ಬರಗಾಲ ಘೋಷಣೆಗೆ ಆಗ್ರಹ | ಹಾಸನದಲ್ಲಿ ರೈತರ ಪ್ರತಿಭಟನೆ

ಹಾಸನ: ಜಿಲ್ಲೆಯನ್ನು ಬರಗಾಲವೆಂದು ಘೋಷಿಸಿ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ, ಮೆಕ್ಕೆಜೋಳದ ಬಿಳಿಸುಳಿ ರೋಗಕ್ಕೆ ಕಾರಣವಾಗಿರುವ ಬೀಜ ಕಂಪನಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಸೂಕ್ತ ಬೆಳೆ ಪರಿಹಾರಕ್ಕಾಗಿ ಒತ್ತಾಯಿಸಿ, ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಆಗ್ರಹಿಸಿ, ರೈತರು ಪ್ರತಿಭಟನೆಯ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಸನ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಮಂಜುನಾಥ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್ ತಿಳಿಸಿದ್ದಾರೆ. ಬರಗಾಲ

ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ತೀವ್ರ ಪ್ರಮಾಣದಲ್ಲಿ ಕೊರತೆಯಾಗಿದೆ. ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಮಳೆ ಶೇ 60 ಕ್ಕೂ ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಗಿ, ಸಂಪೂರ್ಣ ಬರಗಾಲದ ಛಾಯೆ ಆವರಿಸಿದೆ. ಭೂಮಿಯನ್ನೇ ನಂಬಿ ಬದುಕುತ್ತಿರುವ ರೈತ ಸಮುದಾಯ ಯಾವ ಬೆಳೆಯನ್ನೂ ಮಾಡಲಾಗದೆ, ಮಾಡಿರುವ ಅಲ್ಪಸ್ವಲ್ಪ ಬೆಳೆಗಳನ್ನು ಉಳಿಸಿಕೊಳ್ಳಲಾಗದೆ ತೀರ್ವ ಸಂಕಷ್ಟವನ್ನು ಎದುರಿಸುತ್ತಿದೆ. ಬರಗಾಲ

ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಹಾಸನ ಜಿಲ್ಲೆಯಲ್ಲಿ 2026-27ನೇ ಸಾಲಿನಲ್ಲಿ ಸುಮಾರು 2,86,186 ಹೆಕ್ಟೇರ್‌ಗಳಲ್ಲಿ ಬಿತ್ತನೆಯ ಗುರಿಯನ್ನು ಹೊಂದಲಾಗಿತ್ತು, ಆದರೆ ಸಾಧಿಸಿರುವ ಗುರಿ ಕೇವಲ 91,534 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಇದು ಗುರಿಗೆ ಹೋಲಿಸಿದರೆ ಕೇವಲ ಶೇಖಡಾ 32 ರಷ್ಟು ಮಾತ್ರ ಬಿತ್ತನೆಯಾಗಿರುತ್ತದೆ. ಇನ್ನು ಶೇಖಡ 68 ರಷ್ಟು ಪ್ರದೇಶದಲ್ಲಿ ಬಿತ್ತನೆಯನ್ನೇ ಮಾಡಲು ಸಾಧ್ಯವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಬರಗಾಲ

ಇದನ್ನೂ ಓದಿ: ರಾಜ್ಯದ ಏಳು ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ: ಆಗಸ್ಟ್‌ 4ಕ್ಕೆ IMD ಮುನ್ಸೂಚನೆ

ಜಿಲ್ಲೆಯಲ್ಲಿ ಸುಮಾರು 45,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಆಲುಗಡ್ಡೆ 10,000 ಹೆಕ್ಟೇರ್ ಪ್ರದೇಶಕ್ಕೆ ಕುಸಿದಿದೆ. ಇದಕ್ಕೆ ಮುಖ್ಯ ಕಾರಣ ಕಳೆದ ಹದಿನೈದು ವರ್ಷಗಳ ನಿರಂತರ ಅಂಗಮಾರಿ ರೋಗ. ಇಷ್ಟು ಧೀರ್ಘಾವಧಿಯಲ್ಲಿ ಈ ರೋಗಬಾದೆಯಿಂದ ಲಕ್ಷಾಂತರ ರೈತರು ನಿರಂತರ ನಷ್ಟವನ್ನು ಅನುಭವಿಸುತ್ತಿದ್ದರೂ ಈ ರೋಗವನ್ನು ಸಂಪೂರ್ಣ ತಡೆಗಟ್ಟಲು ಬೇಕಾದ ಕಾರ್ಯಗಳನ್ನು ಸರ್ಕಾರ ಇದುವರೆಗು ಯಶಸ್ವಿಯಾಗಿ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರು. ಬರಗಾಲ

ಇದರಿಂದ ನಷ್ಟ ಅನುಭವಿಸಿದ ರೈತರು ಕ್ರಮೇಣ ಮೆಕ್ಕೆ ಜೋಳ ಮತ್ತು ಶುಂಠಿಗೆ ತಮ್ಮ ಬೆಳೆಯನ್ನು ಬದಲಾಯಿಸಿಕೊಂಡಿದ್ದಾರೆ. ಮೆಕ್ಕೆಜೋಳಕ್ಕೂ ಕಳೆದ 2-3 ವರ್ಷಗಳಿಂದ ಬಿಳಿಸುಳಿ ರೋಗ ಆರಂಭಗೊಂಡಿದ್ದು ಇದರಿಂದ ರೈತರು ತೀರ್ವ ಸಂಕಷ್ಟವನ್ನು ಅನುಭವಿಸಿತ್ತಿದ್ದಾರೆ. ಈ ರೋಗಕ್ಕೆ ಪ್ರಮುಖ ಕಾರಣವೆಂದು ಹೇಳಲಾದ ಕಳಪೆ ಬಿತ್ತನೆ ಬೀಜದ ಕುರಿತು ಸಮಗ್ರ ತನಿಖೆಯಾಗಿ, ಸಂಬಂಧಿಸಿದ ಕಂಪನಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ, ರೈತರಿಗಾದ ನಷ್ಟವನ್ನು ಬೀಜ ಕಂಪನಿಗಳು ಭರಿಸುವಂತಾಗಬೇಕು ಎಂದು ತಿಳಿಸಿದರು. ಬರಗಾಲ

ಜಿಲ್ಲೆಯಲ್ಲಿ ತೆಂಗು, ಅಡಿಕೆ, ಕಾಫಿ, ಮೆಣಸು, ರಾಗಿ, ಭತ್ತ, ಕಬ್ಬು, ಆಲೂಗಡ್ಡೆ, ಶುಂಟಿ ಸೇರಿದಂತೆ ಹಲವು ಬೆಳೆಗಳು ನಿರಂತರವಾಗಿ ಮಳೆಯ ಕೊರತೆ ಮತ್ತು ರೋಗಬಾದೆಯಿಂದ ಇಳುವರಿ ಕಡಿಮೆಯಾಗುತ್ತಿದ್ದು ನಿರಂತರ ನಷ್ಟಕ್ಕೊಳಗಾಗುತ್ತಿವೆ. ಆದ್ದರಿಂದ ಸಂಬಂದಿಸಿದ ಎಲ್ಲಾ ಬೆಳೆಗಳನ್ನೂ ಸಂಪೂರ್ಣ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವುದೇ ಬೆಳೆ ವಿಮೆಗಳು ರೈತರನ್ನು ಸಂಕಷ್ಟದಿಂದ ಪಾರು ಮಾಡುತ್ತಿಲ್ಲ. ಬದಲಿಗೆ ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿವೆ. ಕಳೆದ 2-3 ವರ್ಷಗಳಿಂದ ಮೆಕ್ಕೆ ಜೋಳಕ್ಕೆ ರೈತರು ಬೆಳೆ ವಿಮೆಯ ಪ್ರೀಮಿಯಂ ಅನ್ನು ತುಂಬುತ್ತಾ ಬಂದಿದ್ದರೂ ಇದುವರೆಗು ಒಂದು ರೂಪಾಯಿಯೂ ವಿಮಾ ಕಂನಿಗಳಿAದ ಅಥವಾ ಸರ್ಕಾರಗಳಿಂದ ಬೆಳೆ ಪರಿಹಾರ ಸಿಕ್ಕಿಲ್ಲ. ಬೆಳೆ ಬೆಳೆಯಲು ನಿರಂತರವಾಗಿ ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಚಟುವಟಿಕೆಯ ಮೇಲೆ ಹೂಡಿರುವ ಬಂಡವಾಳ ವಾಪಸ್ ಬರದೆ ರೈತರು ಸಾಲ ಬಾದೆಗೆ ಒಳಗಾಗಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾದದ್ದು ಸರ್ಕಾರಗಳ ಜವಾಬ್ದಾರಿ ಎಂದರು.

ಆದ್ದರಿಂದ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಸನ ಜಿಲ್ಲಾ ಸಮಿತಿಯು ದಿನಾಂಕ 06.08.2026 ರಂದು ಹಾಸನದ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಎದುರು ರೈತರ ಪ್ರತಿಭಟನೆ ನಡೆಸಿ ಈ ಕೆಳಗಿನ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂದಿಡುತ್ತಿದೆ. ಇವುಗಳಿಗೆ ಕೂಡಲೇ ಕೇಂದ್ರ ಮತ್ತು ರಾಜ್ಯ ಸಕಾರಗಳು ಸೂಕ್ತ ಪರಿಹಾರವನ್ನು ಒದಗಿಸುತ್ತವೆ ಎಂಬ ಭರವಸೆ ಇದೆ. ಭರವಸೆ ಹುಸಿಯಾದರೆ ರೈತರು ಅನಿವಾರ್ಯವಾಗಿ ದೊಡ್ಡಪ್ರಮಾಣದಲ್ಲಿ ಬೀದಿಗಿಳಿಯಬೇಕಾಗುತ್ತದೆ ಎಂದು ಹೇಳಿದರು.

ಬೇಡಿಕೆಗಳು

1) ಹಾಸನ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು.

2) ಮೆಕ್ಕೆಜೋಳದ ಬಿಳಿಸುಳಿ ರೋಗಕ್ಕೆ ಕಾರಣವಾದ ಬಿತ್ತನೆ ಬೀಜ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

3) ಬೆಳೆ ನಷ್ಟದ ಸಮಗ್ರ ಸಮೀಕ್ಷೆ ನಡೆಸಬೇಕು.

4) ಎಕ್ಕರೆಗೆ ಕನಿಷ್ಟ 50,000 ರೂ ಬರ ಪರಿಹಾರವನ್ನು ನೀಡಬೇಕು.

5) ರೈತರಿಗೆ ಬರ ಪರಿಹಾರ ಮತ್ತು ಬೆಳೆ ವಿಮೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು.

6) ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ವ್ಯವಸ್ಥೆಯನ್ನು ಕಲ್ಪಿಸಬೇಕು.

7) ಕೃಷಿ ಸಾಲವನ್ನು ಸಂಪೂರ್ಣ ಮನ್ನ ಮಾಡಬೇಕು.

ನಗರದ ಹೇಮಾವತಿ ಪ್ರತಿಮೆಯ ಮುಂಬಾಗದಿಂದ ಒಂದು ಕೈಯಲ್ಲಿ ಬಿಳಿಸುಳಿ ರೋಗ ಬಂದಿರುವ ಮೆಕ್ಕೆ ಜೋಳದ ಗಿಡ ಮತ್ತೊಂದು ಕೈಯಲ್ಲಿ ಕೆಂಬಾವುಟವನ್ನಿಡಿದು ಹೊರಟ ರೈತರ ಮೆರವಣಿಗೆ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ತಲುಪಿತು. ಮನವಿಪತ್ರವನ್ನ ಅಪರ ಜಿಲ್ಲಾಧಿಕಾರಿಗಳಾದ ಕೃಷ್ಣಮೂರ್ತಿಯವರು ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರುಗಳಾದ ಚಂದ್ರಹಾಸ್, ವಾಸುದೇವ ಕಲ್ಕೆರೆ, ತೇಜಸ್‌ಗೌಡ, ಜಯಲಕ್ಷ್ಮಿ, ಸುಜಾತಾ ಕುಮಾರಸ್ವಾಮಿ, ಮುತ್ತಣ್ಣ, ಡಿವೈಎಫ್‌ಐ ಎಂ.ಜಿ. ಪೃಥ್ವಿ, ಸಿಐಟಿಯು ಅರವಿಂದ, ದಲಿತ ಮುಖಂಡರುಗಳಾದ ಟಿ.ಆರ್.ವಿಜಯ್ ಕುಮಾರ್, ರಾಜು ಗೊರೂರ್ ಭಾಗವಹಿಸಿದ್ದರು.

ಇದನ್ನೂ ನೋಡಿ: ಕಥೆ ಮೊಗಳ್ಳಿ ಗಣೇಶ್‌ ಅವರನ್ನು ಬೆಳೆಸಿತು; ಮೊಗಳ್ಳಿ ಗಣೇಶ್‌ ಕೂಡ ಕಥೆಯನ್ನು ಬೆಳೆಸಿದರು – ಪ್ರೊ.ನಟರಾಜ್ ಹುಳಿಯಾರ್

Donate Janashakthi Media

Leave a Reply

Your email address will not be published. Required fields are marked *