ತಿರುವನಂತಪುರಂ: ಕೆಎಸ್ಆರ್ಟಿಸಿ ಸಾಮಾನ್ಯ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರು ಹಾಗೂ ತೃತೀಯಲಿಂಗಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ‘ಪ್ರಿಯದರ್ಶಿನಿ’ ಯೋಜನೆಯನ್ನು ಜೂನ್ 15ರಂದು ತಂಪಾನೂರು ಬಸ್ ನಿಲ್ದಾಣದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಉದ್ಘಾಟಿಸಲಿದ್ದಾರೆ.
ಯೋಜನೆಯ ಉದ್ಘಾಟನಾ ಬಸ್ಸನ್ನು ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಚಾಲನೆ ಮತ್ತು ನಿರ್ವಹಣೆ ಮಾಡಲಿದ್ದಾರೆ ಎಂದು ಸಾರಿಗೆ ಸಚಿವ ಸಿ.ಪಿ. ಜಾನ್ ತಿಳಿಸಿದ್ದಾರೆ.
ಈ ಯೋಜನೆ ಎಲ್ಲಾ ಮಹಿಳೆಯರಿಗೆ ಅನ್ವಯವಾಗಲಿದ್ದು, ಯಾವುದೇ ವಿಶೇಷ ಕಾರ್ಡ್ ಅಥವಾ ಪ್ರಮಾಣಪತ್ರ ಅಗತ್ಯವಿಲ್ಲ. ಕೆಎಸ್ಆರ್ಟಿಸಿ ನಡೆಸುವ 3,125 ಸಾಮಾನ್ಯ ಬಸ್ಸುಗಳಲ್ಲಿ ಈ ಯೋಜನೆ ಜಾರಿಯಾಗಲಿದೆ.
ಇದನ್ನೂ ಓದಿ: ಅಮೆರಿಕಾ ದಾಳಿಯಲ್ಲಿ ಭಾರತೀಯ ನಾವಿಕರ ಸಾವು: ಮೋದಿ ಮೌನಕ್ಕೆ ರಾಹುಲ್ ಗಾಂಧಿ ತೀವ್ರ ಟೀಕೆ
ಯೋಜನೆಗೆ ದಿನಕ್ಕೆ ಅಂದಾಜು ₹2 ಕೋಟಿ ವೆಚ್ಚವಾಗುವ ಸಾಧ್ಯತೆ ಇದ್ದರೂ, ಟಿಕೆಟ್ ಮಾಹಿತಿಯ ಆಧಾರದಲ್ಲೇ ನಿಖರ ಹೊಣೆಗಾರಿಕೆ ಅಂದಾಜಿಸಲು ಸಾಧ್ಯ ಎಂದು ಸಚಿವರು ಸ್ಪಷ್ಟಪಡಿಸಿದರು.
“ಕೆಎಸ್ಆರ್ಟಿಸಿಗೆ ಮುಖ್ಯಮಂತ್ರಿ ವಿಶೇಷ ನೆರವು ನೀಡುವ ಭರವಸೆ ನೀಡಿದ್ದಾರೆ. ಟಿಕೆಟ್ ಹೊರತಾದ ಆದಾಯವನ್ನು ಹೆಚ್ಚಿಸುವತ್ತವೂ ಗಮನ ಹರಿಸಲಾಗುತ್ತದೆ. ಬಸ್ಸುಗಳಿಗೆ ಪ್ರಾಯೋಜಕತ್ವ ನೀಡಲು ಮುಂದಾಗಿರುವವರನ್ನು ನಾವು ಸ್ವಾಗತಿಸುತ್ತೇವೆ,” ಎಂದು ಅವರು ಹೇಳಿದರು.
ಆರ್ಥಿಕ ಹೊರೆ ಇದ್ದರೂ, ಈ ಯೋಜನೆಯನ್ನು ನಷ್ಟವಾಗಿ ನೋಡುವ ಬದಲು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ಕ್ರಮವಾಗಿ ಸರ್ಕಾರ ನೋಡುತ್ತಿದೆ. ಇದರಿಂದ ಮಹಿಳೆಯರ ಬಳಕೆಯೋಗ್ಯ ಆದಾಯವು 15ರಿಂದ 25 ಶೇಕಡಾವರೆಗೆ ಹೆಚ್ಚಳವಾಗುವ ನಿರೀಕ್ಷೆಯಿದ್ದು, ಇತರ ಕ್ಷೇತ್ರಗಳಲ್ಲಿ ಖರ್ಚು ಹೆಚ್ಚಳಕ್ಕೂ ಉತ್ತೇಜನ ನೀಡಲಿದೆ.
ಇದನ್ನೂ ನೋಡಿ: ಪಿಟಿಸಿಎಲ್ ಕಾಯ್ದೆ ಜಾರಿಯಲ್ಲಿ ವೈಫಲ್ಯ? ದಲಿತ ಭೂಹಕ್ಕುಗಳ ಬಗ್ಗೆ ಹೆಚ್ಚಿದ ಆತಂಕ | ಜಸ್ಟೀಸ್ ವಿ.ಗೋಪಾಲಗೌಡ
