ಶಿಡ್ಲಘಟ್ಟ| ತಾಲ್ಲೂಕಿನಲ್ಲಿ 9 ಪ್ರಾಥಮಿಕ ಶಾಲೆಗಳು ಬಂದ್: ಗ್ರಾಮೀಣ ಮಕ್ಕಳಿಗೆ ಸಂಕಷ್ಟ

ಶಿಡ್ಲಘಟ್ಟ: ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಿರಂತರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 9 ಕಿರಿಯ ಪ್ರಾಥಮಿಕ ಶಾಲೆಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿವೆ. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಊರಲ್ಲೇ ಶಿಕ್ಷಣ ಪಡೆಯುವ ಅವಕಾಶ ಕಳೆದುಕೊಂಡು, ಹತ್ತಿರದ ಪಟ್ಟಣ ಅಥವಾ ಹೋಬಳಿ ಮಟ್ಟದ ಶಾಲೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದೂರದ ಶಾಲೆಗಳಿಗೆ ಪ್ರತಿದಿನ ಸಂಚಾರ ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಲವು ಮಕ್ಕಳು ವಿದ್ಯಾಭ್ಯಾಸದಿಂದ ದೂರ ಉಳಿಯುವ ಆತಂಕವೂ ವ್ಯಕ್ತವಾಗಿದೆ. ಕೊಂಡಪ್ಪಗಾರಹಳ್ಳಿ, ಸಾದ್ಲವಾರಹಳ್ಳಿ, ದೊಡ್ಡಗುಮ್ಮನಹಳ್ಳಿ, ಗಂಜಿಗುಂಟೆ (ಉರ್ದು), ಬಚ್ಚಹಳ್ಳಿ, ಕೇಶವಪುರ, ಸುಂಡ್ರಹಳ್ಳಿ, ಅಂಬಿಗಾನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳ ಶಾಲೆಗಳು ಮುಚ್ಚಲ್ಪಟ್ಟಿವೆ. ಪ್ರಾಥಮಿಕ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ ತಾಲ್ಲೂಕಿನ 60 ಶಾಲೆಗಳಲ್ಲಿ ಹತ್ತು ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಇದೇ ಸಂಖ್ಯೆ 2023-24ರಲ್ಲಿ 47 ಆಗಿತ್ತು. ಪ್ರಾಥಮಿಕ

ಇದನ್ನೂ ಓದಿ: ಹಾವೇರಿ ವಿ.ವಿ ಕ್ಯಾಂಪಸ್ ನಲ್ಲಿ ಸರ್ಕಾರಿ ಹಾಸ್ಟೆಲ್‌ಗಳ ಮಂಜೂರು ಮಾಡಲು ಎಸ್ಎಫ್ಐ ಘಟಕ ಆಗ್ರಹ

ಸರ್ಕಾರಿ ಶಾಲೆಗಳ ದಾಖಲಾತಿ ಇಳಿಕೆಗೆ ಖಾಸಗಿ ಶಾಲೆಗಳೇ ಕಾರಣ ಎಂಬ ವಾದ ಸಂಪೂರ್ಣ ಸತ್ಯವಲ್ಲ ಎನ್ನಲಾಗುತ್ತಿದೆ. ಕೆಲವು ಪೋಷಕರು ತಮ್ಮ ಗ್ರಾಮದಲ್ಲೇ ಶಾಲೆಗಳಿದ್ದರೂ, ಬೋಧನೆಯ ಗುಣಮಟ್ಟ ಹಾಗೂ ಮೂಲಸೌಕರ್ಯಗಳ ಕೊರತೆಯನ್ನು ಕಾರಣ ನೀಡಿ ಪಕ್ಕದ ಗ್ರಾಮಗಳ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಕೆಲವೆಡೆ ಶಿಕ್ಷಕರು ಉತ್ತಮ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಶಾಲೆಗಳನ್ನು ಮಾದರಿಯಾಗಿ ರೂಪಿಸಿರುವ ಉದಾಹರಣೆಗಳೂ ಇದ್ದರೆ, ಇನ್ನೂ ಕೆಲವೆಡೆ ಬೋಧನಾ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ಒಬ್ಬ ಶಿಕ್ಷಕರೇ 1ರಿಂದ 7ನೇ ತರಗತಿವರೆಗೆ ಎಲ್ಲಾ ಮಕ್ಕಳಿಗೆ ಪಾಠ ಹೇಳುವ ಪರಿಸ್ಥಿತಿಯೂ ಕಂಡುಬರುತ್ತಿದೆ. ಇದೇ ವೇಳೆ, 2025-26ನೇ ಸಾಲಿನಲ್ಲಿ 88 ಮಕ್ಕಳು (55 ಗಂಡು, 33 ಹೆಣ್ಣು) ಸರ್ಕಾರಿ ಶಾಲೆಗಳಿಂದ ಹೊರಗುಳಿದಿರುವುದು ಗಮನಾರ್ಹ.

ಅಂಗನವಾಡಿ ಕೇಂದ್ರಗಳು ಶಿಕ್ಷಣದ ನೆಲೆಗಳಾಗುವುದಕ್ಕಿಂತ ಆಹಾರ ವಿತರಣೆ ಕೇಂದ್ರಗಳಾಗಿ ಪರಿಣಮಿಸುತ್ತಿವೆ ಎಂಬ ಟೀಕೆ ಕೇಳಿಬರುತ್ತಿದೆ. ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣವನ್ನು ಬಲಪಡಿಸಿ ಸರ್ಕಾರಿ ಶಾಲೆಗಳೊಂದಿಗೆ ಸಮನ್ವಯ ಸಾಧಿಸಿದರೆ ದಾಖಲಾತಿ ಹೆಚ್ಚಿಸಲು ಸಹಕಾರಿ ಆಗಬಹುದು ಎಂದು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಠ್ಯೇತರ ಕೆಲಸಗಳಿಂದ ಶಿಕ್ಷಕರಿಗೆ ಒತ್ತಡ

ಶಿಕ್ಷಕರು ಬೋಧನೆಯಿಗಿಂತ ಹೆಚ್ಚಾಗಿ ಆಡಳಿತಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎನ್ನಲಾಗಿದೆ. ದಿನನಿತ್ಯದ ವರದಿಗಳು, ಮೊಬೈಲ್ ಆಪ್‌ಗಳಲ್ಲಿ ಮಾಹಿತಿ ಅಪ್ಲೋಡ್, ಮಧ್ಯಾಹ್ನ ಊಟ ಯೋಜನೆಗೆ ಸಂಬಂಧಿಸಿದ ದಾಖಲೆ ನಿರ್ವಹಣೆ ಮುಂತಾದ ಕೆಲಸಗಳಿಂದ ತರಗತಿ ಬೋಧನೆಗೆ ಸಮಯ ಕಡಿಮೆಯಾಗುತ್ತಿದೆ ಎಂಬುದು ಪೋಷಕರ ಆರೋಪ. ಶಿಕ್ಷಕರನ್ನು ಪಠ್ಯೇತರ ಕಾರ್ಯಗಳಿಂದ ಬಿಡುಗಡೆ ಮಾಡಿ ಬೋಧನೆಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.

ಮೂಲಸೌಕರ್ಯ ಸಮಸ್ಯೆಗಳು ಮುಂದುವರಿಕೆ

ತಾಲ್ಲೂಕಿನಲ್ಲಿ ಒಟ್ಟು 323 ಶಾಲೆಗಳಿದ್ದು, ಪ್ರಾಥಮಿಕ ಹಂತದಲ್ಲಿ 178 ಹಾಗೂ ಪ್ರೌಢಶಾಲೆಗಳಲ್ಲಿ 42 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸಿಆರ್‌ಪಿ, ಬಿಆರ್‌ಪಿ ಹಾಗೂ ಸಂಯೋಜಕರ 16 ಹುದ್ದೆಗಳೂ ಭರ್ತಿಯಾಗಬೇಕಿದೆ.

ಶಾಲಾ ಕೊಠಡಿಗಳ ಸ್ಥಿತಿಯೂ ಸಮಾಧಾನಕರವಾಗಿಲ್ಲ. ಒಟ್ಟು 950 ಕೊಠಡಿಗಳ ಪೈಕಿ 646 ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು, 151 ಕೊಠಡಿಗಳಿಗೆ ದುರಸ್ತಿ ಅಗತ್ಯವಿದೆ. 139 ಕೊಠಡಿಗಳನ್ನು ತೆರವುಗೊಳಿಸಬೇಕಿದ್ದು, 40 ಹೊಸ ಕೊಠಡಿಗಳ ಅಗತ್ಯವಿದೆ. ಹಲವಾರು ಶಾಲೆಗಳಲ್ಲಿ ತಡೆಗೋಡೆ, ಶೌಚಾಲಯ, ಆಟದ ಮೈದಾನ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೊರತೆಯಾಗಿದೆ. 1,291 ಬೆಂಚ್-ಡೆಸ್ಕ್‌ಗಳ ಅಭಾವವೂ ಕಂಡುಬರುತ್ತಿದೆ.

ಮ್ಯಾಗ್ನೆಟ್ ಶಾಲೆಗಳ ಪರಿಕಲ್ಪನೆ

ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತವು ರಾಜ್ಯವ್ಯಾಪಿ ಸಮಸ್ಯೆಯಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ತಿಳಿಸಿದ್ದಾರೆ.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಅಥವಾ ಎರಡು ಆಕರ್ಷಕ ‘ಮ್ಯಾಗ್ನೆಟ್’ ಶಾಲೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗುತ್ತಿದೆ. ಇವುಗಳಲ್ಲಿ ಉತ್ತಮ ಮೂಲಸೌಕರ್ಯ, ಹೆಚ್ಚು ಶಿಕ್ಷಕರು ಹಾಗೂ ಸಾರಿಗೆ ಸೌಲಭ್ಯ ಒದಗಿಸುವ ಮೂಲಕ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಯೋಜನೆ ಜಾರಿಗೆ ಬರಲಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಇದನ್ನೂ ನೋಡಿ: ಕುಡತಿನಿ ಭೂ ಹೋರಾಟ | “ಭೂಮಿ ಕಿತ್ತುಕೊಂಡು ಬದುಕು ಕಸಿದವರನ್ನು ಸೋಲಿಸಿ” – ಜಸ್ಟೀಸ್ ವಿ. ಗೋಪಾಲಗೌಡ

Donate Janashakthi Media

Leave a Reply

Your email address will not be published. Required fields are marked *