19 ಲಕ್ಷ ಕೋಟಿ ರೂ. ರೈಟ್‌ಆಫ್+10 ಲಕ್ಷ ಕೋಟಿ ರೂ. ಹೇರ್‌ಕಟ್!

ಕಾರ್ಪೊರೇಟ್ ಕುಳಗಳ ‘ಕೆಟ್ಟ ಸಾಲ’ಗಳಿಗೆ ಸರಕಾರೀ ಪರಿಹಾರ!

ಝೀ ಸಮೂಹದ ʼಕೆಟ್ಟಸಾಲʼಗಳಲ್ಲಿ ಹಣಕಾಸು ಸಂಸ್ಥೆಗಳಿಗೆ  99.97% ಚೌರದ ಪ್ರಕರಣ ಈಗ ದೊಡ್ಡ ಸುದ್ದಿಯಾಗಿರುವುದು ಇಂತಹ ಮೋಸದ ಇತ್ಯರ್ಥಗಳಿಗೆ ಕಾನೂನಿನ ಮಾನ್ಯತೆ ನೀಡುವ ಒಂದು ವ್ಯವಸ್ಥೆಯನ್ನು ಬಯಲಿಗೆಳೆದಿದೆ. ಸದ್ಯ ಇದಕ್ಕೆ ತಡೆಯಾಜ್ಞೆ ಬಂದಿರುವುದಾದರೂ, ಅದು ಇದರ ಹಿಂದಿರುವ ಸಂರಚನಾ ದೋಷಗಳನ್ನು ಪರಿಹರಿಸಲಾರದು, 2016ರಿಂದ ಐಬಿಸಿ ಮಾಡಿರುವ ಇಂತಹ ಪ್ರತಿಯೊಂದು ಇತ್ಯರ್ಥದ ಒಂದು ಸಮಗ್ರ ಸಾರ್ವಜನಿಕ ಮತ್ತು ಸ್ವತಂತ್ರ ತನಿಖೆ ಆಗಬೇಕಾಗಿದೆ . ಈ  ಹೇರ್‌ಕಟ್‌ಗಳು ಕಾರ್ಪೊರೇಟ್ ಸಾಲಗಾರರ ಬ್ಯಾಲನ್ಸ್ ಶೀಟುಗಳನ್ನು ‘ಶುದ್ಧಗೊಳಿಸುʼವುದಕ್ಕೆ  ಸರಕಾರೀ ನೆರವಿನ ಸಾಧನಗಳಾಗುವುದನ್ನು ತಡೆಯಲು ಕಟ್ಟುನಿಟ್ಟಾದ ಗರಿಷ್ಟ ಮಿತಿಗಳನ್ನು ಮತ್ತು ಪಾರದರ್ಶಕತೆಯನ್ನು ತರಬೇಕು ಎಂದು ಬಿಇಎಫ್‌ಐ ಅಧ್ಯಕ್ಷರು ಹೇಳುತ್ತಾರೆ. 19 ಲಕ್ಷ
ಸಂಗ್ರಹ: ಕೆ.ವಿ.

ಝೀ ಸಮೂಹದ ಸಂಸ್ಥಾಪಕ ಮತ್ತು ಅಧ್ಯಕ್ಷ ಸುಭಾಷ್‌ಚಂದ್ರ ರವರ 22,006.57 ಕೋಟಿ ರೂ.ಗಳ ಸಾಲಗಳಿಗೆ ಪ್ರತಿಯಾಗಿ ಕೇವಲ 6.5 ಕೋಟಿ ರೂ.ಗಳ ಮರುಪಾವತಿ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮಂಜೂರಾತಿ ನೀಡಿದ ಸುದ್ದಿಯ ಬಗ್ಗೆ ವ್ಯಕ್ತಪಟ್ಟ ವ್ಯಾಪಕ ಆಕ್ರೋಶದ ಪರಿಣಾಮವಾಗಿ  ಎನ್‌ಸಿಎಲ್‌ಟಿಯ ಅಧ್ಯಕ್ಷರು ಐವರುಸದಸ್ಯರ ಒಂದು ವಿಶೇಷ ಪೀಠವನ್ನು ರಚಿಸುವ ಅಭೂತಪೂರ್ವ ಕ್ರಮವನ್ನು ಕೈಗೊಳ್ಳಬೇಕಾಯಿತು. ಆ ಪೀಠ  ಸದ್ಯಕ್ಕೆ ಆಳುವ ಪಕ್ಷದ ಬೆಂಬಲ ಪಡೆದಿರುವ ಈ ಭಾರೀ ಕುಳಕ್ಕೆ ನೀಡಿರುವ ಭಾರೀ ಬಕ್ಷೀಸಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಆದರೆ ಗಮನಿಸಬೇಕಾದ ಸಂಗತಿಯೆಂದರೆ, ‘ನ ಖಾವೂಂಗಾ, ನಾ ಖಾನೇ ದೂಂಗ’ ಸರಕಾರ 2016ರಲ್ಲಿ  ‘ದಿವಾಳಿತನ ಮತ್ತು ಶೂನ್ಯತೆ ಸಂಹಿತೆ’ (ಐಬಿಸಿ-ಇನ್‌ಸಾಲ್ವೆನ್ಸಿ ಅಂಡ್ ಬ್ಯಾಂಕ್ರಪ್ಟ್ಸಿಕೋಡ್)ಯನ್ನು ರೂಪಿಸಿದ್ದೇ ಇಂತಹ ಅಗಾಧ ಪ್ರಮಾಣದ ಹಣಕಾಸು ಲೂಟಿಗಾಗಿಯೋ  ಎಂಬ ಸಂದೇಹ ಇದಕ್ಕೆ ಮೊದಲೇ ಮೂಡಿತ್ತು.  ಈಗಷ್ಟೇ ಈ ಬಗ್ಗೆ ಸಾಲನೀಡಿದ ಹಣಕಾಸು ಸಂಸ್ಥೆಗಳು ಇದರ ವಿರುದ್ಧ ದೂರು ನೀಡಿರುವುದಕ್ಕೆ  ಈ ಆದೇಶದಲ್ಲಿ ನೀಡಿದ ಅಭೂತಪೂರ್ವ 99.97% ‘ಚೌರ’(ಹೇರ್‌ಕಟ್) ಒಂದು ಕಾರಣವಾಗಿರಬಹುದಷ್ಟೇ ಎನ್ನಲಾಗಿದೆ. ಈ ‘ಹೇರ್‌ಕಟ್’ ಎನ್ನುವುದು ಬ್ಯಾಂಕಿAಗ್ ಭಾಷೆಯಲ್ಲಿ ಸಾಲ ನೀಡಿದ ಹಣಕಾಸು ಸಂಸ್ಥೆ ಅನುಭವಿಸುವ ನಷ್ಟದ ಪ್ರಮಾಣ.

ಕಾರ್ಪೊರೇಟ್ ಆಸ್ತಿ ಸಂಚಯದ ‘ಹೇರ್‌ಕಟ್’ ದಾರಿ

ಐದು ವರ್ಷಗಳ ಹಿಂದೆ ಜೂನ್ 2021ರಲ್ಲಿ ವಿಡಿಯೋಕೋನ್ ಕಂಪನಿಯನ್ನು ವೆದಾಂತ ಸಮೂಹಕ್ಕೆ ವರ್ಗಾಯಿಸಿದಾಗ 5 ಸಾರ್ವಜನಿಕ ವಲಯದ ಬ್ಯಾಂಕುಗಳು ಒಟ್ಟಾಗಿ 95.43% ‘ಚೌರ’ವನ್ನು ಅನುಭವಿಸಿದವು. ವಿಡಿಯೋಕೋನ್ ಮರುಪಾವತಿ ಮಾಡಬೇಕಿದ್ದ ಒಟ್ಟು ಸಾಲ ರೂ.64,838 ಕೋಟಿ. ಅದಕ್ಕೆ ಪ್ರತಿಯಾಗಿ ಕೇವಲ ರೂ.2962 ಕೋಟಿ ರೂ. ತೆತ್ತು  ವೆದಾಂತ ಸಮೂಹ ಅದನ್ನು ಪಡೆದುಕೊಂಡಿತು ಎಂಬುದನ್ನು ಬ್ಯಾಂಕ್ ನೌಕರರ ಸಂಘಟನೆ ಬಿಇಎಫ್‌ಐ ಅಧ್ಯಕ್ಷ ಎಸ್ ಎಸ್ ಅನಿಲ್ ಈ ಸಂದರ್ಭದಲ್ಲಿ ನೆನಪಿಸಿದ್ದಾರೆ.

ಈ ಪ್ರಕರಣದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯ ತಾನು ಕೊಟ್ಟ ೧೧೧೫೧ ಕೋಟಿ ರೂ. ಸಾಲದಲ್ಲಿ  ಪಡೆದದ್ದು ಕೇವಲ ರೂ. ೫೪೫ ಕೋಟಿ ಕಳೆದುಕೊಂಡದ್ದು ರೂ.೧೦೬೦೬ ಕೋಟಿ. ಅದೇ ರೀತಿ, ಯೂನಿಯನ್‌ ಬ್ಯಾಂಕ್‌  ನೀಡಿದ ಸಾಲ ರೂ. ೫೬೦೦ ಕೋಟಿ ಪಡೆದದ್ದು ರೂ.೨೭೪ ಕೋಟಿ; ನಷ್ಟ ರೂ.೫೩೨೬ ಕೋಟಿ. ಸೆಂಟ್ರಲ್‌ ಬ್ಯಾಂಕ್ ಆಫ್‌ ಇಂಡಿಯ:ಸಾಲ ರೂ. ೫೨೦೭ ಕೋಟಿ ಪಡೆದದ್ದು ರೂ.೨೫೫ ಕೋಟಿ; ನಷ್ಟ ರೂ.೪೯೫೨ಕೋಟಿ. ಬ್ಯಾಂಕ್‌ ಆಫ್‌ ಬರೋಡ : ಸಾಲ ರೂ. ೪೨೮೧ಕೋಟಿ; ಪಡೆದದ್ದು ರೂ.೨೦೯ ಕೋಟಿ; ನಷ್ಟ ರೂ.೪೦೭೨ ಕೋಟಿ. ಕೆನರಾ ಬ್ಯಾಂಕ್‌  : ಸಾಲ ರೂ. ೩೬೭೪ಕೋಟಿ ; ಪಡೆದದ್ದು ರೂ.೧೮೦ ಕೋಟಿ; ನಷ್ಟ ರೂ.೩೪೯೪ ಕೋಟಿ.(Bank Loot as ‘Haircuts’: The Grand Feast IBC Offers Corporates, S S Anil , People’s Democracy, Sept 6,2026)

ಸಾಮಾನ್ಯ ನಾಗರಿಕರ ಠೇವಣಿಗಳಿಂದ ಬೆಳೆದಿರುವ ಸಾರ್ವಜನಿಕ ಹಣಕಾಸು ಸಂಸ್ಥೆಗಳು ಈ ‘ಹೇರ್‌ಕಟ್’ಗಳನ್ನು, ಅಂದರೆ ಭಾರೀ ನಷ್ಟಗಳನ್ನು ಅನುಭವಿಸಿದರೆ, ಖಾಸಗಿ ಕಾರ್ಪೊರೇಟ್‌ಗಳು ಆ ನಷ್ಟಗಳನ್ನು ತಮ್ಮ ಆಸ್ತಿಗಳಾಗಿ ಪರಿವರ್ತಿಸಿಕೊಂಡಿವೆ.

ಈ ಐಬಿಸಿ ಚೌಕಟ್ಟು ಪ್ರಬಲ ಕಾರ್ಪೊರೇಟ್ ಸಮೂಹಗಳು ‘ಕೆಟ್ಟ ಸಾಲ’ಗಳಲ್ಲಿ ಒಂದು ಸಣ್ಣ ಭಾಗವನ್ನು ತೆತ್ತು ಸುಸ್ತಿದಾರ ಕಂಪನಿಯನ್ನು ಅಗ್ಗದಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಅನುವು ಮಾಡಿಕೊಟ್ಟಿರುವುದು ಕಂಡು ಬಂದಿದೆ ಎನ್ನುತ್ತಾರೆ ಅವರು. ಇದಕ್ಕೆ ಇನ್ನೊಂದು ಉದಾಹರಣೆ ಎಂದರೆ, ಅದಾನಿ ಸಮೂಹದ ಕಂಪನಿಗಳು 10 ಸುಸ್ತಿದಾರ ಕಂಪನಿಗಳ 61,832 ಕೋಟಿ ರೂ.ಗಳ ಸಾಲದಲ್ಲಿ  15,977 ಕೋಟಿ ರೂ.ಗಳನ್ನು ಬ್ಯಾಂಕುಗಳಿಗೆ ಚುಕ್ತಾ ಮಾಡಿ ಸ್ವಾಧೀನ ಪಡಿಸಿಕೊಂಡವು. ಸಾಮಾನ್ಯ ನಾಗರಿಕರ ಠೇವಣಿಗಳಿಂದ ಬೆಳೆದಿರುವ ಸಾರ್ವಜನಿಕ ಹಣಕಾಸು ಸಂಸ್ಥೆಗಳು ಈ ‘ಹೇರ್‌ಕಟ್’ಗಳನ್ನು, ಅಂದರೆ ಭಾರೀ ನಷ್ಟಗಳನ್ನು ಅನುಭವಿಸಿದರೆ, ಖಾಸಗಿ ಕಾರ್ಪೊರೇಟ್‌ಗಳು ಆ ನಷ್ಟಗಳನ್ನು ತಮ್ಮ ಆಸ್ತಿಗಳಾಗಿ ಪರಿವರ್ತಿಸಿಕೊಂಡಿವೆ. 19 ಲಕ್ಷ 

ಇದನ್ನೂ ಓದಿ : ರೈಲು ತಾಂತ್ರಿಕ ದೋಷ: ಪರೀಕ್ಷೆ ತಪ್ಪಿಸಿಕೊಂಡವರಿಗೆ ಮರುಪರೀಕ್ಷೆ ನಡೆಸಿ – ಡಿವೈಎಫ್ಐ

ಸಾಲಮನ್ನಾ+ಚೌರ!

ಅನಿಲ್ ಅವರು ಈ ಸಂದರ್ಭದಲ್ಲಿ ಇನ್ನೊಂದು ಮಹತ್ವದ ಅಂಶವನ್ನೂ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ. 2015-16 ರಿಂದ 2025-26 ರ ನಡುವೆ  ವಾಣಿಜ್ಯ ಬ್ಯಾಂಕುಗಳ ಒಟ್ಟು ರೂ. 18,76,593 ಕೋಟಿ ‘ಕೆಟ್ಟ ಸಾಲ’ ಗಳನ್ನು ಅಧಿಕೃತವಾಗಿ ‘ರೈಟ್ ಆಫ್’ ಮಾಡಲಾಗಿದೆ, ಅಂದರೆ ಬ್ಯಾಂಕುಗಳ ಲೆಕ್ಕಪುಸ್ತಕಗಳಿಂದ ತೆಗೆಯಲಾಗಿದೆ- ಎಂದು ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಲಾಗಿದೆ. ಆದರೆ ಈ ‘ಸಾಲಮನ್ನಾ’ದಲ್ಲಿ ಮೇಲೆ ಹೇಳಿದ ‘ಚೌರ’ಗಳು ಸೇರಿಲ್ಲ ! ರಿಜರ್ವ್ ಬ್ಯಾಂಕ್ ಅಥವ ಹಣಕಾಸು ಮಂತ್ರಾಲಯ ಐಬಿಸಿ ಅಡಿಯಲ್ಲಿ ನ ‘ಹೇರ್ ಕಟ್’ಗಳನ್ನು ಅಧಿಕೃತ ‘ರೈಟ್ ಆಫ್’ ಎಂದು ಪರಿಗಣಿಸುವುದಿಲ್ಲವಂತೆ. ಐಬಿಸಿ ರಚನೆಯಾದಂದಿನಿಂದ ಅದು ರೂ. 14.14 ಲಕ್ಷ ಕೋಟಿ ರೂ.ಗಳ ಮೊತ್ತದ 1419 ‘ಕೆಟ್ಟಸಾಲ’ದ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, ಅವುಗಳಲ್ಲಿ ಬ್ಯಾಂಕುಗಳು ಮರುಪಾವತಿ ಪಡೆಯಲು ಸಾಧ್ಯವಾಗಿರುವುದು ಕೇವಲ 4 ಲಕ್ಷ ಕೋಟಿ ರೂ. ಅಂದರೆ ಕಾರ್ಪೊರೇಟ್ ಸುಸ್ತಿದಾರರಿಗೆ 10 ಲಕ್ಷ ಕೋಟಿ ರೂ.ಗಳಷ್ಟು ಬಿಟ್ಟುಕೊಡಲಾಗಿದೆ!

ಮೋಸದ ಇತ್ಯರ್ಥಗಳಿಗೆ ಕಾನೂನಿನ ಮಾನ್ಯತೆ!

ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಇದುವರೆಗೆ 59%ದಿಂದ 95%ದ ವರೆಗೂ ‘ಚೌರ’ಗಳನ್ನು ಅನುಭವಿಸಿದರೂ ಯಾವುದೇ ಬ್ಯಾಂಕ್ ಅಥವ ಹಣಕಾಸು ಸಂಸ್ಥೆ ಇದುವರೆಗೆ ಈ ಬಗ್ಗೆ ದೂರು ಕೊಟ್ಟಿರಲಿಲ್ಲ, ಈ ಬಾರಿ ಮಾತ್ರ ಅದೇಕೋ ದೂರು ಕೊಡಲಾಗಿದೆ ಎನ್ನುತ್ತಾರೆ ಬಿಇಎಫ್‌ಐ ಅಧ್ಯಕ್ಷರು. ತಡೆಯಾಜ್ಞೆಯನ್ನು  ಝೀ ಸಮೂಹದ ಈ ಭಾರೀಕುಳದ ವಕೀಲರು ಪ್ರಶ್ನಿಸಿದ್ದಾರಂತೆ- ಎನ್‌ಸಿಎಲ್‌ಟಿ ಗೆ ವಿಶೇಷ ಪೀಠವನ್ನು ರಚಿಸುವ ಅಧಿಕಾರ ಇಲ್ಲ ಎಂದು ಹೇಳಿದ್ದಾರಂತೆ.

ಈ ನಡುವೆ ಸಾಲ ನೀಡಿದ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಎಲ್‌ಐಸಿಎಚ್‌ಎಫ್‌ಎಲ್‌, ಸುಭಾಷ್‌ ಚಂದ್ರ ಅವರು ತಮಗೆ ತನ್ನ ನಿವ್ವಳ ಆಸ್ತಿಮೌಲ್ಯ(ನೆಟ್‌ ವರ್ತ್)‌ ರೂ. ೫೯೧೩೩ ಕೋಟಿ ಎಂದು ೨೦೧೮ರಲ್ಲಿ ಸಾಲ ಕೇಳುವಾಗ ಪ್ರಮಾಣ ಪತ್ರ ಕೊಟ್ಟಿದ್ದರು. ಆದರೆ ಎನ್ ಸಿ ಎಲ್‌ ಟಿ ಯಲ್ಲಿ ದಿವಾಳಿ ಕಲಾಪದ ವೇಳೆಯಲ್ಲಿ ತನ್ನ ನೆಟ್‌ ವರ್ತ್‌  ರೂ.೩೧.೭೯ ಕೋಟಿ, ೨೦೧೭-೧೮ರಲ್ಲೂ ಅದು ೪೦,೦೦೦ ಕೋಟಿ ರೂ.ಗಳಿಗಿಂತ ಹೆಚ್ಚಿರಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ವಂಚನೆ, ಕ್ರಿಮಿನಲ್‌ ವಿಶ್ವಾಸದ್ರೋಹ ಮತ್ತು ವಂಚಿಸುವ ಕ್ರಿಮಿನಲ್‌ ಸಂಚು ಮಾಡಿದ್ದಾರೆ ಎಂದು ಎಲ್‌ಐಸಿಎಚ್‌ಎಫ್‌ಎಲ್‌ ಸಿಬಿಐಗೆ ದೂರು ಕೊಟ್ಟಿದೆ ಎಂದು ವರದಿಯಾಗಿದೆ.

ಪ್ರಸಕ್ತ 99.97% ಚೌರದ ಪ್ರಕರಣ ಈಗ ದೊಡ್ಡ ಸುದ್ದಿಯಾಗಿರುವುದು ಇಂತಹ ಮೋಸದ ಇತ್ಯರ್ಥಗಳಿಗೆ ಕಾನೂನಿನ ಮಾನ್ಯತೆ ನೀಡುವ ಒಂದು ವ್ಯವಸ್ಥೆಯನ್ನು ಬಯಲಿಗೆಳೆದಿದೆ ಎನ್ನುವ ಎಸ್ ಎಸ್ ಅನಿಲ್, ಈ ತಡೆಯಾಜ್ಞೆ ಇದರ ಹಿಂದಿರುವ ಸಂರಚನಾ ದೋಷಗಳನ್ನು ಪರಿಹರಿಸಲಾರದು, 2016ರಿಂದ ಐಬಿಸಿ ಮಾಡಿರುವ ಇಂತಹ ಪ್ರತಿಯೊಂದು ಇತ್ಯರ್ಥದ ಒಂದು ಸಮಗ್ರ ಸಾರ್ವಜನಿಕ ಮತ್ತು ಸ್ವತಂತ್ರ ತನಿಖೆ ಆಗಬೇಕಾಗಿದೆ ಎನ್ನುತ್ತಾರೆ. ಈ  ಹೇರ್‌ಕಟ್‌ಗಳು ಕಾರ್ಪೊರೇಟ್ ಸಾಲಗಾರರ ಬ್ಯಾಲನ್ಸ್ ಶೀಟುಗಳನ್ನು ‘ಶುದ್ಧಗೊಳಿಸುʼವುದಕ್ಕೆ  ಸರಕಾರೀ ನೆರವಿನ ಸಾಧನಗಳಾಗುವುದನ್ನು ತಡೆಯಲು ಕಟ್ಟುನಿಟ್ಟಾದ ಗರಿಷ್ಟ ಮಿತಿಗಳನ್ನು ಮತ್ತು ಪಾರದರ್ಶಕತೆಯನ್ನು ತರಬೇಕು ಎಂದು ಬಿಇಎಫ್‌ಐ ಅಧ್ಯಕ್ಷರು ಹೇಳುತ್ತಾರೆ. 19 ಲಕ್ಷ 

“ನಿಮಗೆ ೨೦,೦೦೦ ಕೋಟಿ ಸಾಲ ಬೇಕೇ? ಆಧಾರ ಸೊತ್ತು ಏನು?”
“ಇಡೀ ಸರಕಾರೀ ಯಂತ್ರ!”

ವ್ಯಂಗ್ಯಚಿತ್ರ ಕೃಪೆ:ಪೊನ್ನಪ್ಪ @ಫೇಸ್‌ ಬುಕ್ 19 ಲಕ್ಷ 

ಇದನ್ನೂ ನೋಡಿ : ಕಾರ್ಮಿಕರ ವಿಧಾನಸೌಧ ಚಲೋ | ಏನಿದು ಹೋರಾಟ? ಪ್ರಮುಖ ಬೇಡಿಕೆಗಳೇನು? – ಮೀನಾಕ್ಷಿ ಸುಂದರಂ Janashakthi Media

Donate Janashakthi Media

Leave a Reply

Your email address will not be published. Required fields are marked *