ಬಳ್ಳಾರಿ: ಕುಡಿತಿನಿ ಭಾಗದಲ್ಲಿ ಭೂ ಸಂತ್ರಸ್ತರ ಹೊರಾಟ ಸಮಿತಿಯ ನೇತ್ರತ್ವದಲ್ಲಿ ಕಳೆದ 1227 ದಿನಗಳಿಂದ ರೈತರು ಹಲವು ರೀತಿಯ ಹೋರಾಟಗಳನ್ನು ನಡೆಸುತ್ತಿದ್ದಾರೆ. ಆದರೆ ಶಾಂತಿಯುತ ಧರಣಿ ನಡೆಸುತ್ತಿರುವ ರೈತರ ವಿರುದ್ಧ ಸುಳ್ಳು ಮಾಹಿತಿ ನೀಡಿ 144 ಸೆಕ್ಷನ್ ಜಾರಿಗೊಳಿಸಿ, ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಜಿಂದಾಲ್ ಕಂಪನಿಗೆ 900 ಎಕರೆ ಭೂ ಹಸ್ತಾಂತರಕ್ಕೆ ಅನುಕೂಲ ಮಾಡಿಕೊಡುವ ಈ ಕ್ರಮದ ವಿರುದ್ಧ ರೈತರ ಆಕ್ರೋಶ ತೀವ್ರವಾಗಿದೆ. ಬಳ್ಳಾರಿ
ಭೂ ಸಂತ್ರಸ್ತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಳೆದ 1227 ದಿನಗಳಿಂದ ರೈತರು ನ್ಯಾಯಯುತ ಭೂ ಬೆಲೆ, ಉದ್ದೇಶಿತ ಕೈಗಾರಿಕೆಗಳ ಆರಂಭ, ಭೂ ಸಂತ್ರಸ್ತರ ಕುಟುಂಬಗಳಿಗೆ ಉದ್ಯೋಗ ಹಾಗೂ ಇಲ್ಲವಾದರೆ ಭೂಮಿಯನ್ನು ವಾಪಸು ನೀಡುವಂತೆ ಹಲವು ರೀತಿಯ ಹೋರಾಟಗಳನ್ನು ನಡೆಸುತ್ತಿದ್ದಾರೆ.
ಆರ್ಸಲ್ ಮಿತ್ತಲ್ಗಾಗಿ ವಶಪಡಿಸಿಕೊಂಡ ಭೂಮಿಯಲ್ಲಿ ಈಗ ಜಿಂದಾಲ್ ಕಂಪನಿಯ ಜೆಎಫ್ಇ ಎಲೆಕ್ಟ್ರಿಕಲ್ ಯೋಜನೆಗಾಗಿ 204 ಎಕರೆ ಸೇರಿ ಒಟ್ಟು ಸುಮಾರು 900 ಎಕರೆ ಭೂಮಿಯನ್ನು ಹಸ್ತಾಂತರಿಸಲು KIADB ಮುಂದಾಗಿದೆ ಎಂದು ಸಮಿತಿ ತಿಳಿಸಿದೆ.
ಈ ಪ್ರಕ್ರಿಯೆಯಲ್ಲಿ, ಶಾಂತಿಯುತವಾಗಿ ಕಾನೂನುಬದ್ಧ ಹೋರಾಟ ನಡೆಸುತ್ತಿರುವ ರೈತರು ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಾರೆ ಎಂದು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ರೈತರ ವಿರುದ್ಧ ಇಂಜಕ್ಷನ್ ಆದೇಶ ತರಲಾಗಿದೆ. ಜೊತೆಗೆ ನಾಳೆ ಬೆಳಿಗ್ಗೆ 6 ಗಂಟೆಯಿಂದ ಜೂನ್ 7ರವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಇದು ಸಂಪೂರ್ಣ ದುರುದ್ದೇಶಪೂರ್ವಕ ಕ್ರಮವಾಗಿದ್ದು, ರೈತರ ಬೇಡಿಕೆಗಳನ್ನು ನಿರ್ಲಕ್ಷಿಸಿ ಜಿಂದಾಲ್ ಕಂಪನಿಗೆ ಭೂ ಪ್ರವೇಶ ಕಲ್ಪಿಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಸಮಿತಿ ಆರೋಪಿಸಿದೆ.
ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಂಡು ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ರೈತರನ್ನು ದಮನಿಸಿ ಜಿಂದಾಲ್ ಕಂಪನಿಗೆ ಅನುಕೂಲ ಮಾಡಿಕೊಡುವುದು ಅತ್ಯಂತ ಹೇಯಕರ ಮತ್ತು ವಂಚನೆಯ ನಡೆ ಎಂದು ಸಮಿತಿ ಖಂಡಿಸಿದೆ.
ಬಳ್ಳಾರಿ
ಇದನ್ನೂ ಓದಿ: ಶಿರಸಿ| ಬಿ ಎಚ್ ಶ್ರೀಧರವರ ಎರಡು ಪುಸ್ತಕಗಳ ಬಿಡುಗಡೆ
ರೈತರ ಬೇಡಿಕೆಗಳನ್ನು ಪರಿಹರಿಸುವುದಾಗಿ, ಸಭೆ ನಡೆಸುವುದಾಗಿ ಭರವಸೆ ನೀಡುತ್ತಿದ್ದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಈಗ ಸರ್ಕಾರಿ ಯಂತ್ರವನ್ನು ದುರ್ಬಳಕೆ ಮಾಡಿ ರೈತರನ್ನು ವಂಚಿಸಿರುವುದು ಬಹಿರಂಗವಾಗಿದೆ ಎಂದು ಸಮಿತಿ ತಿಳಿಸಿದೆ.
ಮೂರು ವರ್ಷಗಳಿಗೂ ಹೆಚ್ಚು ಕಾಲ ರೈತರ ಜೀವನ್ಮರಣದ ಹೋರಾಟ ನಡೆಯುತ್ತಿದ್ದರೂ ಜಿಲ್ಲೆಯ ಶಾಸಕರು ವಿಧಾನಸಭೆಯಲ್ಲಿ ಗಂಭೀರವಾಗಿ ಚರ್ಚಿಸುವುದು ಅಥವಾ ಸರ್ಕಾರದ ಮೇಲೆ ಒತ್ತಡ ಹಾಕಿ ಸಮಸ್ಯೆ ಪರಿಹರಿಸುವ ಯಾವುದೇ ಇಚ್ಛೆಯನ್ನು ತೋರಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಪ್ರತಿಭಟನೆ ಮತ್ತು ಹೋರಾಟಕ್ಕೆ ನಿಷೇಧ ಹೇರುವ ಇಂತಹ ದೌರ್ಜನ್ಯ ಕ್ರಮಗಳಿಗೆ ಹೋರಾಟ ಸಮಿತಿ ಹೆದರುವುದಿಲ್ಲ. ಬೃಹತ್ ಜನಾಂದೋಲನದ ಮೂಲಕ ಹಾಗೂ ಕಾನೂನುಬದ್ಧ ಹೋರಾಟದ ಮೂಲಕ ನ್ಯಾಯಕ್ಕಾಗಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಸಮಿತಿ ಎಚ್ಚರಿಸಿದೆ.
ಜಿಲ್ಲಾಡಳಿತದ ಈ ಕ್ರಮವನ್ನು ತೆರವುಗೊಳಿಸಲು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿಸಲಾಗುವುದು. ಸರ್ಕಾರದ ದಮನಕಾರಿ ಕ್ರಮಗಳನ್ನು ವಿರೋಧಿಸಿ ಹೋರಾಟವನ್ನು ವಿಸ್ತರಿಸಲಾಗುವುದು ಎಂದು ಸಮಿತಿ ತಿಳಿಸಿದೆ.
ಈ ಹಂತದಲ್ಲಿ ಕೈಗಾರಿಕಾ ಸಚಿವರು, ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸಮಿತಿ ಆಗ್ರಹಿಸಿದೆ.

ಜಿಂದಾಲ್ಗೆ 900 ಎಕರೆ ಭೂಮಿಯನ್ನು ಹಸ್ತಾಂತರಿಸುವ ಕ್ರಮವನ್ನು ವಿರೋಧಿಸಿ ಜಾರಿಗೊಳಿಸಿದ್ದ 144 ಸೆಕ್ಷನ್ನ್ನು ಲೆಕ್ಕಿಸದೆ ರೈತರು ಭೂಮಿ ಒಳಗೆ ಪ್ರವೇಶಿಸಲು ಮುಂದಾದಾಗ, ನೂರಾರು ಪೊಲೀಸರು ತಡೆದು ಬಂಧಿಸಿ ಕಂಪ್ಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸರ್ಕಾರದಿಂದ ಸ್ಪಷ್ಟ ಭರವಸೆ ಸಿಗುವವರೆಗೆ ಪೊಲೀಸ್ ಠಾಣೆಯಲ್ಲೇ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಲಾಗುವುದು ಎಂದು ರೈತರು ತಿಳಿಸಿದ್ದಾರೆ.
ಈ ವೇಳೆ ಹೊಸಪೇಟೆಯ ಬಸವರಾಜ್ (61) ಹಾಗೂ ಪುಡೇಪಳ್ಳಿಯ ಲಕ್ಷ್ಮೀ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಯು ಬಸವರಾಜ್, ಜೆ ಸತ್ಯಬಾಬು, ಎಮ್ ತಿಪ್ಪೆಸ್ವಾಮಿ, ಜಂಗ್ಲಿ ಸಾಬ್, ಶ್ರಿಧರ್, ನರಸಿಂಹ ರಾಜು, ತಿಮ್ಮಪ್ಪ, ಸಂಪತ್, ಮಹಾರುದ್ರ ಗೌಡರು, ಸುರೇಶ ಗೌಡ, ಜಂಭಣ್ಣ, ಹೋಲಿಗಿ ಸಿದ್ದಪ್ಪ, ಶ್ರೀಪಾದ, ಅಡಪಾದ ರಮೇಶ್, ನಾರಯಣ ರೆಡ್ಡಿ, ಆನಂದ್, ಶಿವಣ್ಣ, ತಾರಾನಾಥ ರೆಡ್ಡಿ, ತಿಮ್ಮಾರೆಡ್ಡಿ ಸೇರಿದಂತೆ ವಿವಿಧ ಸಂಘಟನೆಯ ನಾಯಕರು, ರೈತರು ಇದ್ದರು.
ಇದನ್ನೂ ನೋಡಿ:ಜಿಂದಾಲ್ಗೆ 900 ಎಕರೆ ಭೂ ಹಸ್ತಾಂತರ ವಿರೋಧಿಸಿ ತೀವ್ರಗೊಂಡ ರೈತರ ಹೋರಾಟ; ಹೋರಾಟಗಾರರ ಬಂಧನಕ್ಕೆ ಆಕ್ರೋಶ
