ಜೀವಾವಧಿ ಶಿಕ್ಷೆ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಶಾಸಕ ವಿನಯ ಕುಲಕರ್ಣಿ

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ಗೆ, ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಏಪ್ರಿಲ್‌ 24ರಂದು ಮೇಲ್ಮನವಿ ಸಲ್ಲಿಸಿದರು.

15.4.2026ರಂದು ಅಪರಾಧಿ ಎಂದು ಘೋಷಿಸಿರುವುದು ಮತ್ತು 17.4.2026ರಂದು ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪನ್ನು ಬದಿಗೆ ಸರಿಸಬೇಕು ಎಂದು ವಿನಯ್‌ ಕುಲಕರ್ಣಿ ಕೋರಿದ್ದಾರೆ. ಈ ಅರ್ಜಿಗಳು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ವಕೀಲ ಎಸ್.ಸುನಿಲ್ ಕುಮಾರ್ ಅವರು ವಿನಯ ಕುಲಕರ್ಣಿ ಪರ ವಕಾಲತ್ತು ವಹಿಸಿದ್ದಾರೆ.

ಪ್ರಕರಣದಲ್ಲಿ 17 ಜನ ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಮಾನಿಸಿರುವ ಜನ ಪ್ರತಿನಿಧಿಗಳ ಸತ್ರ ನ್ಯಾಯಾಲಯ 16 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ: ಕೃಷಿ ಪರಿಕರ ಮಾರಾಟಗಾರರ ಮುಷ್ಕರ – KPRS ಬೆಂಬಲ

“ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಈ ಶಿಕ್ಷೆ ವಿಧಿಸಿ ಆದೇಶಿಸಿದ್ದರು.

ಅಪರಾಧಿಗಳಾದ ವಿಕ್ರಮ್‌ ಬಳ್ಳಾರಿ (A2), ಕೀರ್ತಿ ಕುಮಾರ್‌ ಅಲಿಯಾಸ್‌ ಬಸವರಾಜ್‌ ಕುರಹಟ್ಟಿ (A3), ಸಂದೀಪ್‌ ಸವದತ್ತಿ ((A24), ವಿನಾಯಕ್‌ ಕಟಗಿ (A5), ಮಹಾಬಲೇಶ್ವರ್‌ ಹೊಂಗಲ್‌ ಅಲಿಯಾಸ್‌ ಮುದಕ (A6), ಸಂತೋಷ್‌ ಸವದತ್ತಿ (A7), ಎಂ ದಿನೇಶ್‌ (A8), ಎಸ್‌ ಅಶ್ವತ್‌ (A9), ಕೆ ಎಸ್‌ ಸುನೀಲ್‌ (A10), ನಜೀರ್‌ ಅಹ್ಮದ್‌ (A11), ಶನ್ವಾಜ್‌ (A12), ಕೆ ನೂತನ್‌ (A13), ಸಿ ಹರ್ಷಿತ್‌ (A14), ವಿನಯ್‌ ಕುಲಕರ್ಣಿ (A15), ಚಂದ್ರಶೇಖರ್‌ ಇಂಡಿ ಅಲಿಯಾಸ್‌ ಚಂದ್ರು ಮಾಮ (A16) ಮತ್ತು ವಿಕಾಸ್‌ ಕಲಬುರ್ಗಿಗೆ (A18) ಐಪಿಸಿ ಸೆಕ್ಷನ್‌ 302 ಜೊತೆಗೆ 120-B ಅಪರಾಧಕ್ಕೆ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

20ನೇ ಆರೋಪಿ ವಾಸುದೇವ ರಾಮ ನಿಲೇಕಣಿ ಮತ್ತು 21ನೇ ಆರೋಪಿ ಸೋಮಶೇಖರ್‌ ಬಸಪ್ಪ ನ್ಯಾಮಗೌಡ ಅವರಿಗೆ ಅನುಮಾನದ ಲಾಭ ನೀಡಿ ಅವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿದೆ. ಒಂದನೇ ಆರೋಪಿ ಬಸವರಾಜ್‌ ಮುತ್ತಗಿ ನೀಡಲಾಗಿದ್ದ ಕ್ಷಮಾದಾನವನ್ನು ಕಾಯಂಗೊಳಿಸಲಾಗಿದೆ.

ಅಪ್ರೂವರ್‌ ಆಗಿ, ಪ್ರತೀಕೂಲ ಸಾಕ್ಷಿಯಾಗಿ ಬದಲಾಗಿದ್ದ 17ನೇ ಆರೋಪಿ ಶಿವಾನಂದ ಬಿರಾದಾರ್‌ನನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಅಗತ್ಯ ಅನುಮತಿ ಪಡೆಯಲು ಪ್ರಾಸಿಕ್ಯೂಷನ್‌ಗೆ ಅನುಮತಿಸಲಾಗಿದೆ. ಹೀಗಾಗಿ, ಒಟ್ಟು 21 ಆರೋಪಿಗಳ ಪೈಕಿ ನಾಲ್ವರನ್ನು ಹೊರತುಪಡಿಸಿ ಉಳಿದ 17 ಮಂದಿಗೆ ಶಿಕ್ಷೆಯಾಗಿದೆ.

ಇದನ್ನೂ ನೋಡಿ: ಬ್ರಿಟಿಷರಎದೆ ನಡುಗಿಸಿದ ಕ್ರಾಂತಿಕಾರಿ: ವಿವೇಕಾನಂದರ ಸಹೋದರ ಭೂಪೇಂದ್ರನಾಥ ದತ್ತ Janashakthi Media

Donate Janashakthi Media

Leave a Reply

Your email address will not be published. Required fields are marked *