ಯುಎಸ್‍ನಲ್ಲಿ ವಶೀಲಿಬಾಜಿಗೆ ಆರೆಸ್ಸೆಸ್‍ 3.3ಲಕ್ಷ ಡಾಲರ್ ವೆಚ್ಚಮಾಡಿರುವ ಆರೋಪದ ಬಗ್ಗೆ ಇ.ಡಿ. & ಸಿಬಿಡಿಟಿ ತನಿಖೆಯಾಗಬೇಕು – ಇ ಎ ಎಸ್‍ ಶರ್ಮ

ನವದೆಹಲಿ: ಆರೆಸ್ಸೆಸ್ ಅಮೆರಿಕ ಸಂಯುಕ್ತ ಸಂಸ್ಥಾನ(ಯುಎಸ್‍ಎ)ದ ಸೆನೆಟ್‍ ಮತ್ತು ಹೌಸ್‍ ಆಫ್‍ ರೆಪ್ರೆಸೆಂಟೇಟಿವ್ಸ್ ಅಧಿಕಾರಿಗಳ ನಡುವೆ ತಮ್ಮ ಪರವಾಗಿ ಲಾಬ್ಬಿಯಿಂಗ್ ಅಂದರೆ ವಶೀಲಿಬಾಜಿ ನಡೆಸಲು ಆ ದೇಶದ ವಶೀಲಿ ಕಂಪನಿಯೊಂದನ್ನು ತೊಡಗಿಸಿಕೊಂಡಿದ್ದು, ಅದಕ್ಕೆ 2025ರ ಮೊದಲ ಮೂರು ತ್ರೈಮಾಸಿಕಗಳಲ್ಲಿ 3,30,000 ಡಾಲರ್(ಸುಮಾರು 2.9 ಕೋಟಿ ರೂ.) ಪಾವತಿಸಿದೆ ಎಂಬ ಸುದ್ದಿ ಈಗ ಬಹಳ ಚರ್ಚೆಯಲ್ಲಿದೆ. ಇನ್ನೂ ಗಮನಾರ್ಹ ಸಂಗತಿಯೆಂದರೆ ಪಾಕಿಸ್ತಾನದ ಆಳರಸರು ಕೂಡ ಯುಎಸ್‍ ಸರಕಾರದೊಂದಿಗೆ ಅದೇ ಕಂಪನಿಯ ಮೂಲಕ ತಮ್ಮ ಪರವಾಗಿ ವಶೀಲಿ ಮಾಡಿಸುತ್ತಿದ್ದಾರೆ ಎಂದೂ ವರದಿಯಾಗಿದೆ. ವಶೀಲಿಬಾಜಿ

ಭಾರತ ಸರ್ಕಾರದ ನಿವೃತ್ತ ಕಾರ್ಯದರ್ಶಿ  ಇ.ಎ.ಎಸ್. ಶರ್ಮಾ ಅವರು ಕೇಂದ್ರ ಕಂದಾಯ ಕಾರ್ಯದರ್ಶಿ ಅರವಿಂದ್ ಶ್ರೀವಾಸ್ತವ ಅವರಿಗೆ ಈ ಬಗ್ಗೆ ಪತ್ರ ಬರೆದು, ಈ ಆರೋಪದ ಬಗ್ಗೆ ತನಿಖೆ ನಡೆಸಬೇಕು ಮತ್ತು  ಅದರ ಈ ಹಣವು ನಮ್ಮ ದೇಶದ ತೆರಿಗೆಗಳನ್ನು ಕಟ್ಟಲು ಬಾಧ್ಯವಾಗಿಲ್ಲವೇ ಎಂದು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತನಿಖೆ ನಡೆಸಬೇಕು ಎಂದು ಕೇಳಿದ್ದಾರೆ.

ಯುಎಸ್‍ನ  ಒಂದು ಪ್ರಮುಖ ವಶೀಲಿ(ಲಾಬಿ) ಕಂಪನಿ ಸ್ಕ್ವೈರ್ ಪ್ಯಾಟನ್ ಬಾಗ್ಸ್(ಎಸ್‍ಪಿಬಿ) ಅಮೆರಿಕದ ಸೆನೆಟ್‌ಗೆ ಸಾರ್ವಜನಿಕವಾಗಿ ತಿಳಿಯಪಡಿಸಿರುವ ಪ್ರಕಾರ ಅರೆಸ್ಸೆಸ್‍ ಆ ಕಂಪನಿಯನ್ನು ಸಾರ್ವಜನಿಕ ಹುದ್ದೆಗಳಲ್ಲಿ ಇರುವವರೊಂದಿಗೆ ಅಂದರೆ ಅಲ್ಲಿನ ಸರಕಾರೀ ಅಧಿಕಾರಿಗಳ ನಡುವೆ ತನ್ನ ಪರವಾಗಿ ವಶೀಲಿಬಾಜಿಯಲ್ಲಿ  ತೊಡಗಿಸಿಕೊಂಡಿದೆ ಎಂಬ ಸುದ್ದಿಯನ್ನು ಉಲ್ಲೇಖಿಸುತ್ತ ಶರ್ಮಾರವರು  ಈ ವರ್ಷ ಆ ವಶೀಲಿ ಕಂಪನಿಗೆ ಮತ್ತೊಂದು ವಶೀಲಿ ಕಂಪನಿಯು ಆರ್‌ಎಸ್‌ಎಸ್ ಪರವಾಗಿ 330,000 ಡಾಲರ್‍ ಪಾವತಿಸಿದೆ ಎಂಬ ವರದಿಯನ್ನು ಸಹ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮೈಸೂರು ವಿ ವಿಯ ವಿದ್ಯಾರ್ಥಿನಿಲಯಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಎಸ್‌ ಎಫ್‌ ಐ ಪ್ರತಿಭಟನೆ

ಭಾರತದಲ್ಲಿ ನೋಂದಾಯಿಸದ ಮತ್ತು  ತನ್ನ ಸದಸ್ಯರು ನೀಡುವ ದೇಣಿಗೆಗಳು ಅಥವಾ “ಗುರು ದಕ್ಷಿಣೆ”ಗಳಿಂದ ಮಾತ್ರವೇ  ಹಣವನ್ನು ಪಡೆಯುತ್ತಿದೆ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್ ಅಮೆರಿಕದಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಪಾವತಿಸುವ ಸ್ಥಿತಿಯಲ್ಲಿರುವುದು “ಆಶ್ಚರ್ಯಕರ” ಎಂದು ಶರ್ಮಾ ಹೇಳಿದ್ದಾರೆ.

“ಆರ್‌ಎಸ್‌ಎಸ್ ಭಾರತದಲ್ಲಿ ನೋಂದಾಯಿಸದಿದ್ದರೆ, ಅದು ತನ್ನ ಹೆಸರಿನಲ್ಲಿ ಡಾಲರ್‌ಗಳನ್ನು ಯುಎಸ್ ಲಾಬಿ ಸಂಸ್ಥೆಗೆ ಹೇಗೆ ಪಾವತಿಸಿದೆ? ಯುಎಸ್‌ನಲ್ಲಿ ಯಾವುದೋ ಕಾನೂನಿನಡಿಯಲ್ಲಿ ಆರ್‌ಎಸ್‌ಎಸ್ ನೋಂದಾಯಿಸಲ್ಪಟ್ಟಿದೆಯೇ? “ಗುರು ದಕ್ಷಿಣ” ಎಂದು ಕರೆಯಲ್ಪಡುವ ಹಣ ಮಾತ್ರವೇ ಆರ್‌ಎಸ್‌ಎಸ್‌ ಗೆ ನಿಧಿಯ ಮೂಲವಾಗಿದ್ದರೆ, ಆ ಸಂಸ್ಥೆಯು ಅಂತಹ ಗುರುದಕ್ಷಿಣೆಯ ನಿಧಿಯ ಒಂದು ಭಾಗವನ್ನು ವಿದೇಶಿ ಲಾಬಿ ಸಂಸ್ಥೆಗೆ ಕೊಡಮಾಡುವುದು  ಸೂಕ್ತವೇ?” ಎಂದು ಶರ್ಮಾ ತಮ್ಮ ಪತ್ರದಲ್ಲಿ ಕೇಳಿದ್ದಾರೆ.

“ಸನಾತನ ಧರ್ಮದ ವ್ಯಾಖ್ಯಾನದ ಪ್ರಕಾರ, “ಗುರು ದಕ್ಷಿಣೆ’ ಎಂದರೆ ಒಬ್ಬ ಶಿಷ್ಯನು ತಾನು ಪಡೆದ ಜ್ಞಾನಕ್ಕೆ ಕೃತಜ್ಞತೆ ಸಲ್ಲಿಸಲು ಗುರುವಿಗೆ ಸಲ್ಲಿಸುವ ಕಾಣಿಕೆ ಅಥವಾ ಶುಲ್ಕ. ‘ಗುರು ದಕ್ಷಿಣೆ’ಯನ್ನು ನೀಡುವ ಮೂಲಕ ಆರ್‌ಎಸ್‌ಎಸ್‌ಗೆ ಹಣಕಾಸು ಒದಗಿಸಿದ “ಶಿಷ್ಯರು”ಗಳಿಗೆ  ತಾವು ಆರ್‌ಎಸ್‌ಎಸ್ ಗುರುಗಳಿಗೆ ಕೃತಜ್ಞತೆಯಾಗಿ ಸಲ್ಲಿಸಿದ ಹಣದಲ್ಲಿ ಒಂದು ಭಾಗವನ್ನು ಅಮೆರಿಕದಲ್ಲಿ ಲಾಬಿ ಮಾಡಲು ವಿದೇಶಿ ಸಂಸ್ಥೆಯೊಂದಕ್ಕೆ  ವರ್ಗಾಯಿಸಲಾಗಿದೆ ಎಂದು ತಿಳಿದಿದೆಯೇ?” ಎಂದೂ ಇ ಎ ಎಸ್ ಶರ್ಮರವರು ಕೇಳಿದ್ದಾರೆ.

ನಾಲ್ಕು ಪ್ರಶ್ನೆಗಳು

ಹಿಂದೆ, ಆದಾಯ ತೆರಿಗೆ ನ್ಯಾಯಮಂಡಳಿಗಳು, ಆರ್‌ಎಸ್‌ಎಸ್‌ನ ನಿಧಿಗಳ ಮೇಲಿನ ತೆರಿಗೆ ಬಾಧ್ಯತೆಯನ್ನು ನಿರ್ಣಯಿಸುವಾಗ, “ಗುರು ದಕ್ಷಿಣೆಯ ವಿಚಾರದ ಹಿಂದಿರುವ ನಿಜವಾದ ಕೃತಜ್ಞತಾ ಭಾವವನ್ನು” ಮೆಚ್ಚಿಕೊಳ್ಳುತ್ತ ಆರ್‌ಎಸ್‌ಎಸ್ ಸಂಗ್ರಹಿಸಿದ ನಿಧಿಗಳಿಗೆ ತೆರಿಗೆ ವಿನಾಯಿತಿ ನೀಡಿದ್ದವು. ಆದರೆ, ಗುರುಗಳು ಆ ನಿಧಿಯ ಒಂದು ಭಾಗವನ್ನು ಒಂದು ವಿದೇಶಿ ಸರ್ಕಾರದೊಂದಿಗೆ ಲಾಬಿ ಮಾಡಲು ಒಂದು ವಿದೇಶಿ ಸಂಸ್ಥೆಗೆ ಪಾವತಿಸುವತ್ತ  ತಿರುಗಿಸಿದಾಗ, ‘ಲಾಬಿ’ ಮಾಡುವುದು ಎಂದರೆ ವಿದೇಶಿ ಸಾರ್ವಜನಿಕ ಹುದ್ದೆಗಳಲ್ಲಿರುವವರಿಗೆ ’ಶಿಕ್ಷಣ’ ನೀಡುವುದು ಎಂದು ವ್ಯಾಖ್ಯಾನಿಸಬಹುದಾದರೆ, ಅಂತಹ ನಿಧಿಗಳ ಸ್ವರೂಪವೇ  ಸಂಪೂರ್ಣವಾಗಿ ಬದಲಾವಣೆಗೆ ಒಳಗಾಗುತ್ತದೆ ಎಂದು ಅವರು ತಮ್ಮ ಪತ್ರದಲ್ಲಿ ಹೇಳುತ್ತಾರೆ.

ಹೀಗಿರುವಾಗ ಸಿಬಿಡಿಟಿ ಈ ಕೆಳಗಿನ ಪ್ರಶ್ನೆಗಳಿಗೆ ಆರೆಸ್ಸೆಸ್‍ನಿಂದ ಉತ್ತರ ಕೇಳಬೇಕಲ್ಲವೇ ಎಂದು ಶರ್ಮ ಪ್ರಶ್ನಿಸುತ್ತಾರೆ:

  • ಯುಎಸ್ ಸೆನೆಟ್‌ಗೆ ವಶೀಲಿ ಕಂಪನಿ ಸಾರ್ವಜನಿಕವಾಗಿ ತಿಳಿಯಪಡಿಸಿದ ಮಾಹಿತಿಯಲ್ಲಿ ಆರೆಸ್ಸೆಸ್‍ನ ಪ್ರಸ್ತಾಪ ಹೇಗೆ ಬಂತು?
  • ಆರೆಸ್ಸೆಸ್ಯುಎಸ್‌ನಲ್ಲಿ ಯಾವುದೇ ರೀತಿಯಲ್ಲಿ ನೋಂದಾಯಿಸಲ್ಪಟ್ಟಿದೆಯೇ ಮತ್ತು ಯುಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರಬಹುದಾದ ತನ್ನ ಶಾಖೆಯ ಅಸ್ತಿತ್ವದ ಬಗ್ಗೆ ಸಿಬಿಡಿಟಿಗೆ ತಿಳಿಸಿದೆಯೇ?
  • ಅದು ತನ್ನ ಗುರುದಕ್ಷಿಣೆಯ ನಿಧಿಯನ್ನು ಯುಎಸ್‌ನಲ್ಲಿರುವ ಲಾಬಿ ಸಂಸ್ಥೆಗೆ ಹೇಗೆ ವರ್ಗಾಯಿಸಲು ಸಾಧ್ಯವಾಯಿತು ಮತ್ತು
  • ಅಂತಹ ನಿಧಿ ವರ್ಗಾವಣೆ ಭಾರತೀಯ ನಿಯಂತ್ರಕ ಅಧಿಕಾರಿಗಳ ದೃಷ್ಟಿಯಿಂದ ಕಾನೂನು ಪ್ರಕಾರ ಮಾನ್ಯವಾದ ಪ್ರಕ್ರಿಯೆಯ ಮೂಲಕ ನಡೆದಿದೆಯೇ?

ಅಮೆರಿಕ ಮೂಲದ ಸುದ್ದಿ ಸಂಸ್ಥೆ ಪ್ರಿಸಮ್, ಅಮೆರಿಕ ಸರ್ಕಾರಕ್ಕೆ ಸಲ್ಲಿಸಿದ ಲಾಬಿ ಮಾಹಿತಿಯ ಪ್ರಕಾರ, 2025 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಸ್ಕ್ವೈರ್ ಪ್ಯಾಟನ್ ಬಾಗ್ಸ್ (ಎಸ್‌ಪಿಬಿ)ಗೆ ಜನವರಿ-ಮಾರ್ಚ್ ನಲ್ಲಿ 1,20,000 ಡಾಲರ್, ಎಪ್ರಿಲ್-ಜೂನ್‍ ಅವಧಿಯಲ್ಲಿ 1,00,000 ಡಾಲರ್ ಮತ್ತು ಜುಲೈ-ಸಪ್ಟಂಬರ್‍ ನಲ್ಲಿ 1,10,000 ಡಾಲರ್, ಅಂದರೆ ಯುಎಸ್ ಸೆನೆಟ್ ಮತ್ತು ಪ್ರತಿನಿಧಿಗಳ ಸಭೆಯ ಮುಂದೆ ಆರ್‌ಎಸ್‌ಎಸ್‌ನ ಹಿತಾಸಕ್ತಿಗಳನ್ನು ಪ್ರತಿನಿಧಿಸಲು 3,30,000 ಡಾಲರ್ ಪಾವತಿಸಲಾಗಿದೆ ಎಂದು ವರದಿ ಮಾಡಿದೆ.

ಇದೇ ಸಂದರ್ಭದಲ್ಲಿ ಪಾಕಿಸ್ತಾನ ಬಹು ಮಿಲಿಯನ್ ಡಾಲರ್ ಲಾಬಿಗಳಿಂದಾಗಿ  ಟ್ರಂಪ್ ಆಡಳಿತದಿಂದ ತನ್ನ ಪರವಾಗಿ ಗಮನಾರ್ಹ ನೀತಿ ಬದಲಾವಣೆಯನ್ನು ಪಡೆಯಿತು. ಅದರ ಮೇಲಿನ ಆಮದು ಸುಂಕವನ್ನು 29% ರಿಂದ 19% ಕ್ಕೆ ಇಳಿಸಲಾಯಿತು. ಅದೇ ಅವಧಿಯಲ್ಲಿ, ಅಮೆರಿಕ ಭಾರತದ ಮೇಲಿನ ಸುಂಕವನ್ನು 50% ಕ್ಕೆ ಹೆಚ್ಚಿಸಿತು ಎಂದು ಒಂದು ನ್ಯೂಯಾರ್ಕ್‍ ಟೈಮ್ಸ್ ವರದಿ ಗಮನಿಸಿದೆ.

ಅಪಾಯಕಾರೀ ಮಾದರಿ -ಪ್ರಧಾನಿಗಳ ಮೌನ

ಎಂದಿನಂತೆ ಪ್ರಿಸಂನ ತನಿಖೆ ಪ್ರಕಟವಾದ ನಂತರ, ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ “ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರತದಲ್ಲಿ ಕೆಲಸ ಮಾಡುತ್ತದೆ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಯಾವುದೇ ಲಾಬಿ ಸಂಸ್ಥೆಯನ್ನು ತೊಡಗಿಸಿಕೊಂಡಿಲ್ಲ” ಎಂದು ಹೇಳಿದ್ದಾರೆ. ಆದರೆ ಯುಎಸ್‍ ಸರಕಾರಕ್ಕೆ  ಸಲ್ಲಿಸಲ್ಪಟ್ಟಿರುವ ದಸ್ತಾವೇಜುಗಳು ಬೇರೆಯೇ ಕತೆ ಹೇಳುತ್ತವೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ.

ಆರೆಸ್ಸೆಸ್‍ ಭಾರತದಲ್ಲಿ ನೋಂದಣಿ ಹೊಂದಿಲ್ಲ, ತೆರಿಗೆ ಕಟ್ಟುವುದಿಲ್ಲ, ಆದರೆ ಯುಎಸ್‍ ಸರಕಾರಕ್ಕೆ ಸಲ್ಲಿಸಿರುವ ದಸ್ತಾವೇಜುಗಳಲ್ಲಿ  ಅದರ ಹೆಸರು ಬರುತ್ತದೆ,  ಯುಎಸ್‍ ಅಧಿಕಾರಿಗಳ ನಡುವೆ  ವಶೀಲಿಬಾಜಿಗೆ ಲಕ್ಷಾಂತರ ಡಾಲರುಗಳನ್ನು ಸುರಿಯುತ್ತದೆ. ಇಷ್ಟೊಂದು ಹಣ ಅದಕ್ಕೆ ಎಲ್ಲಿಂದ ಬರುತ್ತದೆ? ಜಾರಿ ನಿರ್ದೇಶನಾಲಯ(ಇ.ಡಿ.)ವಾಗಲೀ, ಆದಾಯ ತೆರಿಗೆ ಇಲಾಖೆಯಾಗಲೀ ಈ ಬಗ್ಗೆ ತನಿಖೆ ನಡೆಸುತ್ತಿಲ್ಲವೇಕೆ?  ಇತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಎದ್ದಿವೆ.

ಅಲ್ಲದೆ ಮೊದಲಿಂದಲೂ ಅಮೆರಿಕಾ-ಪರವಾಗಿರುವ ಆರೆಸ್ಸೆಸ್‍, ಅಲ್ಲಿ ತನ್ನ ಪರವಾಗಿ ಅದೇ ದೇಶದಲ್ಲಿ ಯಾವುದಕ್ಕಾಗಿ ವಶೀಲಿಬಾಜಿ ನಡೆಸುತ್ತಿದೆ ಎಂಬ ಪ್ರಶ್ನೆಯೂ ಎದ್ದಿದೆ. ಇದನ್ನು ಪರಿಶೀಲಿಸುತ್ತ  ದೇಶದ ಸಾರ್ವಜನಿಕ ಚಿಂತಕರಲ್ಲಿ ಒಬ್ಬರಾದ ಪ್ರೊ. ರಾಮ್‍ ಪುನಿಯಾನಿ, ಇದಕ್ಕೆ ಭಾರತ ಕೆಲವೊಮ್ಮೆ ತನ್ನ ವಿದೇಶಾಂಗ ಧೋರಣೆಯಲ್ಲಿ ಅಮೆರಿಕಾದ ಲೈನನ್ನು ಅನುಸರಿಸದಿರುವುದು ಒಂದು ಕಾರಣವಾಗಿರಬಹುದಾದರೆ, ಅದಕ್ಕಿಂತಲೂ ಹೆಚ್ಚಾಗಿ, ಅಮೆರಿಕಾದಲ್ಲಿ ಅಲ್ಲಿನ ಪ್ರಭುತ್ವದ ನಿಯಂತ್ರಣವನ್ನು ಮೀರಿ ಕೆಲಸ ಮಾಡುವ, ವಿಶ್ವಾದ್ಯಂತ ಮಾನವ ಹಕ್ಕುಗಳನ್ನು ವೀಕ್ಷಿಸುತ್ತಿರುವ  ಹಲವು ಸಂಸ್ಥೆಗಳು, ಸಂಘಟನೆಗಳು ಆರೆಸ್ಸೆಸ್‍ನ ಸಮಾನತಾ-ವಿರೋಧಿ ನಿಲುವನ್ನು ಬೊಟ್ಟು ಮಾಡಿ ತೋರಿಸುತ್ತಿರುವಾಗ ಇಂತಹ ವಶೀಲಿಬಾಜಿ ನಡೆಸುವ ಅಗತ್ಯ ಅದಕ್ಕೆ ಬಂದಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಹೇಳುತ್ತಾರೆ.

 ಅದೇನೇ ಇರಲಿ, ಆರೆಸ್ಸೆಸ್‍ ಈ ಮೂಲಕ ಒಂದು ಅಪಾಯಕಾರೀ ಮಾದರಿಯನ್ನು ಹಾಕಿಕೊಡುತ್ತಿದೆ. ಇದನ್ನು ಅನುಸರಿಸಿ ವಿದೇಶೀ ನಿಧಿಗಳನ್ನು ಪಡೆಯುತ್ತಿರುವ ಇತರ ತೀವ್ರಗಾಮಿ ಮತೀಯ , ಪ್ರಾದೇಶಿಕ ಸಂಘಟನೆಗಳೂ  ಅಮೆರಿಕಾದಲ್ಲಿ ಈ ರೀತಿಯಲ್ಲಿ ವಶೀಲಿಬಾಜಿಗೆ ಇಳಿದರೆ, ಅಲಲ್ಇ ವಾಶಿಂಗ್ಟನ್ನಿನಲ್ಲಿ ಉಂಟಾಗುವ ಲಾಬಿ ಸ್ಪರ್ಧೆ ಅಂತಿಮವಾಗಿ ನಮ್ಮ ದೇಶದ ಹಿತಾಸಕ್ತಿಗಳಿಗೆ , ನಮ್ಮ ಜಾಗತಿಕ ಪ್ರತಿಷ್ಠೆಗೆ ಕುಂದು ತರುತ್ತದೆ ಎಂಬ ಆತಂಕವನ್ನು ಇನ್ನು ಕೆಲವು ವೀಕ್ಷಕರು ವ್ಯಕ್ತಪಡಿಸುತ್ತಿದ್ದಾರೆ.

ಇಷ್ಟೇ ಅಲ್ಲ, ತಾನೊಂದು ಮಹಾದೇಶಭಕ್ತ ರಾಷ್ಟ್ರವಾದಿ ಸಂಘಟನೆಯೆನ್ನುವ ಆರೆಸ್ಸೆಸ್ ಅದು ಬಹುವಾಗಿ ದ್ವೇಷಿಸುವ ಪಾಕಿಸ್ತಾನ ಸಂಬಂಧವಿಟ್ಟುಕೊಂಡಿರುವ ವಶೀಲಿಬಾಜಿ ಕಂಪನಿಯೊಂದಿಗೇ ತಾನೂ ಸಂಬಂಧವಿಟ್ಟುಕೊಂಡಿದೆ ಎಂಬುದು ಅದರ ಸಮಯಸಾಧಕತನವನ್ನು ತೋರಿಸುವುದಿಲ್ಲವೇ? ಇತ್ತೀಚೆಗಷ್ಟೇ ನಮ್ಮ ಪ್ರಧಾನ ಮಂತ್ರಿಗಳು ಜಗತ್ತಿನ ಅತಿದೊಡ್ಡ ಸರಕಾರೇತರ ಸಂಘಟನೆ ಎಂದು ಹಾಡಿಹೊಗಳಿದ್ದಾರೆ. ಸ್ವತಃ ಒಬ್ಬ ಆರೆಸ್ಸೆಸ್‍ ಸದಸ್ಯರೂ ಆಗಿರುವ ಅವರು ಈಬಗ್ಗೆ ಮೌನವಾಗಿದ್ದಾರೆ. ಅವರಿಗೆ ಇರುವ ಭಯವಾದರೂ ಏನು ಎಂದು  ಇನ್ನು ಕೆಲವು ರಾಜಕೀಯ ವೀಕ್ಷಕರು ಆಶ್ಚರ್ಯಪಡುತ್ತಿದ್ದಾರೆ.

ಇದನ್ನೂ ನೋಡಿ: ಜನಸಾಮಾನ್ಯರ ಬದುಕಿನಲ್ಲಿ ಪರಿವರ್ತನೆ ತಂದ ನಾಟಕಕಾರ ಪಿ.ಬಿ.ಧುತ್ತರಗಿ Janashakthi Media

Donate Janashakthi Media

Leave a Reply

Your email address will not be published. Required fields are marked *