ಸರ್ಕಾರಿ ಕಾನೂನು ಕಾಲೇಜು ನಿರ್ಮಾಣ ವಿಳಂಬ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ

ಪ್ರಸಕ್ತ ಸಾಲಿನಲ್ಲೇ ಕಾಲೇಜು ಆರಂಭಕ್ಕೆ ಆಗ್ರಹ
ಹಾವೇರಿ: ಸರ್ಕಾರಿ ಕಾನೂನು ಮಹಾವಿದ್ಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಕಾಲೇಜು ಆರಂಭಿಸಬೇಕೆಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿತು.

ನಗರದಲ್ಲಿರುವ ಎಸ್‌ಎಫ್‌ಐ ಕಚೇರಿ ಎದುರು ಭಿತ್ತಿಚಿತ್ರ ಪ್ರದರ್ಶನದ ಮೂಲಕ ಕಾರ್ಯಕರ್ತರು ಸರ್ಕಾರ, ಜನಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆ ರಚನೆಯಾಗಿ 27 ವರ್ಷ ಕಳೆದರೂ ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆಯಾಗಿಲ್ಲ. ಜಿಲ್ಲೆಯ ವಿದ್ಯಾರ್ಥಿಗಳು ಕಾನೂನು ಶಿಕ್ಷಣಕ್ಕಾಗಿ ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇತರ ಜಿಲ್ಲೆಗಳಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಎಸ್‌ಎಫ್‌ಐ ಆರೋಪಿಸಿದೆ. ಜಿಲ್ಲೆಯಲ್ಲಿ ರಾಣೆಬೆನ್ನೂರಿನಲ್ಲಿ ಮಾತ್ರ ಖಾಸಗಿ ಕಾನೂನು ಕಾಲೇಜು ಇರುವುದರಿಂದ, ಹೆಚ್ಚಿನ ಶುಲ್ಕ ಹಾಗೂ ಸೀಮಿತ ಸೀಟುಗಳ ಕಾರಣ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಾನೂನು ಶಿಕ್ಷಣ ದುಸ್ತರವಾಗಿದೆ ಎಂದು ಸಂಘಟನೆ ತಿಳಿಸಿದೆ.

ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್‌ ಮಾತನಾಡಿ, ಹಲವು ವರ್ಷಗಳಿಂದ ಜಿಲ್ಲೆಯೊಂದಕ್ಕೆ ಸರ್ಕಾರಿ ಕಾನೂನು ಕಾಲೇಜು ಮಂಜೂರು ಮಾಡುವಂತೆ ಸಂಘಟನೆ ಹೋರಾಟ ನಡೆಸುತ್ತಿದ್ದು, ಅದರ ಫಲವಾಗಿ ಹಿಂದಿನ ಸರ್ಕಾರದ ಬಜೆಟ್‌ನಲ್ಲಿ ಕಾಲೇಜು ಘೋಷಣೆಯಾಗಿತ್ತು ಎಂದರು. ಆದರೆ ನೆಲೊಗಲ್‌ ಗುಡ್ಡ ಪ್ರದೇಶದಲ್ಲಿ ಆರಂಭವಾದ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಾಲೇಜು ಆರಂಭಿಸುವ ಕುರಿತು ಯಾವುದೇ ಸ್ಪಷ್ಟ ಕ್ರಮ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ – ರಾಜೀನಾಮೆ ಸ್ವೀಕರಿಸಲು ನಿರಾಕರಿಸಿದ ಕಾರ್ಯದರ್ಶಿ

ಪ್ರಸಕ್ತ ಸಾಲಿನಲ್ಲೇ ನಗರದ ಮುನ್ಸಿಪಲ್‌ ಮೈದಾನದ ಸಮೀಪದ ನಗರಸಭೆ ವ್ಯಾಪ್ತಿಯ ಸರ್ಕಾರಿ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಕಾನೂನು ತರಗತಿಗಳನ್ನು ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡುವ ಸರ್ಕಾರ ತನ್ನದೇ ಸರ್ಕಾರಿ ಶಿಕ್ಷಣ ಸಂಸ್ಥೆ ಆರಂಭಿಸುವಲ್ಲಿ ವಿಳಂಬ ಮಾಡುತ್ತಿರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿದೆ ಎಂದು ಎಸ್‌ಎಫ್‌ಐ ಮುಖಂಡರು ಆರೋಪಿಸಿದರು. ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಬೇಕು. ಇಲ್ಲವೇ ಪರ್ಯಾಯವಾಗಿ ಬೇರೆ ಸರ್ಕಾರಿ ಕಾಲೇಜಿನಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ನೇಮಿಸಿ ಈ ವರ್ಷದಿಂದಲೇ ಕಾಲೇಜು ಆರಂಭಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಸ್‌ಎಫ್‌ಐ ಜಿಲ್ಲಾ ಮುಖಂಡರಾದ ಅರುಣ್‌ಕುಮಾರ್‌ ನಗವತ್‌ ಹಾಗೂ ಚೈತ್ರಾ ಕೊರವರ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕೃಷ್ಣ ನಾಯ್ಕ್‌, ಧನುಷ್‌ ದೊಡ್ಡಮನಿ, ಪಂಚಾಕ್ಷರಿ ಎಂ. ಕೋಡಿಹಾಳ, ಸಂದೀಪ್‌ ಜಿ. ಹಳೆಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ನೋಡಿ : “ಗ್ರಾಮಗಳ ಸ್ವಚ್ಛತೆಗೆ ಶ್ರಮ, ಬದುಕಿಗೆ ಸಂಕಷ್ಟ: ಸ್ವಚ್ಛವಾಹಿನಿ ನೌಕರರ ಅಳಲು” Janashakthi Media

Donate Janashakthi Media

Leave a Reply

Your email address will not be published. Required fields are marked *