ಸಂಭಾವನೆ ಪಾವತಿಸಲು ಸಿದ್ದರಿರಬೇಕು ಬೇಕು ಎಂದು ಮಾನದಂಡದಲ್ಲಿ ತಿಳಿಸಿದೆ. ಈ ಮಾನದಂಡಗಳ ಪ್ರಕಾರ ಸಂಪೂರ್ಣವಾಗಿ ಖಾಸಗಿ ಆಡಳಿತಕ್ಕೆ ಅವಕಾಶ ಮಾಡಿಕೊಡುತ್ತಿದೆ ಹಾಗೂ ಸರ್ಕಾರ ಮೂಲಭೂತ ಸೌಕರ್ಯ ಒದಗಿಸುವುದಿಲ್ಲ.
ಸರ್ಕಾರ ಒಟ್ಟಿನಲ್ಲಿ ಶಾಲೆಗಳನ್ನು ಖಾಸಗಿಯವರಿಗೆ, ಸಂಘ ಸಂಸ್ಥೆಯವರಿಗೆ ಬಿಟ್ಟು ಕೊಡುವ ಪ್ರಯತ್ನ ಮಾಡುತ್ತಿದೆ, ಸರ್ಕಾರ ಜವಾಬ್ದಾರಿಯನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವ ಪ್ರಯತ್ನ ಮಾಡುತ್ತಿದೆ ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಾಮೋಹಿಕ ಖಾಸಗಿಕರಣಕ್ಕೆ ಉತ್ತೇಜನ ನೀಡುವಂತಿದೆ. ಹಾಗೂ CSR ಅಡಿಯಲ್ಲಿ ನಿರ್ಮಾಣ ಮಾಡುವ KPS ಶಾಲೆಗೆ ಸಂಸ್ಥೆಯವರು ಶಾಲೆಗೆ ತಾವುಗಳು ಸೂಚಿಸಿದ ಹೆಸರನ್ನು ಇಡಲು ಅವಕಾಶ ಕಲ್ಪಿಸಲಾಗಿದೆ. ಹಾಗೂ CSR ನಿಧಿಯಲ್ಲಿ ಪ್ರಾರಂಭವಾಗಿರುವ KPS ಶಾಲೆಗಳಿಗೆ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಯ ಬಲವರ್ಧನೆಗಾಗಿ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಒದಗಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಹಾಗೂ ದಾಖಲಾತಿ ನೆಪಹೇಳಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಯಾಕೆ ಕಡಿಮೆಯಾಗುತ್ತಿದೆ ಎಂದು ಅಧ್ಯಯನ ಮಾಡದೇ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ, ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ ನೀಡದೆ ಹಾಗೂ ಸೈಕಲ್ ಯೋಜನೆ ನಿಲ್ಲಿಸಿರುವುದು ಹೀಗೆ ಯಾವುದೇ ಸೌಲಭ್ಯ ನೀಡದೆ ಸರ್ಕಾರ ಖಾಸಗಿಯವರ ಲಾಬಿಗೆ ಇಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡಲು ಸರ್ಕಾರ ಮುಂದಾಗಿರುವುದುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಖಂಡಿಸುತ್ತದೆ.

ಹಾಗೂ ರಾಜ್ಯದಲ್ಲಿ 62% ರಾಜ್ಯ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳ ಅವಲಂಬಿತರಾಗಿದ್ದಾರೆ. ಇನ್ನುಳಿದ 38% ವಿದ್ಯಾರ್ಥಿಗಳು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರ ವಿಲೀನ ಮಾಡುವ ಕ್ರಮದಿಂದ ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯೇ ನಾಶವಾಗುತ್ತದೆ. ಎನ್.ಇ.ಪಿ ಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡಿದೆ. ಆದರೆ ಹೆಸರನ್ನು ಮಾತ್ರ ಬದಲಾವಣೆ ಮಾಡಿ ಎನ್.ಇ.ಪಿ ಯಲ್ಲಿದ್ದ ಅಂಶಗಳನ್ನು ಜಾರಿ ಮಾಡಲು ಸರ್ಕಾರ ಮುಂದಾಗಿರುವುದು ಗ್ರಾಮೀಣ ಭಾಗದ ಬಡ,ಹಿಂದುಳಿದ,ಕೂಲಿ ಕಾರ್ಮಿಕ,ದಲಿತ,ಅಲ್ಪಸಂಖ್ಯಾತರ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ನೀತಿ ಎದ್ದು ಕಾಣುತ್ತಿದೆ ಎಂದು ಆಗ್ರಹಿಸಿದರು.
ಎಸ್.ಎಫ್.ಐ ತಾಲೂಕ ಮುಖಂಡ ರಮೇಶ್ ಅಗಸಿಮುಂದಿನ ಮಾತನಾಡಿ 700 ಪಂಚಾಯತಿಗಳ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಸುತ್ತಮುತ್ತಲಿನ ಸರ್ಕಾರಿ ಶಾಲೆ / ಪದವಿ ಪೂರ್ವ ಕಾಲೇಜುಗಳನ್ನು ವಿಲೀನಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕೊಪ್ಪಳ ಜಿಲ್ಲಾ ಸಮಿತಿ ಬಲವಾಗಿ ವಿರೋಧಿಸುತ್ತದೆ ಎಂದು ತಿಳಿಸಿದರು.
ವಿಲೀನದ ಹೆಸರಿನಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಹಾಗೂ ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಮತ್ತು ಖಾಲಿ ಇರುವ 59,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು, ಇಲ್ಲದಿದ್ದಲ್ಲಿ ವಿಧಾನಸೌಧವನ್ನು ಮುತ್ತಿಗೆ ಹಾಕುತ್ತೇವೆ ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಎಚ್ಚರಿಕೆಯ ಮನವಿಯನ್ನು ಸಲ್ಲಿಸುತ್ತಿದ್ದೆವೆ.
ಈ ಸಂದರ್ಭದಲ್ಲಿ ಬಾಲಾಜಿ ಚಳ್ಳಾರಿ ಜಿಲ್ಲಾ ಸಮಿತಿ ಸದಸ್ಯರಾದ ರಮೇಶ್ ಅಗಸಿಮುಂದಿನ ಹನುಮೇಶ್ ಚಳ್ಳಾರಿ, ವಿನಾಯಕ, ಅಮರೇಶ್, ಕೆಂಚಪ್ಪ, ಗಂಗಾಧರ, ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಬಿಹಾರಕ್ಕೆ ಮತ್ತೆ ನಿತೀಶ್ ಕುಮಾರ್! 50:50 ಲೆಕ್ಕಾಚಾರದಲ್ಲಿ ಬಿಜೆಪಿ!!? Janashakthi Media #BiharResults
