ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ಮಧ್ಯರಾತ್ರಿ ದಾಳಿ – ಕಾರ್ಯದರ್ಶಿಗಾಗಿ ಶೋಧ

ಕೋಲ್ಕತ್ತಾ: ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಸಾಲ್ಬೋನಿ ಪೊಲೀಸ್ ಠಾಣೆಯ ತಂಡವು ಜೂನ್‌ 13ರ ಮಧ್ಯರಾತ್ರಿ ಕೋಲ್ಕತ್ತಾದ ಕಾಳಿಘಾಟ್ ರಸ್ತೆಯಲ್ಲಿರುವ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ ನಡೆಸಿ, ಅವರ ಕಾರ್ಯದರ್ಶಿ ಸುಮಿತ್ ರಾಯ್‌ಗಾಗಿ ಶೋಧ ನಡೆಸಿತು.

ರಾಜ್ಯದಲ್ಲಿ ಅಧಿಕಾರ ಬದಲಾದ ಬಳಿಕ ಪೊಲೀಸರು ತಮ್ಮ ವಿರುದ್ಧ ಹಲವು ಪ್ರಕರಣಗಳಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ ಕೆಲವೇ ಗಂಟೆಗಳ ಬಳಿಕ ಈ ದಾಳಿ ನಡೆದಿರುವುದು ಗಮನಾರ್ಹವಾಗಿದೆ.

ಈ ದಾಳಿ ಅಭಿಷೇಕ್ ಬ್ಯಾನರ್ಜಿ ಮತ್ತು ಪಕ್ಷದ ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ನಡೆಯಿತು.

ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಕುರಿತು ದೆಹಲಿ ಹೈಕೋರ್ಟ್ ತೀರ್ಪನ್ನು ಸಿಪಿಐ(ಎಂ) ಸ್ವಾಗತಿಸುತ್ತದೆ

ಸಾಲ್ಬೋನಿ ಠಾಣೆಯ ತನಿಖಾ ಅಧಿಕಾರಿಗಳು, ಭವಾನೀಪುರ ಮತ್ತು ಕಾಳಿಘಾಟ್ ಠಾಣೆಗಳ ಸಿಬ್ಬಂದಿಯ ಸಹಾಯದಿಂದ ಬೆಳಗಿನ ಜಾವ ಆರಂಭವಾದ ಶೋಧ ಕಾರ್ಯಾಚರಣೆಯನ್ನು ಬೆಳಿಗ್ಗೆ ಸುಮಾರು 8 ಗಂಟೆಗೆ ಮುಕ್ತಾಯಗೊಳಿಸಿ ಪಟುವಾಪಾರದಲ್ಲಿರುವ ನಿವಾಸದಿಂದ ತೆರಳಿದರು.

ಅಭಿಷೇಕ್ ಅವರ ವಿಶ್ವಾಸಾರ್ಹ ಸಹಾಯಕನಾಗಿರುವ ಸುಮಿತ್ ರಾಯ್ ಶೋಧದ ವೇಳೆ ಮನೆಯಲ್ಲಿ ಪತ್ತೆಯಾಗಲಿಲ್ಲ.

ಮೂಲಗಳ ಪ್ರಕಾರ, ಭಾರಿ ಮೊತ್ತದ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ ಆರೋಪದ ಪ್ರಕರಣದ ಸಂಬಂಧ ಕಳೆದ ಕೆಲವು ದಿನಗಳಿಂದ ಪೊಲೀಸರು ಸುಮಿತ್‌ಗಾಗಿ ಹುಡುಕಾಟ ನಡೆಸುತ್ತಿದ್ದರು.

ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಖರಗ್ಪುರ ಪ್ರದೇಶದ ಭೂಮೋಸ ಪ್ರಕರಣದ ದೂರು ಆಧಾರವಾಗಿ ಈ ತನಿಖೆ ಮುಂದುವರಿಯುತ್ತಿದೆ.

ಈ ಸಂಬಂಧ ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕ ಸುಜಯ್ ಹಜ್ರಾ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ತನಿಖೆಯಲ್ಲಿ, ಸುಜಯ್ ಖಾತೆಯಿಂದ ಸುಮಿತ್ ಖಾತೆಗೆ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿದೆ ಎಂಬ ಮಾಹಿತಿ ಪೊಲೀಸರಿಗೆ ದೊರಕಿದೆ.

ಮೊಬೈಲ್ ಟವರ್ ಲೊಕೇಶನ್ ಆಧಾರವಾಗಿ ಸುಮಿತ್ ಕಾಳಿಘಾಟ್ ರಸ್ತೆಯಲ್ಲಿರುವ ಅಭಿಷೇಕ್ ನಿವಾಸದಲ್ಲೇ ತಂಗಿದ್ದಾರೆ ಎಂಬ ಸುಳಿವು ಸಿಕ್ಕಿದ್ದರಿಂದ ಪೊಲೀಸರು ಇಂದು ಮುಂಜಾನೆ 2.30ರ ಸುಮಾರಿಗೆ ಸ್ಥಳಕ್ಕೆ ಧಾವಿಸಿದ್ದರು.

ಸ್ಥಳದಲ್ಲಿ ಕಾಳಿಘಾಟ್ ಮತ್ತು ಭವಾನೀಪುರ ಠಾಣೆಗಳ ಪೊಲೀಸರು ಹಾಗೂ ಕೇಂದ್ರ ಪಡೆಗಳು ಭದ್ರತೆ ವಹಿಸಿದ್ದವು.

ಮನೆಯ ಗೇಟ್ ಒಳಗಿನಿಂದ ಲಾಕ್ ಮಾಡಲ್ಪಟ್ಟಿದ್ದರಿಂದ ಪೊಲೀಸರು ತಕ್ಷಣ ಒಳನುಗ್ಗಲು ಸಾಧ್ಯವಾಗಲಿಲ್ಲ. ಸುಮಾರು ನಾಲ್ಕು ಗಂಟೆಗಳ ಕಾಲ ಹೊರಗೆ ಕಾಯಬೇಕಾಗಿ ಬಂದು, ನಂತರ ಗ್ಯಾಸ್ ಕಟರ್ ಬಳಸಿ ಲಾಕ್ ಕತ್ತರಿಸಿ ಒಳ ಪ್ರವೇಶಿಸಿದರೆಂದು ಮೂಲಗಳು ತಿಳಿಸಿವೆ.

ಈ ವೇಳೆ ಅಭಿಷೇಕ್ ಬ್ಯಾನರ್ಜಿ ಸ್ಥಳದಲ್ಲೇ ಇದ್ದರು. ಮಾಹಿತಿ ತಿಳಿದ ಬಳಿಕ ಮಮತಾ ಬ್ಯಾನರ್ಜಿ ಸಮೀಪದ ಹರಿಶ್ ಚಟರ್ಜಿ ಸ್ಟ್ರೀಟ್ ನಿವಾಸದಿಂದ ಅಲ್ಲಿಗೆ ಆಗಮಿಸಿದರು.

ಮನೆಯಲ್ಲಿ ಪ್ರವೇಶಿಸುವಾಗ “ಇಲ್ಲಿ ಏನಾಗುತ್ತಿದೆ?” ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದರೆಂದು ವರದಿಯಾಗಿದೆ.

ಪೊಲೀಸರು ಶೋಧದ ವೇಳೆ ಯಾವುದೇ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ. ಆದರೆ ಗೇಟ್ ಲಾಕ್ ಆಗಿದ್ದರಿಂದ ತಡವಾದ ವೇಳೆಯಲ್ಲಿ ಸುಮಿತ್ ಅಲ್ಲಿಂದ ತಪ್ಪಿಸಿಕೊಂಡಿರಬಹುದೆಂಬ ಶಂಕೆಯನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಸುಮಿತ್ ರಾಯ್ ಹುಡುಕಾಟಕ್ಕಾಗಿ ಪೊಲೀಸರು ಇನ್ನೂ ಹಲವು ಸ್ಥಳಗಳಲ್ಲಿ ದಾಳಿ ಮುಂದುವರಿಸಿದ್ದಾರೆ.

ಇನ್ನೊಂದೆಡೆ, ರಾಜ್ಯದಲ್ಲಿ ನಡೆದಿರುವ ಮುನ್ಸಿಪಲ್ ಸೇವಾ ನೇಮಕಾತಿ ಅವ್ಯವಹಾರ ಪ್ರಕರಣದ ಸಂಬಂಧ ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ) ಕೂಡ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ ಅವರ ಕಾಮಾರ್ಹಾಟಿ ನಿವಾಸ ಸೇರಿದಂತೆ ಭವಾನೀಪುರ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸುತ್ತಿದೆ.

ಇದನ್ನೂ ನೋಡಿ: ಕಡಬ ಸಮುದಾಯ ಆಸ್ಪತ್ರೆ ಅವ್ಯವಸ್ಥೆ | ವೈದ್ಯರ ಕೊರತೆ, ಔಷಧಿ ಅಭಾವ, ಲ್ಯಾಬ್ ಸಿಬ್ಬಂದಿ ಕೊರತೆಯಿಂದ ರೋಗಿಗಳ ಪರದಾಟ

Donate Janashakthi Media

Leave a Reply

Your email address will not be published. Required fields are marked *