ಪೌರತ್ವವನ್ನು ನಿರ್ಧರಿಸುವಲ್ಲಿ ಮುಂದಿನ ದಾರಿ: SIR ಅನುಭವಗಳ ಹಿನ್ನೆಲೆಯಲ್ಲಿ

SIR ಅನುಭವಗಳು ಚುನಾವಣಾ ಆಯೋಗವನ್ನು ನಗೆಪಾಟಲಾಗಿಸುವುದಷ್ಟೇ ಅಲ್ಲ, ಪ್ರಜಾಪ್ರಭುತ್ವದ ಮೂಲವಾದ ಚುನಾವಣಾ ವ್ಯವಸ್ಥೆಗೆ ಗಂಭೀರ ಹೊಡೆತ ನೀಡುತ್ತಿದೆ. SIR ಅನ್ನು ನಿಲ್ಲಿಸಲು ಹಾಗೂ ಮತದಾರರ ಪಟ್ಟಿಗಳ ತಯಾರಿ ಮತ್ತು ಪೌರತ್ವ ನಿರ್ಧಾರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಷ್ಕರಿಸಲು ಜನಚಳುವಳಿ ಅಗತ್ಯವಾಗಿದೆ. ಮತದಾರರ ಪೌರತ್ವವನ್ನು ಹಿಂದಿನ ದಿನಾಂಕದಿಂದ (retrospectively) ಸಮರ್ಪಕವಾಗಿ ಸಾಬೀತುಪಡಿಸುವ ಸಾಧನಗಳಿಲ್ಲದ ಹಿನ್ನೆಲೆಯಲ್ಲಿ, ಯಾವುದೇ ನಿಜವಾದ ಪೌರರು ಮತದಾರರ ಪಟ್ಟಿಯಿಂದ ಅಥವಾ ಪೌರತ್ವದಿಂದ ಹೊರಗುಳಿಯದಂತೆ ಭವಿಷ್ಯಮುಖಿ (prospective) ಕ್ರಮವನ್ನು ಗುರುತಿಸುವುದು ಅಗತ್ಯ. ಇದು ಇದರಿಂದ “ಭಾರತದ ಐತಿಹಾಸಿಕ ಮಾನವೀಯ ಪರಂಪರೆ”ಯು ಕಾನೂನುಬದ್ಧ ರಕ್ಷಣೆಯಾಗಿಯೂ ರೂಪಾಂತರಗೊಳ್ಳುತ್ತದೆ.

– ಕಾತ್ಯಾಯಿನಿ ಚಾಮರಾಜ್

ನಾಗರಿಕ ಸಮಾಜದ ಸಂಘಟನೆಗಳಷ್ಟೇ ಅಲ್ಲ, ಈಗ ಅಧಿಕೃತ ವಲಯಗಳೂ ಸಹ ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಬಹಿರಂಗವಾಗಿಯೇ  ವಿರೋಧ ವ್ಯಕ್ತಪಡಿಸುತ್ತಿವೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (AERO) ಒಬ್ಬರು ಮತದಾರರ ಗಣನೆ ನಮೂನೆಗಳಲ್ಲಿ ‘ತಾರ್ಕಿಕ ಅಸಾಂಗತ್ಯಗಳುʼ (‘Logical discrepancies’) ಎಂಬುದಕ್ಕೆ ಸಂಬಂಧಪಟ್ಟ ದೋಷಪೂರಿತ ವಿಧಾನಗಳ ವಿರುದ್ಧ ಪ್ರತಿಭಟನೆಯಾಗಿ ರಾಜೀನಾಮೆ ನೀಡಿದ್ದಾರೆ. “ಒಬ್ಬ ಹೊಣೆಗಾರ ನಾಗರಿಕನಾಗಿ, ಈ ರೀತಿಯ ತಾರ್ಕಿಕ ಅಸಾಂಗತ್ಯಗಳು ಎಂಬುದಕ್ಕೆ ಅರ್ಥವೇ ಇಲ್ಲವೆಂದು ನನಗೆ ಅನಿಸುತ್ತದೆ… ಆದ್ದರಿಂದ, ನಾನು ನನ್ನ ದೇಶಬಾಂಧವರಿಗೂ ರಾಷ್ಟ್ರಕ್ಕೂ ಪ್ರಜ್ಞಾಪೂರ್ವಕವಾಗಿ ದ್ರೋಹ ಮಾಡಿಲ್ಲ ಎಂಬ ಮನಶಾಂತಿ ಹೊಂದಲು AERO ಹುದ್ದೆಗೆ ರಾಜೀನಾಮೆ ನೀಡಲು ಬಯಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ಸಕ್ರಿಯ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ಮಾಹಿತಿ ಹಕ್ಕು ಕಾಯ್ದೆಯಡಿ ಚುನಾವಣಾ ಆಯೋಗವನ್ನು ಸಂಪರ್ಕಿಸಿ SIR ಕೈಗೊಳ್ಳುವ ನಿರ್ಧಾರ ತೆಗೆದುಕೊಂಡ ಕಡತದ ವಿವರಗಳನ್ನು ಕೇಳಿದ್ದರು. ಆಯೋಗದ ಮುಖ್ಯ ಕಾರ್ಯದರ್ಶಿ ತಮ್ಮ ಉತ್ತರದಲ್ಲಿ “ಈ ನಿರ್ಧಾರವನ್ನು ಆಯೋಗ ತೆಗೆದುಕೊಂಡಿಲ್ಲ” ಎಂದು ತಿಳಿಸಿದ್ದಾರೆ. ಭಾರದ್ವಾಜ್ ಅವರ ಪ್ರಕಾರ, ಈ ಉತ್ತರವು “ರಾಷ್ಟ್ರಮಟ್ಟದ SIR ಕೈಗೊಳ್ಳುವ ಪ್ರಕ್ರಿಯೆ ಹಾಗೂ ಅನುಮೋದನೆ ಕುರಿತು ಯಾವುದೇ ಕಡತಗಳೇ ಇಲ್ಲ” ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಗಾದರೆ, ದೇಶವ್ಯಾಪಿ SIR ಆರಂಭಿಸಲು ಚುನಾವಣಾ ಆಯೋಗದ ಆಧಾರವೇನು?

ಇದನ್ನೂ ಓದಿ: ಶಿರಸಿ| ಬಿ ಎಚ್ ಶ್ರೀಧರವರ ಎರಡು ಪುಸ್ತಕಗಳ ಬಿಡುಗಡೆ

SIR ಅನ್ನು “ಪ್ರಹಸನವಾಗಿ ಅವನತಿ”ಗೆ ದಾರಿ ತೋರುತ್ತಿದೆ ಎಂದು ʼದಿ ಹಿಂದೂ ಪತ್ರಿಕೆಯʼ ಸಂಪಾದಕೀಯವು ಹೇಳಿದೆ. ಇದು ಚುನಾವಣಾ ಆಯೋಗವನ್ನು ನಗೆಪಾಟಲಾಗಿಸುವುದಷ್ಟೇ ಅಲ್ಲ, ಪ್ರಜಾಪ್ರಭುತ್ವದ ಮೂಲವಾದ ಚುನಾವಣಾ ವ್ಯವಸ್ಥೆಗೆ ಗಂಭೀರ ಹೊಡೆತ ನೀಡುತ್ತಿದೆ. SIR ಅನ್ನು ನಿಲ್ಲಿಸಲು ಹಾಗೂ ಮತದಾರರ ಪಟ್ಟಿಗಳ ತಯಾರಿ ಮತ್ತು ಪೌರತ್ವ ನಿರ್ಧಾರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಷ್ಕರಿಸಲು ಜನಚಳುವಳಿ ಅಗತ್ಯವಾಗಿದೆ.

ಹಾಸ್ಯಾಸ್ಪದ SIR

ಬಿಹಾರದ ಅಂತಿಮ ಮತದಾರರ ಪಟ್ಟಿಗಳಲ್ಲಿನ ಭಾರಿ ದೋಷಗಳು, ಮತದಾರರ ಅರ್ಹತೆ ನಿರ್ಧಾರಕ್ಕೆ ಹಿಂದಿನ ದಾಖಲೆಗಳ ಬೇಡಿಕೆ, ನೋಂದಣಿ ಪ್ರಕ್ರಿಯೆಯ ದೋಷಗಳು ಮತ್ತು ಪೌರತ್ವವನ್ನು ವ್ಯಾಖ್ಯಾನಿಸುವಲ್ಲಿ ಇರುವ ಭೇದಭಾವಪೂರ್ಣ ನಿಯಮಗಳು — ಇವುಗಳೆಲ್ಲವೂ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಷ್ಕರಿಸುವ ಅಗತ್ಯವನ್ನು ತೋರಿಸುತ್ತವೆ.

SIRನ ಮುಖ್ಯ ಉದ್ದೇಶ ಅಕ್ರಮ ವಲಸಿಗರನ್ನು ಗುರುತಿಸುವುದಾದರೆ, 2001ರಲ್ಲಿ ಗಡಿ ನಿರ್ವಹಣಾ ಕಾರ್ಯಪಡೆಯು 1.5 ಕೋಟಿ ಅಕ್ರಮ ವಲಸಿಗರ ಅಂಕಿಅಂಶವನ್ನು ನೀಡಿದೆ. 2004ರಲ್ಲಿ ಕೇಂದ್ರ ಸರ್ಕಾರವು 1.2 ಕೋಟಿ ಬಾಂಗ್ಲಾದೇಶಿ ಅಕ್ರಮ ವಲಸಿಗರಿದ್ದಾರೆ ಎಂದು ಸಂಸತ್ತಿಗೆ ತಿಳಿಸಿತು. ಆದರೆ, 140 ಕೋಟಿ ಜನಸಂಖ್ಯೆಯ ಭಾರತದಲ್ಲಿ ಇದು ಕೇವಲ 1% ಮಾತ್ರ. ಶತಮಾನಗಳಿಂದ ಭಾರತವು ನೆರೆಯ ದೇಶಗಳಿಂದ ಬಂದವರಿಗೆ ಆಶ್ರಯ ನೀಡಿದ ದೇಶವಾಗಿದೆ. ಯಹೂದ್ಯರು, ಟಿಬೆಟಿಯನ್ನರು ಮತ್ತು ಶ್ರೀಲಂಕಾದ ತಮಿಳರು ಸೇರಿದಂತೆ ಹಲವರನ್ನು ಮಾನವೀಯತೆಯಿಂದ ಸ್ವೀಕರಿಸಿರುವ ನಾಗರಿಕತೆಯ ಪರಂಪರೆ ನಮ್ಮದಾಗಿದೆ.

ರಾಜ್ಯವು ಈ 1% ಅಕ್ರಮ ವಲಸಿಗರನ್ನು ಪ್ರವೇಶಿಸುವಾಗಲೇ ಗುರುತಿಸಲು ವಿಫಲವಾದರೆ, ಈಗ ಅವರನ್ನು ಗುರುತಿಸುವ ಪ್ರಯತ್ನವು ನಿಜವಾದ ನಾಗರಿಕರನ್ನು ಮತಹಕ್ಕಿನಿಂದ ವಂಚಿಸಬಾರದು. ನ್ಯಾಯತತ್ತ್ವದ ಒಂದು ಹಳೆಯ ತತ್ವ “ತಪ್ಪಿತಸ್ಥನು ತಪ್ಪಿಸಿಕೊಂಡರೂ ಪರವಾಗಿಲ್ಲ, ಒಬ್ಬ ನಿರಪರಾಧಿಯನ್ನು ಶಿಕ್ಷಿಸಬಾರದು” ಎಂಬುದನ್ನು ಪೌರತ್ವ ನಿರ್ಧಾರದಲ್ಲಿ ಅನುಸರಿಸಬೇಕು. ಭಾರತವು ಇನ್ನೂ 1951ರ ಯುಎನ್ ಶರಣಾರ್ಥಿಗಳ ಒಪ್ಪಂದಕ್ಕೂ 1967ರ ಪ್ರೋಟೋಕಾಲ್‌ಗೂ ಸಹಿ ಹಾಕದ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಆದ್ದರಿಂದ, ನಮ್ಮ ಮಾನವೀಯ ಪರಂಪರೆಯನ್ನು ಗಮನಿಸಿ, ಈ 1% ಅಕ್ರಮ ವಲಸಿಗರನ್ನು ಸಹ ಪೌರತ್ವದಲ್ಲಿ ಒಳಗೊಳ್ಳುವ ಬಗ್ಗೆ ಚಿಂತನೆ ಮಾಡಬೇಕಾಗಿದೆ.

ಕಠಿಣ ಅಡೆತಡೆಗಳು

1986 ಮತ್ತು 2004ರ ಪೌರತ್ವ ತಿದ್ದುಪಡಿ ಕಾಯ್ದೆಗಳು (CAAಗಳು), SIRಗೆ ಆಧಾರವಾಗಿದ್ದು, ಅರ್ಹ ನಾಗರಿಕರು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಹಿಂದಿನ ದಾಖಲೆಗಳನ್ನು ಒದಗಿಸುವ ಕಠಿಣ ಅಡೆತಡೆಗಳನ್ನು ನಿರ್ಮಿಸುತ್ತವೆ. ಬಹುತೇಕ ಜನರಿಗೆ ಇಂತಹ ದಾಖಲೆಗಳಿಲ್ಲ. ಈ ತಿದ್ದುಪಡಿಗಳು ಆಳವಾದ ಪ್ರಶ್ನೆಗಳನ್ನು ಎಬ್ಬಿಸುತ್ತವೆ: ಪೌರತ್ವವು ಒಳಗೋಳುವಂತವು ಮತ್ತು ಸಮಾವೇಶಗೊಳಿಸಿಕೊಳ್ಳುವಂತವು  ಆಗಬೇಕೇ ಅಥವಾ ನಿರ್ಬಂಧಿತ ಮತ್ತು ಸಂರಕ್ಷಣಾತ್ಮಕವಾಗಬೇಕೇ? ಜನಸಂಖ್ಯಾ ಬದಲಾವಣೆಯ ಭಯಕ್ಕಿಂತ ಮಾನವೀಯ ಕಾಳಜಿಗಳು  ಮೇಲುಗೈ ಪಡೆಯಬೇಕೇ? ಸಮಾನತೆಯ ಸಂವಿಧಾನಾತ್ಮಕ ತತ್ವಗಳನ್ನು ವಾಸ್ತವ ಜಗತ್ತಿನ ರಾಜಕೀಯ ಒತ್ತಡಗಳೊಂದಿಗೆ ಭಾರತ ಹೇಗೆ ಸಮತೋಲನಗೊಳಿಸಬೇಕು?

ಇದಕ್ಕೆ ಒಂದು ಪರ್ಯಾಯ ಅಗತ್ಯವಾಗಿದೆ. ಈ ಎಲ್ಲಾ ದೋಷಗಳು ಮತ್ತು ಅಡೆತಡೆಗಳನ್ನು ಗಮನಿಸಿ, ಪ್ರಸ್ತುತ SIRನಲ್ಲಿ ಬಳಸಲಾಗುತ್ತಿರುವ ಭೇದಭಾವಪೂರ್ಣ ವಿಧಾನಗಳನ್ನು ತೆಗೆದುಹಾಕಲು ಪೌರತ್ವ ಕಾಯ್ದೆಯಲ್ಲಿ ಹೊಸ ತಿದ್ದುಪಡಿ ಅಗತ್ಯವಿದೆ. 1987ರ ಮೊದಲು ಜನಿಸಿದವರಿರು ನಂತರ ಜನಿಸಿದವರ ನಡುವೆ ಮಾಡಿರುವ ಹಿಂದಿನಿಂದಲೇ ಅನ್ವಯವಾಗುವಂತೆ ಮನಸೋಇಚ್ಛೆಯಾಗಿ  ಮಾಡಿರುವ ವ್ಯತ್ಯಾಸವನ್ನು  ತೆಗೆದುಹಾಕಬೇಕು. ಈ ನಿಯಮಗಳು ಸಂವಿಧಾನದ ಕಲಂ 14 (ಕಾನೂನಿನ ಮುಂದೆ ಸಮಾನತೆ)ಗೆ ವಿರುದ್ಧವಾಗಿವೆ, ಅದರಡಿಯಲ್ಲಿ ಪಕ್ಷಪಾತಕಾರಿಯಾಗಿವೆ  ಎಂದು ಪ್ರಶ್ನಿಸಬಹುದು.

ಪ್ರಸ್ತುತ ಪರಿಸ್ಥಿತಿಯಲ್ಲಿ ಮತದಾರರ ಪೌರತ್ವವನ್ನು ಹಿಂಪೂರ್ವಾನ್ವಯವಾಗುವಂತೆ ಸಾಬೀತುಪಡಿಸುವ ಸಮರ್ಪಕ ವಿಧಾನಗಳಿಲ್ಲದೆ, ಲಕ್ಷಾಂತರ ಜನರು ಹೊರಗುಳಿಯುತ್ತಿರುವಾಗ, ಭವಿಷ್ಯಮುಖಿ ಕ್ರಮ ಅಗತ್ಯವಾಗಿದೆ. 2026ರಲ್ಲಿ ಹೊಸ ತಿದ್ದುಪಡಿ ಮೂಲಕ, ಭಾರತದಲ್ಲಿ ಪ್ರಸ್ತುತ ವಾಸಿಸುತ್ತಿರುವ ಅಥವಾ ಕನಿಷ್ಠ 2-3 ವರ್ಷಗಳಿಂದ ವಾಸಿಸುತ್ತಿರುವ ಎಲ್ಲರಿಗೂ ನೈಸರ್ಗಿಕೀಕರಣದ ಮೂಲಕ ಪೌರತ್ವ ನೀಡುವ ಬಗ್ಗೆ ಪರಿಗಣಿಸಬಹುದು. ಇದರಲ್ಲಿ ಯಾವುದೇ ಶಾಸನದ ಪ್ರಕಾರ ವಿದೇಶಿಗಳೆಂದು ಅಥವ ಪೌರರಲ್ಲ ಎಂದು ಘೋಷಿತರಾದವರನ್ನು ಹೊರತುಪಡಿಸಬಹುದು.

ಈ ಕ್ರಮವು ನಿಜವಾದ ನಾಗರಿಕರು ಮತಹಕ್ಕಿನಿಂದ ವಂಚಿತರಾಗುವ ಸಾಧ್ಯತೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುತ್ತದೆ. ಇದರಿಂದ “ಭಾರತದ ಐತಿಹಾಸಿಕ ಮಾನವೀಯ ಪರಂಪರೆ” ಕಾನೂನುಬದ್ಧ ರಕ್ಷಣೆಯಾಗಿ ರೂಪಾಂತರಗೊಳ್ಳುತ್ತದೆ.

(ಲೇಖಕಿ CIVIC-ಬೆಂಗಳೂರು ಸಂಸ್ಥೆಯ ಕಾರ್ಯನಿರ್ವಹಣಾ ಟ್ರಸ್ಟಿ ಹಾಗೂ Association for Democratic Reforms (ADR) ಸಂಘಟನೆಯ ಕರ್ನಾಟಕ ರಾಜ್ಯ ಸಂಯೋಜಕಿಯಾಗಿದ್ದಾರೆ. ಮೂಲ ಲೇಖನ ಕೃಪೆ: The Hindu)

ಇದನ್ನೂ ನೋಡಿ: ಮಹಿಳಾ ಮೀಸಲಾತಿ ಮಸೂದೆ: ಮೂರು ದಶಕಗಳ ಹೋರಾಟ – ಒಂದು ಅವಲೋಕನ Janashakthi Media

Donate Janashakthi Media

Leave a Reply

Your email address will not be published. Required fields are marked *